
ಬೆಂಗಳೂರು: ಮೊಬೈಲ್ ಆಟದ ಗೀಳು ಹಚ್ಚಿಕೊಂಡರೆ ಹಲವರಿಗೆ ಊಟ, ನಿದ್ದೆಯ ಚಿಂತೆಯೂ ಇರಲ್ಲ. ಕೆಲಸವನ್ನೂ ಬಿಟ್ಟು ಅದರಲ್ಲಿ ತೊಡಗಿಸಿಕೊಳ್ಳುವವರು ಇದ್ದಾರೆ. ಇದರಿಂದ ಯುವ ಸಮೂಹವು ಈ ಮೊಬೈಲ್ ಗೇಮ್ಸ್ನಿಂದ ಹಾಳಾಗಿರೋದೇ ಹೆಚ್ಚು. ಇನ್ನು ಕೆಲವು ಗೇಮ್ಸ್ಗಳಿಂದ ಪ್ರಾಣವನ್ನೂ ಕಳೆದುಕೊಂಡವರು ಇದ್ದಾರೆ. ಇವೆಲ್ಲವುಗಳ ನಡುವೆಯೇ, ಕನ್ನಡಿಗನೊಬ್ಬ ಗೇಮ್ಸ್ನಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ! ಹಲವರ ಅಚ್ಚುಮೆಚ್ಚಿನ ಆಟವಾಗಿರುವ ಕ್ಯಾಂಡಿಕ್ರಷ್ (Candy Crush)ನಲ್ಲಿ ಈ ದಾಖಲೆ ಮಾಡಿದ್ದಾರೆ ಕನ್ನಡಿಗ ಸೂರ್ಯ ರಾಜ್.ಕೆಲ ದಿನಗಳ ಹಿಂದಷ್ಟೇ ಈ ಆಟದ ದಾಖಲೆ ಬಿಹಾರದ ಮೂಲಕ ಯುವಕನ ಹೆಸರಿನಲ್ಲಿತ್ತು. ಆದರೆ ಇದೀಗ, ಆ ದಾಖಲೆಯನ್ನು ಮುರಿದಿದ್ದಾರೆ ಬೆಂಗಳೂರಿನ ಆರ್‌ವಿಡಿ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಇನ್‌ಫರ್ಮೇಷನ್ ಟೆಕ್ನಾಲಜಿಯ ನಿರ್ದೇಶಕ ಸೂರ್ಯ ರಾಜ್.
ಬಿಹಾರದ 19 ವರ್ಷದ ಯುವಕನೊಬ್ಬ 22,222ನೇ ಲೆವೆಲ್ ತಲುಪಿ ಅಂತಾರಾಷ್ಟ್ರೀಯ ದಾಖಲೆ ಮಾಡಿದ್ದರೆ, ಸೂರ್ಯ ಅವರು ಇದೀಗ 23,585ನೇ ಹಂತ ತಲುಪಿ ವಿಶ್ವದಾಖಲೆ ಬರೆದಿದ್ದಾರೆ. ಇವರಿಗೆ ಈಗ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗೌರವ ಲಭಿಸಿದೆ. ಅಂದಹಾಗೆ, ಸೂರ್ಯರಾಜ್ ಅವರು, ಬೆಂಗಳೂರಿನ ಆರ್‌ವಿಡಿ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಇನ್‌ಫರ್ಮೇಷನ್ ಟೆಕ್ನಾಲಜಿಯ ನಿರ್ದೇಶಕರಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ 15 ವರ್ಷಗಳ ಅನುಭವ ಹೊಂದಿದ್ದಾರೆ. ವೃತ್ತಿಪರ ಸಮಾಲೋಚಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಸೂರ್ಯರಾಜ್ ಅವರ ಕ್ಯಾಂಡಿ ಕ್ರಷ್ ಪಯಣ ಆರಂಭವಾಗಿದ್ದು 2013-14ರಲ್ಲಿ. ಸ್ನಾತಕೋತ್ತರ ಪದವಿ ಓದುತ್ತಿದ್ದಾಗ ಸ್ನೇಹಿತರೊಬ್ಬರು ಇವರಿಗೆ ಈ ಅಟದ ಬಗ್ಗೆ ಹೇಳಿದ್ದರಂತೆ. ಒಮ್ಮೆ ಆಟದ ರುಚಿ ಹತ್ತಿತ್ತು. ಕ್ರಮೇಣ ಅದೇ ಅಭ್ಯಾಸವಾಯಿತು. 12 ವರ್ಷಗಳಿಂದ ನಿರಂತರವಾಗಿ ಆಟವಾಡುತ್ತಿರುವ ಅವರು, ವಾರಕ್ಕೊಮ್ಮೆ ಬಿಡುಗಡೆಯಾಗುವ ಹಂತಗಳನ್ನು ಮುಗಿಸುತ್ತಾ ಬಂದಿದ್ದಾರೆ. ದಿನಕ್ಕೆ ಎರಡು ಗಂಟೆ ಇದಕ್ಕೆ ಮೀಸಲಿಡುತ್ತಿರುವ ಬಗ್ಗೆ ತಿಳಿಸಿದ್ದಾರೆ.
ಕ್ಯಾಂಡಿ ಕ್ರಶ್ ಸಾಗಾ ಮೊಬೈಲ್ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಆಡಲಾಗುವ ಜನಪ್ರಿಯ ಪಜಲ್ ಗೇಮ್ ಆಗಿದ್ದು, ಇದನ್ನು ಕಿಂಗ್ ಎಂಬ ಗೇಮಿಂಗ್ ಕಂಪನಿಯು ನಿರ್ಮಿಸಿದೆ. ಇದರಲ್ಲಿ ಆಟಗಾರರು ಒಂದೇ ಬಣ್ಣದ ಮೂರು ಅಥವಾ ಅದಕ್ಕಿಂತ ಹೆಚ್ಚು ಕ್ಯಾಂಡಿಗಳನ್ನು ಒಟ್ಟಿಗೆ ಸೇರಿಸಿ ಅವುಗಳನ್ನು ತೆಗೆದುಹಾಕುತ್ತಾರೆ ಮತ್ತು ವಿವಿಧ ಗುರಿಗಳನ್ನು ಪೂರೈಸುತ್ತಾ ಮುಂದಿನ ಹಂತಕ್ಕೆ ಹೋಗುತ್ತಾರೆ. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಕ್ಯಾಂಡಿಗಳನ್ನು ಸೇರಿದಾಗ ವಿಶೇಷ ಶಕ್ತಿಶಾಲಿ ಕ್ಯಾಂಡಿಗಳು ಸಹ ತಯಾರಾಗುತ್ತವೆ, ಇವು ಒಟ್ಟಿಗೆ ಹಲವು ಕ್ಯಾಂಡಿಗಳನ್ನು ತೆಗೆದುಹಾಕಬಲ್ಲವು. ಗೇಮ್‌ನಲ್ಲಿ ಸಾವಿರಾರು ಹಂತಗಳಿವೆ ಮತ್ತು ಪ್ರತಿ ಹಂತದಲ್ಲೂ ಭಿನ್ನವಾದ ಸವಾಲಿರುತ್ತದೆ. ಆಟಗಾರನು ಸೀಮಿತ ಮೂವ್‌ಗಳಲ್ಲಿ ಹಂತದ ಗುರಿಯನ್ನು ಪೂರೈಸಬೇಕಾಗುತ್ತದೆ. ಈ ಕಾರಣದಿಂದಾಗಿಯೇ ಹೆಚ್ಚು ಹೆಚ್ಚು ಹಂತಗಳನ್ನು ದಾಟುವುದು ತಾನಾಗಿಯೇ ಒಂದು ಗೇಮಿಂಗ್ ಸಾಧನೆ ಎಂದು ಪರಿಗಣಿಸಲ್ಪಡುತ್ತದೆ.