
ದಕ್ಷಿಣ ಕನ್ನಡ (ನ.03): ರಸ್ತೆ ಅಗಲೀಕರಣದ ವೇಳೆ ಶತಮಾನದ ಇತಿಹಾಸವಿರುವ ಕಟ್ಟಡಗಳು, ಸ್ಮಾರಕಗಳು ನೆಲಸಮವಾಗುವುದು ಸಾಮಾನ್ಯ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿದ್ದ ಬೃಹತ್ ಸ್ವಾಗತ ಗೋಪುರವನ್ನು ಕೆಡವದೆ, ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಿ (Relocation) ಇಂಜಿನಿಯರಿಂಗ್ ಲೋಕದ ವಿಸ್ಮಯ ಸೃಷ್ಟಿಸಲಾಗಿದೆ. ಕಳೆದ 7 ತಿಂಗಳಿನಿಂದ ನಡೆಯುತ್ತಿದ್ದ ಈ ಭಗೀರಥ ಪ್ರಯತ್ನ ಇದೀಗ ಅಂತಿಮ ಹಂತಕ್ಕೆ ತಲುಪಿದೆ.
ರಾಷ್ಟ್ರೀಯ ಹೆದ್ದಾರಿ 66ರ (NH 66) ಬಪ್ಪನಾಡು ಕ್ಷೇತ್ರದ ಮುಂಭಾಗದಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಈ ಸ್ವಾಗತ ಗೋಪುರ ತೆರವುಗೊಳಿಸುವುದು ಅನಿವಾರ್ಯವಾಗಿತ್ತು. 1999ರಲ್ಲಿ ನಿರ್ಮಾಣವಾಗಿದ್ದ ಈ ಸುಂದರ ಗೋಪುರವನ್ನು ನೆಲಸಮ ಮಾಡಲು ಭಕ್ತರಿಗೆ ಹಾಗೂ ದಾನಿಗಳಿಗೆ ಮನಸ್ಸಿರಲಿಲ್ಲ. ಈ ಗೋಪುರದ ದಾನಿಗಳಾದ ಐಕಳ ಹರೀಶ್ ಶೆಟ್ಟಿ ಕುಟುಂಬಿಕರು ಇದನ್ನು ಕೆಡವಿ ಹಾಕುವ ಬದಲು, ಗೋಪುರವನ್ನು ಯಥಾವತ್ತಾಗಿ ಸ್ಥಳಾಂತರಿಸಲು ತೀರ್ಮಾನಿಸಿದರು. ಮೂಲ್ಕಿಯ ಖ್ಯಾತ ಇಂಜಿನಿಯರ್ ಜೀವನ್ ಕೆ. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಈ ಸವಾಲಿನ ಯೋಜನೆಗೆ ನೀಲನಕ್ಷೆ ಸಿದ್ಧವಾಯಿತು.
ಉತ್ತರ ಭಾರತದ ಪರಿಣಿತ ತಾಂತ್ರಿಕ ತಂಡದ ನೆರವಿನೊಂದಿಗೆ ಈ ಐತಿಹಾಸಿಕ ಕಾರ್ಯ ಆರಂಭವಾಯಿತು. ಅತ್ಯಾಧುನಿಕ ‘ಹೈಡ್ರಾಲಿಕ್ ಜಾಕ್’ (Hydraulic Jacks) ತಂತ್ರಜ್ಞಾನ ಬಳಸಿ, ಇಂಚಿಂಚಾಗಿಯೇ ಗೋಪುರವನ್ನು ಅಲುಗಾಡದಂತೆ ಮೇಲಕ್ಕೆತ್ತಿ, ನಿಗದಿತ ಮಾರ್ಗದಲ್ಲಿ ಚಲಿಸುವಂತೆ ಮಾಡಲಾಯಿತು. ಕಳೆದ 7 ತಿಂಗಳಿನಿಂದ ಎಚ್ಚರಿಕೆಯಿಂದ ಸಾಗಿದ ಈ ಸ್ಥಳಾಂತರ ಕಾರ್ಯವು ಇದೀಗ ನೂತನ ಸ್ಥಳದ ಅಡಿಪಾಯದವರೆಗೆ ಯಶಸ್ವಿಯಾಗಿ ಬಂದು ತಲುಪಿದೆ.
ಇದೀಗ ಗೋಪುರವನ್ನು ನೂತನವಾಗಿ ನಿರ್ಮಿಸಲಾಗಿರುವ ಅಡಿಪಾಯದ ಮೇಲೆ ಅಂತಿಮವಾಗಿ ಪ್ರತಿಷ್ಠಾಪಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಭಕ್ತಿ, ಸಂಕಲ್ಪ ಮತ್ತು ಆಧುನಿಕ ತಂತ್ರಜ್ಞಾನ ಒಗ್ಗೂಡಿದರೆ ಎಂತಹ ಅಸಾಧ್ಯ ಕಾರ್ಯವನ್ನೂ ಸಾಧಿಸಬಹುದು ಎಂಬುದಕ್ಕೆ ಬಪ್ಪನಾಡಿನ ಈ ಸ್ವಾಗತ ಗೋಪುರದ ಸ್ಥಳಾಂತರ ಸಾಕ್ಷಿಯಾಗಿದೆ.