ಕಲ್ಯಾಣ ಕರ್ನಾಟಕಕ್ಕೆ 371 ಜೆ ಸ್ಥಾನಮಾನ ಸಿಕ್ರೂ ನಿಲ್ಲದ ಅನ್ಯಾಯ

Kannadaprabha News   | Asianet News
Published : Jul 09, 2021, 12:32 PM IST
ಕಲ್ಯಾಣ ಕರ್ನಾಟಕಕ್ಕೆ 371 ಜೆ ಸ್ಥಾನಮಾನ ಸಿಕ್ರೂ ನಿಲ್ಲದ ಅನ್ಯಾಯ

ಸಾರಾಂಶ

* ಸಿಎಂ ಬಳಿಗೆ ತೆರಳಲಿರುವ ಶಾಸಕರ ನಿಯೋಗ * ವಾರದೊಳಗಾಗಿ ಸಿಎಂ ಭೇಟಿ: ರಜಾಕ್‌ * ಸಭೆಗೆ 15 ಶಾಸಕರು ಹಾಜರು  

ಕೊಪ್ಪಳ(ಜು.09): 371 ಜೆ ಸ್ಥಾನಮಾನ ಸಿಕ್ಕಿದ್ದರೂ ನಮಗೆ ಆಗುತ್ತಿರುವ ಅನ್ಯಾಯ ಇನ್ನು ನಿಂತಿಲ್ಲ. ನೀಡಬೇಕಾದ ಸೌಲಭ್ಯಗಳನ್ನು ನೀಡದೆ ಮೋಸ ಮಾಡಲಾಗುತ್ತಿದೆ. ಅಲ್ಲದೆ ಮಾಧ್ಯಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಬೇಕಾಗಿದೆ. ಈ ಕುರಿತು ಕಲ್ಯಾಣ ಕರ್ನಾಟಕ ಭಾಗದ ಶಾಸಕರ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ, ಶೀಘ್ರದಲ್ಲಿಯೇ ಮನವಿ ಸಲ್ಲಿಸಲಿದೆ ಎಂದು ಕಲ್ಯಾಣ ಕರ್ನಾಟಕ ಭಾಗದ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ರಜಾಕ್‌ ಉಸ್ತಾದ್‌ ತಿಳಿಸಿದ್ದಾರೆ.

ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಎಲ್ಲ ಶಾಸಕರ ಸಭೆ ಪಕ್ಷಾತೀತವಾಗಿ ಬೆಂಗಳೂರಿನ ಶಾಸಕರ ಭವನದಲ್ಲಿ ಈಚೆಗೆ ನಡೆದಿದೆ. ಅದರಲ್ಲಿ ಸುಮಾರು 15 ಶಾಸಕರು ಸೇರಿದ್ದರು. ಈ ಶಾಸಕರೆಲ್ಲರೂ ಸುದೀರ್ಘವಾಗಿ ಚರ್ಚೆ ಮಾಡಿ, ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಿ ಮನವಿ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಶಾಸಕರು, ಹೋರಾಟಗಾರರು ಹಾಗೂ ಪ್ರಜ್ಞಾವಂತರು ಸೇರಿಕೊಂಡು, 371 ಜೆ ಅನುಷ್ಠಾನದಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಲೇಬೇಕಾಗಿದೆ. ಸಂವಿಧಾನದಲ್ಲಿಯೇ ಅವಕಾಶ ನೀಡಿದ್ದರೂ ಸ್ಥಳೀಯವಾಗಿ ಆಡಳಿತ ಜಾರಿ ಮಾಡುವಲ್ಲಿ ಮಾಡುತ್ತಿರುವ ಯಡವಟ್ಟುಗಳನ್ನು ಸರಿಪಡಿಸಲು ಸಭೆ ಗಂಭೀರವಾಗಿ ಚರ್ಚೆ ಮಾಡಿದೆ.

ಈಶಾನ್ಯ ಸಾರಿಗೆ ಇನ್ನು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ

ಅನೇಕರು ಗೈರು:

ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 40 ಶಾಸಕರು ಇದ್ದಾರೆ. ಇವರೆಲ್ಲರೂ ಪಕ್ಷಾತೀತವಾಗಿ ಸೇರಬೇಕು, 371 ಜೆ ಅನುಷ್ಠಾನದಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಪ್ರತ್ಯೇಕವಾಗಿ ಸಭೆಯನ್ನು ಕರೆಯಲಾಗಿತ್ತು. ಶಾಸಕರ ಭವನದಲ್ಲಿ ಕರೆದ ಈ ಸಭೆಗೆ ಕೇವಲ 15 ಶಾಸಕರು ಮಾತ್ರ ಭಾಗವಹಿಸಿದ್ದಾರೆ. ಉಳಿದ 25 ಶಾಸಕರು ಬರಲಿಲ್ಲ. ಈ ಕುರಿತು ಮೊದಲೇ ಮಾಹಿತಿ ನೀಡಿದ್ದರೂ ನಾನಾ ಕಾರಣ ಮುಂದೆ ಮಾಡಿ ಬಂದಿಲ್ಲ ಎನ್ನಲಾಗುತ್ತಿದೆ. ಅಲ್ಲದೆ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಶಾಸಕರು ಒಂದೆಡೆ ಸೇರಿದರೆ ರಾಜಕೀಯ ಬಣ್ಣ ಬಳಿಯುತ್ತಾರೋ ಎಂದು ಹಿಂದೇಟು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಆಗ್ರಹ:

ಕಲ್ಯಾಣ ಕರ್ನಾಟಕ ಭಾಗದಲ್ಲಿ ನೇಮಕಾತಿಯನ್ನು ಕೂಡಲೇ ಮಾಡಿಕೊಳ್ಳಬೇಕು. 371 ಜೆ ಸ್ಥಾನಮಾನ ನೀಡಿರುವ ಸಂವಿಧಾನವೇ ಇಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳಬೇಕು ಎಂದು ಹೇಳಿದೆ. 50 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಇರುವುದರಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ನೀಡುತ್ತಿರುವ ಅನುದಾನವನ್ನು ಆಯಾ ವರ್ಷ ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ. ನೇಮಕಾತಿಯಲ್ಲಿ ರಾಜ್ಯಾದ್ಯಂತ ಇರುವ ಮೀಸಲು ಕೊಡುತ್ತಿಲ್ಲ. ಹಾಲು ಉತ್ಪಾದಕ ಮಂಡಳಿಗಳಲ್ಲಿಯೂ ನೇಮಕಾತಿಯಲ್ಲಿ ಮೀಸಲಾತಿಯನ್ನು ನೀಡಬೇಕು ಎನ್ನುವ ನಿಯಮ ಇದ್ದರೂ ಪಾಲನೆಯಾಗುತ್ತಿಲ್ಲ. ಇಂಥ ಹತ್ತಾರು ಸಮಸ್ಯೆ ಸರಿಪಡಿಸುವಂತೆ ಮಾಡಲು ಪ್ರತ್ಯೇಕ ಆಯೋಗ ರಚನೆ ಮಾಡುವಂತೆಯೂ ಆಗ್ರಹಿಸಲು ನಿರ್ಧರಿಸಲಾಗಿದೆ 

ಭಾಗಿಯಾದ ಶಾಸಕರು, ಮುಖಂಡರು     

ರಾಜಶೇಖರ ಪಾಟೀಲ್‌ ಹುಮ್ನಾಬಾದ್‌ (ಅಧ್ಯಕ್ಷತೆ), ಅಮರೇಗೌಡ ಭಯ್ಯಾಪುರ, ಡಾ. ಶಿವರಾಜ ಪಾಟೀಲ್‌, ವೆಂಕಟರಾವ್‌ ನಾಡಗೌಡ, ಬಸನಗೌಡ ತುರುವಿಹಾಳ, ಬಸವರಾಜ ದದ್ದಲ್‌, ಭೀಮಾನಾಯ್ಕ್‌, ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಡಾ. ಚಂದ್ರಶೇಖರ ಪಾಟೀಲ್‌, ಅರವಿಂದ ಅರಳಿ, ರಾಜುಗೌಡ, ರಾಘವೇಂದ್ರ ಹಿಟ್ನಾಳ, ಈ ತುಕರಾಂ, ಎಂ.ವೈ . ಪಾಟೀಲ್‌, ಹಂಪನಗೌಡ ಬಾದರ್ಲಿ 
 

PREV
click me!

Recommended Stories

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ