ಸೆಪ್ಟೆಂಬರ್ 17 ರಂದು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವವನ್ನು ಕಲಬುರಗಿ ಸೇರಿ ಕಲ್ಯಾಣ ಕರ್ನಾಟಕ ಪ್ರದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದು, ಸಕಲ ಸಿದ್ಧತೆ ನಡೆಯುತ್ತಿದೆ.
ಕಲಬುರಗಿ (ಸೆ. 3): ಸೆಪ್ಟೆಂಬರ್ 17 ರಂದು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವವನ್ನು ಕಲಬುರಗಿ ಸೇರಿ ಕಲ್ಯಾಣ ಕರ್ನಾಟಕ ಪ್ರದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಸೂಚಿಸಿದರು. ಶನಿವಾರ ಕೆ.ಕೆ.ಆರ್ ಡಿ.ಬಿ. ಮಂಡಳಿ ಸಭಾಂಗಣದಲ್ಲಿ ಕಲಬುರಗಿ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಅವರನ್ನು ಕರೆತರುವ ಪ್ರಯತ್ನ ನಡೆದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರುವುದು ಖಚಿತವಾಗಿದೆ. ಹೀಗಾಗಿ ಅಧಿಕಾರಿಗಳು ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸುವಂತೆ ತಿಳಿಸಿದರು. ಸೆ.17 ರಂದು ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ರಾಷ್ಟ್ರಧ್ಜಾರೋಹಣ ಕಾರ್ಯಕ್ರಮದ ನಂತರ ನಗರದ ಎನ್.ವಿ.ಮೈದಾನದಲ್ಲಿ ಕಲಬುರಗಿ ಕೇಂದ್ರಿತವಾಗಿ ಐತಿಹಾಸಿಕ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಿ ವಿವಿಧ ಇಲಾಖೆಯ ಮಹತ್ವಕಾಂಕ್ಷೆ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಲಿದ್ದಾರೆ.
ಸುಮಾರು 50 ಸಾವಿರ ಜನಸಂಖ್ಯೆ ಸೇರುವ ನಿರೀಕ್ಷೆಯಿದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಣೆಗೆ ಇಮದಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ಇನ್ನೂ ಪ್ರದೇಶದ ಆಯಾ ಜಿಲ್ಲೆಗಳಲ್ಲಿ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆಗೆ ಜಿಲ್ಲಾಧಿಕಾರಿಗಳಿಗೆ ಮಂಡಳಿಯಿಂದ ಪತ್ರ ಬರೆಯಲಾಗಿದೆ ಎಂದು ದತ್ತಾತ್ರೇಯ ಪಾಟೀಲ ರೇವೂರು ತಿಳಿಸಿದರು.
ಅಂದು ಮುಖ್ಯಮಂತ್ರಿಗಳು ನೀತಿ ಆಯೋಗ ಗುರುತಿಸಿರುವ ಕಲ್ಯಾಣ ಕರ್ನಾಟಕ ಭಾಗದ ರಾಯಚೂರು, ಯಾದಗಿರಿ ಮಹತ್ವಕಾಂಕ್ಷೆ ಜಿಲ್ಲೆಗಳಿಗೆ ಕೆಲವೊಂದು ಯೋಜನೆಗಳನ್ನು ಘೋಷಿಸಲಿದ್ದಾರೆ. ಅಲ್ಲದೆ ಆಯವ್ಯಯದಲ್ಲಿ ಘೋಷಿಸಿದಂತೆ ಎಲಿವೇಟ್ ಕಲ್ಯಾಣ ಕರ್ನಾಟಕದಡಿ ಸ್ಟಾರ್ಟ್ ಅಪ್ ಕಂಪನಿಗಳಿಗೆ 50 ಲಕ್ಷ ರೂ. ಸಹಾಯಧನ ಸಹ ನೀಡಲಾಗುತ್ತಿದೆ. ಸಮಾರಂಭ ಸ್ಥಳದಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ತೋಟಗಾರಿಕೆ, ಕೃಷಿ, ಕಾರ್ಮಿಕ, ಕೌಶಲ್ಯ ಹೀಗೆ ಪ್ರಮುಖ ಇಲಾಖೆಗಳು ಮಳಿಗೆ ಹಾಕಿ ಸರ್ಕಾರಿ ಯೋಜನೆಗಳ ಕುರಿತು ಬಂದಂತಹ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ದತ್ತಾತ್ರೇಯ ಪಾಟೀಲ ರೇವೂರ ಸೂಚಿಸಿದರು.
ಅಮೃತ ಮಹೋತ್ಸವದ ಅಂಗವಾಗಿ ವಿವಿಧ ದಿನಾಂಕಗಳಂದು ಕೃಷಿ ಕಾರ್ಯಾಗಾರ, ಉದ್ಯೋಗ ಮೇಳ, ಆರೋಗ್ಯ ಮೇಳ, ಮಹಿಳಾ ಸಬಲೀಕರಣ ಮತ್ತು ಪೌಷ್ಠಿಕತೆ ಕಾರ್ಯಗಾರ ಆಯೋಜಿಸಬೇಕು. ವಿಮೋಚನೆಯಲ್ಲಿ ಭಾಗವಹಿಸಿದ ಸ್ವಾತಂತ್ರ್ಯ ಸೇನಾನಿಗಳೊಂದಿಗೆ ಸಂವಾದ, ಕವಿಗೋಷ್ಠಿದಂತಹ ವಿಶಿಷ್ಟ ಕಾರ್ಯಕ್ರಮಗಳು ಸಂಘಟಿಸಬೇಕು. ಕಲಬುರಗಿ ನಗರದ ನಗರೇಶ್ವರ ಶಾಲೆಯಿಂದ ಕೇಂದ್ರ ಬಸ್ ನಿಲ್ದಾಣದ ವರೆಗೆ ಸಾಂಸ್ಕೃತಿಕ ಜಾಥಾ ಆಯೋಜಿಸಿ, ಇಲ್ಲಿ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪರಿಚಯಿಸುವ ಪ್ರದರ್ಶನಗಳು ಈ ಪ್ರದೇಶದ ಕಲಾವಿದರಿಂದಲೇ ನಡೆಯಬೇಕು. ಮೆರವಣಿಗೆಯುದ್ದಕ್ಕೂ ಆಯಾ ಇಲಾಖೆಗಳ ಫ್ಲ್ಯಾಗ್‍ಶಿಪ್ ಯೋಜನೆಗಳ ಟ್ಯಾಬ್ಲೋ ಪ್ರದರ್ಶನ ಸಹ ಯೋಜಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಐತಿಹಾಸಿಕ ಉತ್ಸವಕ್ಕೆ ಬನ್ನಿ:
1947ರಲ್ಲಿ ದೇಶ ಸ್ವಾತಂತ್ರ್ಯ ಪಡೆದರು ಸಹ, ಹೈದ್ರಾಬಾದಿನ ನಿಜಾಮನ ಆಳ್ವಿಕೆಯಲ್ಲಿದ್ದ ಕಲ್ಯಾಣ ಕರ್ನಾಟಕ ಭಾಗ ಸ್ವಾತಂತ್ರ್ಯದ ರುಚಿ ಸವಿಯಲು ಒಂದು ವರ್ಷಕ್ಕೂ ಹೆಚ್ಚಿನ ಸಮಯ ಬೇಕಾಯಿತು. ಬರುವ ಸೆ.17ಕ್ಕೆ ಪ್ರದೇಶ ಸ್ವಾತಂತ್ರ್ಯ ಪಡೆದು 74 ವರ್ಷ ಪೂರೈಸಿ, ಅಮೃತ ಮಹೋತ್ಸವಕ್ಕೆ ಕಾಲಿಡುತ್ತಿದೆ. ಈ ನಿಟ್ಟಿನಲ್ಲಿ ಆಯೋಜಿಸಿರುವ ಅಮೃತ ಮಹೋತ್ಸವದ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸಾಕ್ಷಿಯಾಗಬೇಕು ಎಂಬುದು ನಮ್ಮ ಅಭಿಲಾಷೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ದತ್ತಾತ್ರೇಯ ಪಾಟೀಲ ರೇವೂರ ಅವರು ಮನವಿ ಮಾಡಿದ್ದಾರೆ.
ವಸ್ತು ಪ್ರದರ್ಶನ ಆಯೋಜನೆ:
ಅಮೃತ ಮಹೋತ್ಸವ ಅಂಗವಾಗಿ ಕಲಬುರಗಿ ನಗರದ ಎನ್.ವಿ.ಮೈದಾನದಲ್ಲಿ ಸೆ.15 ರಿಂದ 17ರ ವರೆಗೆ ಕಲ್ಯಾಣ ಕರ್ನಾಟದ ಅತಿದೊಡ್ಡ ವಸ್ತು ಪ್ರದರ್ಶನ ಆಯೋಜಿಸಬೇಕು. ಇಲ್ಲಿ ಪ್ರದೇಶದ 7 ಜಿಲ್ಲೆಗಳ ಗೃಹ ಉತ್ಪನ್ನ, ಗುಡಿ ಕೈಗಾರಿಕೆ, ಸ್ತ್ರೀ ಶಕ್ತಿ ಗುಂಪುಗಳು ತಯ್ಯಾರಿಸಿರುವ ಕರಕುಶಲ ವಸ್ತುಗಳು, ತಿಂಡಿ ತಿನುಸುಗಳು, ವಿವಿಧ ಸಮುದಾಯಗಳು ತಯ್ಯಾರಿಸಿರುವ ಕುಲಕಸುಬಿನ ವಸ್ತುಗಳ ಮಾರಾಟ ಮತ್ತು ಪ್ರದರ್ಶನಕ್ಕೆ ವೇದಿಕೆಯಾಗಬೇಕು. ಆಯಾ ಜಿಲ್ಲೆಗಳ ಭೌಗೋಳಿಕ ಮತ್ತು ಸ್ಥಳೀಯವಾಗಿ ಮಹತ್ವ ಪಡೆದಿರುವ ವಸ್ತುಗಳನ್ನು ಇಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗುವುದು. ಮಳಿಗೆ ಹಾಕಲು ಇಚ್ಚಿಸುವವರಿಗೆ ಮುಕ್ತ ಅವಕಾಶ ನೀಡಬೇಕು. ಸುಮಾರು 300 ರಿಂದ 500 ಮಳಿಗೆ ಸ್ಥಾಪಿಸಬೇಕು ಎಂದು ಅಧಿಕಾರಿಗಳಿಗೆ ದತ್ತಾತ್ರೇಯ ಪಾಟೀಲ ರೇವೂರ ನಿರ್ದೇಶನ ನೀಡಿದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರು ಮಾತನಾಡಿ, ವಸ್ತು ಪ್ರದರ್ಶನ, ಆರೋಗ್ಯ ಮೇಳ, ಚಿತ್ರ ಸಂತೆ, ರಸಪ್ರಶ್ನೆ ಹೀಗೆ ವಿಭಿನ್ನ ಕಾರ್ಯಕ್ರಮಗಳು ಪ್ರದೇಶದ ಏಳು ಜಿಲ್ಲೆಗಳಲ್ಲಿ ಗ್ರಾಮದಿಂದ ಜಿಲ್ಲಾ ಮಟ್ಟದ ವರೆಗೆ ಆಯೋಜಿಸುವ ಮೂಲಕ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮ ಐತಿಹಾಸಿಕವನ್ನಾಗಿಸಬೇಕು. 3 ದಿನಗಳ ವಸ್ತು ಪ್ರದರ್ಶನ ಆಯೋಜಿಸಿ ಏಳು ಜಿಲ್ಲೆಗಳಿಗೆ ಅವಕಾಶ ನೀಡಿ ಸ್ಥಳೀಯವಾಗಿ ತಯ್ಯಾರಿಸಲ್ಪಡುವ ವಸ್ತುಗಳ ಮಾರಾಟಕ್ಕೆ ಉತ್ತಮ ವೇದಿಕೆ ನೀಡುವುದರ ಮೂಲಕ ಇಲ್ಲಿನವರಿಗೆ ಪ್ರೋತ್ಸಾಹ ನೀಡಬೇಕು. ಈ ಕುರಿತಂತೆ ಹೆಚ್ಚಿನ ಪ್ರಚಾರ ನೀಡಬೇಕು ಎಂದರು.
ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಮಾತನಾಡಿ, ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಅಂಗವಾಗಿ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಮುಖ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಆರೋಗ್ಯ ಮೇಳ, ಕೃಷಿ ಕಾರ್ಯಾಗಾರ, ವಸ್ತು ಪ್ರದರ್ಶನ, ಮಹಿಳಾ ಸಬಲೀಕರಣ ಮತ್ತು ಪೌಷ್ಠಿಕತೆ ಕಾರ್ಯಾಗಾರ, ಉದ್ಯೋಗ ಮೇಳ, ಸಾಂಸ್ಕೃತಿಕ ಜಾಥಾ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಉಪ ಸಮಿತಿ ರಚಿಸಲಾಗುವುದು. ಕಲ್ಯಾಣ ಕರ್ನಾಟಕ ವಿಮೋಚನೆ ಕುರಿತಂತೆ ಡಿ.ಡಿ.ಪಿ.ಐ ಅವರು ಶಾಲಾ ಮಕ್ಕಳಿಗೆ ರಸಪ್ರಶ್ನೆ ಆಯೋಜಿಸಬೇಕು. ಕಾರ್ಯಕ್ರಮ ಯಶಸ್ಸಿಗೆ ಆಯಾ ಅಧಿಕಾರಿಗಳಿಗೆ ನೀಡಲಾಗುವ ಜವಾಬ್ದಾರಿಯನ್ನು ಚಾಚು ತಪ್ಪದೆ ಪಾಲಿಸಬೇಕು ಎಂದರು.
ಗುಳೆ ತಡೆಗೆ ಕಲ್ಯಾಣ ಕರ್ನಾಟಕಕ್ಕೆ ಸ್ಕೀಂ: ಸಿಎಂ
ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಮಾತನಾಡಿ, ಅಮೃತ ಮಹೋತ್ಸವ ಅಂಗವಾಗಿ ಕಲಬುರಗಿ ನಗರದಲ್ಲಿ ಪ್ಲಾಸ್ಟಿಕ್ ಮುಕ್ತ ನಗರ, ಸಸಿ ನೆಡೆಯುವ ಅಭಿಯಾನ, ಸ್ವಚ್ಛತೆ, ಚಿತ್ರ ಸಂತೆ ಹೀಗೆ ವಿಭಿನ್ನ ಸ್ಪರ್ಧೇಗಳನ್ನು ಒಂದು ವಾರಗಳ ಕಾಲ ಆಯೋಜಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
'ಕ-ಕ ಅಭಿವೃದ್ಧಿ ಮಂಡಳಿಗೆ 3 ಸಾವಿರ ಕೋಟಿ ವಿಶೇಷ ಅನುದಾನ ಹಂಚಿಕೆ ಮಾಡಲಿ'
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ. ಗಿರೀಶ್ ಡಿ. ಬದೋಲೆ, ಸಹಾಯಕ ಆಯುಕ್ತರಾದ ಮೋನಾ ರೋಟ್, ಕಾರ್ತಿಕ್, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.