
ಕಲಬುರಗಿ: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಇಲ್ಲಿ ಅಕ್ಕಸಾಲಿಗನಾಗಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮಮ್ತಾಜ್‌ವುಲ್ ಮಲೀಕ್ ಎಂಬಾತನನ್ನು ಕೇಂದ್ರ ಗುಪ್ತಚರ ಇಲಾಖೆ ಹಾಗೂ ಸ್ಥಳೀಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ತಿಂಗಳ ಹಿಂದಷ್ಟೇ, ಕಲಬುರಗಿಯಲ್ಲಿ ಕಸಾಯಿಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಸಮೀರ್ (23) ಎಂಬಾತನನ್ನು ಬಂಧಿಸಲಾಗಿತ್ತು. ಅದರ ಬೆನ್ನಲ್ಲೇ ಮಮ್ತಾಜ್‌ವುಲ್‌ನ ಬಲೆಗೆ ಬಿದ್ದಿದ್ದಾನೆ.
ಮಲೀಕ್, ತನ್ನ ಸಹೋದರನ ಜತೆ ಸೇರಿ ಕಲಬುರಗಿಯ ಸರಾಫ್ ಬಜಾರ್‌ನ ಚಿನ್ನಾಭರಣ ಅಂಗಡಿಯಲ್ಲಿ ಅಕ್ಕಸಾಲಿಗನಾಗಿ ಕೆಲಸ ಮಾಡುತ್ತಿದ್ದ. ಸಾಮಾಜಿಕ ಜಾಲತಾಣಗಳ ಮೂಲಕ ಲಷ್ಕರ್ ಉಗ್ರರ ಸಂಪರ್ಕದಲ್ಲಿದ್ದ. ಮೆಸೇಜ್‌ಗಳ ಮೂಲಕ ಸೂಕ್ಷ್ಮ ಮಾಹಿತಿಗಳನ್ನು ಉಗ್ರ ಸಂಘಟನೆ ಜೊತೆ ಹಂಚಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ತಿಂಗಳ ಹಿಂದೆ ಕಲಬುರಗಿಯ ಕಸಾಯಿಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಸಮೀರ್ ಎಂಬಾತನನ್ನು ಉಗ್ರರೊಂದಿಗೆ ನಂಟಿನ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು. ಸಮೀರ್‌ನ ಮೊಬೈಲ್ ಪರಿಶೀಲನೆ ವೇಳೆ ಉಗ್ರರಿಗೆ ಸಂಬಂಧಿಸಿದ ಚಿತ್ರ, ವಿಡಿಯೋ ಪತ್ತೆಯಾಗಿದ್ದವು.ಆತನ ವಿಚಾರಣೆ ವೇಳೆ ದೊರೆತ ಮಾಹಿತಿ ಮೇರೆಗೆ ಮಲೀಕ್ನನ್ನು ವಶಕ್ಕೆ ಪಡೆಯಲಾಗಿದೆ.
ಕಲಬುರಗಿಯಲ್ಲಿ ಅಲ್ಪಾವಧಿಯಲ್ಲೇ ಎರಡು ಪ್ರಕರಣಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಶಂಕಿತರ ಡಿಜಿಟಲ್ ಸಂಪರ್ಕಗಳು, ಸಂದೇಶಗಳು ಮತ್ತು ಇತರ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಪೊಲೀಸ್ ನಿಗಾ:
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಲಷ್ಕರ್ ನಂಟಿನ ಆರೋಪದ ಹಿನ್ನೆಲೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ವಿಚಾರಣೆಯ ನಂತರ ಒಬ್ಬ ಮಾತ್ರ ಉಗ್ರ ಸಂಘಟನೆಗಳ ಜೊತೆ ಸಂಪರ್ಕದಲ್ಲಿದ್ದ ಎಂಬುದು ಗೊತ್ತಾಗಿದ್ದು, ಆತನ ವಿಚಾರಣೆ ಮುಂದುವರಿದಿದೆ ಎಂದು ತಿಳಿಸಿದರು. ಈತ ಬೇರೆ ರಾಜ್ಯದಿಂದ ಕಲಬುರಗಿಗೆ ಆಗಮಿಸಿದ ಯುವಕನಾಗಿದ್ದು, ಈತನ ಚಟುವಟಿಕೆಗಳ ಕುರಿತು ತನಿಖೆ ಪ್ರಗತಿಯಲ್ಲಿದೆ. ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಸಾಧ್ಯತೆಗಳ ಕುರಿತು ಗುಪ್ತಚರ ಇಲಾಖೆ ಹಾಗೂ ಪೊಲೀಸರು ನಿಗಾ ವಹಿಸಿದ್ದು, ಯಾವುದೇ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು