ಕೆ.ಆರ್.ನಗರ ಐತಿಹಾಸಿಕ ಅರ್ಕೇಶ್ವರ ದೇಗುಲದ ಗೋಡೆ ಮೇಲೆ ಶಿಲುಬೆ, ಮಸೀದಿ ಚಿತ್ರ! ಇಬ್ಬರ ವಿರುದ್ಧ FIR

Published : Oct 18, 2026, 06:58 PM IST
mysuru kr nagara arkeshwara temple cross mosque painting

ಸಾರಾಂಶ

ಮೈಸೂರಿನ ಕೆ.ಆರ್.ನಗರದ ಐತಿಹಾಸಿಕ ಅರ್ಕೇಶ್ವರ ಸ್ವಾಮಿ ದೇವಾಲಯದ ಗೋಡೆಗಳ ಮೇಲೆ ಅನ್ಯ ಧರ್ಮಗಳ ಚಿಹ್ನೆಗಳನ್ನು ಬಿಡಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ತಾಲೂಕು ಆಡಳಿತ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ರಾಜ್ಯ ಬಿಜೆಪಿ ಘಟಕವು ಈ ಕೃತ್ಯ ಖಂಡಿಸಿಸಿದೆ.

ಮೈಸೂರು (ಅ.18): ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ಕೃಷ್ಣರಾಜನಗರ (ಕೆ.ಆರ್.ನಗರ) ತಾಲೂಕಿನ ಪ್ರಸಿದ್ಧ, ಪುರಾತನ ಧಾರ್ಮಿಕ ಕ್ಷೇತ್ರವಾದ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಆವರಣದ ಗೋಡೆಯ ಮೇಲೆ ಅನ್ಯ ಧರ್ಮಗಳ ಚಿಹ್ನೆಗಳನ್ನು ಬಿಡಿಸಿರುವುದು ಇದೀಗ ಭಾರೀ ವಿವಾದ ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಸಂಬಂಧ ಸ್ಥಳೀಯರ ವಿರೋಧ ವ್ಯಕ್ತವಾದ ಬೆನ್ನಲ್ಲೇ ತಾಲೂಕು ಆಡಳಿತ ಎಚ್ಚೆತ್ತುಕೊಂಡಿದ್ದು, ಇಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದೆ. ಮತ್ತೊಂದೆಡೆ, ರಾಜ್ಯ ಬಿಜೆಪಿ ಘಟಕ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಅಷ್ಟಕ್ಕೂ ನಡೆದಿದ್ದೇನು?

ಕೆ.ಆರ್.ನಗರ ತಾಲೂಕಿನ ಎಡತೊರೆ ಗ್ರಾಮದಲ್ಲಿರುವ ಐತಿಹಾಸಿಕ ಅರ್ಕೇಶ್ವರ ಸ್ವಾಮಿ ದೇವಾಲಯದ ಆವರಣದ ಗೋಡೆಗಳ ಮೇಲೆ ಕೆಂಪು ಬಣ್ಣದಲ್ಲಿ ಶಿಲುಬೆ (Cross) ಹಾಗೂ ಹಸಿರು ಬಣ್ಣದಲ್ಲಿ ಮಸೀದಿಯ (Mosque) ಚಿತ್ರಗಳನ್ನು ಬಿಡಿಸಲಾಗಿತ್ತು. ದೇವಾಲಯಕ್ಕೆ ಆಗಮಿಸಿದ ಸ್ಥಳೀಯ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಯುವಕರು ಇದನ್ನು ಗಮನಿಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸನಾತನ ಧರ್ಮದ ಶ್ರದ್ಧಾಕೇಂದ್ರದ ಪವಿತ್ರತೆಗೆ ಧಕ್ಕೆ ತರುವ ದುರುದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಿದ ಸ್ಥಳೀಯರು, ಇದಕ್ಕೆ ಕಾರಣರಾದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದರು.

ಇಬ್ಬರ ವಿರುದ್ಧ FIR ದಾಖಲು:

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಎಚ್ಚೆತ್ತ ಕೆ.ಆರ್.ನಗರ ತಹಶೀಲ್ದಾರ್ ಸುರೇಂದ್ರ ಮೂರ್ತಿ ಅವರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ತಕ್ಷಣವೇ ಗೋಡೆಯ ಮೇಲಿದ್ದ ಚಿತ್ರಗಳನ್ನು ಅಳಿಸಿಹಾಕಲು ಕ್ರಮ ಕೈಗೊಂಡರು. ಅಲ್ಲದೆ, ದೇವಾಲಯದ ಪಾರುಪತ್ತೇದಾರ್ ಆರತಿ ಹಾಗೂ ಚಿತ್ರ ಬಿಡಿಸಿದ ಕಲಾವಿದ ವಿನಯ್ ಎಂಬುವವರ ವಿರುದ್ಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಿಸಿದ್ದಾರೆ.

ತುಘಲಕ್ ಸರ್ಕಾರವೆಂದ ಬಿ.ವೈ. ವಿಜಯೇಂದ್ರ

ಈ ವಿವಾದ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಾಮಾಜಿಕ ಜಾಲತಾಣ 'X' (ಟ್ವಿಟರ್) ನಲ್ಲಿ ಪೋಸ್ಟ್ ಹಾಕಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

'ಕೆ.ಆರ್.ನಗರದ ಪ್ರಸಿದ್ಧ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಿಂದೂ ಸಂಪ್ರದಾಯಗಳಿಗೆ ವಿರುದ್ಧವಾಗಿ ಇತರ ಧಾರ್ಮಿಕ ಚಿಹ್ನೆಗಳನ್ನು ರಚಿಸಿ, ಸನಾತನ ಧರ್ಮದ ಶ್ರದ್ಧಾಕೇಂದ್ರದ ಪವಿತ್ರತೆಗೆ ಧಕ್ಕೆ ತರಲು ಯತ್ನಿಸಿರುವುದು ಅತ್ಯಂತ ಖಂಡನೀಯ. ಇದು ಸೂಕ್ಷ್ಮತೆಯ ಅರಿವಿಲ್ಲದ, ಸಂವೇದನಾರಹಿತ ಉದ್ಧಟತನ. ಧಾರ್ಮಿಕ ಸಾಮರಸ್ಯದ ಹೆಸರಿನಲ್ಲಿ ಹಿಂದೂ ದೇವಸ್ಥಾನಗಳ ಆಚಾರ-ವಿಚಾರಗಳು ಹಾಗೂ ಪದ್ಧತಿಗಳ ಮೇಲೆ ಸವಾರಿ ಮಾಡಲು ಹೊರಟಿರುವ ಅಧಿಕಾರಿಗಳ ನಡೆ ಮತ್ತು ಈ ಕುರಿತಂತೆ ಈ ತುಘಲಕ್ ಸರ್ಕಾರದ ಮೌನ ಭಕ್ತಾದಿಗಳ ಭಾವನೆಗಳಿಗೆ ಎಸಗಿದ ದ್ರೋಹವಾಗಿದೆ. ಇವರ ಢೋಂಗಿ ಮುಖವಾಡವನ್ನು ಕಳಚಿ ಅಸಲೀ ಮುಖವನ್ನು ಬಯಲು ಮಾಡಿದೆ' ಎಂದು ಕಿಡಿಕಾರಿದ್ದಾರೆ.

ಮುಂದುವರಿದು 'ಇತರ ಪ್ರಾರ್ಥನಾ ಮಂದಿರಗಳಲ್ಲಿ ಕಾಣಿಸದ ಇಂತಹ ಕುಚೋದ್ಯಗಳು ಕೇವಲ ಹಿಂದೂ ನಂಬಿಕೆಗಳ ಮೇಲೆಯೇ ಹೇರುವುದು ಯಾಕೆ? ಮಾನ್ಯ ಮುಖ್ಯಮಂತ್ರಿಗಳೇ, ಹಿಂದೂಗಳ ಶಾಂತಿಪ್ರಿಯತೆಯನ್ನು ದೌರ್ಬಲ್ಯ ಎಂದುಕೊಂಡ ವಿಕೃತ ಮನಸ್ಸಿನ ಕುಚೇದ್ಯಗಳಿಗೆ ನಿಮ್ಮ ಸರ್ಕಾರ ತಕ್ಕ ಶಾಸ್ತಿ ಮಾಡದೆ ಹೋದರೆ ಜನರೇ ಆ ಕೆಲಸ ಮಾಡಬೇಕಾದೀತು. ಪ್ರಕೃತ ಪ್ರಕರಣದಲ್ಲಿ ಕೇವಲ ಆ ಚಿಹ್ನೆಗಳನ್ನು ತೆರವುಗೊಳಿಸಿದರೆ ಸಾಲದು, ಪ್ರಚೋದನಾಕಾರಿ ಕೆಲಸ ಮಾಡಿರುವವರನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು' ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಪ್ರಸ್ತುತ ಕೆ.ಆರ್.ನಗರ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದು, ದೇವಾಲಯದ ಆವರಣದಲ್ಲಿ ಹೆಚ್ಚಿನ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.

PREV
Read more Articles on
click me!

Recommended Stories

ಹಾಸನಾಂಬ ದೇಗುಲದ ಆವರಣದಲ್ಲಿ ಅವಘಡ, ವಿದ್ಯುತ್ ಶಾಕ್‌ಗೆ ಪ್ರಜ್ಞೆತಪ್ಪಿದ ಕಾರ್ಮಿಕ
'ನನ್ನದೇ ಹಣಕ್ಕಾಗಿ ನಾನೇಕೆ ಬೇಡಿಕೊಳ್ಳಬೇಕು?' ಬೆಂಗಳೂರಿನ ಬಾಡಿಗೆದಾರನ ಗೋಳು ವೈರಲ್