
ಕಲಬುರಗಿ (ಜು.06): ಸಾರಿಗೆ ಸಂಸ್ಥೆಯ ಬಸ್ಸೊಂದರ ಹೆಡ್‌ಲೈಟ್ ಕೆಟ್ಟುಹೋಗಿದ್ದರೂ, ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಅಪಾಯಕಾರಿಯಾಗಿ ಬಸ್ ಚಲಾಯಿಸಿದ ಘಟನೆಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ ಬಸ್ ಚಾಲಕನನ್ನು ಅಮಾನತುಗೊಳಿಸಲಾಗಿದ್ದು, ಬಸ್ಸಿನ ನಿರ್ವಹಣೆಯಲ್ಲಿ ವಿಫಲರಾದ ತಾಂತ್ರಿಕ ಸಿಬ್ಬಂದಿ ವಿರುದ್ಧವೂ ಕ್ರಮ ಜರುಗಿಸಲಾಗಿದೆ.
ಜುಲೈ 4 ರಂದು ಕಲಬುರಗಿಯಿಂದ ಚಿಂಚೋಳಿಗೆ ಸಂಚರಿಸುತ್ತಿದ್ದ ಚಿಂಚೋಳಿ ಘಟಕದ ಬಸ್ (ನೋಂದಣಿ ಸಂಖ್ಯೆ: KA-28 F-1985) ರಸ್ತೆಯಲ್ಲಿ ಹೋಗುತ್ತಿದ್ದಾಗ ಏಕಾಏಕಿ ಹೆಡ್‌ಲೈಟ್ ಕೈಕೊಟ್ಟಿದೆ. ಇಂತಹ ಸಂದರ್ಭದಲ್ಲಿ ಚಾಲಕ ಬಸ್ಸನ್ನು ಸುರಕ್ಷಿತವಾಗಿ ರಸ್ತೆ ಬದಿ ನಿಲ್ಲಿಸಿ ಬದಲಿ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಚಾಲಕ ಮತ್ತು ಕಂಡಕ್ಟರ್ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಕಂಡಕ್ಟರ್ ಕಿಟಕಿಯಿಂದ ಮೊಬೈಲ್ ಫೋನ್ ಫ್ಲಾಶ್ ಲೈಟ್ ಹಿಡಿದು ದಾರಿ ತೋರಿಸುತ್ತಿದ್ದರೆ, ಚಾಲಕ ಕತ್ತಲಲ್ಲೇ ಬಸ್ ಓಡಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕೆಕೆಆರ್‌ಟಿಸಿ ಮುಖ್ಯ ತಾಂತ್ರಿಕ ಅಭಿಯಂತರರು, ಸಮಗ್ರ ತನಿಖೆ ನಡೆಸಿ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ವರದಿಯ ಮುಖ್ಯಾಂಶಗಳು ಇಲ್ಲಿವೆ:
ಚಾಲಕನ ಅಮಾನತು: ಬಸ್ಸಿನಲ್ಲಿ ದೋಷ ಬಂದಿದ್ದರೂ ಹತ್ತಿರದ ಘಟಕಕ್ಕೆ ತೆರಳಿ ದುರಸ್ತಿ ಮಾಡಿಸದೆ, ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಓಡಿಸಿ ಪ್ರಯಾಣಿಕರ ಪ್ರಾಣಾಪಾಯಕ್ಕೆ ಕಾರಣವಾದ ಚಾಲಕನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ತಾಂತ್ರಿಕ ಸಿಬ್ಬಂದಿಗೆ ಬಿಸಿ: ವಾಹನದ ಸೂಕ್ತ ನಿರ್ವಹಣೆ ಮಾಡುವಲ್ಲಿ ವಿಫಲರಾದ ಘಟಕದ ತಾಂತ್ರಿಕ ಮೇಲ್ವಿಚಾರಕರು ಮತ್ತು ತಾಂತ್ರಿಕ ಸಿಬ್ಬಂದಿ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಬಸ್ಸಿನ ಹೆಡ್‌ಲೈಟ್ ಇಲ್ಲದೆ ರಸ್ತೆಗೆ ಬಿಟ್ಟಿದ್ದು ಯಾರು? ಬಸ್ಸಿನ ಫಿಟ್‌ನೆಸ್ ಪರಿಶೀಲನೆ ಸರಿಯಾಗಿ ನಡೆಯುತ್ತಿದೆಯೇ? ಎಂಬ ಪ್ರಶ್ನೆಗಳು ಈ ಘಟನೆಯಿಂದ ಎದ್ದಿವೆ. ಸರ್ಕಾರದ 'ಶಕ್ತಿ' ಯೋಜನೆಯಡಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರೂ, ಬಸ್‌ಗಳ ನಿರ್ವಹಣೆಯತ್ತ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎನ್ನುವುದಕ್ಕೆ ಇದು ಜ್ವಲಂತ ಉದಾಹರಣೆಯಾಗಿದೆ. ‘ಸಾಮಾನ್ಯರು ಹೆಲ್ಮೆಟ್ ಹಾಕದಿದ್ದರೆ ದಂಡ ಹಾಕುವ ಸರ್ಕಾರ, ಇಂತಹ ಮರಣಮೃದಂಗ ಬಸ್‌ಗಳನ್ನು ರಸ್ತೆಗೆ ಬಿಡುವವರ ಮೇಲೆ ಯಾಕೆ ಕಣ್ಣು ಮುಚ್ಚಿ ಕುಳಿತಿದೆ?’ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಒಟ್ಟಿನಲ್ಲಿ, ವೈರಲ್ ವಿಡಿಯೋ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹವಾದರೂ, ಇಂತಹ ಘಟನೆಗಳು ಮರುಕಳಿಸದಂತೆ ಬಸ್‌ಗಳ ತಾಂತ್ರಿಕ ಸ್ಥಿತಿಗತಿಯನ್ನು ಸುಧಾರಿಸಬೇಕಿದೆ.