
ಕಾರವಾರ(ಜು.6): ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳ (Kaiga Units 5 & 6) ಪರಮಾಣು ವಿದ್ಯುತ್ ಯೋಜನೆಯಲ್ಲಿ ಅತ್ಯಂತ ಅಪರೂಪದ ಎಂಜಿನಿಯರಿಂಗ್ ಮೈಲಿಗಲ್ಲು ನಿರ್ಮಾಣವಾಗಿದೆ. ಮೂಲಸೌಕರ್ಯ ಕ್ಷೇತ್ರದ ದೈತ್ಯ ಸಂಸ್ಥೆಯಾದ 'ಮೇಘಾ ಇಂಜಿನಿಯರಿಂಗ್ ಆಂಡ್ ಇನ್‌ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್' (MEIL) ಸೋಮವಾರ ಪ್ರಕಟಣೆ ಹೊರಡಿಸಿದ್ದು, ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ಇತಿಹಾಸದಲ್ಲೇ ಅತ್ಯಂತ ಬೃಹತ್ ಪ್ರಮಾಣದ ನಿರಂತರವಾಗಿ ಕಾಂಕ್ರೀಟ್ ಹಾಕುವ (Monolithic Concrete Pour) ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ತಿಳಿಸಿದೆ.
ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾರ್ಯವು ಎಂಇಐಎಲ್ (MEIL) ಸಂಸ್ಥೆಯ ಪಾಲಿಗೆ ಅತ್ಯಂತ ಪ್ರತಿಷ್ಠಿತ ಹಾಗೂ ಚೊಚ್ಚಲ (Maiden) ಪರಮಾಣು ಯೋಜನೆಯಾಗಿದೆ. ಈ ಮಹತ್ವದ ಕಾರ್ಯಾಚರಣೆಯಲ್ಲಿ ಸಂಸ್ಥೆಯು ಸರಿಸುಮಾರು 7,250 ಘನ ಮೀಟರ್‌ಗಳಷ್ಟು (Cubic Meters) ಬೃಹತ್ ಪ್ರಮಾಣದ ಕಾಂಕ್ರೀಟ್ ಅನ್ನು ನಿರಂತರವಾಗಿ ಹಾಕಿದೆ. ಅತ್ಯಂತ ಜವಾಬ್ದಾರಿಯುತ ಹಾಗೂ ಕಠಿಣ ಸವಾಲುಗಳಿಂದ ಕೂಡಿರುವ ಇನ್ಫ್ರಾಸ್ಟ್ರಕ್ಚರ್ ವಲಯದಲ್ಲಿ, ತನ್ನ ಮೊದಲ ಅಣುಶಕ್ತಿ ಪ್ರಾಜೆಕ್ಟ್‌ನಲ್ಲೇ ಇಷ್ಟು ದೊಡ್ಡ ಪ್ರಮಾಣದ ನಿರಂತರ ಕಾಂಕ್ರೀಟ್ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿರುವುದು ಕಂಪನಿಯ ಎಂಜಿನಿಯರಿಂಗ್ ಸಾಮರ್ಥ್ಯ, ನಿಖರ ಯೋಜನೆ ಮತ್ತು ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ.
ಪರಮಾಣು ರಿಯಾಕ್ಟರ್‌ಗಳ ಸುರಕ್ಷತೆ ಮತ್ತು ದೀರ್ಘಕಾಲೀನ ಬಾಳಿಕೆ ಅತ್ಯಂತ ಮುಖ್ಯವಾಗಿರುತ್ತದೆ. ಹೀಗಾಗಿ, ಈ ಕಾಂಕ್ರೀಟ್ ಪ್ರಕ್ರಿಯೆಯಲ್ಲಿ ಅತ್ಯಂತ ಕಟ್ಟುನಿಟ್ಟಾದ ತಾಂತ್ರಿಕ ಮಾನದಂಡಗಳನ್ನು ಅನುಸರಿಸಲಾಗಿದೆ. ಈ ಇಡೀ ಕಾರ್ಯಾಚರಣೆಯಲ್ಲಿ ಪ್ರತಿ ಘನ ಮೀಟರ್ ಕಾಂಕ್ರೀಟ್‌ಗೆ ಬರೋಬ್ಬರಿ 360 ಕಿಲೋಗ್ರಾಂ ಉಕ್ಕಿನ ಸಾಂದ್ರತೆಯನ್ನು (Rebar Density of 360 kg/cubic meters) ಬಳಸಲಾಗಿದೆ. ಈ ಅತ್ಯುನ್ನತ ಗುಣಮಟ್ಟದ ಉಕ್ಕಿನ ದಟ್ಟಣೆಯು ರಿಯಾಕ್ಟರ್‌ನ ಒಟ್ಟಾರೆ ರಚನೆಗೆ ಗರಿಷ್ಠ ಮಟ್ಟದ ಸ್ಥಿರತೆ ಹಾಗೂ ದೀರ್ಘಕಾಲೀನ ಬಲವನ್ನು ನೀಡಲಿದ್ದು, ಭಾರತೀಯ ಅಣುಶಕ್ತಿ ಇತಿಹಾಸದಲ್ಲೇ ಇದೊಂದು ದೊಡ್ಡ ಮೈಲಿಗಲ್ಲು ಎನಿಸಿಕೊಂಡಿದೆ.
ಈ ಬೃಹತ್ ಕಾಂಕ್ರೀಟ್ ಕಾರ್ಯಾಚರಣೆಯನ್ನು ಅತ್ಯಂತ ಸುರಕ್ಷಿತವಾಗಿ ಮತ್ತು ವ್ಯವಸ್ಥಿತವಾಗಿ ಪೂರ್ಣಗೊಳಿಸಲು ಬೃಹತ್ ಪ್ರಮಾಣದ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳಲಾಗಿತ್ತು. ವಿವಿಧ ಶಿಫ್ಟ್‌ಗಳಲ್ಲಿ ನೂರಾರು ಎಂಜಿನಿಯರ್‌ಗಳು, ಮೇಲ್ವಿಚಾರಕರು (Supervisors), ಕ್ವಾಲಿಟಿ ಪ್ರೊಫೆಷನಲ್‌ಗಳು, ಸರ್ವೇಯರ್‌ಗಳು, ತಂತ್ರಜ್ಞರು, ಆಪರೇಟರ್‌ಗಳು, ಸುರಕ್ಷತಾ ಸಿಬ್ಬಂದಿ ಮತ್ತು ನುರಿತ ಕಾರ್ಮಿಕರು ದಿನದ 24 ಗಂಟೆಯೂ (Round the clock) ಹಗಲಿರುಳು ಶ್ರಮಿಸಿದ್ದಾರೆ. ಕರಾವಳಿ ಭಾಗದ ಕಠಿಣ ಹವಾಮಾನ ಪರಿಸ್ಥಿತಿ ಮತ್ತು ಹತ್ತಾರು ಕಾರ್ಯಾಚರಣೆಯ ಸವಾಲುಗಳ ನಡುವೆಯೂ ಈ ಇಡೀ ತಂಡವು ಅಸಾಧಾರಣ ಬದ್ಧತೆ ಪ್ರದರ್ಶಿಸಿದೆ ಎಂದು ಕಂಪನಿ ಶ್ಲಾಘಿಸಿದೆ.
ಅಣುಶಕ್ತಿ ವಲಯದ ನಿಯಮಾವಳಿಗಳ ಪ್ರಕಾರ ಇಡೀ ಕಾರ್ಯಾಚರಣೆಯ ಉದ್ದಕ್ಕೂ ಕಟ್ಟುನಿಟ್ಟಾದ ಸುರಕ್ಷತಾ ಪ್ರೋಟೋಕಾಲ್‌ಗಳನ್ನು (Safety Protocols) ಪಾಲಿಸಲಾಗಿದೆ. ರಿಯಾಕ್ಟರ್‌ನ ರಚನಾತ್ಮಕ ಸಮಗ್ರತೆ ಮತ್ತು ದೀರ್ಘಕಾಲೀನ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಖಾತರಿಪಡಿಸಿಕೊಳ್ಳಲು, ಪರಮಾಣು ವಲಯದ ಕಠಿಣ ಅಗತ್ಯತೆಗಳಿಗೆ ಅನುಗುಣವಾಗಿ ಎಲ್ಲಾ ರೀತಿಯ ಗುಣಮಟ್ಟದ ತಪಾಸಣೆಗಳು ಮತ್ತು ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಎಂಇಐಎಲ್ ತನ್ನ ಅಧಿಕೃತ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಈ ಯಶಸ್ಸಿನೊಂದಿಗೆ ಕೈಗಾ ಸ್ಥಾವರದ ಮುಂಬರುವ ಘಟಕಗಳ ನಿರ್ಮಾಣ ಕಾರ್ಯ ಮತ್ತಷ್ಟು ವೇಗ ಪಡೆದುಕೊಂಡಂತಾಗಿದೆ.