ರಾರಯಂಡಮ್ ಟೆಸ್ಟ್‌ನಲ್ಲಿ ಸೋಂಕು ಕಂಡಲ್ಲಿ ತಕ್ಷಣ ಕ್ವಾರಂಟೈನ್ ಮಾಡಬಹುದು| 2 ವಾರದ ನಂತರ ಸೋಂಕಿತರಾಗಿ ಕಂಡರೆ ಮತ್ತೆ ಕಾಂಟಾಕ್ಟ್ ಗುರುತಿಸೋ ಕೆಲಸ ನಿಜಕ್ಕೂ ಹೈರಾಣದ್ದು| ಇನ್ನೂ 20ರಿಂದ 30 ಸಾವಿರ ವಲಸಿಗರು ಬರೋ ನಿರೀಕ್ಷೆ ಇರೋವಾಗ ಅವರನ್ನೆಲ್ಲ ಹೀಗೆ ಬಿಟ್ಟರೆ ಹೇಗೆ?| ಕೋವಿಡ್- 19 ರಾರಯಂಡಮ್ ಟೆಸ್ಟ್ ನಡೆಸಿದಾಗ ಮಾತ್ರ ಕ್ವಾರಂಟೈನ್ ಕೆಂಡ ಶಮನ ಸಾಧ್ಯ|
ಶೇಷಮೂರ್ತಿ ಅವಧಾನಿ
ಕಲಬುರಗಿ(ಮೇ.18): ಕೊರೋನಾತಂಕದ ಕಲಬುರಗಿ ಮುಂದೀಗ ‘ಮಹಾ’ ಕಂಟಕ ಧುತ್ತನೆ ಎದುರಾಗಿದೆ. ಸೌದಿ ಸಂಕಷ್ಟದಿಂದ ಪಾರಾಗಿ, ದಿಲ್ಲಿ ನಿಜಾಮುದ್ದೀನ್ ಮರ್ಕಜ್ ತಬ್ಲೀಘಿಗಳು ತಂದೊಡ್ಡಿದ್ದ ಆತಂಕ ತುಸು ತಗ್ಗುತ್ತಿರುವ ಕಾಲದಲ್ಲೇ ಕೊರೋನಾ ಹೆಮ್ಮಾರಿಯ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮಹಾರಾಷ್ಟ್ರದ ಮುಂಬೈ-ಪುಣೆಯಿಂದ ಸಹಸ್ರಾರು ವಲಸೆ ಕಾರ್ಮಿಕರು ಕಲಬುರಗಿ ಸೇರುವ ಮೂಲಕ ಬಿಸಿಲೂರಿನ ನೆತ್ತಿ ಮೇಲೆ ಕೊರೋನಾ ಹೆಚ್ಚಳದ ಆತಂಕದ ‘ತೂಗುಕತ್ತಿ’ ನೇತಾಡುವಂತೆ ಮಾಡಿದ್ದಾರೆ.
ಕಳೆದ 4 ದಿನದಿಂದ ಒಂದೇ ಸವನೆ ಕಲಬುರಗಿಯಲ್ಲಿ ನಿತ್ಯ ಸರಾಸರಿ 6ರಿಂದ 8ರಷ್ಟುಸೋಂಕಿತರು ಪತ್ತೆಯಾಗುತ್ತಲಿದ್ದು ಇದಕ್ಕೆಲ್ಲ ಈ ‘ಮಹಾ’ ವಲಸೆಯೇ ಕಾರಣವಾಗಿದೆ. ಕೊರೋನಾ ಲಾಕ್‌ಡೌನ್ 3.0 ಸಡಿಲಿಕೆ ಹಿನ್ನೆಲೆಯಲ್ಲಿ ಮೇ 13ರ ಸಂಜೆವರೆಗೆ ಬೇರೆ ರಾಜ್ಯದಲ್ಲಿ ಸಿಲುಕಿದ ಜಿಲ್ಲೆಯ 13 ಸಾವಿರದಷ್ಟುವಲಸಿಗ ಕಾರ್ಮಿಕರು ಅಂತರ ರಾಜ್ಯ ಗಡಿ ಮೂಲಕ ಕಲಬುರಗಿ ಸೇರಿದ್ದು ಇವರನ್ನೆಲ್ಲ 294 ಸೆಂಟರ್‌ಗಳಲ್ಲಿ ಕ್ವಾರಂಟೈನೇನೋ ಮಾಡಲಾಗಿದೆ. ವಿಪರ್ಯಾಸವೆಂದರೆ ಜಿಲ್ಲೆ ಸೇರಿರುವ ವಲಸಿಗ ಕಾರ್ಮಿಕರಿಗೆ ಗಡಿಯಲ್ಲಿ ಸ್ಕ್ರೀನಿಂಗ್ ಬಿಟ್ಟರೆ ಯಾವುದೇ ಟೆಸ್ಟ್ ಮಾಡಲಾಗಿಲ್ಲ. ಕೊರೋನಾ ರಾರಯಂಡಂ ಟೆಸ್ಟ್ ಇವರಿಗೂ ಆಗಬೇಕು ಎಂಬ ಕೂಗು ಕೇಳಿಬರುತ್ತಿದ್ದರೂ ಇನ್ನೂ ಕ್ರಮ ಕೈಗೊಂಡಿಲ್ಲ.
ವೃದ್ಧ ಸಾವು; ಕೊರೊನಾ ಹಾಟ್‌ಸ್ಪಾಟ್ ಆಯ್ತು ಕಲಬುರಗಿ
ಎಷ್ಟು ಸುರಕ್ಷಿತ?:
ಈ ಕ್ವಾರಂಟೈನ್ ಸೆಂಟರ್‌ಗಳು ಅದೆಷ್ಟುಸುರಕ್ಷಿತ- ಸೌಲಭ್ಯಪೂರ್ಣ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಇಲ್ಲಿ ಸಾಮಾಜಿಕ ಅಂತರ ನಿಭಾಯಿಸುವ, ಶೌಚ, ಸ್ನಾನ ಇತ್ಯಾದಿಗೆ ಇಲ್ಲಿ ಎಲ್ಲರಿಗೂ ಪ್ರತ್ಯೇಕ ಸವಲತ್ತಿಲ್ಲ, ಕಾಮನ್ ಟಾಯ್ಲೆಟ್- ಬಾತ್‌ರೂಮ್, ಮಲಗುವುದು, ಕುಳಿತುಕೊಳ್ಳುವುದು ಸಾಗಿರುವಾಗ ಇವರಲ್ಲಿ ಯಾರಿಗಾದರೂ ಒಬ್ಬರಿಗೆ ಸೋಂಕು ಕಂಡರೂ ತೀರಿತು. ಅಲ್ಲಿ ತಂಗಿದವರೆಲ್ಲರಿಗೂ ಹೆಮ್ಮಾರಿ ಆತಂಕ ತಪ್ಪಿದ್ದಲ್ಲ. ಇದರೊಂದಿಗೆ ಜಿಲ್ಲೆಗೆ ಇನ್ನೂ 20ರಿಂದ 30 ಸಾವಿರ ಮಂದಿ ವಲಸಿಗರು ಬರಲು ಬಾಕಿಯಿದ್ದು, ಅವರನ್ನೆಲ್ಲ ಕ್ವಾರಂಟೈನ್ ಮಾಡುವುದೇ ಜಿಲ್ಲಾಡಳಿತದ ಮುಂದಿರುವ ಬಹು ದೊಡ್ಡ ಸವಾಲಾಗಿದೆ.