PDO: ಲೋಕಾ ಪೊಲೀಸರ ಡಿಜಿಟಲ್ ಟ್ರ್ಯಾಪ್; ಲಂಚಕ್ಕೆ ಬೇಡಿಕೆಯಿಟ್ಟು ಜೈಲು ಪಾಲಾದ ಗ್ರಾಪಂ ಪಿಡಿಒ ಅಧಿಕಾರಿ!

Published : Aug 29, 2026, 10:38 PM IST
Biral Gp

ಸಾರಾಂಶ

ಪಿಡಿಒ ಮೆಹಬೂಬ್ ಪಟೇಲ್, ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಫೋನ್ ಪೇ ಮೂಲಕ ₹12,000 ಲಂಚ ಸ್ವೀಕರಿಸುತ್ತಿದ್ದಾಗ, ಲೋಕಾಯುಕ್ತ ಪೊಲೀಸರು ಡಿಜಿಟಲ್ ಸಾಕ್ಷ್ಯದೊಂದಿಗೆ ಅಧಿಕಾರಿಯನ್ನು ರೆಡ್‌ಹ್ಯಾಂಡ್‌ ಆಗಿ ಬಂಧಿಸಿದ್ದಾರೆ.

ಸರ್ಕಾರಿ ಕೆಲಸ ಮಾಡಿಕೊಡಲು ಹಣಕ್ಕಾಗಿ ಪಟ್ಟು ಹಿಡಿದು, ಆನ್‌ಲೈನ್ ಮೂಲಕ ಲಂಚದ ಹಣ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯತಿ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸರ್ಕಾರಿ ಜಾಗದ ಖಾತೆ ಬದಲಾವಣೆ (ಮ್ಯುಟೇಷನ್) ಮಾಡಿಕೊಡಲು ಲಂಚ ಪಡೆಯುತ್ತಿದ್ದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಿರಾಳ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮೆಹಬೂಬ್ ಪಟೇಲ್ ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆಯಲ್ಲಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ.

ಘಟನೆಯ ವಿವರ!

ಬಿರಾಳ ಗ್ರಾಮದ ನಿವಾಸಿ ಶಿವರೆಡ್ಡಿ ಎಂಬುವವರು ತಮ್ಮ ಸರ್ಕಾರಿ ಜಾಗದ ಮ್ಯುಟೇಷನ್ (ಖಾತೆ ಬದಲಾವಣೆ) ಮಾಡಿಕೊಡುವಂತೆ ಕೋರಿ ಬಿರಾಳ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿದ್ದರು. ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ತಲುಪಿಸಬೇಕಾದ ಈ ಸರ್ಕಾರಿ ಸೇವೆಯನ್ನು ಒದಗಿಸಲು ಪಿಡಿಒ ಮೆಹಬೂಬ್ ಪಟೇಲ್ ಉಚಿತವಾಗಿ ಕೆಲಸ ಮಾಡಲು ನಿರಾಕರಿಸಿದ್ದರು. ಬದಲಿಗೆ, ಶಿವರೆಡ್ಡಿ ಅವರ ಬಳಿ ₹18,000 ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಬಡ ಶಿವರೆಡ್ಡಿ ಅವರು ಹಣ ನೀಡಲು ಹಿಂದೇಟು ಹಾಕಿದರೂ, ಹಣ ನೀಡದಿದ್ದರೆ ಕೆಲಸ ಮಾಡಿಕೊಡುವುದಿಲ್ಲ ಎಂದು ಅಧಿಕಾರಿ ಸತಾಯಿಸುತ್ತಿದ್ದರು. ಕೊನೆಗೆ ಶಿವರೆಡ್ಡಿ ಅವರು ಲಂಚ ನೀಡಲು ಮನಸ್ಸಿಲ್ಲದೆ, ಭ್ರಷ್ಟ ಅಧಿಕಾರಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿ ಕಲಬುರಗಿ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದರು.

ಆನ್‌ಲೈನ್ ಲಂಚ; ಲೋಕಾ ಡಿಜಿಟಲ್ ಟ್ರ್ಯಾಪ್!

ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆಗೆ ಸೂಕ್ತ ಯೋಜನೆ ರೂಪಿಸಿದರು. ಪಿಡಿಒ ಮೆಹಬೂಬ್ ಪಟೇಲ್ ಶಿವರೆಡ್ಡಿ ಅವರೊಂದಿಗೆ ಚೌಕಾಸಿ ನಡೆಸಿ, ₹12,000 ಹಣ ನೀಡುವಂತೆ ಒಪ್ಪಿಕೊಂಡಿದ್ದರು. ಭ್ರಷ್ಟಾಚಾರದ ಸಾಕ್ಷ್ಯ ಸಿಗದಂತೆ ತಡೆಯಲು ನಗದು ರೂಪದಲ್ಲಿ ಹಣ ಪಡೆಯುವ ಬದಲಿಗೆ ತಮ್ಮ 'ಫೋನ್ ಪೇ' (PhonePe) ಖಾತೆಗೆ ಹಣ ವರ್ಗಾಯಿಸಿಕೊಳ್ಳಲು ಸೂಚಿಸಿದ್ದರು. ಯೋಜನೆಯಂತೆ ಶಿವರೆಡ್ಡಿ ಅವರು ಪಿಡಿಒ ಸೂಚಿಸಿದ ಫೋನ್ ಪೇ ಸಂಖ್ಯೆಗೆ ₹12,000 ಲಂಚದ ಹಣವನ್ನು ಡಿಜಿಟಲ್ ರೂಪದಲ್ಲಿ ವರ್ಗಾಯಿಸಿದರು. ಹಣ ತಲುಪಿದ ತಕ್ಷಣವೇ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಆನ್‌ಲೈನ್ ನಗದು ವರ್ಗಾವಣೆಯ ತಾಂತ್ರಿಕ ಸಾಕ್ಷ್ಯಾಧಾರಗಳೊಂದಿಗೆ ಪಿಡಿಒ ಮೆಹಬೂಬ್ ಪಟೇಲ್ ಅವರನ್ನು ಬಂಧಿಸಿದ್ದಾರೆ.

ಲೋಕಾಯುಕ್ತ ದಾಳಿ ಹಾಗೂ ಬಂಧನ!

ಲಂಚದ ಹಣ ಖಾತೆಗೆ ಜಮೆಯಾಗಿದ್ದನ್ನು ಖಚಿತಪಡಿಸಿಕೊಂಡ ಲೋಕಾಯುಕ್ತ ಪೊಲೀಸ್ ಸಿಬ್ಬಂದಿ, ಅಧಿಕಾರಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪಿಡಿಒ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆಗಳು ನಡೆದಿವೆ. ಸರ್ಕಾರಿ ಹುದ್ದೆಯಲ್ಲಿದ್ದು ಸಾರ್ವಜನಿಕರ ಸೇವೆಯನ್ನು ಪಾರದರ್ಶಕವಾಗಿ ಮಾಡಬೇಕಾದ ಅಧಿಕಾರಿಯೇ ಡಿಜಿಟಲ್ ಪಾವತಿ ವೇದಿಕೆಗಳನ್ನು ದುರ್ಬಳಕೆ ಮಾಡಿಕೊಂಡು ಲಂಚ ಪಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

PREV
Read more Articles on
click me!

Recommended Stories

ನೈಋತ್ಯಕ್ಕೆ ಮಂಗಳೂರು ವಿವಾದದ ನಡುವೆಯೇ ಕೊಂಕಣ ರೈಲ್ವೆ ವಿಲೀನ ಪ್ರಸ್ತಾಪ, ಕರಾವಳಿಯ ರೈಲ್ವೆ ಭವಿಷ್ಯ ಸವಾಲು!
ವಿಶ್ವದಾದ್ಯಂತ ರಿಲೀಸ್, ಭಾರತದಲ್ಲಿ ಪ್ರಕಟಣೆಗೆ ತಡೆ; ಸೋನಿಯಾ ಗಾಂಧಿ ಪುಸ್ತಕದ ಸುತ್ತ ವಿವಾದವೇಕೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!