
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್‌ನಲ್ಲಿ ಮಹತ್ವದ ಬದಲಾವಣೆ: ನೂತನ ಕಮಿಷನರ್ ಆಗಿ ಬೋರ್ಸೆ ಭೂಷಣ್ ಗುಲಾಬರಾವ್ ನೇಮಕಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ನಡೆದಿದ್ದು, ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನೂತನ ಪೊಲೀಸ್ ಕಮಿಷನರ್ ಆಗಿ ಹಿರಿಯ ಐಪಿಎಸ್ ಅಧಿಕಾರಿ ಬೋರ್ಸೆ ಭೂಷಣ್ ಗುಲಾಬರಾವ್ ಅವರನ್ನು ಸರ್ಕಾರ ನೇಮಕ ಮಾಡಿದೆ. ಈ ಹಿಂದೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎನ್. ಶಶಿಕುಮಾರ್ ಅವರನ್ನು ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿದೆ. ಆದರೆ, ಶಶಿಕುಮಾರ್ ಅವರಿಗೆ ಯಾವುದೇ ಹೊಸ ಸ್ಥಳವನ್ನು ನಿಯೋಜಿಸದೆ ಸರ್ಕಾರ ಆದೇಶ ಹೊರಡಿಸಿರುವುದು ಪೊಲೀಸ್ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಶಶಿಕುಮಾರ್ ಅವರ ವರ್ಗಾವಣೆ ಪ್ರಕ್ರಿಯೆಯು ಸರ್ಕಾರದ ನಿಯಮಿತ ಆಡಳಿತಾತ್ಮಕ ವರ್ಗಾವಣೆಗಳ ಭಾಗವಾಗಿದೆ ಎಂದು ಹೇಳಲಾಗುತ್ತಿದ್ದರೂ, ಅವರಿಗೆ ಯಾವುದೇ ಹೊಸ ಹುದ್ದೆ ತೋರಿಸದಿರುವುದು ಈಗ ಚರ್ಚೆಗೆ ಪುಷ್ಠಿ ನೀಡಿದೆ. ಇದೇ ಸಮಯದಲ್ಲಿ, ಬೆಳಗಾವಿ ನಗರದ ಪೊಲೀಸ್ ಕಮಿಷನರ್ ಆಗಿ ಹಾಗೂ ಸೈಬರ್ ಕ್ರೈಮ್ ವಿಭಾಗಗಳಲ್ಲಿ ಸುದೀರ್ಘ ಅನುಭವ ಹೊಂದಿರುವ ಬೋರ್ಸೆ ಭೂಷಣ್ ಗುಲಾಬರಾವ್ ಅವರಿಗೆ ಹುಬ್ಬಳ್ಳಿ-ಧಾರವಾಡದ ಜವಾಬ್ದಾರಿಯನ್ನು ವಹಿಸಲಾಗಿದೆ.
ಬೋರ್ಸೆ ಭೂಷಣ್ ಗುಲಾಬರಾವ್ ಅವರು 2009ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಮಹಾರಾಷ್ಟ್ರ ಮೂಲದ ಇವರು ಕರ್ನಾಟಕ ಕೆಡರ್‌ನ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಕಠಿಣ ನಿರ್ಧಾರಗಳು ಮತ್ತು ತಾಂತ್ರಿಕ ಆಧಾರಿತ ತನಿಖಾ ಶೈಲಿಯಿಂದ ಇಲಾಖೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅಪರಾಧ ವಿಭಾಗ, ಸೈಬರ್ ಕ್ರೈಮ್, ನಾರ್ಕೋಟಿಕ್ಸ್ ಮತ್ತು ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಇವರು ಅಪಾರ ಪರಿಣತಿ ಹೊಂದಿದ್ದಾರೆ. ಈ ಹಿಂದೆ ವಿವಿಧ ಜಿಲ್ಲೆಗಳಲ್ಲಿ ಎಸ್‌ಪಿ ಹಾಗೂ ಸೈಬರ್ ಅಪರಾಧ ತನಿಖಾ ದಳದ (CID) ಡಿಐಜಿಯಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ.
ಹುಬ್ಬಳ್ಳಿ-ಧಾರವಾಡ ವಾಣಿಜ್ಯ ನಗರಿಯಾಗಿದ್ದು, ಇಲ್ಲಿನ ಕಾನೂನು ಸುವ್ಯವಸ್ಥೆ ನಿರ್ವಹಿಸುವುದು ಯಾವುದೇ ಅಧಿಕಾರಿಗೆ ದೊಡ್ಡ ಸವಾಲಾಗಿದೆ. ನೂತನ ಕಮಿಷನರ್ ಭೂಷಣ್ ಅವರ ಮುಂದೆ ಹಲವು ಪ್ರಮುಖ ಸವಾಲುಗಳಿವೆ. ಅವುಗಳೆನೆಂದರೆ, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ವಂಚನೆಗಳನ್ನು ತಡೆಯಲು ತಮ್ಮ ಸೈಬರ್ ಪರಿಣತಿಯನ್ನು ಬಳಸಿಕೊಳ್ಳಬೇಕಿದೆ. ಇದಲ್ಲದೇ, ಯುವ ಪೀಳಿಗೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ಡ್ರಗ್ಸ್ ಮತ್ತು ಮಾದಕ ದ್ರವ್ಯ ಜಾಲವನ್ನು ಸಂಪೂರ್ಣವಾಗಿ ಹತ್ತಿಕ್ಕುವುದು ಇವರ ಪ್ರಮುಖ ಆದ್ಯತೆಯಾಗಲಿದೆ.
ಅವಳಿ ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು. ಹಾಗೂ ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆಯ ನಡುವೆ ನಂಬಿಕೆ ಹೆಚ್ಚಿಸಿ, ಜನಸ್ನೇಹಿ ವಾತಾವರಣ ನಿರ್ಮಿಸುವುದು. ಬೋರ್ಸೆ ಭೂಷಣ್ ಗುಲಾಬರಾವ್ ಅವರ ಆಡಳಿತ ವೈಖರಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯವಿದೆ. ಅವಳಿ ನಗರದಲ್ಲಿ ಅಪರಾಧ ಚಟುವಟಿಕೆಗಳಿಗೆ ಲಗಾಮು ಹಾಕಲು ಮತ್ತು ರೌಡಿಸಂ ಮುಕ್ತ ವಾತಾವರಣ ನಿರ್ಮಿಸಲು ಹೊಸ ಕಮಿಷನರ್ ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಜನರು ನಿರೀಕ್ಷಿಸುತ್ತಿದ್ದಾರೆ. ಶೀಘ್ರದಲ್ಲೇ ಅಧಿಕಾರ ವಹಿಸಿಕೊಳ್ಳಲಿರುವ ನೂತನ ಕಮಿಷನರ್, ಹುಬ್ಬಳ್ಳಿ-ಧಾರವಾಡದ ಅಭಿವೃದ್ಧಿ ಹಾಗೂ ಸುರಕ್ಷತೆಗೆ ಹೊಸ ಆಯಾಮ ನೀಡಲಿದ್ದಾರೆ ಎನ್ನಲಾಗಿದೆ.