ಅತಿಹೆಚ್ಚು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವನಿಂದಲೇ, ಸಂಚಾರಿ ನಿಯಮಗಳ ಜಾಗೃತಿ ಮೂಡಿಸುವ ಶಿಕ್ಷೆ ಕೊಟ್ಟ ಕೋರ್ಟ್!

Published : Mar 17, 2026, 02:22 PM IST
Chikkamagaluru Traffic Rules

ಸಾರಾಂಶ

ಚಿಕ್ಕಮಗಳೂರಿನ ಕಡೂರು ನ್ಯಾಯಾಲಯವು ಸಂಚಾರ ನಿಯಮಗಳನ್ನು ಪದೇ ಪದೇ ಉಲ್ಲಂಘಿಸಿದ ಸವಾರನೊಬ್ಬನಿಗೆ ವಿಶಿಷ್ಟ ಶಿಕ್ಷೆ ವಿಧಿಸಿದೆ. ದಂಡದ ಬದಲು, ಪಟ್ಟಣದ ಪ್ರಮುಖ ಸರ್ಕಲ್‌ನಲ್ಲಿ 'ಟ್ರಾಫಿಕ್ ರೂಲ್ಸ್' ಬೋರ್ಡ್ ಹಿಡಿದು ನಿಂತು ಜಾಗೃತಿ ಮೂಡಿಸುವಂತೆ ನ್ಯಾಯಾಲಯ ಆದೇಶಿಸಿದೆ.

ವರದಿ : ಆಲ್ದೂರು‌ ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಮಾ.17): ಸಾಮಾನ್ಯವಾಗಿ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ದಂಡ ಪಾವತಿಸಬೇಕು ಅಥವಾ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದರೆ, ಚಿಕ್ಕಮಗಳೂರು ಜಿಲ್ಲೆಯ ಕಡೂರು ನ್ಯಾಯಾಲಯವು ಸಂಚಾರ ನಿಯಮ ಉಲ್ಲಂಘಿಸಿದ ಸವಾರನೊಬ್ಬನಿಗೆ ಅತ್ಯಂತ ವಿಶಿಷ್ಟವಾದ ಮತ್ತು ಸಮಾಜಕ್ಕೆ ಮಾದರಿಯಾಗುವಂತಹ ಶಿಕ್ಷೆಯನ್ನು ವಿಧಿಸಿದೆ.

ಘಟನೆಯ ಹಿನ್ನೆಲೆ:

ಕಡೂರು ತಾಲೂಕಿನ ಬಿಸಿಲೇಹಳ್ಳಿ ಗ್ರಾಮದ ನಿವಾಸಿ ರಂಜಿತ್ ಕುಮಾರ್ ಬಿನ್ ಬಸವರಾಜಪ್ಪ ಎಂಬವರು ಟ್ರಾಫಿಕ್ ನಿಯಮಗಳನ್ನು ಪದೇ ಪದೇ ಉಲ್ಲಂಘಿಸಿದ ಆರೋಪ ಎದುರಿಸುತ್ತಿದ್ದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಮಾರ್ಚ್ 16 ರಂದು ಕಡೂರಿನ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಈ ಪ್ರಕರಣದ (CC No: 678/2026) ವಿಚಾರಣೆ ನಡೆಯಿತು. ವಿಚಾರಣೆ ವೇಳೆ ಆರೋಪಿ ರಂಜಿತ್ ಕುಮಾರ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ನ್ಯಾಯಾಲಯ ನೀಡಿದ ವಿಶಿಷ್ಟ ಶಿಕ್ಷೆ:

ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ, ನ್ಯಾಯಾಧೀಶರು ಕೇವಲ ದಂಡ ವಿಧಿಸದೆ ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 'ಕಮ್ಯುನಿಟಿ ಸೇವೆ' (Community Service) ಮಾಡುವಂತೆ ಆದೇಶಿಸಿದರು. ನ್ಯಾಯಾಲಯದ ಆದೇಶದಂತೆ, ಮಾರ್ಚ್ 17 ರಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಕಡೂರು ಪಟ್ಟಣದ ಮರವಂಜಿ ಸರ್ಕಲ್ ಅಥವಾ ಮಲ್ಲೇಶ್ವರ ಸರ್ಕಲ್‌ನಲ್ಲಿ 'ಟ್ರಾಫಿಕ್ ರೂಲ್ಸ್' ಇರುವ ಬೋರ್ಡ್ ಅನ್ನು ಹಿಡಿದುಕೊಂಡು ನಿಲ್ಲುವಂತೆ ಶಿಕ್ಷೆ ವಿಧಿಸಲಾಯಿತು.

ಪೊಲೀಸ್ ನಿಗಾದಲ್ಲಿ ಜಾಗೃತಿ:

ಆರೋಪಿಯು ನ್ಯಾಯಾಲಯದ ಆದೇಶವನ್ನು ಪಾಲಿಸುತ್ತಿದ್ದಾರೆಯೇ ಎಂದು ಗಮನಿಸಲು ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನೇಮಿಸುವಂತೆ ನ್ಯಾಯಾಲಯವು ಕಡೂರು ಪೊಲೀಸರಿಗೆ ನಿರ್ದೇಶನ ನೀಡಿದೆ. ಸಂಜೆ 5:00 ಗಂಟೆಯ ನಂತರ ಆರೋಪಿಯು ಈ ಸೇವೆಯನ್ನು ಪೂರ್ಣಗೊಳಿಸಿದ ಬಗ್ಗೆ ವರದಿಯನ್ನು ಸಲ್ಲಿಸುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ.

ಸಾರ್ವಜನಿಕರ ಶ್ಲಾಘನೆ:

ನ್ಯಾಯಾಲಯದ ಈ ವಿಶಿಷ್ಟ ತೀರ್ಪಿಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕೇವಲ ಹಣದ ದಂಡ ವಿಧಿಸುವುದಕ್ಕಿಂತ ಇಂತಹ ಶಿಕ್ಷೆಗಳು ಸವಾರರಲ್ಲಿ ಜವಾಬ್ದಾರಿಯನ್ನು ಮೂಡಿಸುತ್ತವೆ ಮತ್ತು ಇತರರಿಗೂ ಸಂಚಾರ ನಿಯಮ ಪಾಲನೆಯ ಮಹತ್ವವನ್ನು ಸಾರುತ್ತವೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ರಂಜಿತ್ ಕುಮಾರ್ ರಸ್ತೆಯಲ್ಲಿ ಬೋರ್ಡ್ ಹಿಡಿದು ನಿಂತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

PREV
Read more Articles on
click me!

Recommended Stories

ಗೋವಾ ರಸ್ತೆ ಅಪಘಾತದಲ್ಲಿ ಕಾರವಾರ ವೈದ್ಯಕೀಯ ವಿದ್ಯಾರ್ಥಿ ಪ್ರೀತಂ ಸಾವು; ಮತ್ತೋರ್ವ ಗಂಭೀರ
ಎಂಗೇಜ್ಮೆಂಟ್ ಆಗಿದ್ದ ಯುವತಿಯನ್ನ ಪಾಳುಬಿದ್ದ ಕಟ್ಟಡದೊಳಗೆ ಕರೆದೊಯ್ದ ಬಾವಿ ಪತಿ; ನಸುಕಿನಲ್ಲೇ ಕತ್ತು ಸೀಳಿ ಪರಾರಿ!