
ಬೆಂಗಳೂರು (ಮಾ.17): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಬರ್ಬರ ಕೊಲೆ ನಡೆದಿದೆ. ಹಸೆಮಣೆ ಏರಿ ಹೊಸ ಜೀವನ ಆರಂಭಿಸಬೇಕಿದ್ದ ಯುವತಿಯೊಬ್ಬಳು ತನ್ನ ಭಾವಿ ಪತಿಯ ಕೈಯಲ್ಲೇ ಕ್ರೂರವಾಗಿ ಕೊಲೆಯಾಗಿರುವ ಘಟನೆ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಯಾದ ಯುವತಿಯನ್ನು ಜೋಯಾ (19) ಎಂದು ಗುರುತಿಸಲಾಗಿದೆ. ಈಕೆಗೆ ಇತ್ತೀಚೆಗಷ್ಟೇ ಶಬೀಲ್ (20) ಎಂಬ ಯುವಕನೊಂದಿಗೆ ನಿಶ್ಚಿತಾರ್ಥ (Engagement) ನೆರವೇರಿತ್ತು. ಇಬ್ಬರೂ ಶೀಘ್ರದಲ್ಲೇ ಮದುವೆಯಾಗಬೇಕಿತ್ತು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಇಂದು ಬೆಳಿಗ್ಗೆ ಸುಮಾರು 6 ಗಂಟೆಯ ಸುಮಾರಿಗೆ ಶಬೀಲ್, ಜೋಯಾಳನ್ನು ಡಿಜೆ ಹಳ್ಳಿಯ ಸಕ್ಕರೆ ಮಂಡಿ ಏರಿಯಾದಲ್ಲಿರುವ ತನ್ನ ಕುಟುಂಬಕ್ಕೆ ಸೇರಿದ ಪಾಳು ಬಿದ್ದ ಮನೆಗೆ ಕರೆತಂದಿದ್ದಾನೆ.
ಪಾಳು ಬಿದ್ದ ಮನೆಯಲ್ಲಿ ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಜಗಳ ನಡೆದಿದೆ ಎನ್ನಲಾಗುತ್ತಿದೆ. ಈ ವೇಳೆ ಆಕ್ರೋಶಗೊಂಡ ಶಬೀಲ್, ತನ್ನ ಬಳಿಯಿದ್ದ ಆಯುಧದಿಂದ ಜೋಯಾಳ ಕತ್ತನ್ನು ಸೀಳಿ ಬರ್ಬರವಾಗಿಯೇ ಕೊಲೆ ಮಾಡಿದ್ದಾನೆ. ಕೇವಲ ಅರ್ಧ ಗಂಟೆಯ ಅವಧಿಯಲ್ಲಿ ಈ ಕೃತ್ಯ ಎಸಗಿದ ಆರೋಪಿ ಶಬೀಲ್, ಅಲ್ಲಿಂದ ಪರಾರಿಯಾಗಿದ್ದಾನೆ. ಬೆಳಿಗ್ಗೆ 6:30ರ ಸುಮಾರಿಗೆ ಆರೋಪಿ ಶಬೀಲ್ ಕುಟುಂಬಸ್ಥರು ಆ ಪಾಳು ಬಿದ್ದ ಮನೆಗೆ ಬಂದಾಗ ಯುವತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಡಿಜೆ ಹಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮದುವೆಯಾಗಬೇಕಿದ್ದ ಹುಡುಗನೇ ಇಂತಹ ಘೋರ ಕೃತ್ಯ ಎಸಗಿರುವುದು ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶ ಮೂಡಿಸಿದೆ. ಕೊಲೆಗೆ ನಿಖರವಾದ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಪ್ರೀತಿ-ಪ್ರೇಮದ ವಿಚಾರವೇ ಅಥವಾ ಬೇರೆ ಯಾವುದಾದರೂ ವೈಯಕ್ತಿಕ ದ್ವೇಷವೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಸ್ತುತ ತಲೆಮರೆಸಿಕೊಂಡಿರುವ ಆರೋಪಿ ಶಬೀಲ್ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿ ಬಲೆ ಬೀಸಿದ್ದಾರೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪಾಳುಬಿದ್ದ ಮನೆಯಲ್ಲಿ ಯುವತಿಯ ಕೊಲೆ ಸ್ಥಳಕ್ಕೆ ಪೂರ್ವ ವಿಭಾಗ ಡಿಸಿಪಿ ವಿಕ್ರಮ್ ಅಮಟೆ ಭೇಟಿ. ಸ್ಥಳ ಪರಿಶೀಲನೆ ಬಳಿಕ ಡಿಸಿಪಿ ವಿಕ್ರಮ್ ಅಮಟೆ ಮಾಧ್ಯಮಗಳೊಂದಿಗೆ ಮಾತನಾಡಿ, ನಮಗೆ 11 ಗಂಟೆಗೆ 112ಗೆ ಕರೆ ಬಂದಿತ್ತು. ಈ ರೀತಿಯಾಗಿ ಕೊಲೆ ಆಗಿದೆ ಅನ್ನೋದಾಗಿ ಮಹಿತಿ ಬಂದಿತ್ತು. ಸೋಕೊ ಟೀಂ ಸ್ಥಳದಲ್ಲಿ ಈಗ ಪರಿಶೀಲನೆ ಮಾಡ್ತಿದ್ದಾರೆ. ಕೊಲೆಯಾದ ಯುವತಿ ಇನ್ನೂ ಕೂಡ ಅಪ್ರಾಪ್ತಳು. ನಮಗೆ ಈಗಾಗಲೆ ಸಸ್ಪೆಕ್ಟ್ ಗೊತ್ತಾಗಿದೆ. ಆರೋಪಿ ಬಂಧನ ನಂತರ ಕೊಲೆಗೆ ಕಾರಣ ಗೊತ್ತಾಗಲಿದೆ. ಸಸ್ಪೆಕ್ಟ್ ಹಾಗು ಕೊಲೆಯಾದ ಯುವತಿಗೆ ಎಂಗೇಜ್ಮೆಟ್ ಆಗಿದೆ. ಏಂಗೇಜ್ಮೆಂಟ್ ಆದ ಯುವಕನ ಸಂಬಂಧಿಕರ ಮನೆ ಇದಾಗಿದೆ. ಇಲ್ಲಿ ಯಾರು ಕೂಡ ವಾಸ ಮಾಡ್ತಾ ಇರ್ಲಿಲ್ಲ. ಆಗಾಗ ಇಬ್ಬರು ಬಂದು ಇಲ್ಲಿ ಸೇರ್ತಾ ಇದ್ದರು ಅನ್ನೋದು ಗೊತ್ತಾಗಿದೆ ಎಂದು ಮಾಹಿತಿ ನೀಡಿದರು.