ಕಾಡುಗೊಲ್ಲ ಸಮುದಾಯಕ್ಕೆ ನ್ಯಾಯ ಒದಗಿಸಿದ್ದು ಕಾಂಗ್ರೆಸ್ ಪಕ್ಷ. ಕಾಡುಗೊಲ್ಲ ಸಮುದಾಯವನ್ನು ಜಾತಿಪಟ್ಟಿಗೆ ಸೇರಿಸಲು ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದು ಮಾಜಿ ಸಚಿವ ಟಿ.ಬಿ.ಜಯಚಂದ್ರ. ಆದ್ದರಿಂದ ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ತೀರ್ಮಾನಿಸಿದ್ದೇವೆ ಎಂದು ಕಾಡುಗೊಲ್ಲ ಮುಖಂಡರಾದ ಹಾರೋಗೆರೆ ಮಾರಣ್ಣ ಹೇಳಿದರು.
ಶಿರಾ : ಕಾಡುಗೊಲ್ಲ ಸಮುದಾಯಕ್ಕೆ ನ್ಯಾಯ ಒದಗಿಸಿದ್ದು ಕಾಂಗ್ರೆಸ್ ಪಕ್ಷ. ಕಾಡುಗೊಲ್ಲ ಸಮುದಾಯವನ್ನು ಜಾತಿಪಟ್ಟಿಗೆ ಸೇರಿಸಲು ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದು ಮಾಜಿ ಸಚಿವ ಟಿ.ಬಿ.ಜಯಚಂದ್ರ. ಆದ್ದರಿಂದ ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ತೀರ್ಮಾನಿಸಿದ್ದೇವೆ ಎಂದು ಕಾಡುಗೊಲ್ಲ ಮುಖಂಡರಾದ ಹಾರೋಗೆರೆ ಮಾರಣ್ಣ ಹೇಳಿದರು.
ನಗರದ ಶ್ರೇಯಸ್ ಕಂಫಟ್ಸ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರು ಕಾಡುಗೊಲ್ಲ ಜನಾಂಗದ ಪರವಾಗಿ ದಲ್ಲಿ ಧ್ವನಿ ಎತ್ತಿ ಎಸ್.ಟಿ. ಮೀಸಲಾತಿಗಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಶ್ರಮಿಸಿದ್ದಾರೆ. ಕಾಡುಗೊಲ್ಲ ಪದವನ್ನು ಜಾತಿ ಪಟ್ಟಿಯಲ್ಲಿ ಹಟ್ಟಿಗೊಲ್ಲ, ಅಡವಿಗೊಲ್ಲ, ಕಾಡುಗೊಲ್ಲ ಎಂದು ಸೇರ್ಪಡೆಯಾಗಲು ಟಿ.ಬಿ.ಜಯಚಂದ್ರ ಅವರೇ ಕಾರಣ. ನಮ್ಮ ಸಮುದಾಯದ ವಿದ್ಯಾರ್ಥಿ ನಿಲಯಕ್ಕೆ ನಗರದಲ್ಲಿ 1 ಎಕರೆ ಜಮೀನು ನೀಡಿ 75 ಲಕ್ಷ ರು. ಅನುದಾನವನ್ನು ನೀಡಿ ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಿದ್ದರು. ಆದರೆ ನಂತರ ಬಂದ ಶಾಸಕರು ಯಾವುದೇ ಅನುದಾನ ನೀಡದೆ ಇಲ್ಲಿಯವರೆಗೂ ಸಹ ನೆನೆಗುದಿಗೆ ಬಿದ್ದಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕಾಡುಗೊಲ್ಲ ಸಮುದಾಯದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಮತ್ತು ಶಿರಾ ಕ್ಷೇತ್ರದಲ್ಲಿ ಟಿ.ಬಿ.ಜಯಚಂದ್ರ ಅವರು ಶಾಸಕರಾಗಬೇಕು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಸೆರ್ಪಡೆಯಾಗುತ್ತಿದ್ದೇವೆ ಎಂದರು.
ಕಾಡುಗೊಲ್ಲ ಮುಖಂಡ, ಮಾಜಿ ಗ್ರಾ.ಪಂ. ಅಧ್ಯಕ್ಷ ಸಿ.ಟಿ.ನಾಗರಾಜಪ್ಪ ಮಾತನಾಡಿ, ಶಿರಾ ಉಪಚುನಾವಣೆಯಲ್ಲಿ ಮದಲೂರು ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಕಾಡುಗೊಲ್ಲ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಮಾಡುವುದಾಗಿ ಘೋಷಣೆ ಮಾಡಿದರು. ಆದರೆ ಇದುವರೆಗೂ ಸಹ ಕಾಡುಗೊಲ್ಲ ನಿಗಮದ ನೊಂದಣಿಯಾಗಿಲ್ಲ. ಯಾವುದೇ ಅನುದಾನ ನಿಗದಿಯಾಗಿಲ್ಲ. ಯಡಿಯೂರಪ್ಪ ಅವರು ಕಾಡುಗೊಲ್ಲ ಸಮಾಜವನ್ನು ಯಾಮಾರಿಸಿ ಮತ ಪಡೆದು ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸುವಂತೆ ಮಾಡಿದರು. ಶಿರಾ ತಾಲೂಕಿನ ಐತಿಹಾಸಿಕ ಶ್ರೀ ಕಳುವರಹಳ್ಳಿ ಜುಂಜಪ್ಪನ ದೇವಸ್ಥಾನದ ಅಭಿವೃದ್ಧಿಗೆ 1 ಕೋಟಿ ರು. ಅನುದಾನ ನೀಡುವುದಾಗಿ ಹೇಳಿದರು ಇದುವರೆಗೂ ಬಿಡುಗಡೆಯಾಗಿಲ್ಲ ಎಂದರು.
ಮುಖಂಡ ಶ್ರೀರಂಗ ಯಾದವ್ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಕಾಡುಗೊಲ್ಲ ಸಮುದಾಯದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂಬ ಉದ್ದೇಶದಿಂದ ಕಳೆದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸಿದೆವು. ಆದರೆ ಯಾವುದೇ ರೀತಿಯಲ್ಲಿ ಸಮುದಾಯಕ್ಕೆ ಅನುಕೂಲವಾಗಲಿಲ್ಲ. ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಕಾಡುಗೊಲ್ಲ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದರು ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಈ ಬಾರಿ ಕಾಡುಗೊಲ್ಲ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಪೂಜಾರ್ ಜಯರಾಮ್, ತಿಮ್ಮರಾಯಪ್ಪ, ರಂಗರಾಜು, ಬಿ.ಟಿ.ಈರಣ್ಣ, ಕೃಷ್ಣಪ್ಪ, ಚಿಕ್ಕಪ್ಪಯ್ಯ, ಕದುರಯ್ಯ, ಶ್ರೀನಿವಾಸ್, ಮಂಜುನಾಥ್, ಕಾಂತರಾಜ್, ದಯಾನಂದ್ ಸೇರಿದಂತೆ ಹಲವರು ಹಾಜರಿದ್ದರು.