
ಬೆಂಗಳೂರು: ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ವೆನ್ನಿಲಾ ಎಂಬ ಮಗುವಿನ ನಿಗೂಢ ಕೊಲೆ ಪ್ರಕರಣವು ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆಂದು ಪ್ರಿಯಕರ ಮತ್ತು ತಾಯಿ ತಮ್ಮ ಸ್ವಂತ ಮಗಳನ್ನೇ ಕೊಲೆ ಮಾಡಿದ್ದರು. ಇದೀಗ ಈ ಸಂಬಂಧ ತನಿಖೆ ನಡೆಯುತ್ತಿದ್ದು ದಿನಕ್ಕೊಂದು ವಿಚಾರಗಳು ಈ ಕೊಲೆಯಲ್ಲಿ ಹೊರಬರುತ್ತಿದೆ. ಹೆತ್ತ ಮಗಳ ಶವವನ್ನು ಕಾರಿನಲ್ಲೇ ಇಟ್ಟುಕೊಂಡು, ಪ್ರಿಯಕರನೊಂದಿಗೆ ಸೇರಿ ತಾಯಿ ಬರ್ತ್ ಡೇ ಆಚರಿಸಿಕೊಂಡಿರುವ ವಿಚಾರ ತನಿಖೆ ವೇಳೆ ಬಯಲಿಗೆ ಬಂದಿದೆ.
ಕಳೆದ ತಿಂಗಳ 24ರಂದು ಸಂಜೆ 7:30ರ ಸುಮಾರಿಗೆ ಪ್ರಿಯಾಂಕ ಹಾಗೂ ಆಕೆಯ ಪ್ರಿಯಕರ ಮೋಹನ್ ಇಬ್ಬರೂ ಮಗುವಿನೊಂದಿಗೆ ತಮ್ಮ ವಿಲ್ಲಾದಿಂದ ಹೊರಬಂದಿದ್ದರು. 25ನೇ ತಾರೀಖು ಪ್ರಿಯಾಂಕಳ ಜನ್ಮದಿನವಿದ್ದ ಕಾರಣ, ರಾತ್ರಿಯೇ ಶಾಪಿಂಗ್ ಹಾಗೂ ಬರ್ತ್ ಡೇ ಸೆಲೆಬ್ರೇಷನ್ ಮಾಡಲು ಇಂದಿರಾನಗರಕ್ಕೆ ಬಂದಿದ್ದರು. ರಾತ್ರಿ 8:30ರ ಸುಮಾರಿಗೆ ಇಂದಿರಾನಗರದಲ್ಲಿ ಪ್ರಿಯಾಂಕ ಶಾಪಿಂಗ್ ಮಾಡಲು ತೆರಳಿದ್ದಾಗ, ಕಾರಿನಲ್ಲಿ ಮಗುವಿನೊಂದಿಗೆ ಪ್ರಿಯಕರ ಮೋಹನ್ ಮಾತ್ರ ಇದ್ದನು.
ಇದೇ ವೇಳೆ ಇಂದಿರಾನಗರದ 'ಬಾಸ್ಕಿನ್ ರಾಬಿನ್ಸ್' ಐಸ್‌ಕ್ರೀಂ ಪಾರ್ಲರ್‌ನಲ್ಲಿ ಮಗುವಿಗೆ ಮೋಹನ್ ಐಸ್‌ಕ್ರೀಂ ಕೊಡಿಸಿದ್ದಾನೆ. 8.30ಕ್ಕೆ ಬಿಲ್ ಮಾಡಿಸಿರೋದು ಪತ್ತೆಯಾಗಿದೆ. ಐಸ್‌ಕ್ರೀಂ ತಿಂದ ಕೇವಲ ಅರ್ಧ ಗಂಟೆಯಲ್ಲೇ ಕಾರಿನೊಳಗೆ ಮಗುವಿನ ಕೊಲೆ ನಡೆದಿದೆ. ಐಸ್‌ಕ್ರೀಂ ಬೇರೆ ಬೇಕು ಎಂದು ಮಗು ಹಠ ಮಾಡಿದ್ದಕ್ಕೆ ಆರೋಪಿ ಮೋಹನ್ ಮೊದಲು ಹೊಟ್ಟೆಯ ಭಾಗಕ್ಕೆ ಒದ್ದಿದ್ದಾನೆ. ಬಳಿಕ ಕೈಯಿಂದ ಮಗುವಿನ ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ, ಅದು ಸಾಧ್ಯವಾಗದಿದ್ದಾಗ ಕಾರಿನಲ್ಲಿದ್ದ ದಿಂಬನ್ನು ಬಳಸಿ ಮಗುವನ್ನು ಉಸಿರುಗಟ್ಟಿಸಿ ಕ್ರೂರವಾಗಿ ಕೊಂದಿದ್ದಾನೆ ಎಂದು ಶಂಕಿಸಲಾಗಿದೆ. ಮಗುವಿನ ಮರಣೋತ್ತರ ಪರೀಕ್ಷೆಯ (PM Report) ವರದಿಯಲ್ಲೂ ಮಗುವಿನ ಹೊಟ್ಟೆಯಲ್ಲಿ ಐಸ್‌ಕ್ರೀಂ ಅಂಶಗಳು ಇರುವುದು ಪತ್ತೆಯಾಗಿದೆ.
ಶಾಪಿಂಗ್ ಮುಗಿಸಿ ಪ್ರಿಯಾಂಕ ಕಾರಿನ ಬಳಿ ವಾಪಸ್ ಬಂದಾಗ ಆಕೆಗೆ ಮಗು ಸಾವನ್ನಪ್ಪಿರುವ ವಿಷಯ ತಿಳಿದಿದೆ. ಆದರೆ, ಹೆತ್ತ ಮಗಳು ಶವವಾಗಿ ಬಿದ್ದಿದ್ದರೂ ಆ ಕಲ್ಲೆದೆಯ ತಾಯಿಯ ಮನಸ್ಸು ಕರಗಲಿಲ್ಲ. ಅಲ್ಲಿಂದ ರಾತ್ರಿ 9 ಗಂಟೆಗೆ ಇಬ್ಬರೂ ಕಾರಿನಲ್ಲಿ ಮಗುವಿನ ಶವವನ್ನು ಇಟ್ಟುಕೊಂಡೇ ಕೋಲಾರದತ್ತ ಪ್ರಯಾಣ ಬೆಳೆಸಿದ್ದಾರೆ. ಕೋಲಾರದ ಕೆಫೆ ಕಾಫಿ ಡೇನಲ್ಲಿ ಪ್ರಿಯಾಂಕ ತನ್ನ ಪ್ರಿಯಕರನೊಂದಿಗೆ ಸೇರಿ ಅತ್ಯಂತ ಸಡಗರದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾಳೆ. ರಾತ್ರಿ 1 ಗಂಟೆಯವರೆಗೂ ಬರ್ತ್ ಡೇ ಸೆಲೆಬ್ರೇಷನ್ ಮುಗಿಸಿ, ತಡರಾತ್ರಿ 2:30ರ ಸುಮಾರಿಗೆ ವಾಪಸ್ ವಿಲ್ಲಾಗೆ ಬಂದಿದ್ದಾರೆ. ಮರುದಿನ ಬೆಳಗ್ಗೆ 9 ಗಂಟೆಯವರೆಗೂ, ಅಂದರೆ ಸುಮಾರು 12 ಗಂಟೆಗಳ ಕಾಲ ಮಗುವಿನ ಶವದೊಂದಿಗೇ ಈ ಇಬ್ಬರು ಆರೋಪಿಗಳು ಕಾಲ ಕಳೆದಿದ್ದಾರೆ.
ಬೆಳಗ್ಗೆ 9 ಗಂಟೆಯ ನಂತರ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದ ಆರೋಪಿಗಳು, ತಮಗೇನೂ ತಿಳಿಯದಂತೆ ನಾಟಕ ಆಡಿದ್ದಾರೆ. ಅಲ್ಲದೆ ಮಗುವಿನ ಸಾವಿನ ಬಗ್ಗೆ ಕುಟುಂಬಸ್ಥರಿಗೆ ತಪ್ಪು ಮಾಹಿತಿ ನೀಡಿ ಕಟ್ಟುಕಥೆ ಸೃಷ್ಟಿಸಿದ್ದರು. ಆರಂಭದಲ್ಲಿ ಸ್ಥಳೀಯ ಪೊಲೀಸರು ಈ ಪ್ರಕರಣವನ್ನು ಸರಿಯಾಗಿ ತನಿಖೆ ನಡೆಸದ ಕಾರಣ, ಮಗುವಿನ ತಂದೆ ಪ್ರವೀಣ್ ಅವರು ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ ರಾವ್ ಅವರಿಗೆ ಅಧಿಕೃತವಾಗಿ ದೂರು ನೀಡಿದ್ದರು.
ಪ್ರವೀಣ್ ನೀಡಿದ ದೂರಿನ ಮೇರೆಗೆ ಪ್ರಕರಣದ ಮರುತನಿಖೆಗೆ ಲೋಕಾಯುಕ್ತ ಅಧಿಕಾರಿಗಳು ಮುಂದಾದಾಗ ಈ ಎಲ್ಲಾ ಆಘಾತಕಾರಿ ಮತ್ತು ಸ್ಫೋಟಕ ಸತ್ಯಗಳು ಹೊರಬಂದಿವೆ. ತನಿಖೆ ವರದಿ ನೋಡಿದ ಲೋಕಾಯುಕ್ತ ಲೋ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಪ್ರಕರಣದ ಕುರಿತು ಕೂಲಂಕಷವಾಗಿ ಮರುತನಿಖೆ ನಡೆಸುವಂತೆ ಖಡಕ್ ಸೂಚನೆ ನೀಡಿದ್ದಾರೆ. ತನಿಖೆ ತೀವ್ರಗೊಂಡ ಬೆನ್ನಲ್ಲೇ ಹೆತ್ತ ಮಗಳನ್ನೇ ಬಲಿಪಡೆದ ಪಾಪಿ ತಾಯಿ ಹಾಗೂ ಆಕೆಯ ಪ್ರಿಯಕರನ ಅಸಲಿ ಮುಖವಾಡ ಕಳಚಿಬಿದ್ದಿದೆ. ಸದ್ಯ ಮೋಹನ್ ಪೊಲೀಸ್ ಕಸ್ಟಡಿಯಲ್ಲಿದ್ದು, ತಲೆಮರೆಸಿಕೊಂಡಿರುವ ಪಾಪಿ ತಾಯಿಗಾಗಿ ಹುಡುಕಾಟ ಮುಂದುವರೆದಿದೆ.