ಕನ್ನಡದ ಮೊದಲ ರಾಜಧಾನಿ, ಕದಂಬರ ಬನವಾಸಿಯ ವಿಶೇಷತೆಯನ್ನು ನಾಡಿಗೆ ಸಾರುವ ಸಲುವಾಗಿ ಹಮ್ಮಿಕೊಳ್ಳುತ್ತಿರುವ ಕದಂಬೋತ್ಸವ ಈ ವರ್ಷವೂ ಮರೀಚಿಕೆ ಆಗುವ ಸಾಧ್ಯತೆ ದಟ್ಟವಾಗಿದೆ. ಸಮಯ ಸಮೀಪಿಸಿದರೂ ಇದುವರೆಗೂ ಯಾವುದೇ ಬೆಳವಣಿಗೆ ಆಗದಿರುವುದು ಸ್ಥಳೀಯರಿಗೆ ನಿರಾಸೆ ಮೂಡಿಸಿದೆ.
ಮಂಜುನಾಥ ಸಾಯೀಮನೆ
ಶಿರಸಿ (ಡಿ.19): ಕನ್ನಡದ ಮೊದಲ ರಾಜಧಾನಿ, ಕದಂಬರ ಬನವಾಸಿಯ ವಿಶೇಷತೆಯನ್ನು ನಾಡಿಗೆ ಸಾರುವ ಸಲುವಾಗಿ ಹಮ್ಮಿಕೊಳ್ಳುತ್ತಿರುವ ಕದಂಬೋತ್ಸವ ಈ ವರ್ಷವೂ ಮರೀಚಿಕೆ ಆಗುವ ಸಾಧ್ಯತೆ ದಟ್ಟವಾಗಿದೆ. ಸಮಯ ಸಮೀಪಿಸಿದರೂ ಇದುವರೆಗೂ ಯಾವುದೇ ಬೆಳವಣಿಗೆ ಆಗದಿರುವುದು ಸ್ಥಳೀಯರಿಗೆ ನಿರಾಸೆ ಮೂಡಿಸಿದೆ. ಹೌದು, ಪ್ರತಿ ವರ್ಷ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಕದಂಬೋತ್ಸವ ಆಚರಿಸಲಾಗುತ್ತಿತ್ತು. ಕಳೆದ ಕೆಲ ವರ್ಷಗಳಿಂದ ಒಂದಿಲ್ಲೊಂದು ವಿಘ್ನ ಕದಂಬೋತ್ಸವಕ್ಕೆ ಕಾಡುತ್ತಿದೆ. ಮಂಗನ ಕಾಯಿಲೆಯಿಂದಾಗಿ ಒಂದು ವರ್ಷ ಕದಂಬೋತ್ಸವಕ್ಕೆ ತೊಂದರೆ ಉಂಟಾಗಿತ್ತು. ಆದರೆ, ಕಳೆದ ವರ್ಷ ಕೋವಿಡ್ ಕಾರಣದಿಂದ ಕದಂಬೋತ್ಸವ ರದ್ದಾಗಿತ್ತು.
ಕನ್ನಡ ನಾಡಿಗೆ ಕದಂಬರ ಕೊಡುಗೆ ಅಪಾರ. ಗೋವಾವರೆಗೂ ವ್ಯಾಪಿಸಿದ್ದ ಕದಂಬ ಸಾಮ್ರಾಜ್ಯ ಕನ್ನಡಿಗರ ಸಾಮ್ರಾಜ್ಯ ಎಂದು ಗುರುತಿಸಿಕೊಂಡು ಬನವಾಸಿಯನ್ನು ಕನ್ನಡಿಗರ ಮೊದಲ ರಾಜಧಾನಿ ಎಂದೇ ಕರೆಯಲಾಗುತ್ತಿದೆ. ಗೋವಾದ ಸಾರಿಗೆ ಸಂಸ್ಥೆ ಸಹ ಇಂದಿಗೂ ಕದಂಬ ಸಂಸ್ಥೆ ಎಂದೇ ಕರೆಸಿಕೊಂಡಿದೆ. ಆದಿಕವಿ ಪಂಪನ ನಾಡಾದ ಬನವಾಸಿ, ಸಾಹಿತ್ಯ, ಸಂಸ್ಕೃತಿಯ ತವರೂರು. ಮರಿ ದುಂಬಿಯಾಗಿ ಆದರೂ ನಾನು ಬನವಾಸಿಯಲ್ಲೇ ಹುಟ್ಟುತ್ತೇನೆ ಎಂದು ಪಂಪ ಸಾರಿದ್ದ. ಇಂತಹ ಬನವಾಸಿಯ ಮಹಿಮೆಯನ್ನು ಎಲ್ಲೆಡೆ ಪಸರಿಸಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ 1996ರಿಂದ ಕದಂಬೋತ್ಸವ ಆಚರಿಸಿಕೊಂಡು ಬಂದಿದೆ.
Uttara Kannada: ಮರಾಠಿಗರಿಗೆ ಕಸಾಪ ತಕ್ಕ ಪಾಠ ಕಲಿಸಲಿ: ಸಚಿವ ಹೆಬ್ಬಾರ್
ಆರಂಭದಲ್ಲಿ ಮುಖ್ಯಮಂತ್ರಿಗಳೇ ಉದ್ಘಾಟಿಸುತ್ತಿದ್ದರೂ ನಂತರದ ವರ್ಷಗಳಲ್ಲಿ ವಿವಿಧ ಸಚಿವರು ಉದ್ಘಾಟಿಸಿದ್ದರು. ಎರಡು ದಿನಗಳ ಕಾಲ ಸಾಂಸ್ಕೃತಿಕ ಹಬ್ಬವಾಗಿ ಕದಂಬೋತ್ಸವ ಮೆರುಗು ನೀಡುತ್ತಿತ್ತು. ಕದಂಬೋತ್ಸವದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕಲಾವಿದರೇ ಪಾಲ್ಗೊಳ್ಳುತ್ತಿದ್ದರು. ಹೀಗಾಗಿ, ಸ್ಥಳೀಯ ಕಲಾವಿದರಿಗೆ ಅವಕಾಶ ಒದಗಿಸಿಕೊಡು ಸಲುವಾಗಿ ಗುಡ್ನಾಪುರದಲ್ಲಿ ಒಂದು ದಿನ ಸ್ಥಳೀಯರಿಂದಲೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು.
ಈ ವರ್ಷ ಡಿಸೆಂಬರ್ ತಿಂಗಳು ಅರ್ಧ ಕಳೆದು ಹೋಗಿದೆ. ಇದುವರೆಗೂ ಕದಂಬೋತ್ಸವ ಆಚರಣೆ ಕುರಿತಾಗಿ ದಿನಾಂಕ ನಿಗದಿಯಾಗಿಲ್ಲ. ಯಾವುದೇ ಪೂರ್ವ ಸಿದ್ಧತೆ ಆಗಿಲ್ಲ. ಮುಂಡಗೋಡ ಮತ್ತು ಯಲ್ಲಾಪುರದ ಜಾತ್ರೆ ಈ ವರ್ಷ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರಾಗಿರುವ ಸಚಿವ ಶಿವರಾಮ ಹೆಬ್ಬಾರ ಕದಂಬೋತ್ಸವ ಆಚರಣೆಗೆ ಆಸಕ್ತಿ ತೋರುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇನ್ನೊಂದೆಡೆ ವಿಧಾನಸಭಾ ಚುನಾವಣೆ ಸಹ ಮುಂದಿದೆ. ಫೆಬ್ರವರಿ ತಿಂಗಳಿನಲ್ಲಿ ಕದಂಬೋತ್ಸವಕ್ಕೆ ದಿನಾಂಕ ನಿಗದಿಪಡಿಸಿದರೂ ಚುನಾವಣೆ ದಿನಾಂಕ ಘೋಷಣೆ ಆದಲ್ಲಿ ಕದಂಬೋತ್ಸವ ಆಚರಣೆಗೆ ನೀತಿ ಸಂಹಿತೆ ಅಡ್ಡ ಬರಲಿದೆ. ಈ ಎಲ್ಲ ತೊಡಕುಗಳ ನಡುವೆ ಈ ವರ್ಷ ಕದಂಬೋತ್ಸವ ಆಚರಣೆ ಸಾಧ್ಯತೆ ಮಸುಕಾಗಿದೆ.
Uttara Kannada: ಬಿಜೆಪಿಯಿಂದ ದೇಶಪ್ರೇಮದ ಸರ್ಟಿಫಿಕೇಟ್ ಬೇಡ: ಬಿ.ಕೆ.ಹರಿಪ್ರಸಾದ್
ಯಲ್ಲಾಪುರ, ಸಾಗರ ಮತ್ತು ಮುಂಡಗೋಡ ಜಾತ್ರೆ ಇರುವುದರಿಂದ ಜನವರಿ ಅಂತ್ಯದೊಳಗೇ ಕದಂಬೋತ್ಸವ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸುತ್ತೇನೆ.
- ಶಿವರಾಮ ಹೆಬ್ಬಾರ, ಕಾರ್ಮಿಕ ಸಚಿವ