
ಕಲಬುರಗಿ: ಹಿರಿಯ ರಾಜಕೀಯ ನಾಯಕ ಕೆ.ಎಸ್. ಈಶ್ವರಪ್ಪ ಅವರು ಶಬ್ದ ಮಾಲಿನ್ಯ, ಸಿಂಗಂದೂರು ಸೇತುವೆ, ಸಿದ್ದರಾಮಯ್ಯ ಅವರ ಐದು ವರ್ಷ ಸಿಎಂ ಘೋಷಣೆ, ಹಾಗೂ ಕಾಂಗ್ರೆಸ್ ಪಕ್ಷದ ಆಂತರಿಕ ಗೊಂದಲದ ಕುರಿತು ಕಲಬುರಗಿಯಲ್ಲಿ ಹೇಳಿಕೆ ನೀಡಿದ್ದಾರೆ. ಆರ್‌ಎಸ್‌ಎಸ್ ವಿರುದ್ಧ ಪ್ರಿಯಾಂಕ್ ಖರ್ಗೆ ಹೇಳಿಕೆ ಕುರಿತು ಈಶ್ವರಪ್ಪ ವಾಗ್ದಾಳಿ ನಡೆಸಿ ಕೆಂಡಾಮಂಡಲವಾದರು. ಆರ್‌ಎಸ್‌ಎಸ್ ನಿಷೇಧದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, “ಆರ್‌ಎಸ್‌ಎಸ್ ಇರುವುದರಿಂದಲೇ ದೇಶದಲ್ಲಿ ಹಿಂದುತ್ವ ಉಳಿದಿದೆ. ಪ್ರಿಯಾಂಕ್ ಖರ್ಗೆಗೆ ಹಿಡಿದ ಹುಚ್ಚು ವಾಸಿ ಮಾಡಲು ಪ್ರಪಂಚದಲ್ಲಿ ಯಾವ ಆಸ್ಪತ್ರೆ ಇಲ್ಲ. ಮಿಂಚುಳದಷ್ಟು ಯೋಗ್ಯತೆ ಪ್ರಿಯಾಂಕ್ ಖರ್ಗೆ ಗೆ ಇಲ್ಲ ಆರ್ ಎಸ್ ಎಸ್ ಬಗ್ಗೆ ಮಾತಾಡೋಕೆ ಪ್ರಿಯಾಂಕ್ ಖರ್ಗೆ ಯಾರು ? ಎಂದು ವಾಗ್ದಾಳಿ ನಡೆಸಿದ್ದಾರೆ.
ಶಬ್ದ ಮಾಲಿನ್ಯ ನಿಯಂತ್ರಣದ ಕುರಿತಾಗಿ ಸುಪ್ರೀಂ ಕೋರ್ಟ್ ಆದೇಶವಿದೆ. ಪರಿಸರ ಸಂರಕ್ಷಣೆಗಾಗಿ ಶಬ್ದ ಮಾಲಿನ್ಯ ನಿಯಂತ್ರಣ ಅಗತ್ಯವಾಗಿದೆ. ವಿಶೇಷವಾಗಿ ಧಾರ್ಮಿಕ ಸ್ಥಳಗಳಲ್ಲಿ ಜೋರಾಗಿ ಪ್ರಸಾರವಾಗುವ ಆಜಾನ್ ಕೂಡ ಇದರೊಳಗೆ ಬರುತ್ತದೆ. ಮಹಾರಾಷ್ಟ್ರದಲ್ಲಿ ಈಗಾಗಲೇ 1500 ಮೈಕ್‌ಗಳನ್ನು ತೆಗೆದುಹಾಕಲಾಗಿದೆ. ಪಠಾಣ್ ಎಂಬ ವ್ಯಕ್ತಿ ಇದನ್ನ ಸ್ವಾಗತ ಮಾಡಿ ಈ ಆದೇಶವನ್ನು ಎಲ್ಲಾ ಎಲ್ಲಾ ಧರ್ಮದವರೂ ಪಾಲಿಸಬೇಕು ಎಂದಿದ್ದಾರೆ. ತಂತ್ರಜ್ಞಾನ ಬಳಸಿ ಆಜಾನ್ ನೀಡಬಹುದು. ಇದೇ ಕ್ರಮ ಕರ್ನಾಟಕದಲ್ಲೂ ಜಾರಿಗೆ ಬರಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.
ಬಿಜೆಪಿಯಲ್ಲಿಯೂ ರಾಜ್ಯಾಧ್ಯಕ್ಷರ ಆಯ್ಕೆ ವಿಳಂಬವಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯಧ್ಯಕ್ಷ ಆಯ್ಕೆ ಆಗಬೇಕಿತ್ತು ಇನ್ನೂ ಆಗಿಲ್ಲ. ನಮಗೂ ಕೆಲವೊಂದು ವಿಳಂಬಗಳಿವೆ. ಆದರೆ ಅದು ಸಂಘಟನೆಯ ಅಂತರಂಗದ ವಿಚಾರ. ಬಿಜೆಪಿಯಲ್ಲೂ ಗೊಂದಲ ಇದೆ. ಗೊಂದಲ ಇಲ್ಲ ಅಂತಾ ಹೇಳಿಲ್ಲ ಎಂದರು.
ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಸಿಎಂಗೆ ಆಹ್ವಾನ ನೀಡಿಲ್ಲ ಎಂಬ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ದೊಡ್ಡ ಕಾಮಗಾರಿಗೆ ರಾಜಕೀಯ ವಿಭಜನೆಯಿಂದ ಮೀರಿ ಶ್ಲಾಘನೆ ಬೇಕಾಗುತ್ತದೆ. ಪ್ರೋಟೋಕಾಲ್ ಉಲ್ಲಂಘನೆ ಆಗಬಾರದು. ಸೇತುವೆಯ ಉದ್ಘಾಟನೆಗೆ ಸಂಬಂಧಪಟ್ಟಂತೆ ಎಲ್ಲ ಪಕ್ಷಗಳಿಗೂ ಸೇರಿರುವ ಕ್ರೆಡಿಟ್ ಆಗಿದೆ. ಭಾಜಪ, ಕಾಂಗ್ರೆಸ್, ಜೆಡಿಎಸ್ ಎಲ್ಲರ ಆಡಳಿತದಲ್ಲಿಯೂ ಯೋಜನೆ ಮುಂದುವರಿದಿದೆ ಎಂದರು.
ಸಿದ್ದರಾಮಯ್ಯ ಅವರ ನಾನು ಐದು ವರ್ಷ ಸಿಎಂ ಆಗುತ್ತೇನೆ ಎಂಬ ಹೇಳಿಕೆಗೆ ಈಶ್ವರಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದರು. ದೇಶದಾದ್ಯಂತ ಕಾಂಗ್ರೆಸ್ ನಾಶವಾಗುತ್ತಿದೆ. ಕರ್ನಾಟಕದಲ್ಲಿ ಮಾತ್ರ ಸ್ವಲ್ಪ ಜೀವ ಉಳಿದಿದೆ. ಮುಖ್ಯಮಂತ್ರಿಯಾಗಿ ಯಾವ ಹುದ್ದೆ ಘೋಷಣೆ ಮಾಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸಬೇಕು. ಸಿಎಂ ಆಗಿ ನೀವು ತಮ್ಮ ತಾವೇ ಘೋಷಣೆ ಮಾಡಿಕೊಳ್ಳುವುದು ಸರಿ ಅಲ್ಲ ಎಂದ ಅವರು, ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಆಹ್ವಾನಿಸದ ಕಾರಣ, ಗೊಂದಲ ಉಂಟಾಗಿದೆ. ಸುರ್ಜೆವಾಲಾ ಶಾಸಕರ ಸಭೆ ಮಾಡುತ್ತಿರುವುದು ಇದರ ಸಾಕ್ಷಿ, ಎಂದರು.
ಕೇಂದ್ರದ ಹಿಂದುಳಿದ ವರ್ಗ ಸಮಿತಿಯಲ್ಲಿ ಸಿದ್ದರಾಮಯ್ಯ ಸೇರಿ ಮೂವರು ಇದ್ದರೂ, ಹಿಂದುಳಿದ ವರ್ಗಕ್ಕೆ ಅವರು ಎಂಥ ಪ್ರಗತಿ ತಂದಿದ್ದಾರೆ? ಅವರು ಇದೀಗ ತಮ್ಮ ಸಂಬಂಧಿಕರು ಮತ್ತು ಕೆಲವು ಮತದಾರ ಮುಸ್ಲಿಂರನ್ನು ಮಾತ್ರ ಅವರ ಬಳಿ ಇಟ್ಟುಕೊಂಡಿದ್ದಾರೆ. ತಮ್ಮನ್ನು ದ್ವಿತೀಯ ದೇವರಾಜ್ ಅರಸ್ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ, ಹಿಂದುಳಿದರಿಗೆ ನ್ಯಾಯ ಒದಗಿಸಲು ವಿಫಲರಾಗಿದ್ದಾರೆ. ಹಿಂದುಳಿದವರ ಹೆಸರಿನಲ್ಲಿ ಸಿಎಂ ಆಗಿದ್ದರೂ, ಕೆಲಸಗಳಿಲ್ಲ ಎಂದು ತೀಕ್ಷ್ಣವಾಗಿ ಟೀಕಿಸಿದರು.