
ಬೆಂಗಳೂರು/ರಾಯಚೂರು (ಜು.13): ಬೆಂಗಳೂರಿನಲ್ಲಿ ರೆಸಾರ್ಟ್‌ಗೆ ಹೋಗಿದ್ದಾಗ ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಈ ಘಟನೆ ಸಾರ್ವಜನಿಕರಲ್ಲಿ ಆಘಾತ ಉಂಟುಮಾಡಿದೆ.
ಮೃತ ವ್ಯಕ್ತಿ ಬಸವರಾಜ್ (46), ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸರ್ಜಾಪುರ ಗ್ರಾಮದ ನಿವಾಸಿಯಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ನಿನ್ನೆ ರಾತ್ರಿ ಬಸವರಾಜ್ ತಮ್ಮ ಕಂಪನಿಯ ಸ್ನೇಹಿತರೊಂದಿಗೆ ನಗರದ ಹೊರವಲಯದಲ್ಲಿರುವ ರೆಸಾರ್ಟ್‌ಗೆ ತೆರಳಿದ್ದರು. ಸ್ನೇಹಿತರು ಹಾಗೂ ಸಹೋದ್ಯೋಗಿಗಳೊಂದಿಗೆ ಸಂತೋಷದಿಂದ ಸಮಯ ಕಳೆಯುತ್ತಿದ್ದರು. ಈ ವೇಳೆ ಒಂದು ಜನಪ್ರಿಯ ಸಿನಿಮಾ ಹಾಡಿಗೆ ಕುಣಿದು ಕುಪ್ಪಳಿಸುತ್ತಿದ್ದ ಬಸವರಾಜ್, ಏಕಾಏಕಿ ನೆಲಕ್ಕುರುಳಿದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ವೈದ್ಯರು ಅವರನ್ನು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಕುಟುಂಬದ ಹಿನ್ನೆಲೆ:
ಬಸವರಾಜ್ ಅವರ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕಳೆದ 4 ವರ್ಷಗಳಿಂದ ಬೆಂಗಳೂರಿನಲ್ಲಿಯೇ ವಾಸಿಸುತ್ತಿದ್ದರು. ದುರ್ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಶೋಕಸಾಗರದಲ್ಲಿ ಮುಳುಗಿದ್ದಾರೆ. ಈಗಾಗಲೇ ಮೃತದೇಹವನ್ನು ಬೆಂಗಳೂರಿನಿಂದ ಲಿಂಗಸುಗೂರಿನ ಸರ್ಜಾಪುರಕ್ಕೆ ರವಾನಿಸಲಾಗಿದೆ. ಗ್ರಾಮದಲ್ಲಿ ಶೋಕಾಚರಣೆಯ ವಾತಾವರಣವಿದ್ದು, ಹಲವರು ಅಂತಿಮ ದರ್ಶನಕ್ಕಾಗಿ ಭಾರೀ ಸಂಖ್ಯೆಯಲ್ಲಿ ಸಂಗ್ರಹಿಸುತ್ತಿದ್ದಾರೆ.