
ಬೆಳಗಾವಿ (ಜು.13): ಕೇವಲ ಐದು ಸಾವಿರ ರೂಪಾಯಿಗಾಗಿ (₹5000) ಯುವ ಗಾಯಕನೊಬ್ಬನನ್ನು ಬರ್ಬರವಾಗಿ ಕೊಂದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೂದಿಹಾಳ ಗ್ರಾಮದ ಬಳಿ ಸಂಭವಿಸಿದ್ದು, ಉತ್ತರ ಕರ್ನಾಟಕ ಸಂಗೀತ ಪ್ರೇಮಿಗಳಿಗೆ ಆಘಾತ ತಂದಿದೆ.
ಹತ್ಯೆಯಾದ ಯುವಕ ಮಾರುತಿ ಅಡಿವೆಪ್ಪ ಲಠ್ಠೆ (22), ಉತ್ತರ ಕರ್ನಾಟಕ ಶೈಲಿಯಲ್ಲಿ ಹಾಡುಗಳನ್ನು ರಚಿಸಿ ಹಾಡುತ್ತಿದ್ದ ವಿಶಿಷ್ಟ ಪ್ರತಿಭಾಶಾಲಿ ಗಾಯಕ. ತನ್ನದೇ ಆದ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡುಗಳನ್ನು ಕಂಪೋಸ್ ಮಾಡಿ ಪ್ರಕಟಿಸುತ್ತಿದ್ದ ಮಾರುತಿ, ಇತ್ತೀಚೆಗೆ ಜನಪ್ರಿಯತೆಯನ್ನು ಸಂಪಾದಿಸಿದ್ದನು. ಆದರೆ, ಇದೀಗ ಜನಮಾನಸದಲ್ಲಿ ಗಾಯಕ ಉಳಿಯುತ್ತಿದ್ದಾನೆ ಎನ್ನುವ ಸಮಯದಲ್ಲಿಯೇ ಆತನ ಜೀವವನ್ನೇ ದುಷ್ಕರ್ಮಿಗಳು ಕಿತ್ತುಕೊಂಡಿದ್ದಾರೆ.
ಹತ್ಯೆಯ ಹಿನ್ನೆಲೆ:
ಆರೋಪಿ ಈರಪ್ಪ ಅಕ್ಕಿವಾಟೆ ಬಳಿ 50 ಸಾವಿರ ರೂಪಾಯಿ ಸಾಲ ಪಡೆದಿದ್ದ ಮಾರುತಿ, ಕಬ್ಬಿನ ಕಟಾವು ಮಾಡುವ ಗ್ಯಾಂಗ್‌ನಲ್ಲಿ ಕೆಲಸ ಮಾಡುವ ನಿಟ್ಟಿನಲ್ಲಿ ಹಣ ಪಡೆದಿದ್ದನು. ಒಂದಷ್ಟು ದಿನಗಳ ಕಾಲ ಕೆಲಸ ಮಾಡಿದ್ದ ಮಾರುತಿ ನಂತರ, ತನ್ನ ಹಾಡುಗಳಿಗೆ ಭಾರೀ ಡಿಮ್ಯಾಂಡ್ ಬಂದ ಹಿನ್ನೆಲೆಯಲ್ಲಿ ಕಬ್ಬು ಕಟಾವು ಮತ್ತು ಕಾರ್ಖಾನೆಗೆ ಸಾಗಣೆ ಮಾಡುವ ಗ್ಯಾಂಗ್‌ನ ಕೆಲಸಕ್ಕೆ ಹಾಜರಾಗದೇ, ಕೇವಲ ಸಂಗೀತದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದನು. ವಿನಾಕಾರಣ ಹಣವನ್ನು ಮರಳಿಸದ ಕಾರಣ ಕೋಪಗೊಂಡ ಈರಪ್ಪ ಹಾಗೂ ಆತನ ಗ್ಯಾಂಗ್, ಮಾರುತಿಯನ್ನು ಕೊಲ್ಲುವ ತೀರ್ಮಾನಕ್ಕೆ ಬಂದಿದ್ದಾರೆ. ಶುಕ್ರವಾರ, ಮಾರುತಿ ತನ್ನ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ರಸ್ತೆಯನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ, ಬಳಿಕ ಕಾರು ಹಾಯಿಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಮಾರುತಿಗೆ ಕಾರು ಹರಿಸಿದ ದುಷ್ಕರ್ಮಿಗಳ ಕಾರು ಕೂಡ ಪಲ್ಟಿಯಾಗಿದ್ದು, ಕೆಲವರು ಗಾಯಗೊಂಡಿದ್ದಾರೆ. ಈ ವೇಳೆ ಆರೋಪಿ ಈರಪ್ಪ ಅಕ್ಕಿವಾಟೆಗೆ ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಈಗಾಗಲೇ ಸಿದ್ದರಾಮ ವಡೆಯರ್ ಹಾಗೂ ಆಕಾಶ್ ಪೂಜಾರಿಯನ್ನ ಬಂಧಿಸಿರುವ ಪೊಲೀಸರು, ಇತರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.