ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿಕೆಗೆ ಖಂಡನೆ

By Kannadaprabha News  |  First Published Nov 17, 2023, 8:06 PM IST

ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಎಐಸಿಸಿ, ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಲು ನಿರ್ಧರಿಸಲಾಯಿತು. ಸಚಿವೆ ಹೆಬ್ಬಾಳಕರ ಕೂಡಲೇ ತಮ್ಮ ಹೇಳಿಕೆ ವಾಪಸ್‌ ಪಡೆಯಬೇಕು, ಬೇಷರತ್ತಾಗಿ ಕ್ಷಮಾಪಣೆ ಕೇಳಬೇಕು ಎಂದು ಪತ್ರಕರ್ತರು ಒತ್ತಾಯಿಸಿದರು.


ಬೆಳಗಾವಿ(ನ.17): ಬೆಳಗಾವಿ ಪತ್ರಕರ್ತರ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ನೀಡಿರುವ ಅವಮಾನಕರ ಹೇಳಿಕೆಯನ್ನು ಬೆಳಗಾವಿ ಪತ್ರಕರ್ತರು ತೀವ್ರವಾಗಿ ಖಂಡಿಸಿದರು. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ನಡೆದ ಪತ್ರಕರ್ತರ ಸಭೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಪ್ರಮುಖವಾಗಿ ಐದು ನಿರ್ಣಯ ಕೈಗೊಳ್ಳಲಾಯಿತು. ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಎಐಸಿಸಿ, ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಲು ನಿರ್ಧರಿಸಲಾಯಿತು. ಸಚಿವೆ ಹೆಬ್ಬಾಳಕರ ಕೂಡಲೇ ತಮ್ಮ ಹೇಳಿಕೆ ವಾಪಸ್‌ ಪಡೆಯಬೇಕು, ಬೇಷರತ್ತಾಗಿ ಕ್ಷಮಾಪಣೆ ಕೇಳಬೇಕು ಎಂದು ಪತ್ರಕರ್ತರು ಒತ್ತಾಯಿಸಿದರು.

ಲಕ್ಷ್ಮೀ ಹೆಬ್ಬಾಳಕರ ಸಚಿವೆಯಾದ ಬಳಿಕ ಪತ್ರಕರ್ತರ ಜತೆಗೆ ನಡೆದುಕೊಳ್ಳುವ ರೀತಿ ಬದಲಾಗಿದೆ. ಪತ್ರಕರ್ತರನ್ನು ಅವಮಾನಿಸುವಂತಹ ಘಟನೆ ಪದೇ ಪದೆ ನಡೆಯುತ್ತಲೇ ಇವೆ. ಸಚಿವರಾಗಿರುವುದರಿಂದ ನಾವು ಸಹಜವಾಗಿಯೇ ಅವರ ಪ್ರತಿಕ್ರಿಯೆ ಕೇಳಲು ಅವರ ಮನೆಗೆ ತೆರಳುತ್ತೇವೆ. ಆದರೆ, ನಮ್ಮ ಜೊತೆಗೆ ಅವರು ಸರಿಯಾಗಿ ವರ್ತಿಸುವುದಿಲ್ಲ ಎಂದು ಪತ್ರಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Latest Videos

undefined

ಬೆಳಗಾವಿ: ಬರ ನಿರ್ವಹಣೆ ಸಭೆಗೆ 'ಶಾಸಕರ ಬರ' ; 18 ಶಾಸಕರ ಪೈಕಿ ಬಂದಿದ್ದು ಮೂವರು!

ಪತ್ರಕರ್ತ ವಿಲಾಸ ಜೋಶಿ, ರವಿ ಉಪ್ಪಾರ, ಹೃಷಿಕೇಷ ಬಹಾದ್ದೂರ ದೇಸಾಯಿ, ದಿಲೀಪ ಕುಮಾರ ಕುರಂದವಾಡೆ, ರಾಜು ಗವಳಿ, ನೌಶಾದ ಬಿಜಾಪುರೆ, ಶ್ರೀಶೈಲ ಮಠದ, ಶ್ರೀಕಾಂತ ಕುಬಕಡ್ಡಿ, ಚಂದ್ರಕಾಂತ ಸುಗಂದಿ, ಶ್ರೀಧರ ಕೋಟಾರಗಸ್ತಿ, ಸಹದೇವ ಮಾನೆ, ಮೈಲಾರಿ ಪಟಾತ್‌ ಮೊದಲಾದವರು ಸಭೆಯಲ್ಲಿ ಇದ್ದರು.

ಪತ್ರಕರ್ತ ಸಹೋದರರಿಗೆ ನೋವಾಗಿದ್ದರೇ ನಾನು ವಿಷಾದಿಸುತ್ತೇನೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನ.11ರಂದು ಬೆಳಗಾವಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾನು ಆಡಿದ ಮಾತಿನಿಂದ ಬೆಳಗಾವಿಯ ಪತ್ರಕರ್ತ ಸಹೋದರರಿಗೆ ನೋವಾಗಿದ್ದರೇ ನಾನು ವಿಷಾದಿಸುತ್ತೇನೆ. ಅಲ್ಲಿ ನಾನು ಸಕಾರಾತ್ಮಕ ದೃಷ್ಟಿಕೋನದಿಂದ ಮಾತನಾಡಿದ್ದೇ ಹೊರತು ಬೇರೆ ಯಾವುದೇ ಉದ್ದೇಶದಿಂದಲ್ಲ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟನೆ ನೀಡಿದ್ದಾರೆ.

ಆತ್ಮಹತ್ಯೆಯೇ ಸಮಸ್ಯೆಗೆ ಪರಿಹಾರವಲ್ಲ: ಶಾಸಕ ಕಾಗೆ

ಈ ಕುರಿತು ಹೇಳಿಕೆ ನೀಡಿರುವ ಅವರು, ಪತ್ರಕರ್ತರು ರಾಜಕೀಯಕ್ಕಿಂತ ಅಭಿವೃದ್ಧಿ ವಿಷಯದ ಮೇಲೆ ಹೆಚ್ಚಿನ ಬೆಳಕು ಚೆಲ್ಲಬೇಕು ಎನ್ನುವ ಅರ್ಥದಲ್ಲಿ ನಾನು ಮಾತನಾಡಿದ್ದೇನೆ. ಆ ಕಾರ್ಯಕ್ರಮ ಪತ್ರಕರ್ತರ ಕುಟುಂಬದೊಳಗಿನ ಕಾರ್ಯಕ್ರಮ, ಅಲ್ಲಿ ಸಾರ್ವಜನಿಕರು ಇರಲಿಲ್ಲ. ನಾನು ನಿಮ್ಮೆಲ್ಲರ ಸಹೋದರಿ ಎನ್ನುವ ಭಾವನೆಯಿಂದ ಮಾತನಾಡಿದ್ದೇನೆ. ಇದರಿಂದ ಪತ್ರಕರ್ತ ಸಹೋದರರ ಮನಸ್ಸಿಗೆ ನೋವುಂಟಾಗಬಾರದಿತ್ತು. ಹಾಗಾಗಿ ಯಾರೂ ಅನ್ಯಥಾ ಭಾವಿಸಬಾರದು ಎಂದು ಕೋರಿದ್ದಾರೆ.

ಯಾರೊಂದಿಗೂ ಜಿದ್ದಿಗೆ ಬಿದ್ದು ರಾಜಕಾರಣ ಮಾಡುವ ಮನೋಭಾವ ನನ್ನದಲ್ಲ. ಬೆಳಗಾವಿ ಪತ್ರಕರ್ತರ ಜೊತೆ ಮೊದಲಿನಿಂದಲೂ ಉತ್ತಮ ಬಾಂಧವ್ಯ ಹೊಂದಿದ್ದೇನೆ. ನನ್ನ ಈವರೆಗಿನ ಬೆಳವಣಿಗೆಯಲ್ಲಿ ನಿಮ್ಮ ಸಹಕಾರ ಬಹಳ ದೊಡ್ಡದಿದೆ. ನಾನು ಯಾವತ್ತೂ ನಿಮ್ಮನ್ನು ಗೌರವಭಾವದಿಂದಲೇ ಕಾಣುತ್ತೇನೆ. ಹಾಗಾಗಿ ಯಾವತ್ತೂ ನಾನು ಪತ್ರಕರ್ತರ ಮನಸ್ಸಿಗೆ ನೋವುಂಟು ಮಾಡುವ ಪ್ರಶ್ನೆಯೇ ಇಲ್ಲ. ಈ ವಿಷಯವನ್ನು ದೀರ್ಘಕ್ಕೆ ಕೊಂಡೊಯ್ಯುವ ಬದಲು ಇಷ್ಟಕ್ಕೇ ಮುಗಿಸೋಣ. ಸದ್ಯ ನಾನು ಬೆಂಗಳೂರಿನಲ್ಲಿದ್ದೇನೆ. ಮುಂದಿನ ದಿನಗಳಲ್ಲಿ ಎಂದಿನಂತೆ ಪರಸ್ಪರ ಸಹಕಾರದಿಂದ ಜಿಲ್ಲೆಯಲ್ಲಿ, ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡೋಣ ಎಂದು ಆಶಿಸಿದ್ದಾರೆ.

click me!