BBMPಯಿಂದ ನಗರದಲ್ಲಿ ಪ್ರಾಣಿ-ಪಕ್ಷಿಗಳ ಸಮೀಕ್ಷೆ: ಇದರಿಂದ ಪ್ರಯೋಜನವೇನು ಗೊತ್ತಾ?

By Kannadaprabha News  |  First Published Nov 17, 2023, 10:00 AM IST

ನಗರದಲ್ಲಿರುವ ಜೀವ ವೈವಿಧ್ಯಗಳನ್ನು ದಾಖಲೀಕರಿಸಲು ಬಿಬಿಎಂಪಿ ಮುಂದಾಗಿದೆ. ಅದಕ್ಕಾಗಿ ರಚಿಸಲಾಗಿರುವ ಜೀವವೈವಿಧ್ಯ ನಿರ್ವಹಣಾ ಸಮಿತಿಯು ಶುಕ್ರವಾರ ತನ್ನ ಮೊದಲ ಸಭೆ ನಡೆಸಲಿದ್ದು, ವಾರ್ಡ್‌ವಾರು ಜೀವವೈವಿಧ್ಯ ಇನ್ವೆಂಟರಿ ರಚಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಿದೆ. 


ಗಿರೀಶ್‌ ಗರಗ

ಬೆಂಗಳೂರು (ನ.17): ನಗರದಲ್ಲಿರುವ ಜೀವ ವೈವಿಧ್ಯಗಳನ್ನು ದಾಖಲೀಕರಿಸಲು ಬಿಬಿಎಂಪಿ ಮುಂದಾಗಿದೆ. ಅದಕ್ಕಾಗಿ ರಚಿಸಲಾಗಿರುವ ಜೀವವೈವಿಧ್ಯ ನಿರ್ವಹಣಾ ಸಮಿತಿಯು ಶುಕ್ರವಾರ ತನ್ನ ಮೊದಲ ಸಭೆ ನಡೆಸಲಿದ್ದು, ವಾರ್ಡ್‌ವಾರು ಜೀವವೈವಿಧ್ಯ ಇನ್ವೆಂಟರಿ ರಚಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಿದೆ. ದೇಶದಲ್ಲಿನ ಜೀವ ವೈವಿಧ್ಯತೆಯನ್ನು ದಾಖಲೀಕರಿಸುವ ಸಲುವಾಗಿ ರಾಷ್ಟ್ರೀಯ ಜೀವ ವೈವಿಧ್ಯ ಪ್ರಾಧಿಕಾರವು ಪ್ರತಿ ಪ್ರದೇಶದ ಜೀವವೈವಿಧ್ಯ ದಾಖಲೀಕರಿಸಲು ಸ್ಥಳೀಯ ಆಡಳಿತಗಳಿಗೆ ಸೂಚಿಸಿದೆ. 

Tap to resize

Latest Videos

ಅದರಂತೆ ಬೆಂಗಳೂರು ರಾಜ್ಯದ ಉಳಿದೆಲ್ಲ ಜಿಲ್ಲೆಗಳ ಸ್ಥಳೀಯ ಆಡಳಿತಗಳು ಈಗಾಗಲೆ ಜೀವವೈವಿಧ್ಯ ಇನ್ವೆಂಟರಿ ಸಿದ್ಧಪಡಿಸಿ ರಾಜ್ಯ ಜೀವವೈವಿಧ್ಯ ಮಂಡಳಿಗೆ ಸಲ್ಲಿಸಿವೆ. ಆದರೆ, ಕೊರೋನಾ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈವರೆಗೆ ಜೀವವೈವಿಧ್ಯ ಇನ್ವೆಂಟರಿ ರಚನೆಯಾಗಿಲ್ಲ. ಇದೀಗ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಅಧ್ಯಕ್ಷತೆಯ ಜೀವವೈವಿಧ್ಯ ನಿರ್ವಹಣಾ ಸಮಿತಿಯು ಶುಕ್ರವಾರ ಸಭೆ ನಡೆಸಲಿದ್ದು, ಜೀವವೈವಿಧ್ಯ ಇನ್ವೆಂಟರಿ ರಚನೆ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲಿದೆ.

ನನ್ನ ಪಕ್ಷಾಂತರ ಪ್ರಭಾವ ಪಂಚರಾಜ್ಯ ಚುನಾವಣೆ ಮೇಲೂ ಆಗಿದೆ: ಜಗದೀಶ್‌ ಶೆಟ್ಟರ್‌

ಸಮಿತಿಯ ಮೊದಲ ಸಭೆ: ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರದ ಸೂಚನೆಯಂತೆ 2021ರಲ್ಲಿಯೇ ಜೀವವೈವಿಧ್ಯ ಇನ್ವೆಂಟರಿ ರಚಿಸಿ ಸಲ್ಲಿಕೆಯಾಗಬೇಕಿತ್ತು. ಆದರೆ, ಕೊರೋನಾ ಸೋಂಕಿನ ಕಾರಣದಿಂದಾಗಿ ಬಿಬಿಎಂಪಿಯ ಜೀವವೈವಿಧ್ಯ ನಿರ್ವಹಣಾ ಸಮಿತಿ ಸಭೆಯನ್ನೇ ನಡೆಸಿರಲಿಲ್ಲ. ಇದರಿಂದಾಗಿ ಬೆಂಗಳೂರು ವ್ಯಾಪ್ತಿಯಲ್ಲಿನ ಜೀವವೈವಿಧ್ಯಗಳನ್ನು ದಾಖಲಿಸಲು ಕ್ರಮ ಕೈಗೊಂಡಿರಲಿಲ್ಲ. ಜೀವವೈವಿಧ್ಯ ನಿರ್ವಹಣಾ ಸಮಿತಿ ಸಭೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಶುಕ್ರವಾರ ರಾಕೇಶ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಪ್ರಮುಖವಾಗಿ ಜೀವವೈವಿಧ್ಯ ಇನ್ವೆಂಟರಿ ರಚನೆ ಕುರಿತು ನಿರ್ಧರಿಸಲಾಗುತ್ತದೆ.

ಹಲವು ವಿಚಾರಗಳ ಕುರಿತು ಮಾಹಿತಿ ಸಂಗ್ರಹ: ಜೀವವೈವಿಧ್ಯ ಇನ್ವೆಂಟರಿಯಲ್ಲಿ ಪ್ರಮುಖವಾಗಿ ಬೆಂಗಳೂರು ವ್ಯಾಪ್ತಿಯಲ್ಲಿರುವ ಜೈವಿಕ ಸಂಪನ್ಮೂಲಗಳನ್ನು ಪತ್ತೆ ಮಾಡಲಾಗುತ್ತದೆ. ಅದರಲ್ಲೂ ಎಷ್ಟು ಬಗೆಯ ಪ್ರಾಣಿಗಳು, ಪಕ್ಷಿಗಳು, ಮರ-ಗಿಡಗಳ ಪ್ರಬೇಧಗಳಿವೆ ಹಾಗೂ ಅವುಗಳೊಂದಿಗೆ ಸೂಕ್ಷ್ಮ ಜೀವಿಗಳ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತದೆ. ಪ್ರಾಣಿಗಳು ಮತ್ತು ಪಕ್ಷಿಗಳಲ್ಲಿ ಸಾಕು ಪ್ರಾಣಿ-ಪಕ್ಷಿಗಳೆಷ್ಟು, ಉಳಿದ ಪ್ರಾಣಿ-ಪಕ್ಷಿಗಳೆಷ್ಟು ಹಾಗೂ ಸಸ್ಯಗಳಲ್ಲಿ ಔಷಧೀಯ, ಹಣ್ಣು ಬಿಡುವ, ಹೂ ಬಿಡುವ ಪ್ರದೇಶಗಳೆಷ್ಟು ಎಂಬುದರ ಬಗ್ಗೆ ಸರ್ವೇ ಮೂಲಕ ತಿಳಿದುಕೊಳ್ಳಲಾಗುತ್ತದೆ. ಆ ಮಾಹಿತಿಗಳನ್ನು ಸ್ಥಳೀಯ ನಾಗರಿಕರು, ತಜ್ಞರು, ಸಂಸ್ಥೆಗಳು ಸೇರಿದಂತೆ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ದಾಖಲೀಕರಿಸಲಾಗುತ್ತದೆ.

ವಾರ್ಡ್‌ವಾರು ಬಿಬಿಎಂಪಿ ಸರ್ವೆ: ಬಿಬಿಎಂಪಿ ವ್ಯಾಪ್ತಿಯಲ್ಲಿನ ಜೀವವೈವಿಧ್ಯವನ್ನು ಪತ್ತೆ ಮಾಡಲು ವಾರ್ಡ್‌ವಾರು ಯೋಜನೆ ರೂಪಿಸಲು ಬಿಬಿಎಂಪಿ ಅರಣ್ಯ ವಿಭಾಗ ನಿರ್ಧರಿಸಿದೆ. ಈ ಕುರಿತು ಜೀವವೈವಿಧ್ಯ ನಿರ್ವಹಣಾ ಸಮಿತಿ ಎದುರಲ್ಲೂ ವಿಷಯ ಮಂಡಿಸಲಾಗುತ್ತದೆ. ಖಾಸಗಿ ಏಜೆನ್ಸಿಯ ಸಿಬ್ಬಂದಿ ಅಥವಾ ಆಸಕ್ತ ಶಾಲೆ-ಕಾಲೇಜು ವಿದ್ಯಾರ್ಥಿಗಳ ಮೂಲಕ ಪ್ರತಿ ವಾರ್ಡ್‌ನಲ್ಲಿರುವ ಜೀವವೈವಿಧ್ಯಗಳನ್ನು ಪತ್ತೆ ಮಾಡಿ, ದಾಖಲಿಸಲಾಗುತ್ತದೆ. ಪ್ರತಿ ವಾರ್ಡ್‌ನಲ್ಲಿ ಪ್ರಾಣಿ, ಪಕ್ಷಿ, ಮರ-ಗಿಡ ಮತ್ತು ಸೂಕ್ಷ್ಮಜೀವಿಗಳ ಸಂಖ್ಯೆಯನ್ನು ಲೆಕ್ಕ ಹಾಕದೆ, ಪ್ರಬೇಧಗಳನ್ನು ಮಾತ್ರ ಗುರುತಿಸಿ ದಾಖಲಿಸಲಾಗುತ್ತದೆ.

ಜೈವಿಕ ವೈವಿಧ್ಯತೆ ಸಂರಕ್ಷಿಸಲು ಕ್ರಮ: ಜೀವವೈವಿಧ್ಯ ಇನ್ವೆಂಟರಿ ರಚನೆಯಿಂದ ವಸತಿ ಪ್ರದೇಶವಾರು ಜೈವಿಕ ವೈವಿಧ್ಯತೆ ತಿಳಿಯಲಿದೆ. ಅದರ ಜತೆಗೆ ಅಳಿವಿನಂಚಿನಲ್ಲಿರುವ ಜೀವ ಪ್ರಬೇಧಗಳನ್ನು ಗುರುತಿಸಲು ಸಹಕಾರಿಯಾಗಲಿದೆ. ಒಂದು ವೇಳೆ ಅಳಿವಿನಂಚಿನಲ್ಲಿರುವ ಪ್ರಬೇಧಗಳು ಪತ್ತೆಯಾದರೆ, ಅವುಗಳನ್ನು ಸಂರಕ್ಷಿಸುವುದಕ್ಕೆ ಯೋಜನೆ ರೂಪಿಸುವುದು ಸಹಕಾರಿಯಾಗಲಿದೆ. ಅಲ್ಲದೆ, ದೇಶಾದ್ಯಂತ ಜನವಸತಿ ಪ್ರದೇಶದಲ್ಲಿ ಇರುವ ಜೀವವೈವಿಧ್ಯ ಪ್ರಬೇಧಗಳ ಸಂಖ್ಯೆ ಹಾಗೂ ದೇಶದಲ್ಲಿ ಎಷ್ಟು ಪ್ರಬೇಧದ ಜೀವಿಗಳಿವೆ ಎಂಬುದನ್ನು ತಿಳಿದು ದಾಖಲೀಕರಿಸುವುದು ಜೀವವೈವಿಧ್ಯ ಇನ್ವೆಂಟರಿ ರಚನೆಯ ಉದ್ದೇಶವಾಗಿದೆ.

ಕೆಲ ಬಿಜೆಪಿ ರಾಷ್ಟ್ರೀಯ ನಾಯಕರಿಂದ ನನ್ನ ಟಾರ್ಗೆಟ್‌: ಶಾಸಕ ಎಸ್.ಟಿ.ಸೋಮಶೇಖರ್

ಬೆಂಗಳೂರು ವ್ಯಾಪ್ತಿಯಲ್ಲಿನ ಜೀವವೈವಿಧ್ಯಗಳ ಪತ್ತೆ ಹಾಗೂ ದಾಖಲೀಕರಿಸುವ ಸಲುವಾಗಿ ಜೀವವೈವಿಧ್ಯ ನಿರ್ವಹಣಾ ಸಮಿತಿ ರಚಿಸಲಾಗಿದ್ದು, ಶುಕ್ರವಾರ ಅದರ ಮೊದಲ ಸಭೆ ನಡೆಯಲಿದೆ. ಸಭೆಯಲ್ಲಿ ಜೀವವೈವಿಧ್ಯ ಇನ್ವೆಂಟರಿ ರಚನೆ ಬಗ್ಗೆ ನಿರ್ಧರಿಸಲಾಗುವುದು. ವಾರ್ಡ್‌ವಾರು ಜೀವವೈವಿಧ್ಯ ಪತ್ತೆಗೆ ಕ್ರಮವಹಿಸಲಾಗುವುದು.
-ಬಿಎಲ್‌ಜಿ ಸ್ವಾಮಿ, ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ.

click me!