ವಿಜಯಪುರದಲ್ಲಿ ಪತ್ರಕರ್ತರ ಸಮ್ಮೇಳನ, ಗ್ರಾಮೀಣ ಪತ್ರಕರ್ತರಿಗೆ ಬಂಪರ್ ಕೊಡುಗೆ ನೀಡಿದ ಸಿಎಂ

Published : Feb 04, 2023, 08:38 PM IST
ವಿಜಯಪುರದಲ್ಲಿ  ಪತ್ರಕರ್ತರ ಸಮ್ಮೇಳನ, ಗ್ರಾಮೀಣ ಪತ್ರಕರ್ತರಿಗೆ ಬಂಪರ್ ಕೊಡುಗೆ ನೀಡಿದ ಸಿಎಂ

ಸಾರಾಂಶ

ಪತ್ರಿಕೆಗಳು ಪ್ರಾದೇಶಿಕವಾಗಿ ಹೊರಬರಬಹುದು, ಆದರೆ ಪತ್ರಕರ್ತರು ಪ್ರಾದೇಶಿಕವಾಗಬಾರದು, ಪತ್ರಕರ್ತ ಅಖಂಡ ಕರ್ನಾಟಕದ ಪತ್ರಕರ್ತನಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶಯ ವ್ಯಕ್ತಪಡಿಸಿದರು.

ವರದಿ: ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ(ಫೆ.4): ಪತ್ರಿಕೆಗಳು ಪ್ರಾದೇಶಿಕವಾಗಿ ಹೊರಬರಬಹುದು, ಆದರೆ ಪತ್ರಕರ್ತರು ಪ್ರಾದೇಶಿಕವಾಗಬಾರದು, ಪತ್ರಕರ್ತ ಅಖಂಡ ಕರ್ನಾಟಕದ ಪತ್ರಕರ್ತನಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶಯ ವ್ಯಕ್ತಪಡಿಸಿದರು. ವಿಜಯಪುರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 37ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಪತ್ರಿಕೋದ್ಯಮದ ವಿಶ್ವಾಸಾರ್ಹತೆಯ ಪುನರ್‌ಸ್ಥಾಪನೆಯ ನಿಟ್ಟಿನಲ್ಲಿಯೂ ತಮ್ಮ ಸಂದೇಶ ನೀಡಿದ ಅವರು, ಉತ್ತರ, ದಕ್ಷಿಣ ಎಂಬ ಬೇಧ ಪತ್ರಕರ್ತರಲ್ಲಿ ಬೇಡ, ಈ ಬೇಧದಿಂದ ಯಾವ ಪ್ರಯೋಜನವೂ ಇಲ್ಲ, ಪತ್ರಕರ್ತರು ಅಖಂಡ ಕರ್ನಾಟಕದ ಬಗ್ಗೆ ಚಿಂತನೆ ನಡೆಸಿದಾಗ ಮಾತ್ರ ಸಂಪೂರ್ಣ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ ಎಂದರು. ಓದುಗನೇ ಈಗ ಪತ್ರಕರ್ತನರಾಗಿರುವ ಕಾಲಘಟ್ಟದಲ್ಲಿ ವೃತ್ತಿ ಗಟ್ಟಿಗೊಳಿಸುವ ಪ್ರಯತ್ನದ ಭಾಗವಾಗಿ ಪತ್ರಕರ್ತರು ವಿಶ್ವಾಸಾರ್ಹತೆ ಹಾಗೂ ಬದ್ಧತೆಯನ್ನು ಪ್ರದರ್ಶಿಸುವ ಮೂಲಕ ಈ ವೃತ್ತಿಯನ್ನು ಪುನಃ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಯಶಸ್ವಿಯಾಗಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪತ್ರಕರ್ತರು ಹಾಗೂ ರಾಜಕಾರಣಿಗಳು ಗಂಡ-ಹೆಂಡತಿ‌ ಇದ್ದಂತೆ!
ರಾಜಕಾರಣಿ ಹಾಗೂ ಪತ್ರಕರ್ತರ ನಡುವೆ ಅವಿನಾಭಾವ ಸಂಬಂಧವಿದೆ, ಒಂದು ರೀತಿಯಲ್ಲಿ ಗಂಡ-ಹೆಂಡತಿಯರ ಸಂಬಂಧದಂತೆ. ಆದರೆ ಈ ಸಂಬಂಧ ಪ್ರಾಮಾಣಿಕವಾದ ಕಾರ್ಯನಿರತರವಾದ ಸಂಬಂಧ ಇರಬೇಕು, ಈ ಗಡಿಯನ್ನು ಇಬ್ಬರು ದಾಟಬಾರದು, ಈ ಗಡಿದಾಟದ ಆರೋಗ್ಯ ಸಂಬಂಧವಿದ್ದರೆ ಇಡೀ ರಾಜ್ಯಕ್ಕೆ ಶ್ರೇಯಸ್ಕರ ಎಂದರು. ರಾಜಕಾರಣಿಗಳು ಹಾಗೂ ಪತ್ರಕರ್ತರು ಒಬ್ಬರನ್ನು ಬಿಟ್ಟು ಇನ್ನೊಬ್ಬರಿಲ್ಲ. ಪತ್ರಕರ್ತರು ಇರದಿದ್ದರೆ ರಾಜಕಾರಣಿಗಳನ್ನು ಮಾತನಾಡಿಸುವವರೂ ಯಾರೂ ಇರುತ್ತಿರಲಿಲ್ಲ, ಇನ್ನೊಂದೆಡೆ ರಾಜಕಾರಣಿಗಳು ಇರದೇ ಇದ್ದರೆ ಪತ್ರಿಕೆಗಳನ್ನು ಯಾರು ಓದಬೇಕು, ಪ್ರಥಮ ಪುಟ ರಾರಾಜಿಸುವುದೇ ರಾಜಕಾರಣ ಸುದ್ದಿಯಿಂದ, ಹೀಗಾಗಿ ನಮ್ಮದು ಅವಿನಾಭಾವ ಸಂಬಂಧ, ನಾವು ಜಗಳವಾಡಬಹುದು, ಒಂದು ರೀತಿ ಗಂಡ-ಹೆಂಡತಿಯ ಸಂಬಂಧದಂತೆ ಎಂದರು.

ಸಮ್ಮೇಳನದ ಮೇಲೆ ಸಿದ್ದೇಶ್ವರ ಶ್ರೀಗಳ ಆಶೀರ್ವಾದ ಇದೆ:
ಈ ಸಮ್ಮೇಳನಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶೀರ್ವಾದವಿದೆ, ಶ್ರೀಗಳ ಆಶೀರ್ವಾದ ಆತ್ಮಸಾಕ್ಷಿಯನ್ನು ಜಾಗೃತಿ ಮಾಡುವ ಕೆಲಸ ಮಾಡುವಲ್ಲ ಪ್ರಧಾನ ಪಾತ್ರ ವಹಿಸುತ್ತದೆ. ಬಸವನಾಡಿನ ಆಶಯ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶಯಗಳನ್ನು ಮನದಾಳದಲ್ಲಿ ತುಂಬಿಕೊಂಡಾಗ ಮಾತ್ರ ಸಮ್ಮೇಳನ ಔಚಿತ್ಯ ಪೂರ್ಣವಾಗಲು ಸಾಧ್ಯ ಎಂದರು.

ವಿಜಯಪುರ ಜನತೆ ಗಟ್ಟಿಜೋಳದಂತೆ ಶ್ರೇಷ್ಠ:
ತಾಯಿ ಕೃಷ್ಣೆ ಹಾಗೂ ಮಣ್ಣಿನ ಭವ್ಯತೆ ಸೊಗಡಿನ ಫಲವಾಗಿ ಬೆಳೆಯುವ ವಿಜಯಪುರ ಜೋಳ ಅತ್ಯಂತ ಶ್ರೇಷ್ಠ, ಹೈಬ್ರೀಡ್ ಕಾಲದಲ್ಲಿಯೂ ಸಹ ವಿಜಯಪುರ ಜೋಳವನ್ನೇ ಅನೇಕರು ಬಳಸುವುದುಂಟು, ವಿಜಯಪುರ ಜೋಳದ ಶ್ರೇಷ್ಠತೆ, ಸತ್ವ ಹೈಬ್ರೀಡ್ ಜೋಳದಲ್ಲಿ ಇಲ್ಲ, ವಿಜಯಪುರ ಜೋಳದ ರೀತಿಯಲ್ಲಿಯೇ ವಿಜಯಪುರ ಜನತೆ ಶ್ರೇಷ್ಠ, ಗಟ್ಟಿ ಹಾಗೂ ಶುದ್ಧ ಎಂದರು. ಕೃಷ್ಣೆಯ ಹನಿ ಹನಿ ನೀರು ಕೊನೆಯ ಭಾಗಕ್ಕೆ ತಲುಪಿದಾಗ ಈ ಭಾಗ ಭಾರತ ದೇಶಕ್ಕೆ ಅನ್ನ ಕೊಡುವ ನಂದನವನವಾಗಲಿದೆ. ಈ ಕನಸು ಸಾಕಾರಗೊಳಿಸಲು ಎಲ್ಲರೂ ಬದ್ಧತೆ ಪ್ರದರ್ಶಿಸಬೇಕಿದೆ ಎಂದು ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.

ನೀರಾವರಿ ಖಾತೆ ನಿಭಾಯಿಸಿದ ಅನುಭವ ಹಂಚಿಕೊಂಡ ಸಿಎಂ:
ತಾವು ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿನ ಅನುಭವ ಹಂಚಿಕೊಂಡ ಬೊಮ್ಮಾಯಿ ಅವರು, ಗುತ್ತಿ ಬಸವಣ್ಣ, ಚಿಮ್ಮಲಗಿ ಯೋಜನೆ ಬೇಡ, ಅವುಗಳು ಬಿ-ಸ್ಕೀಂ ಅಡಿಯಲ್ಲಿ ಬರುತ್ತವೆ ಎಂದು ಸಲಹೆ ನೀಡಿದರು. ಆಗ ನಾನು ಮಹಾರಾಷ್ಟ್ರ-ಆಂಧ್ರ ಪ್ರದೇಶದಲ್ಲಿ ಈ ರೀತಿಯ ಸ್ಕೀಂಗಳಿಲ್ಲ, ನಮ್ಮಲ್ಲಿ ಏಕೆ? ಈ ಯೋಜನೆಗಳಗೆ ನ್ಯಾಯಾಧೀಕರಣದ ತೀರ್ಪು ಅಡ್ಡಿಯಾಗುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟೆ ಎಂದರು. ಆಡಳಿತದಲ್ಲಿರುವವರಿಗೆ ಸ್ಪಷ್ಟತೆ ಇರಬೇಕು, ಕರ್ತವ್ಯ ವ್ಯಾಪ್ತಿಯ ಬಗ್ಗೆ ಅರಿವು ಇರಬೇಕು, ಆಗ ಮಾತ್ರ ಕಟ್ಟಕಡೆಯ ವ್ಯಕ್ತಿಗೆ ಸಹಾಯ ಲಭಿಸುತ್ತದೆ ಎಂದರು. 

ಗ್ರಾಮೀಣ ಪತ್ರಕರ್ತರಿಗೆ ಬಂಪರ್ ಕೊಡುಗೆ:
ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ಸೌಲಭ್ಯ, ಮಾಶಾಸನ ಹೆಚ್ಚಳ ಸೇರಿದಂತೆ ಅನೇಕ ಬೇಡಿಕೆಗಳಿಗೆ ಅಸ್ತು ಎನ್ನುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರಕರ್ತರಿಗೆ ಬಂಪರ್ ಕೊಡುಗೆ ನೀಡಿದರು. ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಸೇವೆ ಒದಗಿಸಲು ಬದ್ಧನಾಗಿದ್ದು, ನೈಜ ಗ್ರಾಮೀಣ ಪತ್ರಕರ್ತರಿಗೆ ಈ ಸೌಲಭ್ಯ ದೊರಕಿಸುವ ಆಶಯದ ಹಿನ್ನೆಲೆಯಲ್ಲಿ ಸಂಘ ನೀಡುವ ಸಮರ್ಪಕ ಮಾಹಿತಿ ಆಧರಿಸಿ ಈ ಸೌಲಭ್ಯ ಜಾರಿಗೊಳಿಸಲಾಗುವುದು ಹಾಗೂ ನಿವೃತ್ತ ಪತ್ರಕರ್ತರಿಗೆ ಮಾಶಾಸನ ಹೆಚ್ಚಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲೆಯಲ್ಲಿರುವ ಪತ್ರಿಕಾ ಭವನಗಳನ್ನು ಕಾನಿಪ ಸಂಘಕ್ಕೆ ನಿರ್ವಹಣೆ ಒದಗಿಸುವ ನಿಟ್ಟಿನಲ್ಲ ಚಿಂತನೆ ನಡೆಸಲಾಗುವುದು, ಈ ನಿರ್ವಹಣೆ ಸಂಘದಿಂದ ಸಾಧ್ಯವೇ ಎಂಬುದನ್ನು ಸಂಘವೂ ಸಹ ಇನ್ನೊಮ್ಮೆ ಪುನರ್ ಪರಿಶೀಲನೆ ನಡೆಸುವುದು ಅಗತ್ಯ ಎಂದರು.

MLCಗೆ ಪತ್ರಕರ್ತರ ಆಯ್ಕೆ ವಿಚಾರ ; ಸಿಎಂ ಮುಗುಳನಗೆ ಮೂಲಕ ಉತ್ತರ:
ಪತ್ರಕರ್ತರನ್ನು ಮೇಲ್ಮನೆಗೆ ನಾಮಕರಣ ಮಾಡುವ ಬೇಡಿಕೆಯನ್ನು ನಗುತ್ತಲೇ ಸ್ಪಂದಿಸಿ, ನಮ್ಮಲ್ಲಿಯೇ ಪೈಪೋಟಿ ಅಧಿಕವಾಗಿದೆ, ಎಲ್ಲ ರಂಗದಲ್ಲಿರುವ ಮುಖಂಡರು ಬಂದು ನಿಲ್ಲುತ್ತಾರೆ, ಪತ್ರಕರ್ತರು ಮೇಲ್ಮನೆಯಲ್ಲಿ ಸದಸ್ಯರಾಗಬೇಕು ಎಂಬುದು ನನ್ನ ಭಾವನೆ ಕೂಡಾ ಹೌದು ಎಂದರು.

ಪತ್ರಕರ್ತರಿಗೆ ಸೈಟ್ ಹಂಚಿಕೆ ಶೀಘ್ರ ತೀರ್ಮಾನ ಎಂದ ಸಿಎಂ:
ಪತ್ರಕರ್ತರು ಕಾರ್ಮಿಕರು ಅಲ್ಲ ಎಂಬುದು ನನ್ನ ಭಾವನೆ, ಹೀಗಾಗಿ ಪತ್ರಕರ್ತರನ್ನು ಕಾರ್ಮಿಕ ಪಟ್ಟಿಗೆ ಸೇರ್ಪಡೆ ಬಗ್ಗೆ ಸಂಘ ಇರಿಸಿದ ಬೇಡಿಕೆಯನ್ನು ಇನ್ನೊಮ್ಮೆ ಪರಿಶೀಲಿಸಿ ಎಂದರು. ಸಿಎ ಸೈಟ್ ಹಂಚಿಕೆ ಸಮಯದಲ್ಲಿ ಪತ್ರಕರ್ತರಿಗೂ ನಿವೇಶನಗಳನ್ನು ಮೀಸಲಿರಿಸುವ ನಿಟ್ಟಿನಲ್ಲಿ ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳಿದೆ ಎಂದರು. 

ದಯಮಾಡಿ ದೊರೆ ಎನ್ನಬೇಡಿ ಎಂದ ಸಿಎಂ ಬೊಮ್ಮಾಯಿ:
ನನಗೆ ರಾಜ್ಯದ ದೊರೆ ಎನ್ನಬೇಡಿ, ದೊರೆ ಎಂದರೆ ನನಗೆ ಕಸಿವಿಸಿಯಾಗುತ್ತದೆ, ಈಗ ಪ್ರಜಾಪ್ರಭುತ್ವದ ಕಾಲ, ದಯಮಾಡಿ ದೊರೆ ಎನ್ನಬೇಡಿ, ನಾಡಿನ ದೊರೆ ಎಂದು ರೂಪಿಸುವುದು ಬೇಡ, ಜನರೇ ಇಲ್ಲಿ ದೊರೆಗಳು, ನಾನಿರುವುದು ಜನರ ಸೇವಕನ ಸ್ಥಾನದಲ್ಲಿ. ಈ ಭಾವನೆ ಇದ್ದರೆ ಮಾತ್ರ ಜನರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

PREV
Read more Articles on
click me!

Recommended Stories

ಬೆಂಗಳೂರು ಜನರಿಗೆ ಹೊಟ್ಟೆತುಂಬಾ ಬಿರಿಯಾನಿ ಬಾಡೂಟ ಕೊಟ್ಟ ಕುಟುಂಬ ಸಾಲದ ಸುಳಿಗೆ ಸಿಲುಕಿ ಆತ್ಮ*ಹತ್ಯೆ!
ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ