* 1 ಸಾವಿರ ಬೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು 210 ಜನರು ಮಾತ್ರ
* ಕೊರೋನಾ ಸೋಂಕು ಇಳಿಕೆ ಹಿನ್ನೆಲೆಯಲ್ಲಿ ಆಸ್ಪತ್ರೆ ಸ್ಥಗಿತ
* 3ನೇ ಅಲೆ ಎದುರಾದರೆ ಆಸ್ಪತ್ರೆ ಪುನರಾರಂಭ
ಬಳ್ಳಾರಿ(ಜೂ.19): ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ತೋರಣಗಲ್ ಬಳಿಯ ಜಿಂದಾಲ್ ಎದುರು ನಿರ್ಮಿಸಲಾಗಿದ್ದ 1 ಸಾವಿರ ಬೆಡ್‌ನ ತಾತ್ಕಾಲಿಕ ಆಸ್ಪತ್ರೆಯನ್ನು ಬಂದ್ ಮಾಡಲಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ತೀರಾ ಇಳಿಮುಖ ಕಂಡಿದ್ದರಿಂದ ಆಸ್ಪತ್ರೆಯನ್ನು ಬಂದ್ ಮಾಡಿ, ನಿಯೋಜನೆಗೊಂಡಿದ್ದ ವೈದ್ಯಕೀಯ ಸಿಬ್ಬಂದಿಯನ್ನು ಆಯಾ ಆಸ್ಪತ್ರೆಗಳಿಗೆ ಕಳಿಸಿಕೊಡಲಾಗಿದೆ.
ಜಿಂದಾಲ್ ಹಾಗೂ ರಾಜ್ಯ ಸರ್ಕಾರ ಸಹಯೋಗದಲ್ಲಿ ತಾತ್ಕಾಲಿಕ ಆಸ್ಪತ್ರೆಯನ್ನು ನಿರ್ಮಿಸಲಾಗಿತ್ತು. ಜಿಂದಾಲ್‌ನಿಂದಲೇ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿತ್ತು. ಜಿಲ್ಲಾಡಳಿತ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜನೆಗೊಳಿಸಿತ್ತು. ಮೇ 19ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವರ್ಚುವಲ್ ಮೂಲಕ ಆಸ್ಪತ್ರೆಯನ್ನು ಉದ್ಘಾಟಿಸಿದ್ದರು.
undefined
ರಾಜ್ಯದಲ್ಲೇ ಅತಿ ದೊಡ್ಡ ಜಿಂದಾಲ್‌ನಲ್ಲಿ 1000 ಬೆಡ್‌ನ ಕೋವಿಡ್ ಆಸ್ಪತ್ರೆ
ಆದರೆ, ನಿರೀಕ್ಷೆಯಷ್ಟು ಇಲ್ಲಿ ರೋಗಿಗಳ ದಾಖಲಾಗಲಿಲ್ಲ. ನಗರದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಲಭ್ಯವಿದ್ದ ಹಿನ್ನಲೆ ಬಹುತೇಕರು ನಗರದ ವಿಮ್ಸ್, ದಂತ ಕಾಲೇಜು, ಜಿಲ್ಲಾಸ್ಪತ್ರೆಯ ಕೋವಿಡ್ ವಿಭಾಗದಲ್ಲಿ ದಾಖಲಾಗುತ್ತಿದ್ದರು. ಜಿಂದಾಲ್‌ನ 1 ಸಾವಿರ ಬೆಡ್‌ಗಳ ಆಸ್ಪತ್ರೆಯಲ್ಲಿ ಒಟ್ಟು 210 ಸೋಂಕಿತರಿಗೆ ಮಾತ್ರ ಚಿಕಿತ್ಸೆ ನೀಡಲಾಗಿದ್ದು, ಈ ಪೈಕಿ 153 ಜನರು ಗುಣಮುಖರಾಗಿದ್ದರು.
ಸೋಂಕು ಇಳಿಮುಖಗೊಂಡಿದ್ದರಿಂದ ಜಿಂದಾಲ್ ಆಸ್ಪತ್ರೆಯನ್ನು ಬಂದ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಾದಲ್ಲಿ ಅಥವಾ ಮೂರನೇ ಅಲೆ ಎದುರಾದಲ್ಲಿ ಮತ್ತೆ ಜಿಂದಾಲ್ ಆಸ್ಪತ್ರೆಯನ್ನು ಆರಂಭಿಸಿ, ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ. ಜನಾರ್ದನ ತಿಳಿಸಿದ್ದಾರೆ.