
ಬೆಂಗಳೂರು (ಆ.2): ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಆ.9ರಿಂದ 11ರ ವರೆಗೆ ‘ಬಿಡದಿ ಉಳಿಸಿ, ರೈತರ ರಕ್ಷಿಸಿ’ ಘೋಷವಾಕ್ಯದಡಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಆ.9ರಂದು ಬೈರಮಂಗಲ ವೃತ್ತದಿಂದ ಪಾದಯಾತ್ರೆ ಆರಂಭವಾಗಲಿದ್ದು, ಆ.11ರಂದು ಪಾದಯಾತ್ರೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ತಲುಪಲಿದೆ. ಆ.14 ರಂದು ಸ್ವಾತಂತ್ರ್ಯ ಉದ್ಯಾನದಿದ ವಿಧಾನಸೌಧವರೆಗೆ ‘ವಿಧಾನಸೌಧ ಚಲೋ’ ನಡೆಯಲಿದೆ. ಅನ್ನ ನೀಡುವ ರೈತನ ಭೂಮಿ ಉಳಿಸಲು ಜೆಡಿಎಸ್ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಪಾದಯಾತ್ರೆ ಮತ್ತು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ. ಈ ಜನವಿರೋಧಿ ಸರ್ಕಾರ ವಿರುದ್ಧದ ಹೋರಾಟದಲ್ಲಿ ರೈತ ಬಾಂಧವರು, ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ನಿಖಿಲ್ ಮನವಿ ಮಾಡಿದ್ದಾರೆ.
ಚನ್ನಮ್ಮ ನಿಧನದಿಂದ ತಣ್ಣಗಾಗಿದ್ದ ಬಿಡದಿ ಹೋರಾಟ
ಅಜ್ಜಿ ಚನ್ನಮ್ಮ ಅವರ ಅಗಲಿಕೆ ದುಃಖದ ಹಿನ್ನೆಲೆಯಲ್ಲಿ ಜು.30ರಿಂದ ಆ.1ರ ವರೆಗೆ ನಡೆಯಬೇಕಿದ್ದ ಬಿಡದಿ ಪಾದಯಾತ್ರೆಯನ್ನು ಅನಿವಾರ್ಯವಾಗಿ ಮುಂದೂಡಲಾಗಿತ್ತು. ಇದೀಗ ಹೊಸ ವೇಳಾಪಟ್ಟಿ ಘೋಷಿಸಲಾಗಿದೆ. ಬಿಡದಿಯ ಆರು ಕಂದಾಯ ಗ್ರಾಮಗಳ ರೈತರ ಒಪ್ಪಿಗೆ ಇಲ್ಲದೆ ಅಂತಿಮ ಭೂಸ್ವಾಧೀನ ಅಧಿಸೂಚನೆ ಹೊರಡಿಸಿರುವುದು ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಗೆ ಸಾಕ್ಷಿ. ತಮ್ಮ ಕುಟುಂಬದಲ್ಲಾದ ದುಃಖದ ಸನ್ನಿವೇಶದಿಂದ ಪಾದಯಾತ್ರೆ ಮುಂದೂಡಬೇಕಾಯಿತು. ಇದರ ಹೊರತಾಗಿ ನಮ್ಮ ಹೋರಾಟದ ಹಠ ಕೊಂಚವೂ ತಗ್ಗಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ರೈತನ ಭೂಮಿ ಉಳಿಸಲು ಬದ್ಧ:
ಅನ್ನ ನೀಡುವ ರೈತನ ಭೂಮಿ ಉಳಿಸಲು ಜೆಡಿಎಸ್ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಪಾದಯಾತ್ರೆ ಮತ್ತು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ. ಈ ಜನವಿರೋಧಿ ಸರ್ಕಾರ ವಿರುದ್ಧದ ಹೋರಾಟದಲ್ಲಿ ರೈತ ಬಾಂಧವರು, ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಬಿಡದಿ ಟೌನ್‌ಶಿಪ್ ನೆಪದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಒಟ್ಟು 9 ಕಂದಾಯ ಗ್ರಾಮಗಳ ಪೈಕಿ 6 ಗ್ರಾಮಗಳ ಫಲವತ್ತಾದ ಕೃಷಿ ಭೂಮಿ ಕಬಳಿಸಲು ಅಂತಿಮ ಭೂಸ್ವಾಧೀನ ಅಧಿಸೂಚನೆ ಹೊರಡಿಸಿದೆ. ತಲೆತಲಾಂತರಗಳಿಂದ ವ್ಯವಸಾಯವನ್ನೇ ನಂಬಿ ಬದುಕುತ್ತಿರುವ ರೈತರನ್ನು ಬೀದಿಗೆ ತಳ್ಳುವ ಈ ದಬ್ಬಾಳಿಕೆ ವಿರುದ್ಧ ಜೆಡಿಎಸ್ ಪಕ್ಷ ಸದಾ ಹೋರಾಟ ನಡೆಸಲಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.