ಬಿಕರ್ನಕಟ್ಟೆ-ಸಾಣೂರು ಹೆದ್ದಾರಿ ಮಣ್ಣು ಕುಸಿತ: ತಡೆಗೋಡೆ ನಡೆಸದೇ ಅವೈಜ್ಞಾನಿಕ ಕಾಮಗಾರಿ?

Published : Aug 02, 2026, 08:21 AM IST
Bikarnakatte Sanoor Highway

ಸಾರಾಂಶ

ಮಂಗಳೂರಿನ ಎಡಪದವು ಬಳಿ ರಾಷ್ಟ್ರೀಯ ಹೆದ್ದಾರಿ 169ರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಣ್ಣು ಕುಸಿದಿದೆ. ತಡೆಗೋಡೆ ನಿರ್ಮಿಸದ ಕಾರಣ, ಮಳೆನೀರು ಕೃಷಿ ಭೂಮಿಗೆ ನುಗ್ಗಿ ಅಪಾರ ಹಾನಿಯಾಗಿದ್ದು, ಭಾರೀ ದುರಂತದ ಭೀತಿ ಎದುರಾಗಿದೆ.

ದಯಾನಂದ ಕಲ್ನಾರ್‌

ಕನ್ನಡಪ್ರಭ ವಾರ್ತೆ ಮಂಗಳೂರು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಅವೈಜ್ಞಾನಿಕ ಕಾಮಗಾರಿಯಿಂದ ಹೆದ್ದಾರಿಯ ಮಣ್ಣು ತೀವ್ರ ಪ್ರಮಾಣದಲ್ಲಿ ಕುಸಿತಗೊಂಡು ಭಾರೀ ದುರಂತದ ಸಂಭವಿಸುವ ಭೀತಿ ಮಂಗಳೂರಿನ ಎಡಪದವು ಬಳಿ ಎದುರಾಗಿದೆ.

ಬಿಕರ್ನಕಟ್ಟೆ-ಸಾಣೂರು ರಾಷ್ಟ್ರೀಯ ಹೆದ್ದಾರಿ 169ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಈ ಹೆದ್ದಾರಿಯ ಮೂಡುಬಿದಿರೆ-ಗಂಜಿಮಠ ನಡುವಿನ ಎಡಪದವು ಬಳಿಯ ಶಿಬ್ರಕೆರೆ ಎಂಬಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಮಣ್ಣು ಹಾಕಿ ಹೆದ್ದಾರಿ ನಿರ್ಮಿಸಲಾಗುತ್ತಿದ್ದು, ಇದೀಗ ಇಲ್ಲಿ ನಿರಂತರ ಮಳೆಗೆ ಹೆದ್ದಾರಿ ಮಣ್ಣು ಕುಸಿತಗೊಂಡು ಅಕ್ಕಪಕ್ಕದ ಪ್ರದೇಶಗಳಿಗೆ ಭಾರೀ ಪ್ರಮಾಣದ ಹಾನಿ ಸಂಭವಿಸುವ ಆತಂಕ ಎದುರಾಗಿದೆ. ಅಲ್ಲದೆ ಹೆದ್ದಾರಿ ಸಂಪರ್ಕವನ್ನೂ ನಿರ್ಬಂಧಿಸಲಾಗಿದೆ.

ಅವೈಜ್ಞಾನಿಕ ಕಾಮಗಾರಿಯಿಂದ ಕುಸಿತ

ಈ ಹೆದ್ದಾರಿಯ ಗಂಜಿಮಠ - ಮೂಡುಬಿದಿರೆ ಸಂಪರ್ಕ ಎಡಪದವು ಮೂಲಕ ಸಾಗುತ್ತದೆ. ಹೆದ್ದಾರಿ ಅಭಿವೃದ್ಧಿ ಯೋಜನೆಗಾಗಿ ಗಂಜಿಮಠ-ಮೂಡುಬಿದಿರೆ ನಡುವೆ ಎಡಪದವು ಪೇಟೆಯ ಮೂಲಕ ಸಾಗದೇ ಶಿಬ್ರಕೆರೆ ಮೂಲಕ ಹೊಸದಾಗಿ ರಸ್ತೆ ನಿರ್ಮಿಸಲಾಗುತ್ತಿದೆ. ಹೊಸ ರಸ್ತೆ ಕಾಮಗಾರಿ ನಡೆಯುವಲ್ಲಿಗೆ 50-60 ಅಡಿ ಎತ್ತರದವರೆಗೆ ಮಣ್ಣು ಹಾಕಿ ರಸ್ತೆ ನಿರ್ಮಿಸಲಾಗಿದ್ದು, ಆದರೆ ಎರಡೂ ಕಡೆ ತಡೆಗೋಡೆ ನಿರ್ಮಿಸದೇ, ಮಳೆ ನೀರು ಸಮರ್ಪಕವಾಗಿ ಹರಿದು ಹೋಗಲು ವ್ಯವಸ್ಥೆ ಮಾಡದೇ, ಕೃಷಿ ಭೂಮಿಗೆ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಕಾಮಗಾರಿ ನಡೆಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೆದ್ದಾರಿಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ನೀರು ಹರಿದುಹೋಗಲು ಸಣ್ಣ ಮಟ್ಟಿನ ವ್ಯವಸ್ಥೆ ಮಾಡಲಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ನಿರಂತರ ಮಳೆಗೆ ಹೆದ್ದಾರಿಯಲ್ಲಿ ಬಿರುಕು ಬಿಟ್ಟು ಹೆದ್ದಾರಿಯ ಮಣ್ಣು ಈಗಾಗಲೇ ಒಂದು ಭಾಗದ ತೋಟದ ಭಾಗಕ್ಕೆ ಕುಸಿದಿದೆ.

ಅಡಕೆ ತೋಟ ಜಲಾವೃತ

ಹೆದ್ದಾರಿ ಮಣ್ಣು ತೋಟಕ್ಕೆ ಕುಸಿದಿದ್ದರಿಂದ ತೋಟದ ಭಾಗದಿಂದ ಹರಿದು ಹೋಗುವ ನೀರಿಗೆ ತಡೆಯಾಗಿದ್ದು, ಪರಿಣಾಮ ನೀರು ತೋಟ ತುಂಬೆಲ್ಲ ಸಂಗ್ರಹಗೊಂಡು ಸುಮಾರು 10-13 ಎಕರೆಗೂ ಅಧಿಕ ಪ್ರದೇಶ ಜಲಾವೃತಗೊಂಡಿದೆ. ಅಲ್ಲದೇ ಪಕ್ಕದ ಭತ್ತದ ಗದ್ದೆಗೂ ಮಳೆ ನೀರು ನೀರು ನುಗ್ಗಿದೆ. ಇನ್ನೊಂದು ಭಾಗ ಗದ್ದೆ, ತೋಟ, ಮನೆಯವರೆಗೂ ನೀರು ನುಗ್ಗಿ ಸಮಸ್ಯೆಯಾಗಿದೆ. ತೋಟದಲ್ಲಿ ನೀರು ಸಂಗ್ರಹಗೊಂಡಿರುವುದರಿಂದ ಅಡಕೆಗೆ ರೋಗ ಭೀತಿ, ಫಸಲು ನಷ್ಟ ಆತಂಕವನ್ನು ಕೃಷಿಕರು ವ್ಯಕ್ತಪಡಿಸಿದ್ದಾರೆ.

ಭಾರಿ ದುರಂತ ಭೀತಿ !

ಹೆದ್ದಾರಿಯ ಮಣ್ಣು ಕುಸಿತಗೊಂಡಿದ್ದರೂ ಪರಿಹಾರ ಕಾಮಗಾರಿ ಕೈಗೊಳ್ಳಬೇಕಾಗಿರುವ ಕಾಮಗಾರಿ ನಿರ್ವಹಣಾ ಸಂಸ್ಥೆ ರಸ್ತೆಯ ಮಣ್ಣನ್ನು ಬದಿಗೆ ಸರಿಸುವ ಕಾಮಗಾರಿಯನ್ನು ಮಾತ್ರವೇ ಮಾಡುತ್ತಿದ್ದು, ಪರಿಹಾರ ಕಾಮಗಾರಿಗೆ ಆದ್ಯತೆ ನೀಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೇ ಹೆದ್ದಾರಿಯ ಒಂದು ಭಾಗದ ತೋಟದಲ್ಲಿ ಎಕರೆಗಟ್ಟಲೆ ವ್ಯಾಪ್ತಿಯಲ್ಲಿ ನೀರು ಕೆರೆಯಂತೆ ತುಂಬಿದ್ದು, ಜೋರು ಮಳೆ ಮುಂದುವರಿದಲ್ಲಿ ಸಂಗ್ರಹಗೊಂಡ ನೀರಿನ ಸಾಮರ್ಥ್ಯ ತಡೆಯಲಾರದೇ ಹೆದ್ದಾರಿಯ ಮಣ್ಣು ಇನ್ನಷ್ಟು ಕುಸಿತವಾಗುವ ಭೀತಿಯೂ ಇದೆ. ಪರಿಣಾಮ ಇನ್ನೊಂದು ಭಾಗಕ್ಕೆ ಮಣ್ಣು ನುಗ್ಗಿ ಅಪಾಯ ಸಂಭವಿಸುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹೆದ್ದಾರಿಯಲ್ಲಿ ಕುಸಿತವಾಗುವಂತೆ ಬಿರುಕುಗಳು ಗೋಚರಿಸುತ್ತಿವೆ.

ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ನಮ್ಮ ಬೆಂಬಲ ಇದೆ. ಕೃಷಿ ಭೂಮಿ, ಜನ ವಾಸಕ್ಕೆ ತೊಂದರೆ ಆಗದಂತೆ ಕಾಮಗಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸಬೇಕು. ಜನರಿಗೆ ತೊಂದರೆ ಆಗುವಂತೆ ಕಾಮಗಾರಿ ನಡೆಸಬಾರದು ಎಂಬುದು ನಮ್ಮ ಆಗ್ರಹ.

ಅಶ್ವಿನಿ ನಾಯಕ್‌, ಎಡಪದವು ಸ್ಥಳೀಯರು

ಇದನ್ನೂ ಓದಿ: ಬಿಳಿನೆಲೆಯಲ್ಲಿ ಅಪರೂಪದ ಮೈಂದಪುಳಿ ಕೃಷಿ ವಿಸ್ಮಯ; ಅಳಿವಿನಂಚಿನಲ್ಲಿರುವ ಪಶ್ಚಿಮ ಘಟ್ಟದ ಹೆಮ್ಮೆ

PREV
Read more Articles on
click me!

Recommended Stories

2 ವರ್ಷದಲ್ಲಿ 500 ಕರ್ನಾಟಕ ಪಬ್ಲಿಕ್ ಸ್ಕೂಲ್ ಲೋಕಾರ್ಪಣೆ: ಸಚಿವ ಮಧು ಬಂಗಾರಪ್ಪ
ಪೆಲ್ಲೆಟ್ ಗನ್ ಪ್ರಕರಣ; ಎಫ್‌ಐಆರ್‌ಗಾಗಿ ರಾಹುಲ್ ಗಾಂಧಿ 8 ಗಂಟೆ ಧರಣಿ: ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ