
ದಾವಣಗೆರೆ (ಆ.2): ದೇವಸ್ಥಾನ ಪ್ರವೇಶ ಮಾಡಿದರು ಎಂಬ ಕಾರಣಕ್ಕೆ ದಲಿತ ಸಮುದಾಯದವರ ಮೇಲೆ ಹಲ್ಲೆ ಮಾಡಿದ್ದರಿಂದ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಬೆಳಲಗೆರೆ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಬೆಳಲಗೆರೆಯಲ್ಲಿ ಶುಕ್ರವಾರ ಊರ ಹೊರಗೆ ಎಡೆ ಇಟ್ಟು ಬರುವಾಗ ದಲಿತ ಸಮುದಾಯದ ಐದಾರು ಯುವಕರು ಗ್ರಾಮದ ದೊಡ್ಡಯ್ಯ ದೇವಸ್ಥಾನ(Doddaiah Temple)ಕ್ಕೆ ಹೋಗಿ, ದೇವರ ದರ್ಶನ ಮಾಡಿ, ಕೈಮುಗಿದು ಹೊರ ಬರುತ್ತಿದ್ದರು. ಈ ವೇಳೆ ಮತ್ತೊಂದು ಜಾತಿಯ ಜನರು ಅದಕ್ಕೆ ಆಕ್ಷೇಪಿಸಿದ್ದಾರೆ. ಘಟನೆಯಲ್ಲಿ ದಲಿತ ಯುವಕರನ್ನು ಹಗ್ಗಗಳಿಂದ ಕಟ್ಟಿ ಹಾಕಿ, ಹಲ್ಲೆ ಮಾಡಿದ್ದಾರೆಂದು ಗ್ರಾಮದ ದಲಿತರು ಆರೋಪಿಸಿದ್ದಾರೆ.
ಅಜ್ಜಿ ಹಬ್ಬ ಆಚರಿಸಿ, ಸಿಹಿ ಅಡುಗೆ ಮಾಡಿ, ಎಡೆ ಸಹಿತವಾಗಿ ಅಮ್ಮನನ್ನು ಹರಿಜನ ಕಾಲನಿಯ ಎಲ್ಲರೂ ಒಂದೇ ಕಡೆ ಅಮ್ಮನನ್ನು (ಕೇಲು) ತಂದಿಟ್ಟು, ಪೂಜಿಸುತ್ತಾರೆ. ನಂತರ ಅವುಗಳನ್ನು ಒಟ್ಟಿಗೆ ಭಜನೆ, ಮೆರವಣಿಗೆಯಲ್ಲಿ ಕೊಂಡೊಯ್ದು ಗ್ರಾಮದ ಗಡಿಭಾಗಕ್ಕೆ ಇಟ್ಟು ಬರುವ ಪದ್ಧತಿಯಂತೆ ಶುಕ್ರವಾರವೂ ಆಚರಿಸಲಾಯಿತು.
ಈ ವೇಳೆ ಬಸವಾಪಟ್ಟಣ ಪೊಲೀಸರು ವಾಹನ ಬರುತ್ತಿರುವುದನ್ನು ಗಮನಿಸಿ, ಹಗ್ಗ ಬಿಚ್ಚಿದ್ದಾರೆ. ನಂತರ ಹಲ್ಲೆಗೆ ಒಗೊಳಗಾದ ಯುವಕರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಈ ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣಕ್ಕೂ ಕಾರಣವಾಯಿತು.
ಶನಿವಾರ ಬೆಳಲಗೆರೆ ಗ್ರಾಮಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಗ್ರಾಮಸ್ಥರ ಸಭೆ ನಡೆಸಿ, ಪರಿಸ್ಥಿತಿ ತಿಳಿಗೊಳಿಸಿದರು. ಇನ್ನು ಮುಂದೆ ಗ್ರಾಮದ ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ಹಾಕಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಅಧಿಕಾರಿಗಳು ನೀಡಿದರು. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸದ್ಯಕ್ಕೆ ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದೆ.