ನಮ್ಮ ಬೆಂಬಲ ಪಡೆದು ನಮಗೆ ಮೋಸ : ಜೆಡಿಎಸ್ ಶಾಸಕರೋರ್ವರ ಅಸಮಾಧಾನ

Kannadaprabha News   | Asianet News
Published : Sep 29, 2020, 11:27 AM ISTUpdated : Sep 29, 2020, 11:32 AM IST
ನಮ್ಮ ಬೆಂಬಲ ಪಡೆದು ನಮಗೆ ಮೋಸ : ಜೆಡಿಎಸ್ ಶಾಸಕರೋರ್ವರ ಅಸಮಾಧಾನ

ಸಾರಾಂಶ

ನಮ್ಮ ಸಹಕಾರ ಪಡೆದು ನಮಗೆ ಮೋಸ ಮಾಡುತ್ತಾರೆ ಎಂದು ಜೆಡಿಎಸ್ ಮುಖಂಡರೋರ್ವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣೆ ವಿಚಾರವಾಗಿ ಹೇಳಿಕೆ ನೀಡಿದ್ದಾರೆ

ನಾಗಮಂಗಲ (ಸೆ.29):  ನನ್ನ ಮತ್ತು ಪಕ್ಷದ ಸಹಾಯ ಪಡೆದು ನನಗೆ ಮೋಸ ಮಾಡುವವರಿಂದ ನನಗೆ ತುಂಬಾ ನೋವಾಗುತ್ತದೆ ಎಂದು ಶಾಸಕ ಕೆ.ಸುರೇಶ್‌ ಗೌಡ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಹೊರ ವಲಯದ ಕೆ.ಮಲ್ಲೇನಹಳ್ಳಿಯ ತಮ್ಮ ಬೆಂಬಲಿಗರೊಬ್ಬರ ಮನೆಯಲ್ಲಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆ ಸಂಬಂಧ ಆಯೋಜಿಸಿದ್ದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಿಂದ ಟಿಎಪಿಸಿಎಂಎಸ್‌ಗೆ ನಾಮನಿರ್ದೇಶನ ಮಾಡುವಾಗ ತಮ್ಮತಮ್ಮಲ್ಲಿಯೇ ಭಿನ್ನಾಭಿಪ್ರಾಯ ಮಾಡಿಕೊಂಡು ನಮ್ಮವರೇ ನಮಗೆ ಮೋಸ ಮಾಡಿದಾಗ ನನಗೆ ಕಣ್ಣಲ್ಲಿ ನೀರು ಬರುತ್ತದೆ ನೋವು ಹಂಚಿಕೊಂಡರು.

ತಾಲೂಕಿನಲ್ಲಿ ನಡೆದಿದ್ದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಚುನಾವಣೆ ವೇಳೆ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಪೂರ್ಣಪ್ರಮಾಣದ ಸಹಕಾರ ನೀಡಿದ್ದೆ. ನೆಲ್ಲಿಗೆರೆ, ಹರದನಹಳ್ಳಿ. ಮದ್ದೇನಹಟ್ಟಿ, ಪಾಲಗ್ರಹಾರ ಸೇರಿದಂತೆ 9 ಸಹಕಾರ ಸಂಘಗಳಲ್ಲಿ ನಮ್ಮವರೇ ಬಹುಮತವಿದ್ದರೂ ಸಹ ವಿರೋಧ ಪಕ್ಷದವರಿಗೆ ಡೆಲಿಗೇಟ್‌ ಬರೆದುಕೊಟ್ಟಿರುವುದು ಬೇಸರ ತರಿಸಿದೆ. ಇದರಿಂದ ಎಲ್ಲೋ ಒಂದು ಕಡೆ ನಾವು ಅವಮಾನಕ್ಕೆ ಒಳಗಾಗುತ್ತಿದ್ದೇವೆ ಎಂದರು.

ಜೆಡಿಎಸ್‌ಗೆ ತಲೆನೋವಾದ ಶಿರಾ ಕ್ಷೇತ್ರ ..

ನಮಗಾಗಿ ದುಡಿದಿರುವ ಪಕ್ಷದ ಕಾರ್ಯಕರ್ತರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವ ಸಮಯದಲ್ಲಿ ಅವರ ಗೆಲುವಿಗಾಗಿ ಶ್ರಮಿಸುವುದು ನಮ್ಮ ಕರ್ತವ್ಯ. ಆದರೆ, ಗೆದ್ದವರು ನಮ್ಮ ಬಳಿಯೇ ಉಳಿಯುತ್ತಾರೆಂಬ ನಂಬಿಕೆಯಿಲ್ಲ. ನಿಮ್ಮಗಳ ಯಾವುದೇ ಆಸೆ ಆಕಾಂಕ್ಷೆಗಳಿದ್ದರೆ ಅದನ್ನು ನಾನೇ ಬಗೆಹರಿಸುತ್ತೇನೆ. ಆದರೆ, ಬೇರೆಯವರ ಆಮಿಷಕ್ಕೆ ಒಳಗಾಗಿ ನಮ್ಮ ಘನತೆ ಗೌರವಕ್ಕೆ ಧಕ್ಕೆತರಬೇಡಿ ಎಂದರು.

ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಗೆಲುವು ಕಷ್ಟವಾಗುವುದಿಲ್ಲ. ಮನ್ಮುಲ್ ಚುನಾವಣೆ ವೇಳೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿದ್ದರಿಂದಲೇ ನಾವು ಗೆದ್ದಿದ್ದೇವೆ. ಅದೇ ರೀತಿ ಟಿಎಪಿಸಿಎಂಎಸ್‌ ಚುನಾವಣೆಯಲ್ಲೂ ಒಗ್ಗಟ್ಟು ಪ್ರದರ್ಶಿಸಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ತಿಳಿಸಿದರು.

ಬಿಜೆಪಿಯೊಂದಿಗೆ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ ಎಂದ ಜೆಡಿಎಸ್‌ ನಾಯಕ ...

ತಾಲೂಕಿನ ಟಿಎಪಿಸಿಎಂಎಸ್‌ನಲ್ಲಿ ಕಳೆದ 25 ವರ್ಷಗಳಿಂದ ಹೆಗ್ಗಣಗಳು ಸೇರಿಕೊಂಡು ಸಂಸ್ಥೆಯನ್ನು ಹಾಳುಮಾಡುತ್ತಿವೆ. ಅವುಗಳನ್ನು ಬಡಿದೋಡಿಸಲು ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಬೆಂಬಲಿತ ಎಲ್ಲ ಅಭ್ಯರ್ಥಿಗಳು ಗೆಲ್ಲಲೇಬೇಕಿದೆ. ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮೂವರು ನಾಮನಿರ್ದೇಶಕರು ನನಗೆ ನಂಬಿಕೆ ದ್ರೋಹ ಮಾಡಿದರು. ಮುಂದೆ ನಡೆಯುವ ಗ್ರಾಪಂ ಚುನಾವಣೆಯಲ್ಲೂ ಅಷ್ಟೇ ಗೆಲ್ಲುವವರೆಗೆ ಪಕ್ಷ ನಂತರ ಲಾಭ ಇರುವ ಕಡೆ ಹಾರುತ್ತಾರೆ ಎಂದು ಬೇಸರದ ನುಡಿಗಳಾಡಿದರು.

ಮನ್ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು ಮಾತನಾಡಿ, ಟಿಎಪಿಸಿಎಂಎಸ್‌ ಚುನಾವಣೆಯ ಸಭೆಯನ್ನು ಈ ಹಿಂದೆಯೇ ಮಾಡಿದ್ದರೆ ಈ ಗೊಂದಲ ಸೃಷ್ಟಿಯಾಗುತ್ತಿರಲಿಲ್ಲ. ಗೊಂದಲಗಳು ಏನೇ ಇರಲಿ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಶಾಸಕ ಸುರೇಶ್‌ ಗೌಡರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಶೇಖ್‌ ಅಹಮದ್‌, ವಕೀಲ ಟಿ.ಕೆ.ರಾಮೇಗೌಡ, ಜಿಪಂ ಮಾಜಿ ಸದಸ್ಯ ಡಿ.ಟಿ.ಶ್ರೀನಿವಾಸ್‌ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಚಂದ್ರೇಗೌಡ, ಮುಖಂಡರಾದ ಮುದ್ದೇಗೌಡ, ಪಾಳ್ಯರಘು, ಮಾದಹಳ್ಳಿ ನಾಗಣ್ಣ, ಮಲ್ಲಿಕಾರ್ಜುನ, ಬಸವೇಗೌಡ, ಕೋಡಿಹಳ್ಳಿ ಕೃಷ್ಣೇಗೌಡ ಸೇರಿದಂತೆ ಹಲವರು ಹಾಜರಿದ್ದರು.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ