
ಹಾಸನ: ನೈಸ್ ಯೋಜನೆಯ ಅಕ್ರಮ ಹಾಗೂ ಜಿಲ್ಲೆಯ ಪ್ರಸ್ತುತ ಆಡಳಿತಾತ್ಮಕ ಬೆಳವಣಿಗೆಗಳ ಕುರಿತು ಮಾಜಿ ಸಚಿವ ಮತ್ತು ಜೆಡಿಎಸ್ ಹಿರಿಯ ನಾಯಕ ಹಾಗೂ ಹೊಳೆನರಸೀಪುರ ಕ್ಷೇತ್ರದ ಶಾಸಕ ಹೆಚ್.ಡಿ. ರೇವಣ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದರು . ಹಾಸನದಲ್ಲಿ ಮಾತನಾಡಿದ ಅವರು, ಹೆಸರು ಪ್ರಸ್ತಾಪಿಸದೆಯೇ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಲ್ಲದೆ, ಜಿಲ್ಲೆಯಲ್ಲಿ 72 ವರ್ಷಗಳ ಇತಿಹಾಸವಿರುವ ಗಣಪತಿ ವಿಸರ್ಜನೆಗೆ ನಿಷೇಧ ಹೇರಿರುವ ಆಡಳಿತದ ಕ್ರಮವನ್ನು ಬಲವಾಗಿ ಖಂಡಿಸಿದ್ದಾರೆ.
ನೈಸ್ ಯೋಜನೆಗೆ ಸಂಬಂಧಿಸಿದಂತೆ ರಚನೆಯಾಗಿದ್ದ ಸದನ ಸಮಿತಿಯ ಇತಿಹಾಸವನ್ನು ನೆನಪಿಸಿಕೊಂಡ ಹೆಚ್.ಡಿ. ರೇವಣ್ಣ, ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವರ ನಡೆಯನ್ನು ತೀವ್ರವಾಗಿ ಲೇವಡಿ ಮಾಡಿದರು. ಈಗಿನ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಹಿಂದೆ ನಮ್ಮ ಪಕ್ಷದಲ್ಲಿದ್ದಾಗ ನೈಸ್ ಅಕ್ರಮದ ವಿರುದ್ಧದ ಸದನ ಸಮಿತಿಯ ಸದಸ್ಯರಾಗಿದ್ದರು. ನಮ್ಮ ಪಾರ್ಟಿಯಲ್ಲಿ ಯಾರೂ ಬುದ್ಧಿವಂತರಿಲ್ಲ ನಾನೇ ಬುದ್ಧಿವಂತ ಎಂದು ಹೇಳಿ ಕುಮಾರಣ್ಣನಿಗೆ ಒತ್ತಡ ಹೇರಿ ಸ್ವತಃ ಆ ಸಮಿತಿಗೆ ಸೇರಿಕೊಂಡಿದ್ದರು. ಇಲ್ಲಿ ನಡೆದಿರುವ ಅವ್ಯವಹಾರ ಯಾರಿಗೂ ಹೇಳೋದಕ್ಕೆ ಬರೋದಿಲ್ಲ. ನಮ್ಮ ಪಾರ್ಟಿಯಲ್ಲಿ ನಾನೇ ಸೇರಿಕೊಳ್ಳುತ್ತೇನೆ ಎಂದು ಒತ್ತಡ ಹಾಕಿದ್ದರು. ಇದನ್ನು ಜೇನುಕಲ್ ಸಿದ್ದೇಶ್ವರ ಬೆಟ್ಟದ ಮುಂದೆ ಹೇಳಲಿ ಎಂದು ಸವಾಲು ಹಾಕಿದರು. ಯಾರ್ಯಾರ್ ದುಡ್ಡು ಹೊಡೆದಿದ್ದಾರೆ ಲೂಟಿ ಮಾಡಿಬಿಟ್ಟಿದ್ದಾರೆ ಎಂದು ಕುಮಾರಣ್ಣನಿಗೆ ಹೇಳಿ ಸದಸ್ಯರಾಗಿದ್ದರು. ಅವರು ಸದಸ್ಯರಾಗಿ ಏನು ಬರೆಸಿ ಬಂದಿದ್ದಾರೋ ಅದನ್ನ ಸಾರ್ವಜನಿಕವಾಗಿ ಹೇಳಲಿ, ಈ ಬಗ್ಗೆ ಸ್ಪಷ್ಟಪಡಿಸಲಿ ಎಂದು ರೇವಣ್ಣ ಆಗ್ರಹಿಸಿದರು.
ಇದೇ ವೇಳೆ, ನೈಸ್ ಯೋಜನೆಯನ್ನು 'ದೇವೇಗೌಡರ ಕೂಸು' ಎಂದು ಹಿಂದೆ ಟೀಕಿಸಿದ್ದ ನಾಯಕರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಹಾಗಿರುವಾಗ ವರದಿ ನೀಡಲು ಸಮಿತಿಗೆ ಹೋಗಿದ್ದು ಏಕೆ ಎಂದು ಪ್ರಶ್ನಿಸಿದರು.
ಹಾಸನ ಜಿಲ್ಲಾಧಿಕಾರಿಗಳು ಎಸ್ಪಿಗೆ ನೋಟಿಸ್ ಜಾರಿ ಮಾಡಿರುವ ವಿಚಾರದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಅವರು, "ನಮಗೆ ಇನ್ನೂ ಯಾವುದೇ ನೋಟಿಸ್ ಬಂದಿಲ್ಲ. ಎಸ್ಪಿಗೆ ಕೊಟ್ಟವರು ಮುಂದೆ ನಮಗೂ ಕೊಟ್ಟರೆ ನೋಡೋಣ. ಎರಡು ದಶಕಗಳ ಕಾಲ ಅಧಿಕಾರ ನಡೆಸಿದ ಹಿರಿಯ ಅಧಿಕಾರಿಗಳಿದ್ದಾರೆ, ಅಂತವರ ಬಗ್ಗೆ ನಾವು ಮಾತನಾಡುವುದಿಲ್ಲ. ನಾವು ಹಾಸನಾಂಬ ದೇವಿ ದರ್ಶನದ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ. ದರ್ಶನಕ್ಕೆ ಹೋದರೆ ಸಾಮಾನ್ಯ ಜನರ ಕ್ಯೂನಲ್ಲೇ ನಿಂತು ತಾಯಿಯ ದರ್ಶನ ಪಡೆಯುತ್ತೇವೆ ಎಂದರು.
ಹಾಸನದಲ್ಲಿ ಸುದೀರ್ಘ 72 ವರ್ಷಗಳ ಸಾಂಪ್ರದಾಯಿಕ ಇತಿಹಾಸ ಹೊಂದಿರುವ ಗಣಪತಿ ವಿಸರ್ಜನೆಗೆ ಆಡಳಿತ ಮಂಡಳಿ ನಿಷೇಧಾಜ್ಞೆ ವಿಧಿಸಿರುವುದಕ್ಕೆ ರೇವಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಒಂದು ವಾರದಿಂದ ಇತರ ಎಲ್ಲಾ ಗಣಪತಿ ವಿಸರ್ಜನೆಗಳಿಗೆ ಅವಕಾಶ ನೀಡಿದ ಜಿಲ್ಲಾಡಳಿತ, ಎಲ್ಲಾ ಸಮಾಜದವರೂ ಒಟ್ಟಾಗಿ ಪೂಜಿಸುವ ಈ 72 ವರ್ಷಗಳ ಸುದೀರ್ಘ ಇತಿಹಾಸದ ಗಣಪತಿಗೆ ಮಾತ್ರ ಏಕೆ ತಡೆ ನೀಡಿದೆ ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಈ ರೀತಿಯ ದೌರ್ಜನ್ಯ ಮತ್ತು ಏಕಪಕ್ಷೀಯ ತೀರ್ಮಾನಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಶೀಘ್ರದಲ್ಲೇ ಪತ್ರ ಬರೆಯುವುದಾಗಿ ತಿಳಿಸಿದರು. ಯಾವುದೇ ಗಲಾಟೆ ಇಲ್ಲದೆ ವಿಸರ್ಜನೆ ಮಾಡಲು ಸಂಘಟಕರನ್ನು ಕರೆಸಿ ಮಾತನಾಡಬಹುದಿತ್ತು. ಆದರೆ ಜನಪ್ರತಿನಿಧಿಗಳು ಬಂದರೆ ಅವಘಡ ಸಂಭವಿಸುತ್ತದೆ ಎಂಬ ನೆಪ ಹೇಳಲಾಗುತ್ತಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ತಾನೇ ಸಂಪೂರ್ಣ ನಿಯಂತ್ರಣ ಮಾಡಿಕೊಳ್ಳುತ್ತೇನೆ ಎಂದು ಹೇಳಿರುವ ಜಿಲ್ಲಾ ಮುಖ್ಯಸ್ಥರಿಗೆ ಧನ್ಯವಾದಗಳು. ನಮಗೂ ಕೆಲಸ ಕಡಿಮೆಯಾಯಿತು, ಪೊಲೀಸ್ ಭದ್ರತೆಯೇ ಇಲ್ಲದೆ ಕಾರ್ಯಕ್ರಮ ಸಾಗಲಿ, ನಮ್ಮ ಕಡೆಯಿಂದ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ವ್ಯಂಗ್ಯವಾಗಿ ಚಟಾಕಿ ಹಾರಿಸಿದರು.