ಹಣಬಲದಿಂದ ಚುನಾವಣೆ ಗೆಲ್ಲಲಾಗದು : ಸಚಿವ ನಾರಾಯಣಗೌಡ ವಿರುದ್ಧ ಕಿಡಿ

By Kannadaprabha NewsFirst Published Oct 4, 2020, 9:18 AM IST
Highlights

ಹಣಬಲದಿಂದ ಯಾವುದೇ ಚುನಾವಣೆಯನ್ನೂ ಗೆಲ್ಲಲಾಗದು ಎಂದು ಸಚಿವ ನಾರಾಯಣ ಗೌಡ ವಿರುದ್ಧ ವಾಗ್ದಾಳಿ ನಡೆಸಲಾಗಿದೆ. 

 ಕೆ.ಆರ್‌.ಪೇಟೆ (ಅ.04): ಹಣಬಲದಿಂದ ಚುನಾವಣೆಗಳನ್ನು ಗೆಲ್ಲಬಹುದು ಎಂಬ ಬಿಜೆಪಿ ನಂಬಿಕೆಯನ್ನು ಪ್ರಸಕ್ತ ಟಿಎಪಿಸಿಎಂಎಸ್‌ ಚುನಾವಣೆಯಲ್ಲಿ ಮತದಾರ ಹುಸಿ ಮಾಡಿದ್ದಾನೆ ಎಂದು ತಾಲೂಕು ಜೆಡಿಎಸ್‌ ಮುಖಂಡರು ಅಭಿಪ್ರಾಯಪಟ್ಟರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಟಿಎಪಿಸಿಎಂಎಸ್‌ ಚುನಾವಣೆಯಲ್ಲಿ ವಿಜೇತರಾದ ಎಲ್ಲ ಅಭ್ಯರ್ಥಿಗಳೊಂದಿಗೆ ಮತದಾರರಿಗೆ ಕೃತಜ್ಞತೆ ಅರ್ಪಿಸಿದ ಜೆಡಿಎಸ್‌ ಮುಖಂಡರು ಸಚಿವ ಕೆ.ಸಿ.ನಾರಾಯಣಗೌಡರ ವಿರುದ್ಧ ಕಿಡಿಕಾರಿದರು.

ಇಂದು ಡಿ.ಕೆ. ರವಿ ಪತ್ನಿ ಕಾಂಗ್ರೆ​ಸ್‌​ ಸೇರ್ಪಡೆ, ಟಿಕೆಟ್ ಯಾರಿಗೆ ಅನ್ನೋದು ನಿಗೂಢ!

ಜಿಪಂ ಸದಸ್ಯ ಬಿ.ಎಲ್.ದೇವರಾಜು ಮಾತನಾಡಿ, ಎಚ್‌.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ನನ್ನ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಲಿಲ್ಲ. ಇದರಿಂದ ಪಕ್ಷ ತ್ಯಜಿಸಿ ನಾನು ಬಿಜೆಪಿ ಸೇರಿದೆ ಎಂದು ಸುಳ್ಳು ಪ್ರಚಾರ ಮಡಿಕೊಂಡು ಹೋಗುತ್ತಿದ್ದಾರೆ. ಆದರೆ, ಕುಮಾರಸ್ವಾಮಿ ಅವಧಿಯಲ್ಲಿ ಕ್ಷೇತ್ರಕ್ಕೆ ಎಷ್ಟುಅನುದಾನ ಹರಿದು ಬಂದಿದೆ ಎನ್ನುವುದನ್ನು ನಾವು ಮಾಹಿತಿ ಹಕ್ಕು ಮೂಲಕ ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದರು.

ಕುಮಾರಸ್ವಾಮಿ ಕೆ.ಆರ್‌. ಪೇಟೆ ಕ್ಷೇತ್ರವನ್ನು ಕಡೆಗಣಿಸಿದ್ದಾರೆ ಎಂದು ಸಚಿವರು ತಮ್ಮ ಸ್ವಗ್ರಾಮ ಕೈಗೋನಹಳ್ಳಿಯ ಗ್ರಾಮ ದೇವರಾದ ವೀರಭದ್ರೇಶ್ವನ ಮುಂದೆ ಪ್ರಮಾಣ ಮಾಡಿ ಹೇಳಲಿ ಎಂದು ಸವಾಲು ಹಾಕಿದರು.

ಜಿಪಂ ಸದಸ್ಯ ಎಚ್‌.ಟಿ. ಮಂಜು ಮಾತನಾಡಿ, ಜೆಡಿಎಸ್‌ ರೈತರ ಪಕ್ಷ, ರೈತ ವಿರೋಧಿ ಬಿಜೆಪಿ ಸರ್ಕಾರಕ್ಕೆ ಪ್ರಸಕ್ತ ಚುನಾವಣೆಯ ಮೂಲಕ ಮತದಾರ ಎಚ್ಚರಿಕೆಯ ಸಂದೇಶ ರವಾನಿಸಿದ್ದಾನೆ. ಕ್ಷೇತ್ರದಲ್ಲಿ ಹಣಬಲ ಇನ್ನು ಮುಂದೆ ನಡೆಯುವುದಿಲ್ಲ ಎಂದರು.

ವಿಜೇತ ಅಭ್ಯರ್ಥಿ ಬಿ.ಎಲ್.ದೇವರಾಜು, ಎಸ್‌.ಎಲ್. ಮೋಹನ್‌, ಶಶಿಧರ ಸಂಗಾಪುರ, ಎಸ್‌.ಜಿ. ಮೋಹನ್‌, ನಾಗರಾಜು, ಟಿ.ಎಸ್‌. ಮಂಜುನಾಥ್‌, ರುಕ್ಮಿಣಿ, ಸುಕನ್ಯ, ಅಶೋಕ್‌, ಎಸ್‌.ಆರ್‌. ನವೀನ್‌ ಕುಮಾರ್‌, ಟಿ. ಬಲದೇವ, ಶಿವಣ್ಣ ಮತ್ತು ಕೆ.ಎಸ್‌ ದಿನೇಶ್‌ ಅವರನ್ನು ಅಭಿನಂದಿಸಲಾಯಿತು.

ಸುದ್ಧಿಗೋಷ್ಠಿಯಲ್ಲಿ ತಾಪಂ ಸದಸ್ಯ ಬಿಲ್ಲೇನಹಳ್ಳಿ ದಿನೇಶ್‌, ಮುಖಂಡ ಬಸ್‌ ಕೃಷ್ಣೇಗೌಡ, ಎಂ.ಬಿ. ಹರೀಶ್‌, ಬ್ಯಾಲದಕೆರೆ ನಂಜಪ್ಪ, ಹೊಸಹೊಳಲು ಅಶೋಕ್‌, ಕೊರಟೀಕೆರೆ ನಂದೀಶ್‌, ವಸಂತಕುಮಾರ್‌ ಇತರರು ಇದ್ದರು.

click me!