ರಾಜಕೀಯ ಈ ಮಟ್ಟಕ್ಕೆ ಇಳಿಯಬಾರದು : ಎಚ್‌ಡಿಡಿ ಬೇಸರ

By Kannadaprabha NewsFirst Published Mar 12, 2021, 2:44 PM IST
Highlights

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ರಾಜಕೀಯ ಈ ಮಟ್ಟಕ್ಕೆ ಹೋಗಬಾರದೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪಕ್ಷಾಂತರ ವಿಚಾರದ ಚರ್ಚೆ ಸದ್ಯಕ್ಕೆ ಅನಾವಶ್ಯಕ ಎಂದರು. 

ಹಾಸನ (ಮಾ.12): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣಾ ಪ್ರಚಾರದ ವೇಳೆ ಉಂಟಾದ ಗಲಭೆಯಲ್ಲಿ ಅವರ ಕಾಲಿಗೆ ಪೆಟ್ಟಾಗಿದೆ ಎಂದು ತಿಳಿದಿದ್ದೇನೆ. ಏನೇ ಆದರೂ ರಾಜಕೀಯ ಈ ಮಟ್ಟಕ್ಕೆ ಇಳಿಯಬಾರದು ಎಂದು ಮಾಜಿ ಪ್ರಧಾನಿ, ಹಾಲಿ ರಾಜ್ಯಸಭಾ ಸದಸ್ಯರಾದ ಎಚ್‌.ಡಿ.ದೇವೇಗೌಡರು ವಿಷಾದ ವ್ಯಕ್ತಪಡಿಸಿದರು.

ಶಿವರಾತ್ರಿ ಹಬ್ಬದ ಅಂಗವಾಗಿ ತಮ್ಮ ಹುಟ್ಟೂರಾದ ಹರದನಹಳ್ಳಿಯ ಈಶ್ವರನ ದೇವಾಲಯಕ್ಕೆ ಗುರುವಾರ ಭೇಟಿ ನೀಡಿ ಈಶ್ವರನ ದರ್ಶನ ಪಡೆದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂದಿ ಕ್ಷೇತ್ರದಿಂದಲೇ ಮಮತಾ ಬ್ಯಾನರ್ಜಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಅದು ಅವರಿಗೆ ಬಿಟ್ಟದ್ದು. ಆದರೆ ಅವರ ಎದುರಾಳಿಗಳು ನಡೆದುಕೊಂಡಿರುವ ರೀತಿ ತಪ್ಪು. ರಾಜಕೀಯದಲ್ಲಿ ಸೋಲು ಗೆಲುವುದ ಇದ್ದಿದ್ದೆ. ಪ್ರಜಾಪ್ರಭುತ್ವದಲ್ಲಿ ಇದೆಲ್ಲಾ ಸಾಮಾನ್ಯ. ಹಾಗಾಗಿ ಮಮತಾ ಅವರ ಮೇಲೆ ದಾಳಿ ಮಾಡಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

'JDS ನಿಂದ ಗೆದ್ದರೂ ಈ ಶಾಸಕ ಇರೋದು ಯಾವ ಪಕ್ಷದಲ್ಲಿ ಅನ್ನೋದು ಗೊತ್ತಿಲ್ಲ'

ಕೆಲವರು ಪಕ್ಷ ಬಿಡುವ ವಿವಾರವಾಗಿ ಪ್ರತಿಕ್ರಿಯಿಸಿದ ಗೌಡರು ಈಗ ಯಾವುದೇ ಚುನಾವಣೆ ಇಲ್ಲ. ಹಾಗಾಗಿ ಆ ಬಗ್ಗೆ ಚರ್ಚೆ ಅನಾವಶ್ಯಕ ಎಂದರು.

ಮುಂದಿನ ವರ್ಷ ಬರಲಾಗುತ್ತೋ ಇಲ್ವೋ:  ಈಗಾಗಲೇ ನನಗೆ ತುಂಬಾ ವಯಸ್ಸಾಗಿದೆ. ಅದು ಪ್ರಕೃತಿ ಸಹಜವೂ ಕೂಡ. ಈಗಾಗಲೇ ನನಗೆ ನಡೆಯಲೂ ಕಷ್ಟವಿದೆ. ಹಾಗಾಗಿ ಮುಂದಿನ ವರ್ಷ ಇಲ್ಲಿಗೆ ಬರಲಾಗುತ್ತದೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ ನನ್ನ ಕುಲದೈವ ಈಶ್ವರನ ದರ್ಶನ ಮಾಡಲೆಂದು ಬಂದಿದ್ದೇನೆ ಎಂದರು.

ಕಳೆದ ಹದಿನೈದು ದಿನಗಳಿಂದ ನನ್ನ ಆರೋಗ್ಯ ಹದಗೆಟ್ಟಿತ್ತು. ದೆಹಲಿಗೂ ಹೋಗಿ ಚಿಕಿತ್ಸೆ ಪಡೆದುಬಂದಿದ್ದೇನೆ. ಹಾಸನ ಜಿಲ್ಲೆಯಲ್ಲಿ ಪ್ರವಾಸ ಮಾಡಬೇಕೆಂದಿದ್ದೆ. ಆದರೆ, ಅನಾರೋಗ್ಯದ ಕಾರಣ ಅದು ಈಗ ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಪ್ರವಾಸ ಕೈಗೊಳ್ಳುವುದಾಗಿ ಹೇಳಿದರು.

click me!