ದಿನವೂ ಬಸ್ಸಿಗಾಗಿ ಪರದಾಟ| ಬಸ್ಸಿನ ಕೊರತೆಯಿಂದ ಹೈರಾಣಾಗಿರುವ ವಿದ್ಯಾರ್ಥಿಗಳು ಶಾಲಾ-ಕಾಲೇಜಿನಿಂದ ವಿಮುಖ| ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಶಾಲಾ ಸಮಯಕ್ಕೆ ಬಸ್ಸುಗಳನ್ನು ಓಡಿಸದ ಕಾರಣ ಬಹಳಷ್ಟು ವಿದ್ಯಾರ್ಥಿಗಳು ಶಿಕ್ಷಣವೇ ಬೇಡ ಎಂಬ ಸ್ಥಿತಿ ನಿರ್ಮಾಣ|
ಯೂನುಸ್ ಮೂಲಿಮನಿ
ನಾಲತವಾಡ(ಮಾ.12): ಹಳ್ಳಿಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮುದ್ದೇಬಿಹಾಳ ಸಾರಿಗೆ ಇಲಾಖೆ ಅಧಿಕಾರಿಗಳು ಮುಳ್ಳಾಗಿದ್ದಾರೆ. ಶಿಕ್ಷಣದ ಹಂಬಲವಿದ್ದ ವಿದ್ಯಾರ್ಥಿಗಳಿಗೆ ಬಸ್ಸಿನ ಸೌಕರ್ಯ ನೀಡದೇ ಅವರನ್ನು ಶಿಕ್ಷಣದಿಂದ ವಂಚಿತವಾಗಿ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.
undefined
ಮುದ್ದೇಬಿಹಾಳ ತಾಲೂಕು ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಶಾಲಾ ಸಮಯಕ್ಕೆ ಬಸ್ಸುಗಳನ್ನು ಓಡಿಸದ ಕಾರಣ ಬಹಳಷ್ಟು ವಿದ್ಯಾರ್ಥಿಗಳು ಶಿಕ್ಷಣವೇ ಬೇಡ ಎಂಬ ಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ. ಪ್ರತಿ ದಿನ ತಾಲೂಕಿನ ಒಂದಲ್ಲ ಒಂದು ಗ್ರಾಮದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುವ ಸುದ್ದಿಗಳು ಕೇಳಿ ಬರುತ್ತಿವೆ. ವಿದ್ಯಾರ್ಥಿಗಳು ಇಷ್ಟೊಂದು ಪ್ರತಿಭಟನೆ ಮಾಡಿದರೂ ಸಾರಿಗೆ ಇಲಾಖೆ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳ ಪಾಲಿನ ಶತ್ರುಗಳಾಗಿದ್ದಾರೆ ಎಂಬ ಗಂಭೀರ ಆರೋಪಗಳಿವೆ.
ನಾಲತವಾಡ ಪಟ್ಟಣ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟುಅಭಿವೃದ್ಧಿ ಹೊಂದಿದೆ. ಇಲ್ಲಿಗೆ ಸುತ್ತಮುತ್ತಲಿಂದ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಬರುತ್ತಾರೆ. ನಾಗಬೇನಾಳ, ವೀರೇಶನಗರ, ಬಿಜ್ಜೂರ, ಅಯ್ಯನಗುಡಿ, ಚವನಭಾವಿ, ಅಡವಿಸೋಮನಾಳ, ಲೋಟಗೇರಿ, ನಾಗಬೆಟ್ಟ, ಮುರಾಳ ಹಳ್ಳಿಯ ವಿದ್ಯಾರ್ಥಿಗಳ ಪಾಲಿನ ಜ್ಞಾನ ದೇಗುಲವಾಗಿರುವ ನಾಲತವಾಡಕ್ಕೆ ಬಸ್ಸಿನ ಸೌಕರ್ಯದ ಕೊರತೆಯಿಂದ ಹಳ್ಳಿಯ ವಿದ್ಯಾರ್ಥಿಗಳ ಬಾಳು ಶಿಕ್ಷಣ ಇಲ್ಲದೇ ಕತ್ತಲೇ ಆವರಿಸಿದೆ. ಇದಕ್ಕೆ ಸಾರಿಗೆ ಇಲಾಖೆಯೇ ಪರೋಕ್ಷ ಕಾರಣ ಎನ್ನಲಾಗುತ್ತಿದೆ.
ಒಂದೊಳ್ಳೆ ಕಾರ್ಯದ ಮೂಲಕ ಸುದ್ದಿಯಾದ ಯತ್ನಾಳ್ PA
ವಿದ್ಯಾರ್ಥಿಗಳ ಜೀವಕ್ಕೆ ಕುತ್ತು:
ಬುಧವಾರ ಸಂಜೆ ಪಟ್ಟಣದ ಬಸ್ ನಿಲ್ದಾಣದಲ್ಲಿ ವೀರೇಶನಗರ ಹಾಗೂ ನಾಗಬೇನಾಳ ಗ್ರಾಮದ ನೂರಾರು ವಿದ್ಯಾರ್ಥಿಗಳು ಬಸ್ ಇಲ್ಲದಿರುವ ಕಾರಣ ಕೆಲಹೊತ್ತು ಪ್ರತಿಭಟಿಸಿದರು. ದಿನ ನಿತ್ಯ ಶಾಲೆ ಬಿಡುವ ಸಮಯದಲ್ಲಿ ಬಸ್ಸಿನ ಸೌಕರ್ಯ ಇಲ್ಲದೆ ನಾವು ರಾತ್ರಿ 7 ಗಂಟೆಗೆ ಮನೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದರು. ನಾಗಬೇನಾಳ ಹಾಗೂ ವೀರೇಶನಗರ ಗ್ರಾಮದಿಂದ ಸುಮಾರು ನೂರಕ್ಕು ಹೆಚ್ಚು ವಿದ್ಯಾರ್ಥಿಗಳು ಬರುವ ಕಾರಣ ಬಸ್ಸಿನ ಕೊರತೆಯಿಂದ ವಿದ್ಯಾರ್ಥಿಗಳು ಸಿಕ್ಕ ಬಸ್ಸಿಗೆ ಜೋತು ಬಿದ್ದು ಹಾಗೂ ಬಸ್ಸಿನ ಚಾವಣಿ ಮೇಲೆ ಕುಳಿತು ಗ್ರಾಮಕ್ಕೆ ತೆರಳುತ್ತಿದ್ದಾರೆ. ಜೋತು ಬಿದ್ದು ಹಾಗೂ ಮೇಲ್ಭಾಗದಲ್ಲಿದ್ದ ವಿದ್ಯಾರ್ಥಿಗಳಿಗೆ ಜೀವಕ್ಕೆ ಕುತ್ತು ಎದುರಾಗಿದೆ. ಇನ್ನಾದರೂ ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ.
ನಾಲತವಾಡ ಪಟ್ಟಣಕ್ಕೆ ಶಾಲಾ ಕಾಲೇಜು ಸುತ್ತಮುತ್ತ ಸುಮಾರು 15 ಹಳ್ಳಿಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಆದರೆ ಚಾಲಕರು ಮತ್ತು ನಿರ್ವಾಹಕರು ಉದ್ದೇಶಪೂರ್ವಕವಾಗಿಯೇ ಶಾಲಾ ಸಮಯಕ್ಕೆ ಆಗಮಿಸುವುದಿಲ್ಲ. ನಾವು ಕೂಡ ಈ ಬಗ್ಗೆ ಸಾಕಷ್ಟುಹೋರಾಟ ಮಾಡಿದ್ದೇವೆ. ಪ್ರತಿಭಟನೆ ಮಾಡಿದ ತಕ್ಷಣ ಎರಡು ದಿನ ಬಸ್ಸು ಓಡಿಸುವಹಾಗೆ ಮಾಡುತ್ತಾರೆ. ಮತ್ತೇ ತಮ್ಮ ಹಳೆ ಚಾಳಿಯನ್ನು ಮುಂದುವರಿಸುತ್ತಾರೆ ಎಂದು ಕರವೇ ಅಧ್ಯಕ್ಷ (ಪ್ರವೀಣಶಟ್ಟಿ ಬಣ)ಮಲ್ಲು ಗಂಗನಗೌಡ ತಿಳಿಸಿದ್ದಾರೆ.
ಶಾಲೆ ಬಿಟ್ಟನಂತರ ಯಾವುದೇ ಬಸ್ ಇಲ್ಲ. ಈ ಮೊದಲು 5 ಗಂಟೆಗೆ ಬಸ್ ಬಿಡಲಾಗುತ್ತಿತ್ತು. ಆದರೆ ಈಗ ಮತ್ತೇ ಬಂದ್ ಮಾಡಲಾಗಿದೆ. ದಿನ ನಿತ್ಯ ರಾತ್ರಿ 7 ಗಂಟೆವರೆಗೆ ಬಸ್ ನಿಲ್ದಾಣದಲ್ಲಿಯೇ ಬಸ್ಸಿಗಾಗಿ ಕಾಯುವ ಪರಿಸ್ಥಿತಿ ಇದೆ. ಬಂದಂತಹ ಬಸ್ಸಿಗೆ ಜೋತು ಬಿದ್ದು ಹೋಗಬೇಕು. ಚಿಕ್ಕ ಬಾಲಕರು ಕೂಡ ಬಸ್ಸಿನ ಮೇಲ್ಭಾಗದಲ್ಲಿ ಹತ್ತಿ ಬರುವ ದುಸ್ಥಿತಿ ಇದೆ ಎಂದು ನಾಗಬೇನಾಳ ಗ್ರಾಮದ ವಿದ್ಯಾರ್ಥಿನಿ ಜ್ಯೋತಿ ಗೌಡರ ಹೇಳಿದ್ದಾರೆ.