Karnataka politics : ಅಂದು ದೇವೇಗೌಡರ ಮನೆ ಕಾಯುತ್ತಿದ್ದವರು ಇಂದು ಅವರ ವಿರುದ್ಧ ಮಾತಾಡುತ್ತಾರೆ

By Kannadaprabha NewsFirst Published Dec 5, 2021, 11:25 AM IST
Highlights
  • ಜೆಡಿಎಸ್‌ನಿಂದ ಬೆಳೆದು ಎಲ್ಲ ರೀತಿಯಲ್ಲಿ ಅಧಿಕಾರ ಅನುಭವಿಸಿದವರು ಇಂದು ಪಕ್ಷ ಹಾಗೂ ನಾಯಕರ ವಿರುದ್ಧವೇ ಮಿತಿ ಇಲ್ಲದಂತೆ ಮಾತನಾಡುತ್ತಿದ್ದಾರೆ 
  • ಶಾಸಕ ಡಿ.ಸಿ.ತಮ್ಮಣ್ಣ ಕಾಂಗ್ರೆಸ್‌, ಬಿಜೆಪಿ ನಾಯಕರ ವಿರುದ್ಧ   ಆಕ್ರೋಶ 

 ಮದ್ದೂರು (ಡಿ.05):  ಜೆಡಿಎಸ್‌ನಿಂದ (JDS) ಬೆಳೆದು ಎಲ್ಲ ರೀತಿಯಲ್ಲಿ ಅಧಿಕಾರ ಅನುಭವಿಸಿದವರು ಇಂದು ಪಕ್ಷ ಹಾಗೂ ನಾಯಕರ ವಿರುದ್ಧವೇ ಮಿತಿ ಇಲ್ಲದಂತೆ ಮಾತನಾಡುತ್ತಿದ್ದಾರೆ ಎಂದು ಶಾಸಕ ಡಿ.ಸಿ.ತಮ್ಮಣ್ಣ (DC Thammanna) ಕಾಂಗ್ರೆಸ್‌ (Congress), ಬಿಜೆಪಿ (BJP) ನಾಯಕರ ವಿರುದ್ಧ ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.  ಪಟ್ಟಣದ ಲೀಲಾವತಿ ಬಡಾವಣೆಯ ಗಣೇಶ ಸಮುದಾಯ ಭವನದಲ್ಲಿ ವಿಧಾನ ಪರಿಷತ್‌ ಚುನಾವಣೆ (MLC Election) ಜೆಡಿಎಸ್‌ ಅಭ್ಯರ್ಥಿ ಎನ್‌. ಅಪ್ಪಾಜಿಗೌಡ ಪರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಜೆಡಿಎಸ್‌ ಮತ್ತು ನಾಯಕರ ವಿರುದ್ಧ ಟೀಕೆ ಮಾಡಿರುವ ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

ಹಲವು ವರ್ಷಗಳ ಹಿಂದೆ ಮಾಜಿ ಸಚಿವ ದಿ.ಎಸ್‌.ಡಿ.ಜಯರಾಂ ಕಚೇರಿಯಲ್ಲಿ ಬಂದವರಿಗೆ ಕುರ್ಚಿ ಹಾಕುವ ಕೆಲಸ ಮಾಡುತಿದ್ದ ಇದೇ ವ್ಯಕ್ತಿ ಜೆಡಿಎಸ್‌ ಪಕ್ಷದಲ್ಲಿ ಗುರುತಿಸಿಕೊಂಡು ಅವರು ಕೇವಲ 50 ಸಾವಿರ ರುಗಳಿಗಾಗಿ ಮಾಜಿ ಪ್ರಧಾನಿ ದೇವೇಗೌಡರ (HD Devegowda) ಮನೆ ಕಾಯುತ್ತಿದ್ದರು ಎಂದು ಟೀಕಿಸಿದರು.

ಈಗ ಇದೇ ವ್ಯಕ್ತಿ ಶಾಸಕರು, ಸಂಸದರು, ಮಂತ್ರಿಯಾಗಿ ಎಲ್ಲ ಅಧಿಕಾರ ಅನುಭವಿಸಿ, ಕಾಂಗ್ರೆಸ್‌ಗೆ ಸೇರಿ ನಾಲಿಗೆ ಮಿತಿ ಇಲ್ಲದಂತೆ ಜೆಡಿಎಸ್‌ (JDS) ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ. ಪಕ್ಷದ ನಾಯಕರ ಬಗ್ಗೆ ಮಾತನಾಡುವ ಇಂತಹ ವ್ಯಕ್ತಿಗಳು ಯಾರಿಗೂ ಒಳ್ಳೆಯದನ್ನು ಮಾಡುವುದು ಬೇಡ. ಆದರೆ, ಕೆಟ್ಟದಾಗಿ ಮಾತನಾಡುವುದಕ್ಕೆ ಸ್ವಯಂ ಕಡಿವಾಣ ಹಾಕಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ಮದ್ದೂರು ಕ್ಷೇತ್ರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ (karnayaka BJP Govt) ಅನುದಾನ ನೀಡುತ್ತಿದೆ. ಅದನ್ನು ತಮ್ಮ ಶ್ರಮ ಎಂದು ಕ್ಷೇತ್ರ ಶಾಸಕ ಬಿಂಬಿಸಿಕೊಳ್ಳುತ್ತಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ (KC Narayana Gowda) ಆರೋಪಕ್ಕೆ ಶಾಸಕ ಡಿ.ಸಿ.ತಮ್ಮಣ್ಣ ತಿರುಗೇಟು ನೀಡಿದರು.

ರಾಜ್ಯ ಸರ್ಕಾರ ಕೇವಲ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ (Basavaraja Bommai) ಅಥವಾ ಸಚಿವ ನಾರಾಯಣ ಗೌಡ ಅಪ್ಪಂದಿರ ಸರ್ಕಾರವಲ್ಲ. ರಾಜ್ಯದ ಆರೂವರೆ ಕೋಟಿ ಜನರ ಹಾಗೂ ರಾಜ್ಯದ 224 ಕ್ಷೇತ್ರಗಳ ಶಾಸಕರ ಸರ್ಕಾರವಾಗಿದೆ. ಶಾಸಕರು ಯಾವುದೇ ಪಕ್ಷದಲ್ಲಿ ಇರಬಹುದು. ಅದನ್ನು ಬಿಟ್ಟು ಪ್ರಜಾಪ್ರಭುತ್ವದ ನಡವಳಿಕೆ ತಿಳಿದುಕೊಂಡು ಸಚಿವರು ಉತ್ತರ ನೀಡಬೇಕು. ಆದರೆ, ಬಿಜೆಪಿ (BJP) ಸರ್ಕಾರದ ಸಚಿವರಿಗೆ ಇಂತಹ ಜ್ಞಾನ ಹಾಗೂ ಸಂಸ್ಕೃತಿ ಇಲ್ಲ ಎಂದು ಲೇವಡಿ ಮಾಡಿದರು.

ಬಿಜೆಪಿ ನಾಯಕರು ತಮ್ಮದೇ ರಾಜ್ಯ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಈ ಪಕ್ಷ ಅಧಿಕಾರಕ್ಕೆ ಬಂದಾಗ ಕರ್ನಾಟಕ (Karnataka) ಅಭಿವೃದ್ಧಿಯಿಂದ ಹಿಂದೆ ಉಳಿದಿದೆ. ನಾನು ಮದ್ದೂರು ಕ್ಷೇತ್ರದ ಶಾಸಕನಾಗಿ ಆಡಳಿತ ಪಕ್ಷ ಅಥವಾ ವಿರೋಧ ಪಕ್ಷದಲ್ಲೇ ಇರಲಿ ಕ್ಷೇತ್ರ ಅಭಿವೃದ್ಧಿಗೆ ಅಹರ್ನಿಷಿ ದುಡಿಯುತಿದ್ದೇನೆ ಎಂದರು.

ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರಿಕಂಠೇಗೌಡ ಮಾತನಾಡಿ, ಅಧಿಕಾರ ಮುಗಿದು 18 ತಿಂಗಳು ಕಳೆದರೂ ಜಿಪಂ ಹಾಗೂ ತಾಪಂ ಚುನಾವಣೆ ನಡೆಸದ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಮತ ಕೇಳುವ ಯಾವುದೆ ನೈತಿಕ ಹಕ್ಕು ಇಲ್ಲ. ಸ್ಥಳೀಯ ಸಂಸ್ಥೆಗಳ ಮೇಲೆ ಆಳುವ ಬಿಜೆಪಿ ಸರ್ಕಾರಕ್ಕೆ ಪ್ರೀತಿ, ಪ್ರೇಮ ಇಲ್ಲವಾಗಿದೆ. ಸಲ್ಲದ ನೆಪವೊಡ್ಡಿ ಚುನಾವಣೆ ಮುಂದೂಡುತ್ತಿವೆ ಎಂದು ಆರೋಪಿಸಿದರು.

ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಮೀಸಲು ಜಾರಿಗೆ ತಂದರು, ಇದರಿಂದ ಚುನಾವಣೆಗಳಲ್ಲಿ (Election) ಮಹಿಳೆಯರು ಸದಸ್ಯರಾಗಲು ಸಾಧ್ಯವಾಗಿದೆ. ಸ್ಥಳೀಯ ಮಟ್ಟದ ಜನರಿಗೆ ಅಧಿಕಾರ ದೊರಕಿಸಿಕೊಟ್ಟ ಜೆಡಿಎಸ್‌ ಪಕ್ಷಕ್ಕೆ ಪ್ರಾಮಾಣಿಕವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದರು.

ಸಮಾರಂಭದಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌, ಜೆಡಿಎಸ್‌ ಕಾರ್ಯಧ್ಯಕ್ಷ ಕೆ.ದಾಸೇಗೌಡ, ಮನ್ಮುಲ… ಅಧ್ಯಕ್ಷ ಬಿ.ಅರ್‌.ರಾಮಚಂದ್ರ, ನಿರ್ದೇಶಕ ನೆಲ್ಲಿಗೆರೆ ಬಾಲು, ಪುರಸಭಾ ಅಧ್ಯಕ್ಷ ಸುರೇಶ್‌ ಕುಮಾರ್‌, ಉಪಾಧ್ಯಕ್ಷೆ ಸುಮಿತ್ರ ರಮೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್‌, ಮುಖಂಡ ಮಾದನಾಯಕನಹಳ್ಳಿ ರಾಜಣ್ಣ, ಪುರಸಭಾ ಸದಸ್ಯರು ಇದ್ದರು.

click me!