Karnataka Rains: ರೈತರನ್ನು ಕಂಗೆಡಿಸಿದ ಅಕಾಲಿಕ ಮಳೆ..!

By Kannadaprabha NewsFirst Published Dec 5, 2021, 11:15 AM IST
Highlights

*   ಮುಂಗಾರು, ಹಿಂಗಾರೂ ಇಲ್ಲದೇ ಕೈ ಚೆಲ್ಲಿ ಕುಳಿತ ರೈತ
*   ಹಿಂಗಾರು ಬೆಳೆಗಳಾದ ಕಡಲೆ, ಗೋದಿ, ಕುಸುಬೆ, ಜೋಳಕ್ಕೆ ನಾನಾ ರೋಗಗಳ ಕಾಟ
*   ಹಿಂಗಾರಿಗೆ ಪರ್ಯಾಯ ಬೆಳೆ ಬೆಳೆಯಲು ಕೃಷಿ ಇಲಾಖೆ ರೈತರಿಗೆ ಸಲಹೆ
 

ಧಾರವಾಡ(ಡಿ.05):  ಒಕ್ಕಿದ್ದ ಮುಂಗಾರು ಬೆಳೆಗಳು ಕಣದಲ್ಲಿ ಹಾಳಾದವು. ಬೀಜ ಬಿತ್ತಿ, ಗೊಬ್ಬರ ಹಾಕಿ ಪೋಷಿಸಿದ್ದ ಹೊಲದಲ್ಲಿರುವ ಹಿಂಗಾರು ಬೆಳೆಗಳು ಅತಿಯಾದ ಮಳೆಯಿಂದಾಗಿ(Rain) ರೋಗಗಳಿಗೆ ತುತ್ತಾಗುತ್ತಿವೆ. ಒಟ್ಟಾರೆ ಕಳೆದ ಒಂದೆರಡು ವಾರಗಳಲ್ಲಿ ಸುರಿದ ಹಾಗೂ ಇನ್ನೂ ಬರಬಹುದಾದ ಅಕಾಲಿಕ ಮಳೆಯು ಅಕ್ಷರಶಃ ರೈತರನ್ನು(Farmers) ಕಂಗೆಡಿಸಿದೆ.

ಹವಾಮಾನ ವೈಪರೀತ್ಯದಿಂದ(Climate Anomaly) ಬೀಳುತ್ತಿರುವ ಮಳೆಯು ಜಿಲ್ಲೆಯ ರೈತರಿಗೆ ಕಂಟಕವಾಗಿದ್ದು ಸಾವಿರಾರು ಹೆಕ್ಟೇರ್‌ ಪ್ರದೇಶದ ಬತ್ತ, ಗೋವಿನಜೋಳ, ಹೂವು, ತರಕಾರಿ ಸೇರಿದಂತೆ ಹಲವು ಮುಂಗಾರು ಬೆಳೆಗಳು(Crop Damage) ಈಗಾಗಲೇ ಹಾಳಾಗಿವೆ. ಇದೀಗ ಅತಿವೃಷ್ಟಿಯಿಂದ ಮುಂದೆ ಬರಬಹುದಾದ ಹಿಂಗಾರು ಬೆಳೆಗಳಾದ ಕಡಲೆ, ಗೋದಿ, ಹಿಂಗಾರು ಜೋಳ, ಕುಸುಬೆಗೆ ಧಕ್ಕೆ ಬಂದಿದೆ. ಜಿಲ್ಲೆಯಲ್ಲಿ 2 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಹಿಂಗಾರು ಬೆಳೆಗಳನ್ನು ಬಿತ್ತಿದ್ದು ಇಷ್ಟುದಿನಗಳ ಕಾಲ ಬಿದ್ದ ಮಳೆಯಿಂದಾಗಿ ಹಿಂಗಾರು ಬೆಳೆಗಳು ರೋಗಗಳಿಗೆ ತುತ್ತಾಗುತ್ತಿವೆ.

Karnataka Farmers Suicide : ಅಕಾಲಿಕ ಮಳೆಗೆ ಬೆಳೆ ನಷ್ಟ: ಈ ವರೆಗೆ 7 ರೈತರ ಆತ್ಮಹತ್ಯೆ

ಅತಿಯಾದ ಮಳೆಯಿಂದಾಗಿ ಹಿಂಗಾರು ಹಂಗಾಮಿನಲ್ಲಿ ಬೆಳೆಯಲಾದ ಕಡಲೆ ಬೆಳೆಯ ಬೆಳವಣಿಗೆ ಕುಂಠಿತವಾಗಿದೆ. ಮಳೆಯಾಗಿ ನೀರು ನಿಂತ ಭೂಮಿಯಲ್ಲಿ(Land) ಕಡಲೆ ಹುಟ್ಟುತ್ತಿಲ್ಲ. ಹುಟ್ಟಿದ ಕಡಲೆಯ ಹುಳಿ ತೊಳೆದು ಹೋಗದ ಕಾರಣ ಹೂ ಬಿಡುತ್ತಿಲ್ಲ. ಜೊತೆಗೆ ತುಕ್ಕು ರೋಗ ಬರುತ್ತಿದೆ. ಇನ್ನು ಗೋದಿ ಸ್ಥಿತಿ ಹೊರತಾಗಿಲ್ಲ. ಅದರ ಬೆಳವಣಿಗೆ ಸಹ ಕುಂಠಿತವಾಗಿದ್ದು ಕೆಂಪು ರೋಗ ಬರುತ್ತಿದೆ ಎಂದು ರೈತರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಧಾರವಾಡ(Dharwad) ಸಮೀಪದ ಲಕಮಾಪೂರ, ಯಾದವಾಡ, ಉಪ್ಪಿನ ಬೆಟಗೇರಿ, ಅಮ್ಮಿನಬಾವಿ, ಗರಗ ಹಾಗೂ ಸುತ್ತಮುತ್ತಲಿನ ಕೃಷಿ(Agriculture) ಭೂಮಿಯಲ್ಲಿ ಈ ರೀತಿಯ ರೋಗಗಳು ಕಾಣಿಸಿಕೊಂಡಿವೆ. ಕುಂದಗೋಳ ಮತ್ತು ಇತರೆಡೆ ಮೆಣಸಿನಕಾಯಿ ಹಣ್ಣುಕೊಳೆ ರೋಗ ಬರುತ್ತಿದೆ. ಇದರಿಂದ ಬೆಳೆಯ ತೂಕ ಕಡಿಮೆಯಾಗುತ್ತದೆ. ಭೂಮಿಯಲ್ಲಿ ತೇವಾಂಶ ಹೆಚ್ಚಾದ ಕಾರಣ ರೋಗ ಉಲ್ಭಣವಾಗುತ್ತಿದೆ ಎನ್ನುವುದು ರೈತರಿಗೆ ಆತಂಕ ತಂದಿದೆ.

ಚಳಿಯ ವಾತಾವರಣದಲ್ಲಿ ಬರಬೇಕಾದ ಕಡಲೆ, ಗೋದಿ, ಕುಸುಬೆ ಬೆಳೆಗಳಿಗೆ ಮಳೆ ಹಾಗೂ ಮೋಡ ಕವಿದ ವಾತಾವರಣ ಹೊಂದಾಣಿಕೆಯಾಗುತ್ತಿಲ್ಲ. ಆದ್ದರಿಂದ ಕೃಷಿ ಇಲಾಖೆಯು(Department of Agriculture) ರೈತರಿಗೆ ಪರ್ಯಾಯ ಬೆಳೆಗಳ ಸಲಹೆ ಸಹ ನೀಡಿದೆ. ಕಡಲೆ ಬೆಳೆ ಸಂಪೂರ್ಣ ನಾಶವಾದ ಪರಿಸ್ಥಿತಿ ಇದ್ದಲ್ಲಿ ನೀರಾವರಿ ಸೌಕರ್ಯವಿರುವ ಕಡೆ ಗೋವಿನ ಜೋಳ ಬೆಳೆಯಬಹುದು. ಮಳೆಯಾಶ್ರಿತ ಪ್ರದೇಶದಲ್ಲಿ ಅಗಸಿ, ಕೋತಂಬರಿ ಬೆಳೆಯಬಹುದಾಗಿದೆ. ನೀರು ಕೊಡುವ ಸಾಮರ್ಥ್ಯವಿರುವ ಕಡೆ ಅಲಸಂದಿ, ಸಾಸಿವೆ, ಉದ್ದು ಅಥವಾ ಹೆಸರು ಸಹ ಬೆಳೆಯಬಹುದು. ಅಥವಾ ನೀರು ಕೊಡುವ ಸಾಮರ್ಥ್ಯವಿರುವ ಕಡೆ ಸೂರ್ಯಕಾಂತಿ ಮತ್ತು ಗೋಧಿ ಬೆಳೆಯನ್ನು (ಡಿ. 15ರ ವರೆಗೆ) ಬಿತ್ತನೆ ಮಾಡಬಹುದು. ಜನವರಿ ಎರಡನೇ ವಾರದಲ್ಲಿ ಬೇಸಿಗೆ ಶೇಂಗಾ ಬಿತ್ತನೆ ಮಾಡಬಹುದು ಎಂದು ಕೃಷಿ ಇಲಾಖೆ ಸಲಹೆ ನೀಡಿದೆ.

ಇನ್ನು ಅಗತ್ಯಕ್ಕಿಂತ ಹೆಚ್ಚಿನ ಮಳೆಯಾಗಿದ್ದು ರೈತರು ಕೆಲವು ಮಾರ್ಗೋಪಾಯ ಬಳಸಬೇಕು. ಮೊದಲು ಹೊಲದಲ್ಲಿ ನಿಂತಿರುವ ನೀರನ್ನು ಹೊರಹಾಕಲು ಏರ್ಪಾಡು ಮಾಡಬೇಕು. ಹೊಲದಲ್ಲಿ ಅಲ್ಲಲ್ಲಿ ಕಾಲುವೆಗಳನ್ನು ಮಾಡಿ ಹೆಚ್ಚಾದ ನೀರನ್ನು ಬಸಿದು ಹೋಗುವಂತೆ ಮಾಡಬೇಕು. ಮಳೆ ನಿಂತ ಮೇಲೆ ಬೆಳೆಗಳ ಚೈತನ್ಯಕ್ಕೆ ಆಯಾ ಬೆಳೆಗಳಿಗೆ ಸಿಫಾರಸಿನಂತೆ ಸಾರಜನಕವನ್ನು ಮೇಲು ಗೊಬ್ಬರವಾಗಿ ಕೊಡಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

Crop Loss : ಕಣದಲ್ಲೇ ಕೊಳೆತ ಬೆಳೆಗಳಿಗೆ ಸಿಗಲ್ಲ ಸರ್ಕಾರದ ಪರಿಹಾರ!

ಒಂದಿಷ್ಟು ವರ್ಷಗಳ ಕಾಲ ಮಳೆ ಇಲ್ಲದೇ ಬರದಿಂದ ನಲುಗಿದೆವು. 2-3 ವರ್ಷಗಳಿಂದ ಬಿಸಿಲೇ ಬೀಳುತ್ತಿಲ್ಲ. ಜೊತೆಗೆ ಕೊರೋನಾ(Coronavirus), ಲಾಕಡೌನ್‌(Lockdown) ಸಮಸ್ಯೆಯೂ ರೈತರನ್ನು ಕಾಡುತ್ತಿದೆ. ಮುಂಗಾರು ಹಂಗಾಮಿನಲ್ಲಿ ಉತ್ತಮ ಬೆಳೆ ಬಂದಿತ್ತು. ಆದರೆ, ಕೊನೆ ಕ್ಷಣದಲ್ಲಿ ಬಂದ ಮಳೆ ಬೆಳೆಗಳನ್ನು ಹಾಳು ಮಾಡಿತು. ಈಗ ಹಿಂಗಾರಿಗೆ ಸಾಕಷ್ಟು ಖರ್ಚು, ವೆಚ್ಚ ಮಾಡಿದ್ದೆವು. ನೀರಲ್ಲಿ ಹುಣಸೆ ಹಣ್ಣು ತೊಳೆದಂತೆ ಕಡಲೆ, ಗೋದಿ ಬೆಳೆಗಳು ಮಳೆಯಲ್ಲಿ ತೋಯ್ದು ಹೋದವು. ಇನ್ನು ಅವುಗಳ ಬೆಳವಣಿಗೆ ನಿಂತು ಹೋಗಿ ರೋಗಿಗಳಾಗುತ್ತವೆ. ಮತ್ತು ರೈತರೂ ಸಂಕಷ್ಟದಲ್ಲಿಯೇ ಉಳೀಯಬೇಕಾಗುತ್ತದೆ ಎಂದು ಯಾದವಾಡ ರೈತ ವಿಠ್ಠಲ ದಿಂಡಲಕೊಪ್ಪ ಬೇಸರ ವ್ಯಕ್ತಪಡಿಸುತ್ತಾರೆ.

2021-22ನೇ ಸಾಲಿನಲ್ಲಿ ಸುರಿದ ಅತಿಯಾದ ಮಳೆಯಿಂದ ಉಂಟಾದ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ ಹಾನಿ ವಿವರಗಳನ್ನು ಸಮೀಕ್ಷೆ(Survey) ಮೂಲಕ ಆಯಾ ಇಲಾಖೆಗಳಿಂದ ಪಡೆದು ಪರಿಹಾರ ತಂತ್ರಾಂಶದಲ್ಲಿ ನಿತ್ಯ ದಾಖಲು ಮಾಡಲಾಗುತ್ತಿದೆ. ಪರಿಹಾರ(Compensation) ಮೊತ್ತವನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಇಲ್ಲಿಯ ವರೆಗೆ ಜಿಲ್ಲೆಯ 11748 ರೈತರಿಗೆ 8.3 ಕೋಟಿ ಪರಿಹಾರ ಧನ ರೈತರ ಖಾತೆಗೆ ಜಮೆ ಮಾಡಲಾಗಿದ್ದು ಈ ಕಾರ್ಯ ಮುಂದುವರೆದಿದೆ ಅಂತ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.  
 

click me!