
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾ ಪ್ರದೇಶದಲ್ಲಿ ಯುವತಿ ಆತ್ಮ*ಹತ್ಯೆ ಮಾಡಿಕೊಂಡಿರುವ ಪ್ರಕರಣ ಇದೀಗ ರಾಜಕೀಯ ವಲಯದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ. ಕಾರಣ ಯುವತಿ ಗಗನಸಖಿಯಾಗಬೇಕೆಂದು ಕನಸು ಕಟ್ಟಿಕೊಂಡು ಓದಿಕೊಂಡಿದ್ದ ಯುವತಿ. ಆದರೆ ಆಕೆಗೆ ರಾಜಕೀಯ ನಾಯಕಿಯ ಮಗನ ನಿರಂತರ ಕಿರುಕುಳ ಮತ್ತು ಅವಾಚ್ಯ ಪದಗಳಿಂದ ನಿಂದಿಸಿದ ಕಾರಣ ಇಂದು ಪ್ರಾಣಬಿಟ್ಟಿದ್ದಾಳೆ. ಆ ಹೆಣ್ಣು ಮಗಳ ಪೋಷಕರು ನ್ಯಾಯಕ್ಕಾಗಿ ಅಲೆಯುತ್ತಿದ್ದಾರೆ. ಜೆಡಿಎಸ್ ನಾಯಕಿ ಚೈತ್ರಾ ಕೊಠಾರಕರ ಪುತ್ರ ಚಿರಾಗ್ ಕೊಠಾರಕರ ಕಿರುಕುಳವೇ ತನ್ನ ಮಗಳು ಆತ್ಮ*ಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಮೃತ ಯುವತಿಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಕದ್ರಾದ ಕೆಪಿಸಿ ಕಾಲೋನಿಯಲ್ಲಿ ಜನವರಿ 9ರಂದು ರಿಶೇಲ್ ಕಿಸ್ತೋದ್ ಡಿಸೋಜಾ ಎಂಬ ಯುವತಿ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ರಿಶೇಲ್ ತಾಯಿ ರೀನಾ ಕ್ರಿಸ್ತೋದ್ ಡಿಸೋಜಾ ಹಾಗೂ ತಂದೆ ಕಿಸ್ತೋದ್ ಡಿಸೋಜಾ ಅವರು ಕದ್ರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೃತ ಯುವತಿಯ ತಂದೆ ಕಿಸ್ತೋದ್ ಡಿಸೋಜಾ ನೀಡಿರುವ ದೂರಿನ ಪ್ರಕಾರ, ತಾಲೂಕಿನ ಬಾಡ ನಂದನಗದ್ದಾ ಗ್ರಾಮದ ಚಿರಾಗ್ ಕೊಠಾರಕರ ಎಂಬಾತ ತನ್ನ ಮಗಳೊಂದಿಗೆ ನಿರಂತರವಾಗಿ ದೂರವಾಣಿ ಕರೆ ಹಾಗೂ ವಾಟ್ಸ್‌ಆಪ್ ಮೂಲಕ ಸಂಪರ್ಕದಲ್ಲಿದ್ದು, ಪ್ರೀತಿಸುವುದಾಗಿ ಹೇಳುತ್ತಿದ್ದನು. ಮಗಳು ಆತನ ಪ್ರಸ್ತಾಪವನ್ನು ನಿರಾಕರಿಸಿದಾಗ,
“ನೀನು ಬದುಕಿದ್ದೂ ಪ್ರಯೋಜನವಿಲ್ಲ, ಹೇಗಾದರೂ ಸತ್ತು ಹೋಗು” ಎಂದು ಹೇಳಿ ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ ಈ ನಿರಂತರ ಮಾನಸಿಕ ಹಿಂಸೆಯಿಂದ ಮನನೊಂದ ರಿಶೇಲ್ ಆತ್ಮ*ಹತ್ಯೆಗೆ ಶರಣಾಗಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೃತ ರಿಶೇಲ್ ಡಿಸೋಜಾ ಗಗನಸಖಿ (ಕ್ಯಾಬಿನ್ ಕ್ರೂ) ಕೋರ್ಸ್ ಮುಗಿಸಿಕೊಂಡಿದ್ದು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನಲ್ಲಿ ಶಿಕ್ಷಣ ಮುಂದುವರಿಸುತ್ತಿದ್ದಳು. ಈ ಅವಧಿಯಲ್ಲಿ ಚಿರಾಗ್ ಕೊಠಾರಕರ ಆಕೆಗೆ ಪದೇಪದೇ ಕರೆ ಮಾಡಿ ಪ್ರೀತಿಸುವಂತೆ ಒತ್ತಡ ಹಾಕುತ್ತಿದ್ದನೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಅವನು ಕಿರುಕುಳ ನೀಡುತ್ತಿದ್ದ ವಿಚಾರವನ್ನು ಮಗಳು ನಮಗೆ ತಿಳಿಸಿದ್ದಳು. ನಾವು ಅವಳಿಗೆ ಸಾಕಷ್ಟು ಬಾರಿ ಸಮಾಧಾನ ಹೇಳಿದ್ದೇವೆ ಎಂದು ಪೋಷಕರು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಹತ್ವದ ಮಾಹಿತಿಗಳು ಲಭ್ಯವಾಗಿವೆ. ಆತ್ಮ*ಹತ್ಯೆಗೂ ಮುನ್ನ ರಿಶೇಲ್ ಮತ್ತು ಚಿರಾಗ್ ನಡುವೆ ನಡೆದ ವಾಟ್ಸ್‌ಆಪ್ ಚಾಟಿಂಗ್ ಹಾಗೂ ವಿಡಿಯೋ ಕಾಲ್ ವಿವರಗಳು ಹೊರಬಿದ್ದಿವೆ.
ಚಾಟ್‌ಗಳಲ್ಲಿ ಚಿರಾಗ್ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಹಾಗೂ ಮಾನಸಿಕ ಒತ್ತಡ ಹೇರಿರುವ ಸಂದೇಶಗಳು ಇದ್ದವು ಎನ್ನಲಾಗಿದೆ. ಈ ಸಂದೇಶಗಳಿಗೆ ಪ್ರತಿಕ್ರಿಯೆಯಾಗಿ, ನೀನು ಕೆಟ್ಟದಾಗಿ ಮಾತನಾಡಿದರೆ ನಾನು ಆತ್ಮ*ಹತ್ಯೆ ಮಾಡಿಕೊಳ್ಳುತ್ತೇನೆ ಎಂದು ರಿಶೇಲ್ ಮೆಸೇಜ್ ಮಾಡಿದ್ದಾಳೆ ಎಂಬುದೂ ತಿಳಿದುಬಂದಿದೆ. ಸಾಯುವ ಕೆಲ ಸಮಯದ ಮೊದಲು ವಾಟ್ಸ್‌ಆಪ್ ವಿಡಿಯೋ ಕಾಲ್ ಕೂಡ ನಡೆದಿದ್ದು, ಅದರ ದಾಖಲೆಗಳಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಇನ್ನು ಮೃತ ಯುವತಿಯ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿದ್ದು, ಆಕೆಗೆ ಲೈಂಗಿಕ ದೌರ್ಜನ್ಯ ಎಸಗಿರಬಹುದೆಂಬ ಅನುಮಾನವಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅತ್ಯಾ*ಚಾರದ ನೋವು ಮತ್ತು ಮಾನಸಿಕ ಹಿಂಸೆಯಿಂದಲೇ ಮಗಳು ಈ ಕೃತ್ಯ ಎಸಗಿರಬಹುದೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜನವರಿ 10ರಂದು ಕದ್ರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ. ಆದರೆ ದೂರು ನೀಡಿದರೂ ಇದುವರೆಗೂ ಆರೋಪಿಯನ್ನು ಬಂಧಿಸಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ರಾಜಕೀಯ ಹಿನ್ನೆಲೆಯವನಾಗಿರುವುದರಿಂದ ಪೊಲೀಸರ ಮೇಲೆ ಒತ್ತಡವಿದ್ದು, ಪ್ರಕರಣವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ರಿಶೇಲ್ ಡಿಸೋಜಾ ಕುಟುಂಬಸ್ಥರು ನ್ಯಾಯಕ್ಕಾಗಿ ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ಡಿಜಿಪಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಕೂಡಲೇ ಆರೋಪಿಯನ್ನು ಬಂಧಿಸಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಆರೋಪಿಯ ಬಂಧನ ವಿಳಂಬವಾದರೆ ಕದ್ರಾ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಕುಟುಂಬಸ್ಥರು ಎಚ್ಚರಿಕೆ ನೀಡಿದ್ದಾರೆ. ಈ ಪ್ರಕರಣವು ಇದೀಗ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯಮಟ್ಟದಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದು, ಚಾಟಿಂಗ್, ಕರೆ ದಾಖಲೆಗಳು ಹಾಗೂ ಇತರ ಸಾಕ್ಷ್ಯಾಧಾರಗಳ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.