ಮೀಸಲಾತಿ ಸಿಗುವರೆಗೂ ಹೋರಾಟ ನಿಲ್ಲದು: ಜಯಮೃತ್ಯುಂಜಯ ಸ್ವಾಮೀಜಿ

By Kannadaprabha News  |  First Published Sep 26, 2021, 9:49 AM IST

*  ಡಿಸಿಗಳಿಂದ ಶೀಘ್ರ ವರದಿ ಪಡೆಯಲಿ; ಪಂಚಮಸಾಲಿ ಸ್ವಾಮೀಜಿ
*  ಸದನದಲ್ಲಿ ಸಿಎಂ ನೀಡಿದ ಉತ್ತರ ಮತ್ತೊಮ್ಮೆ ಸ್ಪಷ್ಟಪಡಿಸಲಿ
*  ನಾವು ಯಾರದ್ದೂ ಹಕ್ಕು, ಮೀಸಲು ಕಸಿಯಲು ಹೋರಾಟ ಮಾಡ್ತಿಲ್ಲ
 


ಹುಬ್ಬಳ್ಳಿ(ಸೆ.26):  ಪಂಚಮಸಾಲಿಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಕುರಿತಂತೆ ಎಲ್ಲ ಜಿಲ್ಲಾಧಿಕಾರಿಗಳಿಂದ ಕೇಳಲಾಗಿರುವ ವರದಿಯನ್ನು ಆದಷ್ಟು ಶೀಘ್ರ ತರಿಸಿಕೊಳ್ಳಬೇಕು. ಇದೇ ವಿಚಾರ ಇಟ್ಟುಕೊಂಡು ವರ್ಷಪೂರ್ತಿ ನೆಪ ಹೇಳುತ್ತ ಮುಂದಿನ ಚುನಾವಣೆಗೆ ಕೊಂಡೊಯ್ಯಬಾರದು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ(Jayamrutunjaya Swamiji) ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರ ಎಲ್ಲ ಜಿಲ್ಲಾಧಿಕಾರಿಗಳಿಗೆ ಆಯಾ ಜಿಲ್ಲೆಯಲ್ಲಿನ ಪಂಚಮಸಾಲಿಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಕುರಿತು ವರದಿ ನೀಡುವಂತೆ ಕೇಳಿತ್ತು. ಆದರೆ ಈವರೆಗೂ ವರದಿ ಬಂದಿಲ್ಲ. ಇದೇ ಕಾರಣವನ್ನು ಮುಂದುವರಿಸದೆ ಆದಷ್ಟು ಬೇಗ ವರದಿ ತರಿಸಿಕೊಳ್ಳಬೇಕು. ಜತೆಗೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿ ಶೀಘ್ರ ಪಡೆಯಲಿ ಎಂದರು.

Latest Videos

undefined

ಪಂಚಮಸಾಲಿ(Panchamasali) 2ಎ ಮೀಸಲಾತಿ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದನದಲ್ಲಿ ನೀಡಿದ ಉತ್ತರವನ್ನು ಮತ್ತೊಮ್ಮೆ ಸ್ಪಷ್ಟವಾಗಿ ತಿಳಿಸಬೇಕು. ಸದನದಲ್ಲಿ ಸಿಎಂ ಉತ್ತರ ನೀಡುವಾಗ ಗದ್ದಲವಿತ್ತು. ಹೀಗಾಗಿ ನಮಗೆ ಸ್ಪಷ್ಟವಾಗಿ ತಲುಪಿಲ್ಲ. ಮತ್ತೊಮ್ಮೆ ಅವರು ತಮ್ಮ ಗೃಹ ಕಚೇರಿಯಲ್ಲಿ ಹೇಳಬೇಕು. ಸದನದಲ್ಲಿ ಬಸನಗೌಡ ಯತ್ನಾಳ್‌ ಪ್ರಶ್ನೆಗೆ ಮುಖ್ಯಮಂತ್ರಿಗಳೇ ಉತ್ತರಿಸಿರುವುದು ನಮ್ಮ ಹೋರಾಟಕ್ಕೆ ಪೂರಕ ಸ್ಪಂದನೆ ಸಿಕ್ಕಂತಾಗಿದೆ ಎಂದರು.

ಪಂಚಮಸಾಲಿ ಹೋರಾಟ ಹತ್ತಿಕ್ಕಲು ಷಡ್ಯಂತ್ರ: ಕೂಡಲ ಶ್ರೀ

ದಕ್ಷಿಣ ಕರ್ನಾಟಕದಲ್ಲಿ ಕೆಲವರು ತಪ್ಪು ತಿಳಿವಳಿಕೆಯ ಕಾರಣದಿಂದ ಹೋರಾಟಕ್ಕೆ ವಿರೋಧ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ವಿರೋಧ ವ್ಯಕ್ತಪಡಿಸಿರುವ ಆಯಾ ಸಮಾಜದ ಮುಖಂಡರ ಜತೆಗೆ ಚರ್ಚಿಸಿ ಮನವರಿಕೆ ಮಾಡಿಕೊಡಲಾಗುವುದು. ನಾವು ಯಾರದ್ದೇ ಮೀಸಲಾತಿ(Reservation), ಹಕ್ಕನ್ನು ಕಿತ್ತುಕೊಳ್ಳಲು ಮುಂದಾಗುವುದಿಲ್ಲ. ಅಷ್ಟಕ್ಕೂ ಹೆಚ್ಚಿನ ಆಕ್ಷೇಪವಿದ್ದರೆ ಕೋರ್ಟ್‌ಗೆ ಹೋಗಲಿ. ಆದರೆ, ಮೀಸಲು ಕೊಡಬೇಡಿ ಎನ್ನಲು ಬರುವುದಿಲ್ಲ ಎಂದರು.

ದಾವಣಗೆರೆಯಲ್ಲಿ ಸೆ. 30ರಂದು ಇಲ್ಲಿವರೆಗೆ ಹೋರಾಟಕ್ಕೆ ಸಹಕಾರ ನೀಡುತ್ತಿರುವವರನ್ನು ಸನ್ಮಾನಿಸಲಾಗುವುದು. ಸುಮಾರು 50 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ. 2ಎ ಮೀಸಲಾತಿ ಕುರಿತು ನಮ್ಮ ಹಾಗೂ ಹರಿಹರ ಪೀಠದ ಸ್ವಾಮೀಜಿಗಳ ಉದ್ದೇಶ ಒಂದೇ ಆಗಿದೆ. ನಾವು ಹೋರಾಟದ ಒಳಗಿದ್ದರೆ, ಅವರು ಹೊರಗಿದ್ದಾರೆ ಅಷ್ಟೇ ಎಂದರು.

ಮತ್ತೊಂದು ಪೀಠ ರಚನೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ಕೆಲವು ಅತೃಪ್ತ ಆತ್ಮಗಳು ನಮ್ಮಲ್ಲೆ ಕೆಲವರಿಗೆ ಹಣದ ಆಸೆ, ಆಮಿಷ ತೋರಿ ಆ ಮೂಲಕ ಹೋರಾಟ ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದಕ್ಕೆ ನಾವು ಲಕ್ಷ್ಯ ಕೊಡುವುದಿಲ್ಲ. ನಮ್ಮ ಹೋರಾಟ ಏನಿದ್ದರೂ 2ಎ ಮೀಸಲಾತಿ ಪಡೆಯುವತ್ತ ಮಾತ್ರ. ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿಸಿರುವ ಜಾತಿ ಗಣತಿ ಕುರಿತು ಪ್ರತಿಕ್ರಿಯೆ ನೀಡಲ್ಲ ಎಂದರು.

ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಕುರಿತಂತೆ ಉತ್ತರಿಸಿ, ಮೊದಲು ನಮ್ಮ ಸಮಾಜದ ಮಕ್ಕಳಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇವೆ. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ಹೋರಾಟದಲ್ಲಿ ನಾವು ಗೆದ್ದಿದ್ದೇವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಉತ್ತರಿಸುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಾಬುಗೌಡ ಪಾಟೀಲ್‌, ಡಾ. ಬಿ.ಎಸ್‌. ಪಾಟೀಲ್‌, ವೀರೇಶ ಉಂಡಿ, ನಾಗರಾಜ ಗೌರಿ ಇತರರಿದ್ದರು.

ಕ್ರಾಂತಿಯ ಹೋರಾಟಕ್ಕೂ ಸಿದ್ಧ

ಮಾಜಿ ಶಾಸಕ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಸರ್ಕಾರ ತೆಗೆದುಕೊಂಡ ಆರು ತಿಂಗಳ ಕಾಲಾವಧಿ ಮುಗಿದ ಹಿನ್ನೆಲೆಯಲ್ಲಿ ಪುನಃ ಪ್ರತಿಭಟನೆ, ಹೋರಾಟ ಮುಂದುವರಿದಿದೆ. ನಮ್ಮ ಹೋರಾಟಕ್ಕೆ ಮುಖ್ಯಮಂತ್ರಿ ಆಗುವ ಪೂರ್ವದಲ್ಲಿ ಬಸವರಾಜ ಬೊಮ್ಮಾಯಿ ಬೆಂಬಲ ನೀಡಿದ್ದರು. ಸಿಎಂ ಆದ ಬಳಿಕವೂ ಸಹಕಾರ ನೀಡುವ ಭರವಸೆ ನೀಡಿದ್ದರು. ಆದರೆ, ಸರ್ಕಾರದ ಧೋರಣೆ ನಮಗೆ ತೃಪ್ತಿಕರವಾಗಿಲ್ಲ. ಅಕ್ಟೋಬರ್‌ ಒಂದನೇ ತಾರೀಖಿನ ಒಳಗಾಗಿ ನಿರ್ಧಾರವನ್ನು ಪ್ರಕಟಿಸಲಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಯಲಿದೆ. ಇಲ್ಲಿವರೆಗೆ ತಾಳ್ಮೆಯಿಂದ ಪಂಚಮಸಾಲಿ ಸಮಾಜ ಹೋರಾಟ ಮಾಡುತ್ತಿದೆ. ಕ್ರಾಂತಿಯ ಹಾದಿ ಹಿಡಿಯಲು ಅವಕಾಶ ನೀಡಬೇಡಿ. ನಾವು ಅದಕ್ಕೂ ಸಿದ್ಧರಾಗಿದ್ದೇವೆ ಎಂದರು.

ಮೀಸಲಾತಿ ಸಿಗುವರೆಗೂ ಹೋರಾಟ ನಿಲ್ಲದು

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪಂಚಮಸಾಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು. ನಗರದ ಗೋಕುಲ ಗಾರ್ಡನ್‌ ಸಭಾಭವನದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಶನಿವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರತಿಜ್ಞಾ ಪಂಚಾಯತ್‌ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಡಿಯೂರಪ್ಪ ಕೊಟ್ಟ ಗಡುವು ಅಂತ್ಯ: ಬೊಮ್ಮಾಯಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸ್ವಾಮೀಜಿ

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಗಾಗಿ 1994ರಿಂದ ಸಮಾಜದ ಜನರನ್ನು ಸಂಘಟಿಸುವ ಜೊತೆಗೆ ಹೋರಾಟ ನಡೆದಿದೆ. ಸಮುದಾಯದ ಮೀಸಲಾತಿಗೆ ಬೀದಿಗಿಳಿದು ಹೋರಾಟ ಮಾಡುವ ಮೂಲಕ ಪಂಚಮಸಾಲಿ ಸಮಾಜ ಬಹಳಷ್ಟುಜನಮನ್ನಣೆ ಪಡೆದಿದೆ. ಹಿಂದೆ ಬಿ.ಎಸ್‌. ಯಡಿಯೂರಪ್ಪ ಅವರು ಸಿಎಂ ಆಗಿದ್ದ ವೇಳೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಸೆ. 15ರವರೆಗೆ ಗಡುವು ನೀಡಿದ್ದರು. ಆದರೆ ಅದನ್ನು ಇಂದಿಗೂ ಸಾಕಾರಗೊಂಡಿಲ್ಲ. ಕೂಡಲೇ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಸರ್ಕಾರ ನೀಡಿದ ಭರವಸೆಯನ್ನು ಈಡೇರಿಸುವ ಕೆಲಸ ಮಾಡಬೇಕು. ಬೊಮ್ಮಾಯಿ ತಮ್ಮ ರಾಜಕೀಯ ಬೆಳವಣಿಗೆಗೆ ಪಂಚಮಸಾಲಿ ಸಮಾಜದ ಬೆಂಬಲ ಇರುವುದಾಗಿ ಹೇಳಿಕೊಂಡಿದ್ದಾರೆ. ಅದರ ಋುಣ ತೀರಿಸುವ ಮೂಲಕ ಮುಂದಿನ ಮಹಾನ್‌ ನಾಯಕರಾಗಿ ಹೊರಹೊಮ್ಮಬೇಕು ಎಂದು ಶ್ರೀಗಳು ಮನವಿ ಮಾಡಿದರು.

ಅಖಿಲ ಭಾರತ ಪಂಚಮಸಾಲಿ ಮಹಾಸಭಾದ ರಾಷ್ಟ್ರಾಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಪಂಚಮಸಾಲಿ ಸಮಾಜದ ಹೋರಾಟ ಯಾವುದೇ ರಾಜಕೀಯ ಉದ್ದೇಶದಿಂದ ನಡೆಯುತ್ತಿಲ್ಲ. ನಮ್ಮ ಸಮುದಾಯದ ಭವಿಷ್ಯದ ಹಿತ ದೃಷ್ಟಿಯಿಂದ 2ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ಸಚಿವರು, ಶಾಸಕರು ಹಾಗೂ ಸಮಾಜದ ಮುಖಂಡರು, ಯುವಕರು ಸೇರಿದಂತೆ ಪ್ರತಿಯೊಬ್ಬರೂ ಈ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದರು. ಕೂಡಲೇ ಸರ್ಕಾರ 2ಎ ಮೀಸಲಾತಿ ಘೋಷಿಸುವ ಮೂಲಕ ಆದೇಶವನ್ನು ಹೊರಡಿಸಬೇಕು. ಒಂದು ವೇಳೆ ಸರ್ಕಾರ ಸಮಾಜಕ್ಕೆ ಮೀಸಲಾತಿ ನೀಡಿದೇ ಹೋದರೆ ಮಾಡು ಇಲ್ಲವೇ ಮಡಿ ಹೋರಾಟ ನಡೆಸುತ್ತೇವೆ ಎಂದರು.

ಮುಖಂಡರಾದ ಮಲ್ಲಿಕಾರ್ಜುನ ಕೋಟಿ, ನಿಂಗಪ್ಪನ ಕರಕಂಟಿ, ನಾಗರಾಜ್‌ ಗೌರಿ, ಮಂಜುನಾಥ ಕುನ್ನೂರು, ಬಾಬುಗೌಡ ಪಾಟೀಲ, ಧಾರವಾಡ ಜಿಲ್ಲಾ ಯುವ ಘಟಕದ ಅಧ್ಯಕ್ಷ ವಿರೇಶ ವುಂಡಿ, ಅರವಿಂದ ಕಟಗಿ, ಚಂದ್ರಶೇಖರ ಮನಗುಂಡಿ ಸೇರಿ ಇತರರಿದ್ದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಕಲ್ಪಿಸುವ ನಿಟ್ಟಿನಲ್ಲಿ ಮಹಾಪೀಠವನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಯಾವುದೇ ದುರುದ್ದೇಶ, ಸ್ವಾರ್ಥ ಸಾಧನೆ ಇಲ್ಲ. ಸಮಾಜವನ್ನು ಒಡೆಯಲು ಕೆಲವರು ಮಾಡುತ್ತಿರುವ ಷಡ್ಯಂತ್ರಕ್ಕೆ ಸಮಾಜದ ಜನತೆ ಬಲಿಯಾಗಬಾರದು ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ. 
 

click me!