ಹುನಗುಂದ: 'ಮಾತು ತಪ್ಪುತ್ತಿರುವ ಸಿಎಂ ಯಡಿಯೂರಪ್ಪ'

By Kannadaprabha News  |  First Published Jan 16, 2021, 11:23 AM IST

ಎರಡನೇ ದಿನ ಪೂರೈಸಿದ ಕೂಡಲ ಶ್ರೀಗಳ ಪಾದಯಾತ್ರೆ| ನಮ್ಮದು ಬಡವರ, ಕೂಲಿಕಾರ್ಮಿಕರ, ಶ್ರೀಸಾಮಾನ್ಯರ ಮಠ. ಹೀಗಾಗಿ ನಮ್ಮ ಮಠಕ್ಕೆ ಹಣ ಬೇಕಿಲ್ಲ. ನಾನು ಮಠ ಕಟ್ಟಲು ಬಂದಿಲ್ಲ, ಬದಲಾಗಿ ಸಮಾಜಕ್ಕೆ ನ್ಯಾಯ ಕೊಡಿಸಲು ಬಂದಿದ್ದೇನೆ. ಅವರು ಹಣ ಪಡೆದು ಮಠ ಕಟ್ಟಲಿ. ನಾನು ಸರ್ಕಾರದ ಅನುದಾನ ವಾಪಸ್‌ ನೀಡಿ ಸಮಾಜ ಕಟ್ಟುತ್ತೇನೆ: ಕೂಡಲ ಶ್ರೀ| 


ಹುನಗುಂದ(ಜ.16): ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ಕೈಗೊಂಡ ಬೆಂಗಳೂರವರೆಗಿನ ಪಾದಯಾತ್ರೆ ಎರಡನೇ ದಿನವಾದ ಶುಕ್ರವಾರ ಹುನಗುಂದ ಪಟ್ಟಣದಿಂದ ಆರಂಭಗೊಂಡಿತು. 

ಗುರುವಾರ ಕೂಡಲಸಂಗಮದಿಂದ ಆರಂಭಗೊಂಡಿದ್ದ ಪಾದಯಾತ್ರೆ ರಾತ್ರಿ 10ರ ಸುಮಾರಿಗೆ ಹುನಗುಂದ ಪಟ್ಟಣ ತಲುಪಿ, ಪಟ್ಟಣದಲ್ಲಿರುವ ಚಿತ್ತರಗಿ ಸಂಸ್ಥಾನ ಮಠದಲ್ಲಿ ತಂಗಲಾಗಿತ್ತು. ಶುಕ್ರವಾರ ಬೆಳಗ್ಗೆ ಮಠದಿಂದ ಆರಂಭಗೊಂಡ ಪಾದಯಾತ್ರೆ ಇಳಕಲ್ಲ, ಹಿರೇಕೊಡಗಲಿ ಮಾರ್ಗವಾಗಿ ಕುಷ್ಟಗಿ ಸಮೀಪ ಕಡೆಕೊಪ್ಪದಲ್ಲಿ ತಂಗಲಿದೆ. ಪಾದಯಾತ್ರೆಯ ಮಾರ್ಗಮಧ್ಯೆ ಚಿತ್ತರಗಿಯ ಗುರುಮಹಾಂತ ಸ್ವಾಮೀಜಿ ಅವರು ಬಸವ ಜಯಮೃತ್ಯುಂಜಯ ಸ್ವಾಮೀಜಿಗಳನ್ನು ಭೇಟಿಯಾಗಿ ಶುಭ ಕೋರಿದರು. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸೇರಿ ಬಾರಿ ಸಂಖ್ಯೆಯ ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Tap to resize

Latest Videos

ನಮ್ಮದು ಶ್ರೀಸಾಮಾನ್ಯರ ಮಠ: ಕೂಡಲ ಶ್ರೀ

ಪಾದಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು, ಮುಖ್ಯಮಂತ್ರಿ ಯಡಿಯೂರಪ್ಪನವರು ಕೊಟ್ಟ ಮಾತಿಗೆ ತಪ್ಪುವುದಿಲ್ಲ ಅಂದುಕೊಂಡಿದ್ದೆವು. ಆದರೆ, ಅವರು ನಿನ್ನೆಯಿಂದ ಮಾತು ತಪ್ಪುತ್ತಿದ್ದಾರೆ ಎಂಬ ಸಂಶಯ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಪಾದಯಾತ್ರೆ ರದ್ದು ಮಾಡುವ ಪ್ರಶ್ನೆಯೇ ಇಲ್ಲ: ಜಯಮೃತ್ಯುಂಜಯ ಶ್ರೀ

ನಮ್ಮದು ಬಡವರ, ಕೂಲಿಕಾರ್ಮಿಕರ, ಶ್ರೀಸಾಮಾನ್ಯರ ಮಠ. ಹೀಗಾಗಿ ನಮ್ಮ ಮಠಕ್ಕೆ ಹಣ ಬೇಕಿಲ್ಲ. ನಾನು ಮಠ ಕಟ್ಟಲು ಬಂದಿಲ್ಲ, ಬದಲಾಗಿ ಸಮಾಜಕ್ಕೆ ನ್ಯಾಯ ಕೊಡಿಸಲು ಬಂದಿದ್ದೇನೆ. ಅವರು ಹಣ ಪಡೆದು ಮಠ ಕಟ್ಟಲಿ. ನಾನು ಸರ್ಕಾರದ ಅನುದಾನ ವಾಪಸ್‌ ನೀಡಿ ಸಮಾಜ ಕಟ್ಟುತ್ತೇನೆ. ನಮ್ಮಿಬ್ಬರನ್ನು ಪೀಠಕ್ಕೆ ಕೂಡ್ರಿಸಿದ್ದು ಮೀಸಲಾತಿ ಪಡೆಯೋಕೆ ಹೊರತು ಮಠ ಕಟ್ಟಲಿಕ್ಕೆ ಅಲ್ಲ ಎಂದು ತಿಳಿಸಿದರು.

ಮೀಸಲಾತಿಗೆ ಒತ್ತಾಯಿಸಿ ಬೆಳಗಾವಿ ಸುವರ್ಣ ಸೌಧದ ಎದುರು ಉಪವಾಸ ಸತ್ಯಾಗ್ರಹ ಕೈಗೊಂಡ ಸಂದರ್ಭದಲ್ಲಿ ಹರಿಹರ ಪೀಠದ ಸ್ವಾಮೀಜಿಗಳು ಬೆಂಬಲ ಕೊಟ್ಟಿದ್ದಾರೆ. ಪಾದಯಾತ್ರೆ ಹರಿಹರ ತಲುಪುವ ವೇಳೆಗೆ ಅವರ ಮನಸು ಪರಿವರ್ತನೆಯಾಗಿ ಪಾಲ್ಗೊಳ್ಳುವ ಭರವಸೆ ಇದೆ ಎಂದು ಹೇಳಿದರು.
 

click me!