ಗಲ್ಫ್‌ ಕನ್ನಡಿಗರಿಗೆ ಸಂಕಷ್ಟ: ಕೊರೋನಾ ನೆಗೆಟಿವ್ ಆದ್ರೆ ಮಾತ್ರ ರಾಜ್ಯಕ್ಕೆ ಪ್ರವೇಶ

By Kannadaprabha News  |  First Published Jul 3, 2020, 8:33 AM IST

ಕರ್ನಾಟಕ ಸೇರಿದಂತೆ ದೇಶಾದ್ಯಂತ ಕೊರೋನಾ ಸೋಂಕು ಮೇರೆ ಮೀರುತ್ತಿರುವ ಹಿನ್ನೆಲೆಯಲ್ಲಿ ಈಗ ಗಲ್ಫ್ ರಾಷ್ಟ್ರದಿಂದ ಆಗಮಿಸುವವರಿಗೆ ರಾಜ್ಯ ಸರ್ಕಾರ ಕಠಿಣ ನಿಯಮ ವಿಧಿಸಿದೆ.


ಮಂಗಳೂರು(ಜು.03): ಕರ್ನಾಟಕ ಸೇರಿದಂತೆ ದೇಶಾದ್ಯಂತ ಕೊರೋನಾ ಸೋಂಕು ಮೇರೆ ಮೀರುತ್ತಿರುವ ಹಿನ್ನೆಲೆಯಲ್ಲಿ ಈಗ ಗಲ್ಫ್ ರಾಷ್ಟ್ರದಿಂದ ಆಗಮಿಸುವವರಿಗೆ ರಾಜ್ಯ ಸರ್ಕಾರ ಕಠಿಣ ನಿಯಮ ವಿಧಿಸಿದೆ.

ಅಲ್ಲಿಂದ ಆಗಮಿಸಬೇಕಾದರೆ ಕೋವಿಡ್‌ ತಪಾಸಣೆಯಲ್ಲಿ ನೆಗೆಟಿವ್‌ ಕಡ್ಡಾಯ ಎಂಬ ನಿಬಂಧನೆಯನ್ನು ಪಾಲಿಸುವಂತೆ ಸೂಚಿಸಲಾಗಿದೆ. ಇದು ಕರ್ನಾಟಕದ ಮಟ್ಟಿಗೆ ತುಸು ನೆಮ್ಮದಿಯ ವಿಚಾರವಾದರೂ ಗಲ್ಫ್ ರಾಷ್ಟ್ರಗಳಲ್ಲಿ ಸಂಕಷ್ಟದಲ್ಲಿದ್ದು, ತಾಯ್ನಾಡಿಗೆ ವಾಪಸ್‌ ಬರಲು ಹೊರಟ ಕನ್ನಡಿಗರಿಗೆ ಸಮಸ್ಯೆ ತಂದೊಡ್ಡಿದೆ.

Latest Videos

undefined

ಗಲ್ಫ್ ರಾಷ್ಟ್ರಗಳು ತಮ್ಮ ವಿಮಾನಗಳಿಗೆ ಟರ್ಮಿನಲ್‌ಗಳಲ್ಲಿ ಕೋವಿಡ್‌ ತಪಾಸಣೆ ನಡೆಸಿ ತಕ್ಷಣವೇ ವರದಿ ನೀಡುವ ಸೌಲಭ್ಯ ಹೊಂದಿವೆ. ಆದರೆ ಈ ಸೌಲಭ್ಯ ಗಲ್ಫ್ನಿಂದ ಬೇರೆ ರಾಷ್ಟ್ರಗಳಿಗೆ ತೆರಳುವವರಿಗೆ ಇಲ್ಲ.

ದೆಹಲಿಯಲ್ಲಿ ದೇಶದ ಮೊದಲ ಪ್ಲಾಸ್ಮಾ ಬ್ಯಾಂಕ್ ಕಾರ್ಯಾರಂಭ..! ಹೀಗಿದೆ ರೂಲ್ಸ್

ಮುಖ್ಯವಾಗಿ ಇದುವರೆಗೆ ಗಲ್ಫ್ ರಾಷ್ಟ್ರಗಳ ವಿಮಾನ ನಿಲ್ದಾಣಗಳ ಟರ್ಮಿನಲ್‌ಗಳಲ್ಲಿ ಅನಿವಾಸಿ ಭಾರತೀಯರಿಗೆ ಕೋವಿಡ್‌ ತಪಾಸಣೆ ಕಡ್ಡಾಯ ಇರಲಿಲ್ಲ. ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಥರ್ಮಲ್‌ ಸ್ಕಾ್ಯನಿಂಗ್‌ ನಡೆಸಿ, ಮಾಸ್ಕ್‌, ಗ್ಲೌಸ್‌ ಧರಿಸಿದರೆ ಸಾಕಿತ್ತು. ಕೆಲವರು ವಿಮಾನದಲ್ಲಿ ಪಿಪಿಇ ಕಿಟ್‌ ಧರಿಸಿ ಬರುತ್ತಿದ್ದರು. ಆದರೆ ಕೋವಿಡ್‌ ಪರೀಕ್ಷೆ ಕಡ್ಡಾಯವಾಗಿದ್ದರೂ ಈ ಸೌಲಭ್ಯವನ್ನು ಬೇರೆ ರಾಷ್ಟ್ರಗಳ ಟರ್ಮಿನಲ್‌ಗಳು ಹೊಂದಿಲ್ಲ ಎಂಬ ಕಾರಣಕ್ಕೆ ವಿದೇಶಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿರಲಿಲ್ಲ. ಇತ್ತೀಚೆಗೆ ಕೇರಳ ಸರ್ಕಾರ ಕೂಡ ಕೋವಿಡ್‌ ಕಡ್ಡಾಯ ತಪಾಸಣೆ ವಿಧಿಸಿ, ಬಳಿಕ ಅನಿವಾಸಿ ಕೇರಳಿಗರ ವಿರೋಧದಿಂದ ಅಲ್ಲಿಂದ ಆಗಮಿಸುವ ಅನಿವಾಸಿ ಕೇರಳಿಗರಿಗೆ ವಿನಾಯ್ತಿ ನೀಡಿತ್ತು. ಆದರೆ ಈಗ ಕರ್ನಾಟಕಕ್ಕೆ ಆಗಮಿಸುವವರಿಗೆ ಕರ್ನಾಟಕ ಸರ್ಕಾರವೇ ಕಡ್ಡಾಯಗೊಳಿಸಿರುವುದು ಕನ್ನಡಿಗರಿಗೆ ಇಕ್ಕಟ್ಟು ತಂದೊಡ್ಡಿದೆ.

ಮತ್ತೆ ಕುವೈಟ್‌ ಕನ್ನಡಿಗರಿಗೆ ಫಜೀತಿ:

ಕರ್ನಾಟಕ ಸರ್ಕಾರ ವಿಧಿಸಿದ ಕೋವಿಡ್‌ ಕಡ್ಡಾಯ ತಪಾಸಣೆಯಿಂದ ಜು.4ರಂದು ಮಂಗಳೂರಿಗೆ ಆಗಮಿಸಬೇಕಾದ ಕುವೈಟ್‌ನ ಕರಾವಳಿ ಕನ್ನಡಿಗರಿಗೆ ಫಜೀತಿ ಉಂಟಾಗಿದೆ. ಕುವೈಟ್‌ನಿಂದ ಮಂಗಳೂರಿಗೆ ಜೂ.26ರಂದು ಹಠಾತ್ತನೆ ವಿಮಾನ ಸಂಚಾರ ರದ್ದಾಗಿತ್ತು. ಬಳಿಕ ಅವಿರತ ಪ್ರಯತ್ನದ ಫಲವಾಗಿ ಜು.4ರಂದು ವಿಮಾನ ಸಂಚಾರಕ್ಕೆ ಬುಧವಾರ ಅನುಮತಿ ಲಭಿಸಿತು. ಆದರೆ ಅನುಮತಿ ನೀಡಬೇಕಾದರೆ, ಕರ್ನಾಟಕ ಸರ್ಕಾರ, ಹೊಸದಾಗಿ ಕೋವಿಡ್‌ ಟೆಸ್ಟ್‌ನ್ನು ಕಡ್ಡಾಯ ಎಂದು ನಮೂದಿಸಿದೆ. ಇದರಿಂದಾಗಿ ಕರಾವಳಿ ಕನ್ನಡಿಗರು ತವರಿಗೆ ಮರಳುವ ಕನಸು ನನಸಾಗುವ ಸಾಧ್ಯತೆ ದೂರವಾದಂತಾಗಿದೆ.

ಟರ್ಮಿನಲ್‌ನಲ್ಲಿ ಸೌಲಭ್ಯವೇ ಇಲ್ಲ:

ಇದುವರೆಗೆ ಗಲ್‌್ಫ ರಾಷ್ಟ್ರಗಳಿಂದ ಸಾಕಷ್ಟುವಿಮಾನಗಳು ಅನಿವಾಸಿ ಭಾರತೀಯರನ್ನು ಕರೆತಂದಿದೆ. ಆದರೆ ಅಲ್ಲಿನ ವಿಮಾನ ನಿಲ್ದಾಣಗಳಲ್ಲಿ ರಾರ‍ಯಪಿಡ್‌ ಆ್ಯಂಟಿ ಬಾಡಿ ಟೆಸ್ಟ್‌ ಸೌಲಭ್ಯ ಇಲ್ಲ. ಅಲ್ಲಿನ ರಾಷ್ಟ್ರಗಳ ಟರ್ಮಿನಲ್‌ನಲ್ಲಿ ಇದ್ದರೂ ಅದನ್ನು ಬೇರೆ ರಾಷ್ಟ್ರಗಳ ಟರ್ಮಿನಲ್‌ಗಳು ಉಪಯೋಗಿಸುವಂತಿಲ್ಲ. ಅಲ್ಲಿನ ಟ್ರಾವೆಲರ್‌ ಏಜೆನ್ಸಿಗಳೂ ಈ ಸೌಲಭ್ಯ ಹೊಂದಿಲ್ಲ. ಕುವೈಟ್‌ ಸರ್ಕಾರದಿಂದ ಅನ್ಯ ರಾಷ್ಟ್ರಗಳಿಗೆ ತೆರಳುವವರಿಗೆ ಕೋವಿಡ್‌ ಟೆಸ್ಟ್‌ ಸೌಲಭ್ಯ ಇಲ್ಲ. ಕುವೈಟ್‌ ವಿಮಾನಕ್ಕೆ ಮಂಗಳೂರಿಗೆ ತೆರಳಲು ಅನುಮತಿ ಸಿಕ್ಕಿದ್ದೇ ವಿಳಂಬವಾಗಿ. ಹೀಗಾಗಿ ಜು.4ರೊಳಗೆ ಎರಡು ದಿನದಲ್ಲಿ ಖಾಸಗಿಯಾಗಿಯೂ ದುಬಾರಿ ಬೆಲೆ ತೆತ್ತು ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳುವುದು ಅಸಾಧ್ಯ. ಹಾಗಾಗಿ ಮುಂದೇನು ಎಂದು ಅಲ್ಲಿನ ಕರಾವಳಿ ಕನ್ನಡಿಗರು ದಿಕ್ಕೆಡುವಂತಾಗಿದೆ.

ಒಂದೇ ದಿನ 1502 ಕೇಸ್‌! 'ಮತ್ತೆ ಲಾಕ್ಡೌನ್‌ ಮಾಡಿದ್ರೆ ನೋ ಯೂಸ್: ಸೋಂಕು ನಿವಾರಣೆ ಸಾಧ್ಯವಿಲ್ಲ'..!

ಈಗಾಗಲೇ ಅಲ್ಲಿಂದ ಹೊರಡಲು ಗಂಟುಮೂಟೆ ಕಟ್ಟಿರುವ ಕರಾವಳಿಗರು, ಈಗ ವಿಮಾನ ಸಂಚಾರಕ್ಕೆ ದಿನಾಂಕ ನಿಗದಿಯಾದರೂ ಕಡ್ಡಾಯ ಕೋವಿಡ್‌ ಟೆಸ್ಟ್‌ ನಿಬಂಧನೆ ಹಿನ್ನೆಲೆಯಲ್ಲಿ ತವರಿಗೆ ತೆರಳುವ ಆಸೆ ಕಮರಿದಂತಾಗಿದೆ. ಈಗಾಗಲೇ ಕುವೈಟ್‌-ಕೇರಳ ಮುಸ್ಲಿಂ ಸಂಘಟನೆ ಕುವೈಟ್‌ನ ಭಾರತೀಯ ರಾಯಭಾರ ಕಚೇರಿಗೆ ಪತ್ರ ಬರೆದು, ಕಡ್ಡಾಯ ಕೋವಿಡ್‌ ಟೆಸ್ಟ್‌ನಿಂದ ಕೇರಳ ಮಾದರಿಯಲ್ಲಿ ವಿನಾಯ್ತಿ ನೀಡುವಂತೆ ಕೋರಿದೆ. ಆದರೆ ಗುರುವಾರ ರಾತ್ರಿ ವರೆಗೂ ಕರ್ನಾಟಕ ಸರ್ಕಾರದಿಂದ ಯಾವುದೇ ಸ್ಪಂದನ ವ್ಯಕ್ತವಾಗಿಲ್ಲ.

ಆಗಸ್ಟ್‌ ಬಳಿಕ ಶಾಲೆ, ಕಾಲೇಜು ಆರಂಭಕ್ಕೆ ಚಿಂತನೆ

ಗಲ್‌್ಫ ರಾಷ್ಟ್ರಗಳಿಂದ ಆಗಮಿಸುವವರಿಗೆ ಕೋವಿಡ್‌ ಟೆಸ್ಟ್‌ ಕಡ್ಡಾಯಗೊಳಿಸಿ ಅನುಮತಿ ನೀಡಲಾಗಿದೆ. ಆದರೆ ಅಲ್ಲಿ ಕೋವಿಡ್‌ ಟೆಸ್ಟ್‌ ಸೌಲಭ್ಯ ಇಲ್ಲದ ಕಾರಣ ಅನಿವಾಸಿ ಕನ್ನಡಿಗರಿಗೆ ತವರಿಗೆ ಆಗಮಿಸಲು ತೊಂದರೆಯಾಗಿದೆ. ಈ ವಿಚಾರವನ್ನು ರಾಜ್ಯದ ನೋಡೆಲ್‌ ಅಧಿಕಾರಿಯ ಗಮನಕ್ಕೆ ತರಲಾಗಿದೆ. ಕೇರಳದಂತೆ ಕರ್ನಾಟಕದಲ್ಲೂ ಕಡ್ಡಾಯ ಕೋವಿಡ್‌ ಟೆಸ್ಟ್‌ಗೆ ವಿನಾಯ್ತಿ ನೀಡಿ, ಪಿಪಿಇ ಕಿಟ್‌ ಧರಿಸಿ ಆಗಮಿಸಲು ಅನುಮತಿ ನೀಡುವಂತೆ ಕೋರಲಾಗಿದೆ. ರಾಜ್ಯ ಸರ್ಕಾರದಿಂದ ಸೂಕ್ತ ಸ್ಪಂದನದ ನಿರೀಕ್ಷೆ ಇದೆ ಎಂದು ಅನಿವಾಸಿ ಭಾರತೀಯ ವಿಭಾಗ ಮಾಜಿ ಉಪಾಧ್ಯಕ್ಷ ಕ್ಯಾ.ಗಣೇಶ್‌ ಕಾರ್ಣಿಕ್‌ ಹೇಳಿದ್ದಾರೆ.

-ಆತ್ಮಭೂಷಣ್‌

click me!