Mysuru : ವಿದ್ಯಾವಂತರು ಮೌಢ್ಯದತ್ತ ಸಾಗುತ್ತಿರುವುದು ದುರಂತ

By Kannadaprabha News  |  First Published Nov 12, 2022, 4:59 AM IST

ಕನಕದಾಸರು ಜಾತಿ ಅಸಮಾನತೆ ವಿರುದ್ಧ ಹೋರಾಟ ಮಾಡಿ, ಸಮಾನತೆಗಾಗಿ ಶ್ರಮಿಸಿದರು. ಜಾತಿ ಜಾತಿಗಳ ನಡುವಿನ ಗೋಡೆಗಳನ್ನು ಕೆಡವಲು ಪ್ರಯತ್ನ ಮಾಡಿದ್ದರು. ಆದರೆ, ಪ್ರಸ್ತುತ ದಿನಗಳಲ್ಲಿ ನಾನಾ ಕಾರಣಗಳಿಂದ ಈ ಗೋಡೆಗಳು ಗಟ್ಟಿಯಾಗುತ್ತಿವೆ. ವಿದ್ಯಾವಂತರು ಮೌಢ್ಯದತ್ತ ಸಾಗುತ್ತಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ವಿಷಾದಿಸಿದರು.


 ಮೈಸೂರು (ನ.12):  ಕನಕದಾಸರು ಜಾತಿ ಅಸಮಾನತೆ ವಿರುದ್ಧ ಹೋರಾಟ ಮಾಡಿ, ಸಮಾನತೆಗಾಗಿ ಶ್ರಮಿಸಿದರು. ಜಾತಿ ಜಾತಿಗಳ ನಡುವಿನ ಗೋಡೆಗಳನ್ನು ಕೆಡವಲು ಪ್ರಯತ್ನ ಮಾಡಿದ್ದರು. ಆದರೆ, ಪ್ರಸ್ತುತ ದಿನಗಳಲ್ಲಿ ನಾನಾ ಕಾರಣಗಳಿಂದ ಈ ಗೋಡೆಗಳು ಗಟ್ಟಿಯಾಗುತ್ತಿವೆ. ವಿದ್ಯಾವಂತರು ಮೌಢ್ಯದತ್ತ ಸಾಗುತ್ತಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ವಿಷಾದಿಸಿದರು.

ಜಿಲ್ಲಾಡಳಿತ, (Kannada)  ಮತ್ತು ಸಂಸ್ಕೃತಿ ಇಲಾಖೆ ಹಾಗೂ(KanakaDasa)  ಜಯಂತ್ಯುತ್ಸವ ಸಮಿತಿ ಸಂಯುಕ್ತವಾಗಿ ನಗರದ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ದಾಸ ಶ್ರೇಷ್ಠ ಶ್ರೀ ಕನಕದಾಸ ಜಯಂತಿಯಲ್ಲಿ ಮಾತನಾಡಿದ ಅವರು, ಕನಕದಾಸರು ಪ್ರಭುತ್ವ ಮತ್ತು ದೇವರನ್ನು ಪ್ರಶ್ನಿಸುವ ಮನೋಭಾವವನ್ನು ಹೊಂದಿದ್ದರು. ಪ್ರಸ್ತುತ ದಿನಗಳಲ್ಲಿ ಸತ್ಯ ಹೇಳಿದರೆ ಮತ್ತು ಪ್ರಶ್ನಿಸಿದರೆ ಅವರನ್ನು ವಕ್ರ ದೃಷ್ಟಿಯಲ್ಲಿ ನೋಡಲಾಗುತ್ತದೆ. ಪ್ರಶ್ನಿಸುವ ಧೈರ್ಯವನ್ನು ಮತ್ತು ವೈಚಾರಿಕ ದೃಷ್ಟಿಕೋನವನ್ನು ಬೆಳಸಿಕೊಳ್ಳಬೇಕು ಎಂದು ಹೇಳಿದರು.

Latest Videos

undefined

ಮುಖ್ಯ ಭಾಷಣಕಾರ ಸಾಹಿತಿ ಡಾ. ಚಿಕ್ಕಮಗಳೂರು ಗಣೇಶ್‌ ಮಾತನಾಡಿ, ನಮ್ಮ ನಾಡು, ದೇಶ ಎಂದರೆ ಸರ್ವಜನಾಂಗಗಳ ಶಾಂತಿಯ ತೋಟ. ಕವಿ, ಋುಷಿ, ಸಂತರು ನಮ್ಮ ನಾಡನ್ನು ಸದಾಕಾಲ ಸರ್ವಜನಾಂಗಗಳ ಶಾಂತಿಯ ತೋಟವಾಗಿ ಕಾಣಲು ಬಯಸಿದರು ಎಂದರು.

ಕನಕದಾಸರು ಭಕ್ತಿ ಎಂಬ ಖಾಸಗಿ ವಿಚಾರವನ್ನು ಸಮಾಜ ಬದಲಾವಣೆಯ ಅಸ್ತ್ರವಾಗಿ ಪ್ರಯೋಗಿಸಿದ್ದರು. ಭಕ್ತಿ ಎಂಬುದಕ್ಕೆ ಸಂಸ್ಕೃತದಲ್ಲಿ ಭಕ್ತಿ, ಪರಮ ಪ್ರೇಮಾ ಅಂದರೆ ಪರಮ ಪ್ರೀತಿ, ಜೀವ ಪ್ರೀತಿ, ಜೀವನ ಪ್ರೀತಿ. ಯಾರಿಗೆ ಜೀವನ ಪ್ರೀತಿ ಇರುತ್ತದೆ, ನಿಸರ್ಗದ ಮೇಲೆ ಪ್ರೀತಿ ಇರುತ್ತದೆ, ಆತ್ಮಸಾಕ್ಷಿಯ ಮೇಲೆ ನಂಬಿಕೆ ಇರುತ್ತದೆ ಅವರು ಈ ನಾಡನ್ನು ಶಾಂತಿಯಬೀಡಾಗಿ ಕಟ್ಟುವ ಕನಸು ಕಾಣಬಹುದು ಎಂದು ಅವರು ತಿಳಿಸಿದರು.

ಕೀರ್ತನೆಗಳ ಮೂಲಕ ಸಾಮಾಜಿಕ ಪರಿವರ್ತನೆ

ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ಕಾಗಿನೆಲೆ ಆದಿಕೇಶವ ಎಂಬ ಅಂಕಿತದೊಂದಿಗೆ ಕೀರ್ತನೆಗಳು ಉಪಭೋಗಗಳನ್ನು ಮಾಡಿ 500 ವರ್ಷಗಳ ಹಿಂದೆ ಸಮಾಜದ ಅಂಕು- ಡೊಂಕುಗಳನ್ನು ತಮ್ಮ ಕೀರ್ತನೆಗಳ ಮೂಲಕ ಪರಿವರ್ತನೆಗಳನ್ನು ತಂದಂತಹ ಕನಕದಾಸರ ಮಾತುಗಳು ಇಂದಿಗೂ ಅನ್ವಯಿಸುತ್ತದೆ ಎಂದು ಹೇಳಿದರು.

ಸಮಾಜದಲ್ಲಿ ನಾವು ಅಸಮಾನತೆ, ಆರ್ಥಿಕ ಮತ್ತು ಸಾಮಾಜಿಕ ವ್ಯತ್ಯಾಸಗಳು ಹಾಗೂ ಇಂದು ಯುವಕರನ್ನು ರೊಚ್ಚಿಗೆಬ್ಬಿಸುವ ಕೆಲವೊಂದು ಸನ್ನಿವೇಶಗಳು ಬರುತ್ತಿರುವ ಸಂದರ್ಭದಲ್ಲಿ ಇದಕ್ಕೆ ಪರಿಹಾರವಾಗಿ ಒಂದು ದಾರಿ ದೀಪವಾಗಿ ಕನಕದಾಸರು ಹೇಳಿರುವ ಕೀರ್ತನೆಗಳು ಬಹಳ ಪ್ರಮುಖವಾದವು ಎಂದರು.

ಜ್ಞಾನವೆಂಬುದು ಯಾವ ವ್ಯಕ್ತಿಯ ಸ್ವತ್ತಲ್ಲ ಯಾವುದೇ ಜಾತಿ- ಧರ್ಮದವರಾದರು ಸಹ ಅರಿವೇ ಗುರು ಎಂಬುದನ್ನು ರೂಡಿಸಿಕೊಂಡು ಜ್ಞಾನಾರ್ಜನೆ ಮಾಡುವುದರ ಮೂಲಕ ಎಲ್ಲಾ ವರ್ಗದವರು ದೇವರನ್ನು ಕಾಣಬಹುದು ಎಂದು ತೋರಿಸಿಕೊಟ್ಟದಾರ್ಶನಿಕ ಸಂತ ಕವಿ ಕನಕದಾಸರು ಎಂದು ತಿಳಿಸಿದರು.

ವಿಧಾನಪರಿಷತ್ತು ಸದಸ್ಯರಾದ ಮರಿತಿಬ್ಬೇಗೌಡ, ಡಾ.ಡಿ. ತಿಮ್ಮಯ್ಯ, ಸಿ.ಎನ್‌. ಮಂಜೇಗೌಡ, ಕರ್ನಾಟಕ ಮೃಗಾಲಯ ಪ್ರಾಧಿಕಾರ ಎಂ. ಶಿವಕುಮಾರ್‌, ಉಪ ಮೇಯರ್‌ ಡಾ.ಜಿ. ರೂಪಾ, ನಗರ ಪಾಲಿಕೆ ಸದಸ್ಯ ಗೋಪಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ, ಜಿಪಂ ಮಾಜಿ ಅಧ್ಯಕ್ಷ ಕೆ. ಮರೀಗೌಡ, ಮಾಜಿ ಮೇಯರ್‌ ಚಿಕ್ಕಣ್ಣ, ನಗರ ಪಾಲಿಕೆ ಮಾಜಿ ಸದಸ್ಯ ಎಂ. ಶಿವಣ್ಣ, ಶಂಕರ್‌, ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಸವರಾಜು, ಮುಖಂಡರಾದ ಕೆ.ಎಸ್‌. ಶಿವರಾಮು, ಬ್ಯಾಂಕ್‌ ಪುಟ್ಟಸ್ವಾಮಿ, ವಿಶ್ವ, ರಮೇಶ್‌, ಮಹದೇವ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಜಿಪಂ ಉಪ ಕಾರ್ಯದರ್ಶಿ ಪ್ರೇಮ್‌ಕುಮಾರ್‌, ನಗರ ಪಾಲಿಕೆ ಉಪ ಕಾರ್ಯದರ್ಶಿ ಸೋಮಶೇಖರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್‌. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್‌ ಮೊದಲಾದವರು ಇದ್ದರು.

----

ಕೋಟ್‌...

ಕನಕದಾಸರು ಭಕ್ತಿಯನ್ನು ಕೇವಲ ಭಕ್ತಿಯಾಗಿಸದೆ ನಮ್ಮ ನಾಡಿನ ಹಾಗೂ ನೆಲದ ಹಲವು ರೋಗರುಜಿನೆಗಳನ್ನ ವಾಸಿಮಾಡುವ ಔಷಧಿಯನ್ನಾಗಿ ಬಳಸಿದರು. ನಮಗೆ ಬೇಕಿರುವುದು ದೇವರು ಮತ್ತು ಭಕ್ತರ ನಡುವೆ ಸೇತುವೆ ನಿರ್ಮಿಸುವ ರಾಯಭಾರಿಗಳು. ಅಂತಹ ಕನ್ನಡ ನೆಲದ ಸಾಂಸ್ಕೃತಿಕ ರಾಯಭಾರಿ ಕನಕದಾಸರು.

- ಡಾ. ಚಿಕ್ಕಮಗಳೂರು ಗಣೇಶ್‌, ಸಾಹಿತಿ

click me!