ಸುತ್ತೂರು ಮಠಕ್ಕೆ ಬೈಕ್‌ನಲ್ಲೇ ಆಗಮಿಸಿದ ಸದ್ಗುರು : ಕಾರಣ?

By Kannadaprabha NewsFirst Published Mar 26, 2021, 7:26 AM IST
Highlights

ಈಶಾ ಫೌಂಡೇಶನ್ ಸಂಸ್ಥಾಪಕರಾದ ಸದ್ಗುರು ಜಗ್ಗು ವಾಸುದೇವ ಅವರು ಬೈಕಿನಲ್ಲಿಯೇ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ. ಶ್ರೀಗಳ ಜೊತೆಗೆ ಗಮಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. 

ಮೈಸೂರು (ಮಾ.26):  ಈಶಾ ಫೌಂಡೇಶನ್‌ ಸ್ಥಾಪಕಾಧ್ಯಕ್ಷ ಸದ್ಗುರು ಅವರು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಗುರುವಾರ ಭೇಟಿ ನೀಡಿ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜೊತೆಗೆ ಚರ್ಚೆ ನಡೆಸಿದರು.

ಡುಕಾಟಿ ಬೈಕ್‌ನಲ್ಲೇ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ ಸದ್ಗುರು, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ನಂತರ ಸದ್ಗುರು ಸುತ್ತೂರು ಸ್ವಾಮೀಜಿ ಅವರನ್ನು ಭೇಟಿ ಮಾಡಿ ಒಂದು ವರ್ಷವಾಗಿತ್ತು. ಹೀಗಾಗಿ, ಅವರನ್ನು ಭೇಟಿ ಮಾಡಲೆಂದು ಬಂದೆ. ಬೇರೆ ಯಾವುದೇ ಉದ್ದೇಶ ಇದರಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕಾವೇರಿ ಕೂಗು ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕೋವಿಡ್‌ ಮಧ್ಯೆಯೂ 1.10 ಕೋಟಿ ಸಸಿಗಳನ್ನು ಕಳೆದ ವರ್ಷ ರೈತರ ಜಮೀನುಗಳಲ್ಲಿ ನೆಡಲಾಯಿತು. ಮುಂದಿನ ವರ್ಷ 3.50 ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.

ಹೊಸ ವರ್ಷಕ್ಕೆ ಸಂದೇಶ ನೀಡಿದ ಸದ್ಗರು: ಏನ್ ಹೇಳಿದ್ದಾರೆ..? ...

ತಮಿಳುನಾಡಿನ ದೇವಾಲಯಗಳನ್ನು ಮುಕ್ತಗೊಳಿಸಿ ಎಂಬ ಆನ್‌ಲೈನ್‌ ಅಭಿಯಾನವನ್ನು ಕರ್ನಾಟಕದಲ್ಲೇಕೆ ಪ್ರಾರಂಭ ಮಾಡಬಾರದು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗ ರಾಜ್ಯ ಸರ್ಕಾರ ರಾಜನಂತಿದೆ. ನಾವು ಪ್ರಜೆಗಳಾಗಿದ್ದೇವೆ. ಚುನಾವಣೆ ಬಂದರೆ ಎಲ್ಲರೂ ಪ್ರಜೆಗಳಾಗುತ್ತಾರೆ. ಆಗ ಮಾತನಾಡಬಹುದು. ರಾಜ್ಯ ಸರ್ಕಾರ ರಾಜನಂತಾಗಿರುವ ಈ ಹೊತ್ತಿನಲ್ಲಿ ಅವರೊಂದಿಗೆ ಏನು ಮಾತನಾಡುವುದು ಎಂದರು.

ತಮಿಳುನಾಡಿನ 44 ಸಾವಿರ ದೇವಸ್ಥಾನಗಳ ಪೈಕಿ 12 ಸಾವಿರ ದೇವಸ್ಥಾನಗಳಲ್ಲಿ ಒಂದೇ ಒಂದು ಪೂಜೆ ನಡೆದಿಲ್ಲ. 37 ಸಾವಿರ ದೇಗುಲಗಳಲ್ಲಿ ಒಬ್ಬರೇ ಇದ್ದು, ಅವರೇ ಪೂಜೆ ಮತ್ತು ನಿರ್ವಹಣೆ ಮಾಡುತ್ತಿದ್ದಾರೆ. 1500 ಅಮೂಲ್ಯ ವಿಗ್ರಹಗಳು ಕಾಣೆಯಾಗಿವೆ ಎಂದು ಅಲ್ಲಿನ ಸರ್ಕಾರವೇ ಹೈಕೋರ್ಟ್‌ಗೆ ಮಾಹಿತಿ ಸಲ್ಲಿಸಿದೆ ಎಂದು ಅವರು ಹೇಳಿದರು.

ನಿವೃತ್ತ ಪೊಲೀಸ್‌ ಅಧಿಕಾರಿಯೊಬ್ಬರು ಒಟ್ಟು 9 ಸಾವಿರ ಮೂರ್ತಿಗಳು ಕಳವಾಗಿದ್ದು, ಅವುಗಳ ಜಾಗದಲ್ಲಿ ಹೊಸ ಮೂರ್ತಿ ಇಡಲಾಗಿದೆ ಎಂದು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಸರ್ಕಾರಗಳು ದೇವಾಲಯವನ್ನು ಒಂದು ವ್ಯವಹಾರವಾಗಿ ನೋಡುತ್ತಿದೆ. ಇದು ಹೀಗೆಯೇ ಮುಂದುವರಿದರೆ ಮುಂದಿನ 50 ವರ್ಷಗಳಲ್ಲಿ ದೇವಾಲಯಗಳೇ ಇಲ್ಲದಿರುವ ಸ್ಥಿತಿ ನಿರ್ಮಾಣವಾಗಬಹುದು. ಹೀಗಾಗಿ, ಆನ್‌ಲೈನ್‌ ಅಭಿಯಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

click me!