ಕಲಬುರಗಿ ಹಳೆ ಫಿಲ್ಟರ್ ಬೆಡ್ ಅಂಗಳದಲ್ಲಿರೋ ಆಳ ನೀರಿನ ಸಂಪ್‌ನಲ್ಲಿ ಜಾರಿಬಿದ್ದು ಯುವತಿ ದಾರುಣ ಸಾವು
ಶೇಷಮೂರ್ತಿ ಅವಧಾನಿ
ಕಲಬುರಗಿ(ಅ.08): ವಿಜಯ ದಶಮಿ ಹಬ್ಬದ ಮಾರನೇ ದಿನ ಗುರುವಾರ ಕಲಬುರಗಿ ಮಹಾನಗರದ ಯುವತಿ ಗಂಗಮ್ಮ (20) ಳ ದಾರುಣ ಸಾವಿನ ಘಟನೆಗೆ ಸಂಪೂರ್ಣ ಹಳಿ ತಪ್ಪಿರುವ ಹಾಗೂ ಹದಗೆಟ್ಟಿರುವಂತಹ ನಗರ ಕುಡಿಯುವ ನೀರು ಪೂರೈಕೆ ‘ಅ’ವ್ಯವಸ್ಥೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.
ಗಂಗಮ್ಮ ವಾಸವಿರುವ ಫಿಲ್ಟರ್ ಬೆಡ್ ಪರಿಸರದಲ್ಲಿನ ಆಶ್ರಯ ಕಾಲೋನಿಯಲ್ಲಿ ಈಚೆಗಿನ ದಿನಗಳಲ್ಲಿ 6, 7 ದಿನಕ್ಕೊಮ್ಮೆ ಬೇಕಾಬಿಟ್ಟಿಯಾಗಿ ನೀರು ಪೂರೈಕೆಯಾಗುತ್ತಿದೆ. ಇದರಿಂದ ಇಲ್ಲಿರುವ ಬಡ ಕುಟುಂಬವಾಸಿಗಳು ನಿತ್ಯ ಕೊಡ ನೀರಿಗೂ ಪರದಾಡುವಂತಾಗಿದೆ. ಗಂಗಮ್ಮಳ ಪಾಲಿಗೆ ಗಂಡಾಂತರ ತಂದೊಡ್ಡಿದ್ದ ಗುರುವಾರಕ್ಕೂ ಮುಂಚಿನ ಒಂದು ವಾರ ಈ ಬಡಾವಣೆಗೆ ನೀರಿನ ಸಮಸ್ಯೆ ಕಾಡಿದೆ, ಊಟಕ್ಕೆ ಕುಂತಿರುವಾಗ ನೀರಿಲ್ಲದ್ದು ಅವಳ ಗಮನ ಸೆಳೆದಿದೆ, ಪಕ್ಕದಲ್ಲೇ ಇರುವ ಫಿಲ್ಟರ್ ಬೆಡ್‌ನಲ್ಲಿ ನೀರು ಸಿಗುತ್ತದೆಂಬ ಭರವಸೆಯೊಂದಿಗೆ ಗಂಗಮ್ಮ ಖಾಲಿ ಕೊಡದೊಂದಿಗೆ ಅಲ್ಲಿಗೆ ಓಡಿದ್ದಾಳೆ. ಹಾಗೇ ಓಡಿದವಳೇ ಅಲ್ಲಿರೋ ನೀರಿನ ಸಂಪ್‌ನಲ್ಲಿ ಹೆಣವಾಗಿ ತೇಲಿದ್ದಾಳೆ!
ಕಲಬುರಗಿ: ವೈದ್ಯರ ನಿರ್ಲಕ್ಷ್ಯಕ್ಕೆ ಹಸುಗೂಸು ಸಾವು..?
ದೀಪದ ಕೆಳಗೇ ಕತ್ತಲು!
ಆಶ್ರಯ ಕಾಲೋನಿಗೂ ಫಿಲ್ಟರ್ ಬೆಡ್‌ಗೂ ಅರ್ಧ ಫರ್ಲಾಂಗ್ ಕೂಡಾ ಅಂತರವಿಲ್ಲ, ಆದಾಗ್ಯೂ ಆಶ್ರಯ ಕಾಲೋನಿಗೆ ವಾರಗಟ್ಟಲೇ ನೀರೇ ಪೂರೈಕೆಯಾಗೋದಿಲ್ಲ! ಹೀಗಾಗಿ ಇಲ್ಲಿನ ನಿವಾಸಿಗಳು ನಿತ್ಯ ನೀರಿಗಾಗಿ ಪರದಾಟೋದು ತಪ್ಪಿಲ್ಲ. ನಮ್ಮ ಕಾಲನಿಗೆ ಕಳೆದ ಒಂದು ವಾರದಿಂದ ನೀರ ಬಿಟ್ಟಿರಲಿಲ್ಲ, ಮಾನೋಮಿ ಹಬ್ಬದಾಗೂ ನಾವು ನೀರಿಗಾಗಿ ಅಳೆದಾಡಿದ್ವಿ. ಹೀಂಗಾಗಿಯೇ ನಮ್ಮ ಓಣ್ಯಾಇನ ಪೋರಿ ಗಂಗವ್ವ ನೀರಿಗಿಂತ ಫಿಲ್ಟರ್ ಬೆಡ್ ಹೋದವಳು. ಕಾಲು ಜಾರಿಬಿದ್ದು ಹೆಣವಾಗಿದ್ದಾಳೆ. ಇದಕ್ಕೆಲ್ಲ ಹಳಿ ತಪ್ಪಿ ಹೋಗಿರುವ ನೀರು ಪೂರೈಕೆ ವ್ಯವಸ್ಥೆಯೇ ಕಾರಣ’ ಎಂದು ಬಡಾಣವಣೆಯ ನಿವಾಸಿಗಳು ದೂರಿದ್ದಾರೆ. ನಿತ್ಯ ಲಕ್ಷಾಂತರ ಗ್ಯಾಲನ್ ನೀರು ಶುದ್ದೀಕರಿಸಿ ನಗರದ ಅರ್ಧ ಪ್ರದೇಶಕ್ಕೆ ಸರಬರಾಜು ಆಗೋದೇ ಇಲ್ಲಿಂದ, ದುರಂತವೆಂದರೆ ಇದೇ ಫಿಲ್ಟರ್ ಬೆಡ್ ಪಕ್ಕದ ಆಶ್ರಯ ಕಾಲೋನಿಗೆ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗೋದಿಲ್ಲ, ಇದನ್ನು ಯಾರೂ ಕೇಳುವವರು ಇಲ್ಲ, ಇಲ್ಲೇನಾಗುತ್ತಿದೆ ಎಂದು ಗಮನಿಸುವವರು ಇಲ್ಲ ಎಂಬುದೇ ಗಂಗವ್ವಳ ದುರಂತ ಸಾವಿಗೆ ಮೂಲ ಕಾರಣ ಎಂದು ಬಡಾವಣೆಯ ಸಾಬವ್ವ ದೂರಿದಳು.
ಹೇಳೋರಿಲ್ಲ, ಕೇಳೋರಿಲ್ಲದ ಪಿಲ್ಟರ್ ಬೆಡ್!
ಇಲ್ಲಿ ಎಲ್ ಆಂಡ್ ಟಿ ಕಂಪನಿಯವರು ನಿರಂತರ ನೀರಿನ ಜಾಲದ ಕೆಲಸ ನಡೆಸಿದ್ದಾರೆ, ಅನೇಕರು ಸಿಬ್ಬಂದಿ ಕೆಲಸದಲ್ಲಿದ್ದರೂ ಗಂಗಮ್ಮ ಕೊಡದೊಂದಿಗೆ ಸಂಪ್‌ನತ್ತ ಹೋಗಿರೋದು, ನೀರು ತುಂಬುವಾಗ ಕಾಲು ಜಾರಿ ಬಿದ್ದಿದ್ದು ಯಾರೂ ನೋಡಿಯೇ ಇಲ್ಲವಂತೆ. ಗಂಗಮ್ಮಳ ತಾಯಿ ಇವರನ್ನೆಲ್ಲ ವಿಚಾರಿಸುತ್ತಲೇ ಒಳಗಡೆ ಹೋದರೂ ಇವರಾರಯರ ಗಮನಕ್ಕೆ ಆಕೆಯ ಸಾವಿನ ಸಂಗತಿ ಗಮನಕ್ಕೇ ಬಂದಿಲ್ಲ. ಇಲ್ಲಿರುವ ದೈತ್ಯ ಗಾತ್ರದ ವಾಲ್‌್ವ, ಸಂಪ್‌ಗಳಿಗೆ ಸೂಕ್ತ ರಕ್ಷಣೆಯಾಲಿ, ತಡಗೋಡೆಯಾಗಲಿ ಇಲ್ಲವೇ ಇಲ್ಲ. ಹೀಗಾಗಿ ಇಲ್ಲಿ ಕಾಲಿಟ್ಟವರಿಗೆ ಅಪಾಯ ಹಲವು ರೂಪಗಳಲ್ಲಿ ಕಾಡೋದು ನಿಶ್ಚಿತ ಎಂಬಂತಿದೆ. ಈ ಬಗ್ಗೆ ಅಲ್ಲಿನ ಇಂಜಿನಿಯರ್ ರವಿ ಪಾಟೀಲರನ್ನು ಕೇಳಿ ಮಾಹಿತಿ ಪಡೆಯಲು ಹೋದಾಗ ಅವರು ಕಚೇರಿಯಲ್ಲಿ ಲಭ್ಯವಾಗಲೇ ಇಲ್ಲ. ಅವರ ಫೋನ್ ಸಂಪರ್ಕಕ್ಕೆ ಸಿಗಲಿಲ್ಲ. ಸಂಪ್‌ನ ಕೆಲಸಕ್ಕೇ 3 ಪಾಳಿಯಲ್ಲಿರುತ್ತಾರೆ. ಅವರಿಗೂ ಇದು ಗೊತ್ತಾಗದ್ದು ಅಚ್ಚರಿಗೆ ಕಾರಣವಾಗಿದೆ!
ಕಲಬುರಗಿ: ಪುಟ್ಟ ಕಂದಮ್ಮನಿಗೆ ಹೃದಯ ಕಾಯಿಲೆ, ಪೋಷಕರಿಗೆ ಅಲೆಯುವಂತೆ ಮಾಡಿದ್ರಾ ಜಿಮ್ಸ್ ವೈದ್ಯರು!?
ಹೋಗಿ ನೋಡೋದ್ರಾಗೇ ಮಗಳ ಹೆಣ ತೇಲಾಡ್ತಿತ್ತು!
‘ನಾವು ಬಕ್ಳ ಬಡವರು, ಮನ್ಯಾಗ ಮೆರಗಿ ನೀರೂ ಇಲ್ಲದ್ದು ಕಂಡು ಗಂಗಮ್ಮ ತುಸು ಸಿಟ್ಟು ಮಾಡಿಕೊಂಡು ಹಂಗೇ ಮಗ್ಗಲ್ದಾಗೆ ಇದ್ದ ಖಾಲಿ ಕೊಡ ತಗೊಂಡೊವಳೇ ಫಿಲ್ಟರ್ ಬೆಡ್‌ನಾಗ ನೀರ ಇರ್ತಾವ ತರ್ತೀನಿ ಅಂತ ಹೋದಳು. ಹಂಗೇ ಹೋದವಳು ಇನ್ನೂ ಯಾಕ ಬರಲಿಲ್ಲಂತ ನಾನು ಹೋಗಿ ಅಲ್ಲಿ ನೋಡೋದ್ರಾಗೇ ಆಕೆ ಹೆಣವೇ ತೇಲಾಡುತ್ತಿತ್ತು. ಮೂರಾಳ ಆಳವಾಗಿರೋ ನೀರಿನ ಸಂಪ್‌ನಾಗೇ ಆಕಿ ಬಿದ್ದು ಬಿಟ್ಟಿದ್ಳು, ಮ್ಯಾಗೆ ಮಳೆ. ಯಾರೂ ನೋಡಿಲ್ಲ, ಘಾತ ಆಗಿ ಹೋಯ್ತು’ ನನ್ನ ಬಲಗೈ ಮುರದ್ಹಂಗ ಆಗ್ಯದ ಎಂದು ತಮ್ಮ ಮನೆಗೆ ಭೇಟಿ ನೀಡಿದ್ದ ’ಕನ್ನಡಪ್ರಭ’ ಜೊತೆ ಮಾತನಾಡುತ್ತ ಗಂಗಮ್ಮಳ ತಾಯಿ ನಾಗಮ್ಮ ಬಿಕ್ಕಿದಳು.
ನಾವು ಬಡವರು, ಯಾರಿಗೂ ಓದಿಸಿಲ್ಲ, ಸಣ್ಣಾಂವ ಗಂಡು ಹುಡುಗ ಅದಾನ, ಆತನೊಬ್ಬ ಓದಾಕತ್ತಾನ್ರಿ. ಉಳಿದವ್ರು ನನ್ನ ಜೊತೆಗೇ ದೌಂತಿಗೆ (ಕೆಲ್ಸಕ್ಕೆ) ಬರ್ತಾರೆ. ಕೆಲ್ಸ ಮಾಡಿ ಬಂದರೇನೇ ನಮಗೆ ಊಟ, ಇಲ್ದಿದ್ರೆ ಉಪವಾಸ- ವನವಾಸ ತಪ್ಪಿದ್ದಲ್ಲ. ಇನ್ನ ಓಣ್ಯಾಗ ನಳದ್ದು ನೀರ ಬರದೇ ಹೋದ್ರೆ ಚೆರಗಿ ನೀರಿಗೂ ಪರದಾಟ ತಪ್ಪಿದ್ದಲ್ಲ. ಹೀಂಗಾಗಿ ನನ್ನ ಮಗಳು ಗಂಗಮ್ಮ ನೀರಿಂಗತ ಹೋಗಿ ಹೆಣವಾದ್ಲು ಎಂದು ನಾಗಮ್ಮ ಪರಿತಪಿಸುತ್ತಿದ್ದಾಳೆ. ಗಂಗಮ್ಮ 20 ರ ಹರೆಯದ ಯುವತಿ. ಮನೆಯಲ್ಲಿ ಇವಳೇ ಆಧಾರ ಸ್ತಂಭ. ಇಬ್ಬರು ಹೆಣ್ಣು, ಇಬ್ಬರು ಗಂಡು ಮಕ್ಕಳ ನಾಗಮ್ಮಳ ಕುಟುಂಬದಲ್ಲಿ ಚುರುಕಾಗಿದ್ದವಲೇ ಗಂಗಮ್ಮ. ಇಂದು ಅವಳಿಲ್ಲದ್ದು ಕುಟುಂಬಕ್ಕೆ ದಿಕ್ಕು ತೋಚದಂತೆ ಮಾಡಿದೆ.