ನಾವು 2ಎ ಮೀಸಲಾತಿ ಪಡೆದೇ ಪಡೆಯುತ್ತೇವೆ. ಎಲ್ಲರೂ ಒಂದಾದರೆ ಪರಿಸ್ಥಿತಿ ಬಿಗಡಾಯಿಸುತ್ತದೆ. ನಮ್ಮ ಸಮಾಜದವರು ಹೆದರುವ ಅವಶ್ಯಕತೆ ಇಲ್ಲ. ಯಾರಿಗೂ ಅಪ್ಪಾಜಿ ಅನ್ನುವ ಅವಶ್ಯಕತೆ ಇಲ್ಲ: ಬಸನಗೌಡ ಪಾಟೀಲ ಯತ್ನಾಳ್
ಬೆಳಗಾವಿ/ಮೂಡಲಗಿ(ಅ.08): ಯಡಿಯೂರಪ್ಪನವರನ್ನು ತಗೊಂಡು ತಿರುಗಾಡಿದರೆ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ನೀವು ಲಗಾ ಒಗಿಯುತ್ತಿರಿ ಎಂದು ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು. ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ಶುಕ್ರವಾರ ಪ್ರಥಮ ಪಂಚಮಸಾಲಿ ಮೀಸಲಾತಿ ಹಕ್ಕೊತ್ತಾಯ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿಗೆ ಸೂಚನೆ ನೀಡಿದ್ದೇನೆ ಎಂದು ಯಡಿಯೂರಪ್ಪ ಹೇಳಿಕೆ ನೀಡುತ್ತಾರೆ. ಬೊಮ್ಮಾಯಿ ಅವರೇ ಯಡಿಯೂರಪ್ಪರನ್ನು ಕರೆದುಕೊಂಡು ಪ್ರವಾಸ ಮಾಡಿದರೆ ಕರ್ನಾಟಕದಲ್ಲಿ ಬಿಜೆಪಿ ಲಗಾ ಹೊಡಸ್ತಿರಿ ಎಂದರು.
ಗೌಡ್ರ ಶಾಂತ ಇರಿ. ನೀವು ನಿಮಗೆ ಸಚಿವ ಮಾಡುತ್ತೇನೆ ಎಂದು ಎಲ್ಲರನ್ನು ಕಳಸಿ ನನಗೆ ಹೇಳಿದರು. ಆಗ ನಾನು ಹೇಳಿದೆ ಬೊಮ್ಮಾಯಿ ಅವರೇ ಇನ್ನೂ ಆರು ತಿಂಗಳ ಉಳಿತು ನಾನೇನ ಮಾಡ್ಲಿ ನಮ್ಮ ಸಮಾಜಕ್ಕೆ 2ಎ ಮೀಸಲಾತಿ ನೀಡಿ ಎಂದು ಹೇಳಿದೆ ಎಂದರು.
ಭಾರತಕ್ಕೆ ಕಾಲಿಟ್ಟ 5ಜಿ ನೆಟ್‌ವರ್ಕ್: ಮೋಸ ಹೋಗದಿರಿ ಎಚ್ಚರ..!
ನಾವು 2ಎ ಮೀಸಲಾತಿ ಪಡೆದೇ ಪಡೆಯುತ್ತೇವೆ. ಎಲ್ಲರೂ ಒಂದಾದರೆ ಪರಿಸ್ಥಿತಿ ಬಿಗಡಾಯಿಸುತ್ತದೆ. ನಮ್ಮ ಸಮಾಜದವರು ಹೆದರುವ ಅವಶ್ಯಕತೆ ಇಲ್ಲ. ಯಾರಿಗೂ ಅಪ್ಪಾಜಿ ಅನ್ನುವ ಅವಶ್ಯಕತೆ ಇಲ್ಲ. ಪಂಚಮಸಾಲಿ ಸಮಾಜದ ಇಬ್ಬರಿಗೆ ಸಚಿವ ಸ್ಥಾನ ನೀಡಿದ್ದಾರೆ ಎಂದು ಸಚಿವ ನಿರಾಣಿ ವಿರುದ್ಧ ಹರಿಹಾಯ್ದ ಅವರು, ಇತ್ತೀಚೆಗೆ ಬೆಳಗಾವಿಯ ಕೆಲ ಸ್ವಾಮೀಜಿಗಳು ಶಾಸಕರೊಬ್ಬರ ಮಗನ ಜನ್ಮದಿನಾಚರಣೆಗೆ ಹೋಗಿ ನೀವೆ ಉತ್ತರಾಧಿಕಾರಿ ಎಂದು ಆಶೀರ್ವಾದ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೂಡಲಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡುವುದಾಗಿ ಹೇಳಿದ್ದ ಬಿ.ಎಸ್.ಯಡಿಯೂರಪ್ಪ ನೀಡಿಲ್ಲ. ಅವರು ಈಗ ಪಂಚಮಸಾಲಿ ಸಮಾಜದವರ ಮನಸಿನಿಂದ ಹೋರ ಹೋಗಿದ್ದಾರೆ. ಈಗ ಬೊಮ್ಮಾಯಿ ಅವರು ಮೀಸಲಾತಿ ಕೊಡುವುದಾಗಿ ಹೇಳಿದ್ದಾರೆ. ಮೀಸಲಾತಿ ಕೊಡಬೇಕು ಎಂದು ಈ ಬಾರಿ ಬೆಂಗಳೂರು ವಿಧಾನ ಸೌಧಕ್ಕೆ 25 ಲಕ್ಷ ಜನ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸರ್ಕಾರಕ್ಕೆ ಎಚ್ಚರಿಸುವ ಅಗತ್ಯವಿದೆ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೇಲೆ ನಾಲ್ಕು ಬಾರಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವುದಾಗಿ ಹೇಳಿ ಮಾತು ತಪ್ಪಿದ್ದಾರೆ. ಸರ್ಕಾರದ ಕಣ್ಣು ತೆರೆಸಲು ಅರಭಾವಿ ಮತಕ್ಷೇತ್ರದಲ್ಲಿ ಮೊದಲ ಪಂಚಮಸಾಲಿ ಬೃಹತ್ ಸಮಾವೇಶ ಆಯೋಜಿಲಾಗಿದ್ದು ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸುವ ಅತ್ಯಗತ್ಯವಾಗಿದೆ ಎಂದರು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದಷ್ಟುಬೇಗ ಸರ್ವಪಕ್ಷಗಳ ಸಭೆ ಕರೆದು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಮೀಸಲಾತಿ ಹೋರಾಟದ ಪಾದಯಾತ್ರೆ ಆರಂಭ ಮಾಡಿದ ಮೇಲೆ ಪಂಚಮಸಾಲಿ ಸಮಾಜದವರು ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಈ ಸಮಾವೇಶದಲ್ಲಿ ಸಾಕ್ಷಿಯಾಗಿರುವ ಜನಸಂಖ್ಯೆ ತೋರಿಸುತ್ತದೆ ಎಂದರು.
ನಾಲ್ಕು ಬಾರಿ ಮೀಸಲಾತಿ ಕೊಡುವುದಾಗಿ ಹೇಳಿ ಮಾತು ತಪ್ಪಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಯ ಮುಂದೆ ಲಕ್ಷಾಂತರ ಸಂಖ್ಯೆಯಲ್ಲಿ ಪಂಚಮಸಾಲಿ ಸಮಾಜದವರು ಧರಣಿ ಮಾಡಿದ್ದೆವು. ನಾವು ಪ್ರತಿಭಟನೆ ಮಾಡಿದ್ದು ಮಠಕ್ಕೆ ಅನುದಾನ ಕೊಡಿ ಎಂದಲ್ಲ. ನಮ್ಮ ಸಮಾಜದ ಕಣ್ಣೀರು ಒರೆಸುವ ಕೆಲಸ ಸರ್ಕಾರ ಮಾಡಬೇಕೆಂದು ಹೋರಾಟ ಮಾಡಿ ಬಿಸಿ ಮುಟ್ಟಿಸಿದ್ದು ಪಂಚಮಸಾಲಿ ಸಮಾಜ ಎಂದರು.
ಮಾಜಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಬೇಕೆಂದು ಕಳೆದ 25 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಆಗ ನಮಗೆ ಹಿಂದೆ ಗುರು ಇರಲಿಲ್ಲ. ಈಗ ಗುರುಗಳು ಇದ್ದಾರೆ. ಎಲ್ಲರೂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುವುದಿಲ್ಲ ಎನ್ನುತ್ತಿದ್ದವರಿಗೆ ಈಗ ಬಿಸಿ ಮುಟ್ಟುತ್ತಿದೆ. ಮೀಸಲಾತಿ ನೀಡದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಂಚಮಸಾಲಿ ಸಮಾಜ ನೋಡಿಕೊಳ್ಳಿ ಎಂದರು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ ಮಾತನಾಡಿ, ಮೂಡಲಗಿ ಹಾಗೂ ಗೋಕಾಕ ರಾಜಕೀಯ 420 ಹೈವೊಲ್ಟೇಜ್ ಇದ್ದ ಹಾಗೆ. ಪ್ರತಿಯೊಂದು ಕ್ಷೇತ್ರದಲ್ಲಿ ಪಂಚಮಸಾಲಿ ಸಮಾಜದವರು ಸ್ಪರ್ಧಿಸುವಂತಾಗಬೇಕು ಎಂದು ಹಿರಿಯರು ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ನಾವು ರಾಜಕೀಯಕ್ಕೆ ಬರುತ್ತೇವೋ ಬಿಡುತ್ತೇವೋ ನಮ್ಮ ಸಮಾಜಕ್ಕೆ ಮೀಸಲಾತಿ ಪಡೆದೆ ಪಡೆಯುತ್ತೇವೆ ಎಂದರು.
ಅರಭಾವಿ ಮತ ಕ್ಷೇತ್ರದಲ್ಲಿ 1967ರಿಂದ ಇಲ್ಲಿಯವರೆಗೂ ಯಾರು ಕೂಡಾ ಪಂಚಮಸಾಲಿಗಳು ಶಾಸಕರಾಗಲಿ, ಸ್ಪರ್ಧೆಗಳಾಗಲಿ ಇಲ್ಲ ಎಂಬುದು ವಿಪರ್ಯಾಸ ಸಂಗತಿಯಾಗಿದೆ. ಇಷ್ಟುದಿನಗಳ ಕಾಲ ಒಗ್ಗಟ್ಟಾದ ಪಂಚಮಸಾಲಿಗಳು ಶ್ರೀಗಳ ನೇತೃತ್ವದಲ್ಲಿ ಒಗ್ಗಟ್ಟಾಗಿ 2ಎ ಮೀಸಲಾತಿಗಾಗಿ ಹೋರಾಡಿದ್ದು, ಅರಭಾವಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಪಂಚಮಸಾಲಿಗಳು ಸ್ವಂತ ಹಣದಿಂದ ಸಮಾವೇಶ ಆಯೋಜಿಸಿದ್ದು ಎಲ್ಲ ಪಂಚಮಸಾಲಿಗಳ ಹೆಮ್ಮೆಯ ವಿಷಯವಾಗಿದೆ ಅಂತ ಪಂಚಮಸಾಲಿ ಮೀಸಲಾತಿ ಹೋರಾಟ ಸ್ವಾಗತ ಸಮಿತಿ ಗೌರವಾಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದ್ದಾರೆ.
ಲಕ್ಷ್ಮಣ ಸವದಿಗೆ ಸಿಎಂ ಆಗುವ ಸಾಮರ್ಥ್ಯವಿದೆ: ನಟ ವಿಜಯ ರಾಘವೇಂದ್ರ
ಈ ಸಮಾವೇಶದಲ್ಲಿ ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಎಚ್ ಎಸ್ ಶಿವಶಂಕರ, ಮಾಜಿ ಸಚಿವ ವಿನಯ ಕುಲಕರ್ಣಿ, ಎ.ಬಿ ಪಾಟೀಲ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಚನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕ ಶಶಿಕಾಂತ ನಾಯಕ, ಅ.ಭಾ.ಲಿಂ.ಪಂಚಮಸಾಲಿ ಮಹಾಸಭಾ ಬೆಳಗಾವಿ ಘಟಕ ಜಿಲ್ಲಾಧ್ಯಕ್ಷ ಆರ್. ಕೆ. ಪಾಟೀಲ, ನಿಂಗಪ್ಪ ಪೀರೋಜಿ, ರಾಜ್ಯ ಸಾಮಾಜಿಕ ಜಾಲತಾಣ ಅಧ್ಯಕ್ಷ ದೀಪಕ ಜುಂಜರವಾಡ, ಮೂಡಲಗಿ ತಾಲೂಕು ಯುವ ಘಟಕ ಅಧ್ಯಕ್ಷ ಸಂಗಮೇಶ ಕೌಜಲಗಿ ಮೀಸಲಾತಿ ಹೋರಾಟ ಸಮಿತಿ ತಾಲೂಕಾಧ್ಯಕ್ಷ ಮಲ್ಲು ಗೋಡಿಗೌಡರ, ಕಲ್ಲೋಳಿ ಪಟ್ಟಣದ ಸಮಾಜದ ಮುಖಂಡ ಬಾಳಪ್ಪ ಬೆಳಕೂಡ ತಾಲೂಕು ಘಟಕ ಮೂಡಲಗಿ ಅಧ್ಯಕ್ಷ ಬಸಗೌಡ ಪಾಟೀಲ ಸೇರಿದಂತೆ ಅನೇಕ ಗಣ್ಯರು ಹಾಗೂ ತಾಲೂಕಾದಾದಂತ್ಯ ಸಮಾಜದ ಜನರು ಭಾಗವಹಿಸಿದ್ದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅರಭಾವಿ ಮತಕ್ಷೇತ್ರದಲ್ಲಿ ಪಂಚಮಸಾಲಿ ಸಮಾಜದವರು ಸ್ಪರ್ಧೆ ಮಾಡಿ ಶಾಸಕರಾಗಬೇಕು. ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಅರಭಾವಿ ಮತಕ್ಷೇತ್ರದಲ್ಲಿ ಹೆಬ್ಬುಲಿ (ಯತ್ನಾಳ), ಚನ್ನಮ್ಮನಂತೆ (ಲಕ್ಷ್ಮಿ ಹೆಬ್ಬಾಳ್ಕರ) ರಾಯಣ್ಣನಂತೆ (ವಿನಯ ಕುಲಕರ್ಣಿ) ಬಂದಿದ್ದಾರೆ. ನಿಜವಾದ ಪಂಚಮಸಾಲಿ ಸಮಾಜದವರೆ ಆಗಿದ್ದರೆ ಅರಭಾವಿ ಹಾಗೂ ಗೋಕಾಕ, ಚಿಕ್ಕೋಡಿ, ರಾಮದುರ್ಗ, ಅಥಣಿಯಲ್ಲಿ ಪಂಚಮಸಾಲಿ ಸಮಾಜದವರೇ ಶಾಕರಾಗಬೇಕೆಂಬ ಶಪಥ ಮಾಡಿ. ಬಿಜೆಪಿ ಬೇಕೆಂದರೆ ಬಸನಗೌಡ ಪಾಟೀಲ ಯತ್ನಾಳ ಕಡೆ ಹೋಗಿ. ಕಾಂಗ್ರೆಸ್ ಬಂದರೆ ಹೆಬ್ಬಾಳ್ಕರ, ಎ.ಬಿ.ಪಾಟೀಲ ಮಿಕ್ಕಿದರೆ ನನ್ನ ಕಡೆ ಬನ್ನಿ. ಸಮಾವೇಶಕ್ಕೆ ಹೋಗದಂತೆ ಸಾಕಷ್ಟುಬೆದರಿಕೆ ಬಂದಿವೆ. ಆದರೆ ಯಾರೂ ಹೆದರುವ ಅವಶ್ಯಕತೆ ಇಲ್ಲ. ನೀವು ಸಜ್ಜಾಗಿ ಎಲ್ಲ ಪಕ್ಷದಲ್ಲಿಯೂ ನಾವಿದ್ದೇವೆ ಅಂತ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದ್ದಾರೆ.