ಬೀದರ್: ಪರಿಸರ ಸಚಿವರ ಜಿಲ್ಲೆಯಲ್ಲಿ ಪಿಒಪಿ ಗಣೇಶಗೆ ಬೀಳುತ್ತಾ ಬ್ರೇಕ್?

By Kannadaprabha NewsFirst Published Sep 8, 2023, 9:45 PM IST
Highlights

ಗಣೇಶ ಮೂರ್ತಿಗಳ ವಿಸರ್ಜನೆಯಿಂದ ಜಲಕಂಟಕ, ಪರಿಸರ ವಿನಾಶ, ಪ್ರತಿ ಬಾರಿ ಜಿಲ್ಲಾಧಿಕಾರಿಗಳಿಂದ ಜಾರಿಯಾಗುವ ಆದೇಶವು ಕಡತಕ್ಕೆ ಸೀಮಿತ, ಬೆಂಗಳೂರು ಮಾದರಿಯಲ್ಲಿ ಪಿಒಪಿ ಗಣೇಶ ಮೂರ್ತಿ ಬಾಡಿಗೆ ವ್ಯವಸ್ಥೆ ಜಾರಿಯಾಗಲಿ 

ಅಪ್ಪಾರಾವ್ ಸೌದಿ

ಬೀದರ್(ಸೆ.08):  ಶ್ರದ್ಧಾ, ಭಕ್ತಿಯಿಂದ ಪೂಜಿಸಲ್ಪಡುವ ಗಣೇಶ ಮೂರ್ತಿಗಳ ಭರಾಟೆ ಇನ್ನೇನು ಆರಂಭವಾಗಲಿದೆ. ಆದರೆ ಎಂದಿನಂತೆ ಪಿಒಪಿ ಗಣೇಶ ಮೂರ್ತಿಗಳಿಗೆ ನಿರ್ಬಂಧ ಹೇರಿ, ಪರಿಸರ ಸ್ನೇಹಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಕುರಿತಂತೆ ಪರಿಸರ ಮಾಲಿನ್ಯದ ಈ ಕಾಳಜಿ ಎಂದಿನಂತೆ ಜಿಲ್ಲಾಧಿಕಾರಿ ಗಳ ಸಭೆಗೆ, ಸೂಚನಾ ಪತ್ರಗಳಿಗೆ ಸೀಮಿತವಾಗು‍ವುದೇ ಎಂಬ ಅನುಮಾನ ಪರಿಸರ ಸಚಿವರದ್ದೇ ಜಿಲ್ಲೆಯಾಗಿರುವ ಬೀದರ್‌ನಲ್ಲಿ ದಟ್ಟವಾಗಿದೆ.

ಆದರೆ ಈ ಬಾರಿ ಇಡೀ ರಾಜ್ಯಕ್ಕೆ ಪರಿಸರ ಕಾಳಜಿ ತೋರಲು ಸೂಚಿಸುವ, ಮಾಲಿನ್ಯದ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡುವ ಪರಿಸರ ಖಾತೆ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಈಶ್ವರ ಖಂಡ್ರೆಯವರದ್ದಾಗಿದೆ. ಬೀದರ್‌ನಲ್ಲಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಮಾತ್ರ ಅವಕಾಶ ಸಿಕ್ಕು ರಾಜ್ಯಕ್ಕೆ ಮಾದರಿಯಾಗುವ ಸಾಧ್ಯತೆಗಳಿವೆಯಾದರೆ ಈ ನಿಟ್ಟಿನಲ್ಲಿ ಸಚಿವ ಖಂಡ್ರೆ ಅವರು ಕೈಗೊಳ್ಳುವ ನಿರ್ಧಾರದ ಮೇಲೆ ಜಿಲ್ಲಾಧಿಕಾರಿಗಳು ಪರಿಸರ ನಾಶಕ್ಕೆ ಅವಕಾಶ ನೀಡದಂತೆ ಕ್ರಮವಹಿಸುವದು ಪ್ರಮುಖವಾಗಿದೆ.

ಹಳ್ಳ ಹಿಡಿದ ಪ್ರಧಾನಿ ಮಹತ್ವಾಕಾಂಕ್ಷೆ ಯೋಜನೆ: ನೆಲಕಚ್ಚಿದ ಜಲ್ ಜೀವನ್ ಮಿಷನ್ !

ಮಣ್ಣಿನ ಗಣೇಶ ಮೂರ್ತಿಯ ಪ್ರತಿಷ್ಠಾಪನೆಗಾಗಿ ಸಾರ್ವಜನಿಕರಿಗೆ ತರಬೇತಿ ನೀಡುವ ಕುರಿತು ಗಣೇಶ ಮಹಾಮಂಡಲ ಸಭೆಯಲ್ಲಿ ಚರ್ಚೆಗೆ ಬಂದಿದೆಯಾದರೆ ಸಾರ್ವಜನಿಕ ಗಣೇಶ ಸ್ಥಳಗಳಲ್ಲಿ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಬ್ರೇಕ್ ಹಾಕುವ ನಿರ್ಧಾರ ಮಾತ್ರ ಆಗಿಲ್ಲ. ಅತ್ಯಾಕರ್ಷಕ ಗಣೇಶ ಮೂರ್ತಿಗಳು ನಮ್ಮಲ್ಲಿ ಶ್ರದ್ಧಾಭಕ್ತಿ ಉಕ್ಕಿಸುತ್ತವೆ ಎಂಬ ವಾದದ ನಡುವೆ, ಪರಿಸರದ ಮೇಲೆ ದುಷ್ಪರಿಣಾಮ ಬೀರಿ ಗಣೇಶ ಮೂರ್ತಿಗಳ ವಿಸರ್ಜನೆಯಾಗುವ ಕೆರೆ ಕಟ್ಟೆಗಳು, ನದಿ ಹಳ್ಳಗಳ ನೀರು ಮಲಿನವಾಗಿ ಅದರಿಂದ, ಅಂತರ್ಜಲ, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವದಂತೂ ಸತ್ಯ.

ಹೀಗಾಗಿ ಪ್ರತಿ ಬಾರಿಯಂತೆ ಈ ಬಾರಿಯೂ ಪಿಒಪಿ ಗಣೇಶನಿಗೆ ಕೊನೆಯ ಅವಕಾಶ ಎಂದು ಕಣ್ಮುಚ್ಚಿ ಕುಳಿತುಕೊಳ್ಳುವ ಮೂಲಕ ಜೀವಜಲವನ್ನು ವಿಷವನ್ನಾಗಿಸುವ ಪ್ರಯತ್ನಕ್ಕೆ ಬ್ರೇಕ್ ಹಾಕಲು ಸಚಿವ ಈಶ್ವರ ಖಂಡ್ರೆ ಹಾಗೂ ಜಿಲ್ಲಾಡಳಿತ ಮುಂದಾಗಲಿ ಎಂಬುವದು ಪರಿಸರವಾದಿಗಳ ಒತ್ತಾಯ

ಪಿಒಪಿ ಗಣೇಶ ಮೂರ್ತಿ ಬಾಡಿಗೆ ಪಡೆಯಬಹುದು

ಬೃಹತ್ ಗಾತ್ರದ ಅತ್ಯಾಕರ್ಷಕ ಗಣೇಶ ಮೂರ್ತಿಗಳ ಮೂಲಕ ಸಾರ್ವಜನಿಕರನ್ನು ಸೆಳೆದು ಭಕ್ತಿ ಭಾವ ತುಂಬುವ ಗಣೇಶ ಮಹಾಮಂಡಲ, ಸಾರ್ವಜನಿಕ ಗಣೇಶ ಮಂಡಲಗಳ ಪ್ರಯತ್ನ ವ್ಯರ್ಥವಾಗದಿರಲು ಬೆಂಗಳೂರು ಭಾಗದಲ್ಲಿ ಈಗಾಗಲೇ ಚಾಲ್ತಿಗೆ ಬಂದಿರುವಂತೆ ಸಾರ್ವಜನಿಕ ಗಣೇಶ ಮಂಡಳಿಗಳು ತಮಗೆ ಇಷ್ಟವಾಗುವ ಗಣೇಶನ ಮೂರ್ತಿಗಳನ್ನು ಬೇಕಾದಷ್ಟು ದಿನ ಬಾಡಿಗೆ ಪಡೆದು, ನಂತರ ಮೂರ್ತಿಗಳ ಮಾಲೀಕರಿಗೆ ವಾಪಸ್‌ ನೀಡುವ ಪರಿಪಾಠವನ್ನು ಅಳವಡಿಸಿಕೊಳ್ಳಬಹುದಾಗಿದೆ.

ಇನ್ನು ಪಿಒಪಿ ಗಣೇಶನ ಮೂರ್ತಿಯ ಜೊತೆಗೆ ಒಂದು ಮಣ್ಣಿನ ಮೂರ್ತಿಯನ್ನು ಕೂರಿಸಿ ಪೂಜಿಸುತ್ತಾರೆ. ಗಣೇಶ ವಿಸರ್ಜನೆಯ ದಿನ ಮೆರವಣಿಗೆಯ ಅಂತ್ಯದವರೆಗೆ ಎರಡೂ ಜೊತೆಗಿರುತ್ತವೆ. ಮಣ್ಣಿನ ಮೂರ್ತಿ ಯನ್ನು ನೀರಿನಲ್ಲಿ ವಿಸರ್ಜಿಸುತ್ತಾರೆ ಮೆರವಣಿಗೆಯ ನಂತರ ಪಿಒಪಿ ಗಣೇಶನನ್ನು ವಾಪಸ್‌ ನೀಡಲಾಗುತ್ತದೆ.

ಬಾಡಿಗೆ ಪಡೆಯುವ ಮೂಲಕ ಪರಿಸರ ಕಾಳಜಿ ಮೆರೆದು, ಗಣೇಶೋತ್ಸವವನ್ನು ಸಾರ್ವಜನಿಕರು ಮಾಡಬಹುದಾಗಿದೆ. ಪಕ್ಕದ ಹೈದ್ರಾಬಾದ್, ಪುಣೆ ಸೇರಿದಂತೆ ಮತ್ತಿತರೆಡೆ ಪಿಒಪಿ ಗಣೇಶ ಮೂರ್ತಿಗಳನ್ನು ಬಾಡಿಗೆಗೆ ನೀಡುವದನ್ನು ಆರಂಭಿಸಲಾಗಿದೆ.

ಸ್ಟಾಲಿನ್‌ ಮೆಚ್ಚಿಸಲು ಕಾಂಗ್ರೆಸ್‌ನಿಂದ ರಾಜ್ಯದ ರೈತರ ಹಿತ ಬಲಿ: ಶ್ರೀರಾಮುಲು

ಕಾಲಕ್ರಮೇಣ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ ಸಾಧ್ಯ. ಮಣ್ಣಿನ ಗಣೇಶ ವಿಗ್ರಹ ನಿರ್ಮಿಸುವ ಕಾರ್ಯಕ್ಕೆ ಮಹಾಮಂಡಲದಿಂದ ಮಣ್ಣಿನ ಸಂಗ್ರಹ ಮಾಡಿ ಪರಿಸರ ಸ್ನೇಹಿ ಮೂರ್ತಿ ನಿರ್ಮಿಸುವ ತರಬೇತಿ ಕಾರ್ಯಾಗಾರ ನಡೆಸಲು ಮುಂದಾಗಿದ್ದೇವೆ ಎಂದುಬೀದರ್ ಗಣೇಶ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ಹೇಳಿದ್ದಾರೆ. 

ಬೀದರ್ ಜಿಲ್ಲೆಯ ನಗರಸಭೆ, ಪುರಸಭೆಗಳಿಗೆ ಆಯುಕ್ತರು, ಜಿಲ್ಲಾ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಈಗಾಗಲೇ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯಿಂದ ಸುತ್ತೋಲೆಯನ್ನು ಕಳುಹಿಸಲಾಗಿದ್ದು, ಗೌರಿಗಣೇಶ ಹಬ್ಬದಲ್ಲಿ ಪಿಒಪಿ ಗಣೇಶ ಮೂರ್ತಿಗಳ ತಯಾರಿ ಹಾಗೂ ಮಾರಾಟ ಮಾಡುವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಹಾಗೂ ಸಂಪೂರ್ಣ ಮಣ್ಣಿನಿಂದ ಹಾಗೂ ಬಣ್ಣಲೇಪಿತವಲ್ಲದ ವಿಗ್ರಹಗಳನ್ನು ಮಾತ್ರ ಜಲಮೂಲಗಳಿಗೆ ವಿಸರ್ಜನೆ ಮಾಡಲು ವ್ಯವಸ್ಥೆ ಮಾಡುವಂತೆ ಎಂದು ಸೂಚಿಸಲಾಗಿದೆ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. 

click me!