'ಬಳ್ಳಾರಿಯಲ್ಲಿ ಮತ್ತೆ ಗಣಿಗಾರಿಕೆ ಆರಂಭ'

By Kannadaprabha NewsFirst Published Sep 18, 2021, 3:08 PM IST
Highlights

*   ಕೆಐಒಸಿಎಲ್‌ನಿಂದ ಖನಿಜ ಪರಿಶೋಧನೆ ಪ್ರಗತಿಯಲ್ಲಿ
*   2023ರಲ್ಲಿ ದೇವದಾರಿಯಲ್ಲಿ ಕಬ್ಬಿಣ, ಮ್ಯಾಂಗನೀಸ್‌ ಗಣಿಗಾರಿಕೆ
*  1059 ಕೋಟಿ ತ್ರೈಮಾಸಿಕ ಒಟ್ಟು ಆದಾಯ
 

ಮಂಗಳೂರು(ಸೆ.18):  ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿಯಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು ಗಣಿಗಾರಿಕೆ 2023ರಲ್ಲಿ ಆರಂಭವಾಗಲಿದೆ ಎಂದು ಕೆಐಒಸಿಎಲ್ ಎಂಡಿ ಟಿ.ಸಾಮಿನಾಥನ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಈ ಗಣಿಗಾರಿಕೆಗಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಮೊದಲ ಹಂತದ ಅನುಮೋದನೆ ಪಡೆಯಲಾಗಿದ್ದು, 2022ರ ಮಾರ್ಚ್‌ ವೇಳೆಗೆ 2ನೇ ಹಂತದ ಕ್ಲಿಯರ್‌ ನಡೆಯುವ ನಿರೀಕ್ಷೆಯಿದೆ. ಈ ಪ್ರಕ್ರಿಯೆಗಳೆಲ್ಲ ಮುಗಿದು 2023ರ ವೇಳೆಗೆ ಗಣಿಗಾರಿಕೆ ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು. ದೇವದಾರಿಯಲ್ಲಿ 2 ಎಂಟಿಪಿಎ ಕಬ್ಬಿಣದ ಅದಿರು ಮತ್ತು 500 ಟಿಪಿಎ ಮ್ಯಾಂಗನೀಸ್ ಅದಿರಿನ ಸಾಮರ್ಥ್ಯವಿದೆ ಎಂದು ಸಾಮಿನಾಥನ್‌ ಮಾಹಿತಿ ನೀಡಿದರು.

ವಿವಿಧೆಡೆ ಖನಿಜ ಪರಿಶೋಧನೆ: 

ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್‌, ಭಾರತ ಸರ್ಕಾರದ ಗಣಿ ಸಚಿವಾಲಯ, ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ದೇಶದ ವಿವಿಧೆಡೆ ಖನಿಜ ಪರಿಶೋಧನೆ ಕಾರ್ಯಗಳು ವಿವಿಧ ಹಂತಗಳಲ್ಲಿ ನಡೆಯುತ್ತಿವೆ. ಕೆಐಒಸಿಎಲ್ಅಂತಹ ನಾಲ್ಕು ಬ್ಲಾಕ್ಗಳಿಗೆ ಜಿ4 ಮಟ್ಟದ ಖನಿಜ (ನಿಕ್ಕೆಲ್, ಲೈಮ್ಸ್ಟೋನ್, ಡೋಲೊಮೈಟ್) ಪರಿಶೋಧನಾ ಕಾರ್ಯ ಪೂರ್ಣಗೊಳಿಸಿ ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್‌ ವರದಿ ಸಲ್ಲಿಸಿದೆ. ಜತೆಗೆ ಉತ್ತರ ಕರ್ನಾಟಕದಲ್ಲಿ ಕರ್ನಾಟಕ ಸರ್ಕಾರದಿಂದ ಮಂಜೂರಾದ 10 ಕಬ್ಬಿಣ ಮತ್ತು ಮ್ಯಾಂಗನೀಸ್‌ ಕ್ವಾರಿಗಳಲ್ಲಿ ಜಿ2, ಜಿ3 ಮಟ್ಟದ ಪರಿಶೋಧನೆ ಕಾರ್ಯ ಪ್ರಗತಿಯಲ್ಲಿವೆ ಎಂದು ವಿವರಿಸಿದರು.

ಅಕ್ರಮ ಗಣಿಗಾರಿಕೆ ಪತ್ತೆಗೆ ಡ್ರೋಣ್‌ ಸರ್ವೆ : ಎಚ್ಚೆತ್ತುಗೊಂಡ ಇಲಾಖೆ

ಕೆಐಒಸಿಎಲ್‌ ತಯಾರಿಸುವ ಉನ್ನತ ದರ್ಜೆಯ ಕಬ್ಬಿಣದ ಉಂಡೆಗಳಿಗೆ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆ ವಿಸ್ತಾರಗೊಳಿಸಲು ಪ್ರಯತ್ನ ಮುಂದುವರಿದಿದೆ. ಬ್ರೆಝಿಲ್, ಓಮನ್, ಮಲೇಷ್ಯಾ ಮತ್ತಿತರ ದೇಶಗಳಲ್ಲಿ ಚೀನಾದ ಮಾರುಕಟ್ಟೆ ಪಾಲು ಶೇ.44ರಷ್ಟಿದ್ದರೂ, ಅಲ್ಲಿ ಮಾರುಕಟ್ಟೆ ವಿಸ್ತರಣೆಗೆ ಪ್ರಯತ್ನಿಸಲಾಗುತ್ತಿದೆ ಎಂದರು.

1059 ಕೋಟಿ ತ್ರೈಮಾಸಿಕ ಒಟ್ಟು ಆದಾಯ

2020-21ನೇ ಆರ್ಥಿಕ ವರ್ಷದಲ್ಲಿ ಕೆಐಒಸಿಎಲ್ 2477.83 ಒಟ್ಟು ಆದಾಯ ಪಡೆದಿದ್ದು, 410.23 ಕೋಟಿ ರು. ನಿವ್ವಳ ಲಾಭ ದಾಖಲಿಸಿದೆ. 2021-22ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 215.92 ಕೋಟಿ ರು. ತೆರಿಗೆ ನಂತರದ ಆದಾಯ ಪಡೆದಿದೆ. 1059.50 ಕೋಟಿ ರು. ಒಟ್ಟು ಆದಾಯ ದಾಖಲಿಸಿದೆ ಎಂದು ಸಾಮಿನಾಥನ್‌ ತಿಳಿಸಿದರು.

click me!