ವಿಷಾನಿಲ ಸೋರಿಕೆ: ಮೃತ ಕಾರ್ಮಿಕನ ಮೇಲೆ ಗೂಬೆ ಕೂರಿಸಿದ ತನಿಖಾ ತಂಡ..!

By Kannadaprabha News  |  First Published Jul 15, 2022, 2:52 PM IST

ಕಾರ್ಖಾನೆಯಲ್ಲಿ ಔಷಧಿಗಳಿಗೆ ಬಳಸುವ ಪೌಡರ್‌ ತಯಾರಿಸುವ ಸಂದರ್ಭದಲ್ಲಿ ವಿಷಾನಿಲ ಸೋರಿಕೆಯಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪಟ್ಟಣಕುಡಿ ಗುರುಪ್ರಸಾದ ಶಶಿಕಾಂತ ಹಳಿಜೊಳೆ ಎಂಬ ವ್ಯಕ್ತಿ ಉಸಿರುಗಟ್ಟಿ ಮೃತಪಟ್ಟಿದ್ದರು.


ಬೀದರ್‌(ಜು.15):  ವಿಷಾನಿಲ ಸೋರಿಕೆಯಾದ ಪರಿಣಾಮ ಓರ್ವ ಕಾರ್ಮಿಕ ಉಸಿರುಗಟ್ಟಿಮೃತಪಟ್ಟು ಮೂವರು ಚಿಂತಾಜನಕ ಸ್ಥಿತಿಗೆ ತಲುಪಿರುವ ಘಟನೆಗೆ ಸಂಬಂಧಿಸಿದಂತೆ ಮೃತ ಕಾರ್ಮಿಕನದ್ದೇ ತಪ್ಪು ಎಂಬ ಪ್ರಾಥಮಿಕ ತನಖಾ ವರದಿ ಇದೀಗ ಕಾರ್ಮಿಕನ ಮೇಲೆ ಗೂಬೆ ಕೂರಿಸುವ ಕುತಂತ್ರ ಎಂಬ ಆರೋಪಕ್ಕೆ ಗುರಿಯಾಗುತ್ತಿದೆ. ಬುಧವಾರ ಸಂಜೆ 4ರ ಸುಮಾರಿಗೆ ಕಾರ್ಖಾನೆಯಲ್ಲಿ ಔಷಧಿಗಳಿಗೆ ಬಳಸುವ ಪೌಡರ್‌ ತಯಾರಿಸುವ ಸಂದರ್ಭದಲ್ಲಿ ವಿಷಾನಿಲ ಸೋರಿಕೆಯಾಗಿ 4 ಜನ ಕಾರ್ಮಿಕರು ಪ್ರಜ್ಞಾಹೀನರಾಗಿದ್ದರು. ಈ ಪೈಕಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪಟ್ಟಣಕುಡಿ ಗುರುಪ್ರಸಾದ ಶಶಿಕಾಂತ ಹಳಿಜೊಳೆ (40) ಎಂಬ ವ್ಯಕ್ತಿ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದರು.

ಕಾರ್ಖಾನೆಗಳು, ಬಾಯ್ಲರ್‌ಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯು ತಕ್ಷಣವೇ ಕಾರ್ಯಾಚರಣೆಗೆ ಇಳಿದು ಪ್ರಾಥಮಿಕ ತನಖಾ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದು, ರಾಸಾಯನಿಕವನ್ನು ರಿಯಾಕ್ಟರ್‌ ಬಾಯ್ಲರ್‌ಗೆ ಹಾಕುವ ಸಂದರ್ಭದಲ್ಲಿ ಅಚಾತುರ್ಯ ಮಾಡಿರುವ ಗುರುಪ್ರಸಾದ ಅವರ ನಿರ್ಲಕ್ಷವೇ ರಿಯಾಕ್ಟರ್‌ ಒಳಗಡೆ ತಾಪಮಾನ ಹೆಚ್ಚಳವಾಗಿ ವಿಷಾನಿಲ ಹೊರಬಂದು ಹರಡಿ ಈ ಘಟನೆ ಸಂಭವಿಸಿರುತ್ತದೆ ಎಂಬ ವರದಿಯನ್ನು ಸಲ್ಲಿಸಲಾಗಿದೆ.

Latest Videos

undefined

ಬೀದರ್‌: ಶಾಲಾ ಕೋಣೆ ಕುಸಿತ, ತಪ್ಪಿದ ಭಾರೀ ಅನಾಹುತ

ಇನ್ನು ಮಹಾರಾಷ್ಟ್ರದ ನಳದುರ್ಗ ಪಟ್ಟಣದ ಸೌರಭ ದಯಾನಂದ (19) ಮಧ್ಯಪ್ರದೇಶದ ವಿಷ್ಟುದೇವಿಪ್ರಸಾದ (25) ಹಾಗೂ ಗಿರೀಶ್‌ ರೆಡ್ಡಿ ಎಂಬ ಈ ಮೂರ್ವರ ಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಲ್ಪಿಸಲಾಗಿದ್ದು ಗುಣಮುಖರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕಾರ್ಖಾನೆಯ ಕಾರ್ಮಿಕ ಗುರುಪ್ರಸಾದ ಒಬ್ಬರೇ ಇಡೀ ರಾಸಾಯನಿಕ ಪ್ರಕ್ರಿಯೆಯನ್ನು ನಡೆಸಿಕೊಡುತ್ತಿದ್ದರು ಎಂಬಂತೆ ತನಿಖಾ ವರದಿಯಲ್ಲಿ ವ್ಯಕ್ತವಾಗಿದ್ದು, ಇಷ್ಟೊಂದು ಮಹತ್ವದ ಜವಾಬ್ದಾರಿ ಅವರೊಬ್ಬರ ಮೇಲೆ ಬಿಟ್ಟಿದ್ದು ಕಾರ್ಖಾನೆ ಆಡಳಿತ ಮಂಡಳಿ ಲೋಪವಲ್ಲವೇ ಎಂಬ ಬಗ್ಗೆ ಪ್ರಶ್ನೆಗಳು ಉದ್ಭವಿಸಿ ವರದಿ ಅಚ್ಚರಿ ಮೂಡಿಸಿದೆ.

ಬೀದರ್‌: ನಿರಂತರ ಮಳೆಗೆ 118 ಮನೆಗಳು ಕುಸಿತ, ಹೊಲದಲ್ಲಿ ನೀರು ನಿಂತು ಬೆಳೆ ನಾಶ

ಇನ್ನುಳಿದಂತೆ ಕಾರ್ಖಾನೆಯ ರಾಸಾಯನಿಕ ಪ್ರಕ್ರಿಯೆಯಲ್ಲಿ ಯಾರಾರ‍ಯರ ಯಾವ್ಯಾವ ಪಾತ್ರ ಎಂಬ ಉಲ್ಲೇಖ ಪ್ರಾಥಮಿಕ ವರದಿಯಲ್ಲಿ ಲಭ್ಯವಿಲ್ಲವಾದರೂ ಒಬ್ಬರನ್ನೇ ಗುರಿ ಮಾಡಿರುವಂಥದ್ದು ಕಾರ್ಖಾನೆ ಆಡಳಿತ ಮಂಡಳಿಗೆ ಸಹಕರಿಸುವ ಹುನ್ನಾರವೇ ಎಂಬ ಅನುಮಾನ ಮೂಡಿಸುವಂತಿದೆ. ಅಷ್ಟಕ್ಕೂ ಅಂತಿಮ ವರದಿಯಲ್ಲಿ ಎಲ್ಲವೂ ಉಲ್ಲೇಖವಾಗುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.

ಜಿಲ್ಲಾಡಳಿತ ಈ ಕುರಿತಂತೆ ತನಿಖಾ ವರದಿಯನ್ನು ಕೂಲಂಕಶವಾಗಿ ಪರಿಗಣಿಸುವ ಅಗತ್ಯವಿದೆ. ಇಲ್ಲವಾದಲ್ಲಿ ಮೃತರ ಕುಟುಂಬಕ್ಕೆ ಯಾವುದೇ ಸರ್ಕಾರದ್ದಾಗಲಿ, ಕಾರ್ಖಾನೆಯಿಂದಾಗಲಿ ಸಿಗುವ ಸಾಧ್ಯತೆಗಳು ಕ್ಷೀಣಿಸುತ್ತವೆ. ಇತರೆ ಕಾರ್ಖಾನೆಗಳಲ್ಲಿಯೂ ಇಂಥ ಲೋಪದೋಷಗಳನ್ನು ನಿರ್ಲಕ್ಷಿಸಿ ಕಾರ್ಮಿಕರ ಸಾವಿಗೆ ನೋವಿಲ್ಲದಂತೆ ವರ್ತಿಸುವ ಘಟನೆಗಳು ಹೆಚ್ಚುವದರಲ್ಲಿ ಸಂದೇಹವಿಲ್ಲ.
 

click me!