
ಬಾಗಲಕೋಟೆ(ಜು.15): ಜಾನುವಾರುಗಳ ಆರೈಕೆಗೆ ಬೆನ್ನೆಲುಬಾಗಿ ನಿಲ್ಲುವ ಸಲುವಾಗಿ ರಾಜ್ಯದಲ್ಲಿ ಪಶು ಸಂಜೀವಿನಿ ಆ್ಯಂಬುಲೆನ್ಸ್ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಗೂ ಶೀಘ್ರ ಆ್ಯಂಬುಲೆನ್ಸ್ ನೀಡಲಾಗುತ್ತದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದರು. ನವನಗರದ ಯುನಿಟ್-2, ತೋವಿವಿಯ ಹತ್ತಿರ ನೂತನವಾಗಿ ನಿರ್ಮಿಸಲಾದ ಜಿಲ್ಲಾ ಪಶು ಆಸ್ಪತ್ರೆ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, 108 ಮಾದರಿಯಲ್ಲಿ ಪ್ರಾಣಿಗಳಿಗಾಗಿ 1962 ಆ್ಯಂಬುಲೆನ್ಸ್ ಸೇವೆ ನೀಡಲಾಗುತ್ತಿದೆ. ರೈತರು ತಮ್ಮ ಜಾನುವಾರುಗಳಿಗೆ ಜ್ವರ ಬಂದರೆ ಕರೆ ಮಾಡಿದ ತಕ್ಷಣ ವೈದ್ಯರು, ಪರಿವೀಕ್ಷಕರು ಮತ್ತು ಸಿಬ್ಬಂದಿ ನುರಿತ ತಂಡ ಆ್ಯಂಬುಲೆನ್ಸ್ ಸಮೇತ ನಿಮ್ಮ ಮನೆಗೆ ಬಂದು ಚಿಕಿತ್ಸೆ ನೀಡಲಿದ್ದಾರೆ ಎಂದರು.
ಇಲಾಖೆಯಲ್ಲಿ ಬಹಳಷ್ಟು ಬಲಾವಣೆಗಳನ್ನು ತರಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳು ಮಾಡಲಾಗುತ್ತಿದೆ. ಪ್ರತಿ ಜಿಲ್ಲೆಗೆ ಭೇಟಿ ನೀಡಿ ಇಲಾಖೆ ವಿಕಾಸಗೊಳಿಸುವ ನಿಟ್ಟಿನಲ್ಲಿ ಬೇಕಾಗುವ ಸೌಲಭ್ಯಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಪ್ರತಿ ಜಿಲ್ಲೆಗೆ ಗೋಶಾಲೆ ಆಗಬೇಕಿದೆ. ಈ ನಿಟ್ಟಿನಲ್ಲಿ ಪುಣ್ಯಕೋಟಿ ದತ್ತು ಯೋಜನೆ, ಗೋಮಾತಾ ಸಹಕಾರ ಸಂಘ ಯೋಜನೆ ತರಲಾಗಿದೆ. ಜಾನುವಾರುಗಳ ಸಮಸ್ಯೆ ಕುರಿತು ಹೊತ್ತು ಬರುವ ಸಾರ್ವಜನಿಕರಿಗೆ ಕೂಡಲೇ ಸ್ಪಂದಿಸಿ, ಜಾನುವಾರುಗಳ ಪಾಲನೆ, ಪೋಷಣೆ ಮಾಡುವುದು ನಮ್ಮ ದ್ಯೇಯವಾಗಿದೆ ಎಂದರು.
Prabhu Chauhan: ವಿಜಯಪುರದಲ್ಲಿ ಹೊಸ ಪಾಲಿ ಕ್ಲಿನಿಕ್, ಸರ್ಕಾರಿ ಗೋಶಾಲೆ ಲೋಕಾರ್ಪಣೆ
ಅಕ್ರಮ ಕಸಾಯಿಖಾನೆಗಳಿಗೆ ಮುಚ್ಚುವ ಉದ್ದೇಶದಿಂದಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದು, ಗೋಶಾಲೆಗಳ ನಿರ್ಮಾಣ ಮಾಡಲಾಗುತ್ತಿದೆ. ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ, ಪ್ರಾಣಿ ಕಲ್ಯಾಣ ಮಂಡಳಿ, ಪಶು ಸಹಾಯವಾಣಿ 1962, ಪಶು ಸಂಚಾರಿ ಚಿಕಿತ್ಸಾಲಯ, ಪಶು ಚಿಕಿತ್ಸಾಲಯಗಳು, ಗೋಶಾಲೆಗಳ ನಿರ್ಮಾಣ, ಗೋಮಾತಾ ಸಹಕಾರ ಸಂಘ, ಪುಣ್ಯಕೋಟಿ ದತ್ತು ಯೋಜನೆ, ಪಶು ವೈದ್ಯರ, ವೈದ್ಯಕೀಯ ಪರಿವೀಕ್ಷಕರ ನೇಮಕಾತಿ, ಇಲಾಖೆಯಲ್ಲಿ ಮುಂಬಡ್ತಿ ಹಾಗೂ ಆಡಳಿತಕ್ಕೆ ವೇಗ ಹೆಚ್ಚಿಸುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ನೂತನ ಪಾಲಿಕ್ಲಿನಿಕ್ ನಿರ್ಮಾಣಕ್ಕೆ ಒಂದು ಎಕರೆ ಜಾಗ ಕೊಡಿಸುವಲ್ಲಿ ಶ್ರಮಿಸಿದ ವೀರಣ್ಣ ಚರಂತಿಮಠ ಅವರಿಗೆ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ರಾಜ್ಯದಲ್ಲಿ ಗೋವುಗಳ ರಕ್ಷಣೆಯಾಗಿದೆ. ಹಳೇ ಪಶು ಆಸ್ಪತ್ರೆ ಸ್ಥಳಾಂತರದಿಂದ ಅಲ್ಲಿನ ಜಾನುವಾರುಗಳಿಗೆ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸುವಂತೆ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಖಾಸಗಿ ಗೋಶಾಲೆಗಳು ಅನೇಕ ವರ್ಷಗಳಿಂದ ಗೋವುಗಳ ಸೇವೆಯಲ್ಲಿ ತೊಡಗಿಸಿಕೊಂಡಿವೆ. ಅವುಗಳ ಬಲಪಡಿಸುವ ನಿಟ್ಟಿನಲ್ಲಿ
ಸರ್ಕಾರದಿಂದ ವಿಶೇಷ ಅನುದಾನ ನೀಡುವಂತೆ ಸಚಿವರಿಗೆ ಮನವಿ ಮಾಡಿದರು. ಹಳೆ ಬಾಗಲಕೋಟೆಯಲ್ಲಿ ಪಶು ಆಸ್ಪತ್ರೆ ಕಾರ್ಯನಿರ್ವಹಿಸುವಂತೆ ಆಗಬೇಕು ಎಂದರು.
ಇದೇ ಸಂದರ್ಭದಲ್ಲಿ ಸಚಿವರಾದ ಪ್ರಭು ಚವ್ಹಾಣ್, ಶಾಸಕ ವೀರಣ್ಣ ಚರಂತಿಮಠ ಅವರನ್ನು ಇಲಾಖೆ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ. ಗದ್ದಿಗೌಡರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ತೋಟಗಾರಿಕಾ ವಿವಿಯ ಕುಲಪತಿ ಡಾ. ಕೆ.ವೈ. ಇಂದ್ರೇಶ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಶಶಿಧರ್ ನಾಡಗೌಡರ, ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಆರ್.ಎ. ಕುಲಕರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಗೋಮಾತೆಗೆ ಪೂಜೆ ಸಲ್ಲಿಸಿದ ಸಚಿವ
ಪ್ರಾರಂಭದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾ ಪಶು ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟಿಸಿ, ಕಟ್ಟಡದಲ್ಲಿರುವ ಸಹಾಯವಾಣಿ ಕೇಂದ್ರ, ಪ್ರಯೋಗಾಲಯ, ಕ್ರಿಮಿಶುದ್ಧೀಕರಣ, ಸ್ಕ್ರಬ್ಬಿಂಗ್ ಕೊಠಡಿ, ಸಣ್ಣ ಪ್ರಾಣಿಗಳ ಶಸ್ತ್ರ ಚಿಕಿತ್ಸಾ ಕೊಠಡಿ, ಕ್ಷ-ಕಿರಣ, ಸಿಬ್ಬಂದಿ ಕೊಠಡಿ, ಸಣ್ಣ ಪ್ರಾಣಿಗಳ ಒಳ ವಿಭಾಗ, ದೊಡ್ಡ ಪ್ರಾಣಿಗಳ ಹೊರರೋಗಿಗಳ ವಿಭಾಗ, ಔಷಧ ದಾಸ್ತಾನು ಕೋಣೆಗಳನ್ನು ವೀಕ್ಷಿಸಿದರು.
Bagalkote: ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ರಿಂದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ!
ಹಾಲಿನ ಪೌಡರ್‌ಗೂ ಚವ್ಹಾಣಗೂ ಏನು ಸಂಬಂಧ?
ಬಾಗಲಕೋಟೆ: ಹಾಲಿನ ಪೌಡರ್ ಅಳತೆಯ ವಿಷಯದಲ್ಲಿ ಪ್ರತಿಕ್ರಿಯೆ ನೀಡಿದ್ದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿಕೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ ಪ್ರತಿಕ್ರಿಯೆ ನೀಡಿದ್ದು ಹಾಲಿನ ಪೌಡರ್ ಅಳತೆಯ ವಿಷಯಕ್ಕೂ ಪ್ರಭು ಚವ್ಹಾಣಗೂ ಏನು ಸಂಬಂಧ? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ನಿಗದಿಪಡಿಸಿದ ಪ್ರಮಾಣದಲ್ಲಿ ಮಕ್ಕಳಿಗೆ ಹಾಲಿನ ಪೌಡರ್ ನೀಡಲಾಗುತ್ತಿದೆ. ಬಜೆಟ್‌ನಲ್ಲಿ ಮುಖ್ಯಮಂತ್ರಿ ಘೋಷಣೆ ಪ್ರಕಾರ ಹಾಲಿನ ಪೌಡರ್ ಕೊಡುತ್ತಿದ್ದೇವೆ. ಹಾಲಿನ ಪೌಡರ್ ಅನ್ನು ಆಕಳ ಮತ್ತು ಎಮ್ಮೆ, ಎತ್ತಿಗೆ ಪ್ರಭು ಚವ್ಹಾಣ ಕೊಡತಾನೇನು? ಸರ್ಕಾರದ ಮಾರ್ಗಸೂಚಿಯಂತೆ ಹಾಲಿನ ಪೌಡರ್ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.