9200 ಕೃಷಿ ಹೊಂಡಗಳ ಸತ್ಯಾಸತ್ಯತೆ ಅರಿಯಲು ತನಿಖೆ| ರಾಜ್ಯದಲ್ಲಿಯೇ ಅತಿ ಹೆಚ್ಚು ಕೃಷಿ ಹೊಂಡ ಕೊಪ್ಪಳ ಜಿಲ್ಲೆಯಲ್ಲಿ ನಿರ್ಮಾಣ| ಕಳೆದ ಏಳು ವರ್ಷಗಳಲ್ಲಿ ಜಿಲ್ಲೆಯಲ್ಲಿ ಕೃಷಿ ಹೊಂಡ ನಿರ್ಮಾಣದಲ್ಲಿ ಬಾರಿ ಅಕ್ರಮವಾಗಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ದೊರೆತಿದೆ|
ಸೋಮರಡ್ಡಿ ಅಳವಂಡಿ
ಕೊಪ್ಪಳ[ಡಿ.14]: ಸರಣಿ ಚೆಕ್ ಡ್ಯಾಂ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಈಗ ಕೃಷಿ ಹೊಂಡ ನಿರ್ಮಾಣದ ಸತ್ಯಾಸತ್ಯತೆ ಅರಿಯಲು ಸರ್ಕಾರ ಮುಂದಾಗಿದ್ದು, ತನಿಖೆ ಇಲಾಖೆ ವತಿಯಿಂದಲೇ ನಡೆಯುತ್ತಿದೆ.
ಸಮ್ಮಿಶ್ರ ಸರ್ಕಾರ ಹಾಗೂ ಅದರ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ರಾಜ್ಯದ ಬೇರೆ ಜಿಲ್ಲೆಗಳಿಂತ ಹೆಚ್ಚು ಕೃಷಿ ಹೊಂಡ ನಿರ್ಮಾಣವಾಗಿದ್ದು, ಇವುಗಳ ತನಿಖೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಜಿಲ್ಲೆಯಲ್ಲಿ 14000 ಸಾವಿರಕ್ಕೂ ಅಧಿಕ ಕೃಷಿಹೊಂಡಗಳು ನಿರ್ಮಾಣವಾಗಿವೆ. ಇದರಲ್ಲಿ 9200 ಕೃಷಿ ಹೊಂಡಗಳ ನಿರ್ಮಾಣದ ಕುರಿತು ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. 3200 ಕೃಷಿ ಹೊಂಡಗಳ ನಿರ್ಮಾಣದ ಕುರಿತು ಸಾಕಷ್ಟು ಆರೋಪಗಳು ಇವೆ ಎನ್ನಲಾಗಿದೆ.
ಭಾರಿ ಅಕ್ರಮ:
ಕಳೆದ ಏಳು ವರ್ಷಗಳಲ್ಲಿ ಜಿಲ್ಲೆಯಲ್ಲಿ ಕೃಷಿ ಹೊಂಡ ನಿರ್ಮಾಣದಲ್ಲಿ ಬಾರಿ ಅಕ್ರಮವಾಗಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ದೊರೆತಿದೆ. ಶಾಸಕರೊಬ್ಬರು ಸರ್ಕಾರಕ್ಕೆ ಈ ಕುರಿತು ಮಾಹಿತಿ ನೀಡಿ, ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಬಹುತೇಕ ಕೃಷಿ ಹೊಂಡಗಳ ನಿರ್ಮಾಣವೇ ಆಗಿಲ್ಲ. ಕೇವಲ ಫೋಟೋಗಳನ್ನು ತೆಗೆಸಿಕೊಂಡು, ಇಲಾಖೆ ವರದಿ ಸಿದ್ಧ ಮಾಡಿ, ಹಣ ಬಿಡುಗಡೆ ಮಾಡಲಾಗಿದೆ. ಆದರೆ, ವಾಸ್ತವದಲ್ಲಿ ಕೃಷಿ ಹೊಂಡವೇ ಇಲ್ಲ ಎನ್ನಲಾಗಿದೆ. ಹೀಗಾಗಿ, ಇದರ ತನಿಖೆಯನ್ನು ಮಾಡುವುದಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಇಲಾಖಾ ತನಿಖೆಯನ್ನು ಪ್ರಾರಂಭಿಸಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೃಷಿ ಹೊಂಡವನ್ನು ತೆಗೆದ ತೋರ್ಪಡಿಕೆಗಾಗಿ ತೋಡಿ, ನಂತರ ಮತ್ತೆ ಮುಚ್ಚಲಾಗಿದೆ. ಹೀಗಾಗಿ ಇದರಿಂದ ಸರ್ಕಾರದ ಉದ್ದೇಶವೇ ಮಣ್ಣುಪಾಲಾಗಿದೆ. ಸರ್ಕಾರ ಅಂತರ್ಜಲ ಹೆಚ್ಚಳ ಮಾಡುವ ಉದ್ದೇಶದಿಂದ ಕೃಷಿಹೊಂಡ ನಿರ್ಮಾಣಕ್ಕೆ ಲಕ್ಷಾಂತರ ರುಪಾಯಿ ಸಹಾಯಧನ ನೀಡುತ್ತಿದೆ. ಆದರೆ, ಸಹಾಯಧನ ಪಡೆಯುವುದಕ್ಕಾಗಿಯೇ ತೋರ್ಪಡಿಕೆಗೆ ಕೃಷಿ ಹೊಂಡವನ್ನು ನಿರ್ಮಾಣ ಮಾಡಿರುವುದು ಜಗಜ್ಜಾಹೀರಾತು. ಈಗ ಅದನ್ನೇ ತನಿಖೆ ಮಾಡುವುದರಿಂದ ಸತ್ಯ ಬೆಳಕಿಗೆ ಬರಲಿದೆ.
ಅಧಿಕಾರಿಗಳೇ ಪಾಲುದಾರರು:
ಕೃಷಿ ಹೊಂಡದಲ್ಲಿ ಅಧಿಕಾರಿಗಳು ಪಾಲುದಾರರು ಆಗಿದ್ದಾರೆ. ಕೃಷಿ ಹೊಂಡ ತೋಡುವ ಜೆಸಿಬಿಯಿಂದ ಹಿಡಿದು ಎಲ್ಲವನ್ನು ಇಲಾಖೆಯ ಅಧಿಕಾರಿಗಳು ಬೇರೊಬ್ಬರ ಮೂಲಕ ಮಾಡಿಸಿ ಸರ್ಕಾರದ ಹಣವನ್ನು ಕೊಳ್ಳೆ ಹೊಡೆದಿದ್ದಾರೆ. ಇಲ್ಲದ ಕೃಷಿ ಹೊಂಡಗಳಿಗೆ ಕೋಟಿ ಕೋಟಿ ರುಪಾಯಿ ಪೋಲಾಗಿದೆ. ಕೃಷಿ ಹೊಂಡ ಮಂಜೂರಾತಿಯ ದಂಧೆ ಮತ್ತೊಂದು ಕಡೆ ನಡೆದಿದೆ. ಇಂತಿಷ್ಟು ನೀಡಿದರೆ ಕೃಷಿ ಹೊಂಡದ ಯೋಜನೆಯನ್ನು ಮಂಜೂರಿ ಮಾಡಿಸಿ, ನಿಮ್ಮ ಖಾತೆಗೆ ಹಣ ಜಮೆ ಮಾಡಲಾಗುವುದು. ಇದಕ್ಕಾಗಿ ಇಂತಿಷ್ಟು ಕೊಡಬೇಕು ಎನ್ನುವುದರ ಕುರಿತು ಈಗ ತನಿಖೆ ನಡೆಯುತ್ತಿದೆ.
ಹೀಗೂ ನಡೆಯಲಿ ತನಿಖೆ
ತನಿಖೆ ನಡೆಯುವ ವೇಳೆಯಲ್ಲಿ ಕೇವಲ ಕೃಷಿ ಹೊಂಡ ನಿರ್ಮಾಣದ ಸತ್ಯಾಸತ್ಯತೆ ಅರಿಯದೇ ಕೃಷಿ ಹೊಂಡ ನಿರ್ಮಾಣಕ್ಕೆ ಬಂದಿರುವ ಅನುದಾನ ಜೆಸಿಬಿ ಬಾಡಿಗೆಯ ಹೆಸರಿನಲ್ಲಿ ಯಾರ ಖಾತೆಗೆ ಜಮೆಯಾಗಿದೆ ಎನ್ನುವುದು ಮುಖ್ಯ. ಕೇವಲ ನಾಲ್ಕಾರು ಗಂಟೆ ಕೆಲಸ ಮಾಡಿ, 40-50 ಗಂಟೆಯ ಬಿಲ್ ಎತ್ತಲಾಗಿದೆ. ಇದಕ್ಕೆ ಅಧಿಕಾರಿಗಳು ಸಾಥ್ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಕೊಪ್ಪಳ ಕೃಷಿ ಇಲಾಖೆ ಶಬನಾಶೇಖ ಜೆಡಿ ಅವರು, ಕೃಷಿ ಹೊಂಡಗಳ ನಿರ್ಮಾಣದ ಕುರಿತು ತನಿಖೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಅದು ಗೌಪ್ಯವಾಗಿರುವುದರಿಂದ ಅದನ್ನು ಹೇಳಲು ಬರುವುದಿಲ್ಲ. ತನಿಖೆಯನ್ನಂತೂ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.