ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯ ವಿಶೇಷ ಶಾಲಾ ಲಸಿಕಾ ಅಭಿಯಾನ| ಊಟಕ್ಕೆ ಮುನ್ನ ಡಿಟಿ ಲಸಿಕೆ|ಹೆಬಸೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ನಡೆದ ಅವಘಡ|
ಹುಬ್ಬಳ್ಳಿ[ಡಿ.14]: ಮಧ್ಯಾಹ್ನದ ಊಟಕ್ಕೆ ಮುನ್ನ ಡಿಟಿ ಚುಚ್ಚುಮದ್ದು ನೀಡಿದ ಪರಿಣಾಮ ತಾಲೂಕಿನ ಹೆಬಸೂರು ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆಯ 28 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಆತಂಕಕ್ಕೆ ಕಾರಣವಾದ ಘಟನೆ ಶುಕ್ರವಾರ ನಡೆದಿದೆ. ಎಲ್ಲ ಮಕ್ಕಳಿಗೆ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಇದೀಗ ಚೇತರಿಸಿಕೊಂಡಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಹರಡಿದ್ದ ಸಾಂಕ್ರಾಮಿಕ ಕಾಯಿಲೆ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯ ವಿಶೇಷ ಶಾಲಾ ಲಸಿಕಾ ಅಭಿಯಾನದಡಿ ಡಿಟಿ (ಡೆಫ್ತಿರಿಯಾ ಟಿಟನಸ್) ಚುಚ್ಚುಮದ್ದು ನೀಡಲಾಗುತ್ತಿದೆ. ಅದರಂತೆ ಶುಕ್ರವಾರ ಮಧ್ಯಾಹ್ನ ಪ್ರಾಥಮಿಕ ಆರೋಗ್ಯ ಉಪಕೇಂದ್ರದಿಂದ ಹೆಬಸೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಚುಚ್ಚುಮದ್ದು ನೀಡಲಾಗಿದೆ. ಆದರೆ, ಚುಚ್ಚುಮದ್ದು ಪಡೆದ ಕೆಲಸಮಯದ ಬಳಿಕ ವಿದ್ಯಾರ್ಥಿನಿ ಹೆಬಸೂರಿನ ದಿಯಾ ಅಕ್ಕಿ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿದ್ದಾಳೆ. ಇದಾದ ನಂತರ ಚುಚ್ಚುಮದ್ದು ಪಡೆದ ಎಲ್ಲ ಮಕ್ಕಳಿಗೆ ವಾಂತಿ, ತಲೆನೋವು ಉಂಟಾಗಿ ಬಳಲಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ತಕ್ಷಣ ಮಕ್ಕಳನ್ನು ಆ್ಯಂಬುಲೆನ್ಸ್ ಮೂಲಕ ಕಿಮ್ಸ್‌ಗೆ ಕರೆತಂದು ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ. ಮಕ್ಕಳು ಚೇತರಿಸಿಕೊಂಡಿದ್ದು, ಶನಿವಾರ ಬೆಳಗ್ಗೆವರೆಗೆ ಆಸ್ಪತ್ರೆಯಲ್ಲಿಟ್ಟುಕೊಂಡು ಬಳಿಕ ಮನೆಗೆ ಕಳುಹಿಸಲು ವೈದ್ಯರು ನಿರ್ಧರಿಸಿದರು.
ಕಿಮ್ಸ್‌ಗೆ ಆಗಮಿಸಿದ ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಮಕ್ಕಳ ಆರೋಗ್ಯದ ಕುರಿತಾಗಿ ವೈದ್ಯರಿಂದ ಮಾಹಿತಿ ಪಡೆದರು. ಬಳಿಕ ಮಾಧ್ಯಮದ ಜತೆ ಮಾತನಾಡಿ, ಊಟಕ್ಕಿಂತ ಮೊದಲು ಮಕ್ಕಳಿಗೆ ಲಸಿಕೆ ಹಾಕಿದ್ದರಿಂದ ಅಸ್ವಸ್ಥಗೊಂಡಿದ್ದಾರೆ. ಊಟದ ನಂತರವೇ ಲಸಿಕೆ ಹಾಕಬೇಕು ಎಂದು ಈಗಾಗಲೇ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದೇವೆ. ಮಕ್ಕಳನ್ನು ಶನಿವಾರ ಬೆಳಗ್ಗೆ ಆಸ್ಪತ್ರೆಯಿಂದ ಕಳುಹಿಸಲು ನಿರ್ಧರಿಸಲಾಗಿದೆ ಎಂದರು. ಜಿಲ್ಲಾ ಆರೋಗ್ಯಾಧಿಕಾರಿ ಯಶವಂತ, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ, ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಸಿ ಇದ್ದರು.
ಒಂದೆರಡು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದನ್ನು ಕಂಡು ಉಳಿದವರು ಮಾನಸಿಕ ಭಯದಿಂದ ಅಸ್ವಸ್ಥರಾಗಿದ್ದಾರೆ. ನೀಡಲಾಗಿದ್ದ ಡಿಟಿ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮ ಉಂಟಾಗಿಲ್ಲ. ವಿದ್ಯಾರ್ಥಿಗಳು ಗುಣಮುಖರಾಗಿದ್ದಾರೆ ಎಂದು ಡಾ. ರಾಮಲಿಂಗಪ್ಪ ಅಂಟರತಾನಿ ಅವರು ತಿಳಿಸಿದ್ದಾರೆ.