
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದ ತನಿಖೆ ಮತ್ತೆ ಚುರುಕುಗೊಂಡಿದೆ. 8 ತಿಂಗಳ ಹಿಂದೆ 7 ಅಸ್ಥಿಪಂಜರ ಪತ್ತೆಯಾಗಿದ್ದ ಧರ್ಮಸ್ಥಳದ ನೇತ್ರಾವತಿಯ ಬಂಗ್ಲೆಗುಡ್ಡೆ ಕಾಡಿಗೆ ಎಸ್‌ಐಟಿ, ವಿಧಿವಿಜ್ಞಾನ ಪ್ರಯೋಗಾಲಯ ತಂಡ ಗುರುವಾರ ಭೇಟಿ ನೀಡಿದೆ.
ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿ ಬಂದ ಚಿನ್ನಯ್ಯ ಆರಂಭದಲ್ಲಿ ನ್ಯಾಯಾಲಯಕ್ಕೆ ತಂದಿದ್ದ ತಲೆಬುರುಡೆಯನ್ನು ಬಂಗ್ಲೆಗುಡ್ಡೆಯಲ್ಲಿ ತೆಗೆಯಲಾಗಿತ್ತು. ಬಂಗ್ಲೆಗುಡ್ಡೆಯಲ್ಲಿ ಸೌಜನ್ಯ ಮಾವ ವಿಠಲ್ ಗೌಡ ಮತ್ತು ಬಂಟ್ವಾಳ ನಿವಾಸಿ ಪ್ರದೀಪ್ ಕುಲಾಲ್, ಮಾನವನ ತಲೆ ಬುರುಡೆ ತೆಗೆದ ಸ್ಥಳದಲ್ಲಿ ವಿಡಿಯೋ ಮಾಡಿದ್ದು, ಅದು ವೈರಲ್ ಆಗಿತ್ತು. ಮಾನವನ ಈ ‘ತಲೆ ಬುರುಡೆ’ ತೆಗೆದು ಅದರ ವಿಡಿಯೋ ಮಾಡಿದ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ಬಂಗ್ಲೆಗುಡ್ಡೆಯಲ್ಲಿ ಮತ್ತೆ ಕಾರ್ಯಾಚರಣೆಗೆ ಇಳಿದಿದ್ದಾರೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಈ ಘಟನೆಗೆ ಸಂಬಂಧಿಸಿದಂತೆ ಮರು ಸೃಷ್ಟಿ ಮಾಡಿ ಘಟನಾ ಸ್ಥಳವನ್ನು ಪರಿಶೀಲಿಸಲು ಮುಂದಾಗಿದ್ದು, ಬಂಗ್ಲೆಗುಡ್ಡೆಯಲ್ಲಿ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಎಸ್‌ಐಟಿ ಅಧಿಕಾರಿಗಳ ಜೊತೆ ಎಫ್ಎಸ್ಎಲ್ ತಜ್ಞರು ಮತ್ತು ಸೋಕೋ ತಂಡದವರು ಕೂಡ ಬೆಂಗಳೂರಿನಿಂದ ಆಗಮಿಸಿದ್ದು, ಈ ಪ್ರಕರಣ ಖಚಿತಪಡಿಸಿ ಎಸ್ಐಟಿಗೆ ವರದಿ ನೀಡಲಿದ್ದಾರೆ. ಗುರುವಾರ ಮಧ್ಯಾಹ್ನ 2:40ರ ಸುಮಾರಿಗೆ ಅಧಿಕಾರಿಗಳು ಪ್ರಕರಣದ ಸಾಕ್ಷಿಯಾಗಿರುವ ಪ್ರದೀಪ್‌ನನ್ನು ಕರೆದುಕೊಂಡು ಬಂದು, ಪರಿಶೀಲನೆ ನಡೆಸಿ, ಮಹಜರು ಕಾರ್ಯ ಆರಂಭಿಸಿದರು. ಈ ಹಿಂದೆ ನಡೆಸಲಾಗಿದ್ದ ಮಹಜರು ಸಮರ್ಪಕವಾಗಿ ನಡೆದಿಲ್ಲ ಎಂಬ ಕಾರಣಕ್ಕೆ ಇದೀಗ ಮತ್ತೆ ಮಹಜರು ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.