ದಟ್ಟ ಕಾಡಿನ ಮಧ್ಯೆ ಶಿರಗುಣಿ ಕಲ್ಲೇಶ್ವರನ ಸನ್ನಿಧಿ, ಪ್ರತಿದಿನ ಶಿವನ ಆರಾಧನೆ

By Suvarna NewsFirst Published Sep 13, 2020, 5:49 PM IST
Highlights

ಕಲ್ಲೇಶ್ವರನ ಸನ್ನಿಧಿಗೆ ನಿಮಗೆ ಸ್ವಾಗತ/ ಯಾವ ಸಮಸ್ಯೆ ಇದ್ದರೂ ಪರಿಹಾರ ನೀಡುವ ಶಿವ/ ನಂಬಿಕೆಯಿಟ್ಟು ಪ್ರಾರ್ಥನೆ ಮಾಡಿಕೊಂಡರೆ ಸಾಕು/ ದಟ್ಟ ಅರಣ್ಯದಲ್ಲಿ ನೆಲೆನಿಂತ ಶಿವನ ವೈಭವ ಕಂಡೇ  ಧನ್ಯರಾಗಬೇಕು

ಶಿರಸಿ/ ಸಿದ್ದಾಪುರ(ಸೆ. 13)  ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಂಚಿಕೈ ಗ್ರಾಮದ ಈ ದೇವಾಲಯಕ್ಕೆ ಐತಿಹಾಸಿಕ ಪರಂಪರೆ ಇದೆ.  ಸುತ್ತಲೂ ದಟ್ಟ ಅರಣ್ಯ, ಎದುರಿನಲ್ಲಿ ವಿದ್ಯಾದೇಗುಲ, ಸದಾ ಜಿನುಗುವ ನೀರು.. ಪರಿಸರವೇ  ಒಂದು ವೈಭವ.

ಕಲ್ಲೇಶ್ವರನ ಸನ್ನಿಧಿಗೆ ನಿಮ್ಮೆಲ್ಲರಿಗೂ ಸ್ವಾಗತ.   ಶಿರಸಿ -ಹೆಗ್ಗರಣಿ- ಸಿದ್ದಾಪುರ  ರಸ್ತೆ ಮಾರ್ಗದ ಶಿರಗುಣಿ ಸಮೀಪ ಈ ಪುರಾತನ ದೇವಾಲಯ ನೆಲೆ ನಿಂತಿದೆ. ಕಲ್ಲೇಶ್ವರನ  ಆಶೀರ್ವಾದ ಬೇಡಲು ಭಕ್ತರು ಬರುತ್ತಲೇ ಇರುತ್ತಾರೆ.

ಶಿರಸಿ ಮಾರ್ಗವಾಗಿ ಬಂದರೆ ಕರ್ಕಿಹಕ್ಕಲು ಎಂಬ ಊರು ನಿಮಗೆ ಎದುರಾಗುತ್ತದೆ. ಅಲ್ಲಿಂದ ಕೊಂಚ ದೂರ ಕ್ರಮಿಸಿದರೆ ಬಲಭಾಗಕ್ಕೆ ಒಂದು ಮಣ್ಣು ರಸ್ತೆಯಿದೆ. ಸುತ್ತಲೂ ದಟ್ಟ ಅರಣ್ಯದಿಂದ ಆವೃತವಾಗಿರುವ ಮಣ್ಣು ರಸ್ತೆಯಲ್ಲಿ ಅನತಿ ದೂರ ಕ್ರಮಿಸಿದರೆ ದೇವಾಲಯದ ಭವ್ಯ ದೃಶ್ಯ. 

ಬಣ್ಣ ಬದಲಾಯಿಸುವ ಕಲಬುರಗಿಯ ಗಣಪತಿ

ಕಲ್ಲೇಶ್ವರ ದೇವಸ್ಥಾನ ಶಿರಗುಣಿ  ಈ ಭಾಗದಲ್ಲಿ ಸಿರಿಗನ್ನರೆ  ಎಂದೇ ಚಿರಪರಿಚಿತ.  ಕೊರೋನಾದ ಸಂಕಷ್ಟ ದೂರ ಮಾಡಲು ಜನರು ಶಿವನಲ್ಲಿ ಪ್ರತಿದಿನ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. 

ಈ ಕಲ್ಲೇಶ್ವರ ನಂಬಿದವರನ್ನು ಎಂದಿಗೂ ಕೈಬಿಟ್ಟವನಲ್ಲ. ಒಮ್ಮೆ ಶಾಲಾ ಮುಖ್ಯೋಪಾಧ್ಯಾಯರೊಬ್ಬರು ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದ್ದರು. ಪರಿಹಾರ ಸಿಗುವ ಎಲ್ಲ ಮಾರ್ಗಗಳು ಬಂದ್ ಆಗಿತ್ತು. ಅವರ ಹುದ್ದೆಗೆ ಸಂಚಕಾರ ಬಂದುಬಿಟ್ಟಿತ್ತು. ಆ ಸಂದರ್ಭದಲ್ಲಿ ಮೊರೆ ಹೋಗಿದ್ದು ಕಲ್ಲೇಶ್ವರನನ್ನು. ಕಲ್ಲೇಶ್ವರನ ನಂಬಿ ಪೂಜೆ ಮಾಡಿಸಿದ ಕೆಲವೇ ದಿನದಲ್ಲಿ ಬೆಟ್ಟದಂತಿದ್ದ ಸಮಸ್ಯೆ ಕಡ್ಡಿಯಾಗಿ ಮರೆಯಾಯಿತು ಎಂದು ಪ್ರಧಾನ ಅರ್ಚಕ ಗೋಪಾಲ್  ವೆಂಕಟ್ರಮಣ ಜೋಶಿ ಮಾಹಿತಿ ನೀಡುತ್ತಾರೆ.

ವಾರ್ಷಿಕವಾಗಿ ದೇವಾಲಯದಲ್ಲಿ ಸಮಾರಾಧನೆ ಕಾರ್ಯಕ್ರಮ ನಡೆಯುತ್ತದೆ. ಸ್ಥಳೀಯರು ಎಲ್ಲರೂ ಒಟ್ಟಾಗಿ ವಿವಿಧ ಸೇವೆ ಸಲ್ಲಿಸುತ್ತಾರೆ. ಸಾಂಪ್ರದಾಯಿಕ ಡೊಳ್ಳು ಕುಣಿತವನ್ನು ಕಣ್ಣು ತುಂಬಿಕೊಳ್ಳಬಹುದು. 

ಕೌಟುಂಬಿಕ ಕಲಹ, ಜಮೀನು ವ್ಯಾಜ್ಯ, ಮೇಯಲು ಬಿಟ್ಟ ಹಸು-ಎಮ್ಮೆಗಳು ಕಣ್ಮರೆಯಾದರೆ ಈ ಕಲ್ಲೇಶ್ವರನಿಗೆ ಒಂದು ಪ್ರಾರ್ಥನೆ ಮಾಡಿಕೊಂಡರೆ ಎಲ್ಲವೂ ಪರಿಹಾರವಾಗುತ್ತದೆ. ಲೋಕ ಕಂಟಕ ಕೊರೋನಾ ಮುಕ್ತಿಗೂ ಭಕ್ತರು ಶ್ರದ್ಧೆಯಿಂದ ಪ್ರಾರ್ಥನೆ ಸಲ್ಲಿಸಿದ್ದಾರೆ.

click me!