*1093 ಸಿಬ್ಬಂದಿ ನಿಯೋಜನೆ
*ನಗರ, ಗ್ರಾಮೀಣ ಪ್ರದೇಶದ ರಸ್ತೆಗಳು ಬಂದ್‌ಗೆ ಸಕಲ ಸಿದ್ಧತೆ
* ಇಂದು ರಾತ್ರಿಯಿಂದಲೇ ಗಡಿಗಳಲ್ಲಿ ಸಿಬ್ಬಂದಿ ನಿಯೋಜನೆ
ಕೊಪ್ಪಳ(ಮೇ.09): ಜಿಲ್ಲೆಯಲ್ಲಿ ಅನ್ಯ ಜಿಲ್ಲೆಯ ಗಡಿ ಪ್ರವೇಶಕ್ಕೆ 8 ಮಾರ್ಗಗಳು ಇದ್ದು, ಅಷ್ಟೂ ಮಾರ್ಗಗಳನ್ನು ಪೂರ್ಣ ಬಂದ್ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಗಡಿಯಲ್ಲಿ ಒಂದೇ ಒಂದು ವಾಹನ ಪ್ರವೇಶ ಮಾಡುವಂತಿಲ್ಲ. ಒಂದೇ ಒಂದು ವಾಹನ ಪ್ರಯಾಣ ಬೆಳೆಸದಂತೆ ಕಟ್ಟೆಚ್ಚರ ವಹಿಸಲಾಗಿದೆ. ಇದಕ್ಕಾಗಿ ಈಗಾಗಲೇ ಪೊಲೀಸ್ ಇಲಾಖೆ ಪ್ರತ್ಯೇಕ ಸಭೆ ನಡೆಸಿ, ಸರ್ಕಾರ ಸೆಮಿಲಾಕ್‌ಡೌನ್ ನಿಯಮಗಳನ್ನು ಪಾಲನೆ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದೆ.
undefined
ಜಿಲ್ಲೆಯಲ್ಲಿ 1093 ಸಿಬ್ಬಂದಿಯನ್ನು ಗಡಿ ಬಂದ್ ಮಾಡಲು ಮತ್ತು ಜಿಲ್ಲಾದ್ಯಂತ ವಾಹನಗಳ ಓಡಾಟ ಸ್ಥಗಿತಗೊಳಿಸಲು ಮೂರು ಶಿಫ್ಟ್‌ನಲ್ಲಿ ನಿಯೋಜನೆ ಮಾಡಲಾಗಿದೆ. ಹೀಗಾಗಿ, ದಿನದ 24 ಗಂಟೆಗಳ ಕಾಲವೂ ವಾಹನ ಓಡಾಟಕ್ಕೆ ಬ್ರೇಕ್ ಹಾಕಲಾಗುತ್ತದೆ.
ಇದನ್ನು ಮೀರಿಯೂ ತುರ್ತು ಸಂದರ್ಭದಲ್ಲಿ ಮತ್ತು ಆರೋಗ್ಯದ ದೃಷ್ಠಿಯಿಂದ ಮಾತ್ರ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗುತ್ತದೆ. ಇವುಗಳೆಲ್ಲವೂ ಪರವಾನಿಗೆ ಪಾಸ್ ಪಡೆದ ವಾಹನಗಳು ಮಾತ್ರ ಆಗಿರುತ್ತವೆ. ಉಳಿದಂತೆ ಒಂದೇ ಒಂದು ಬೈಕ್ ಸಹ ಓಡಾಡದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಕೊಪ್ಪಳದಲ್ಲಿ ರಾಜ್ಯದ ಪ್ರಥಮ ಗ್ರಾಮೀಣ ಕೋವಿಡ್ ಸೆಂಟರ್ ಉದ್ಘಾಟನೆ
ಶಿಫಾರಸ್ಸು ಮಾಡಿದರೆ ವಾಹನ ಸೀಜ್:
ಈ ನಡುವೆ ಶಿಫಾರಸ್ಸು ಮಾಡಿಕೊಂಡು ವಾಹನ ಓಡಾಡಿಸುತ್ತೇವೆ ಎಂದು ಅಂದುಕೊಂಡಿದ್ದರೆ ಅದಕ್ಕೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಈಗಾಗಲೇ ಯೋಜನೆ ರೂಪಿಸಿಕೊಂಡಿದೆ. ಸೆಮಿಲಾಕ್‌ಡೌನ್ ಉಲ್ಲಂಘನೆ ಮಾಡಿ, ಕಳ್ಳ ಮಾರ್ಗದಲ್ಲಿ ತಪ್ಪಿಸಿಕೊಳ್ಳುವ ಯತ್ನ ಮಾಡಿದರೆ ಹಾಗೂ ಯಾರಾದರೂ ಪ್ರಭಾವಿ ವ್ಯಕ್ತಿಗಳಿಂದ ಶಿಫಾರಸ್ಸು ಮಾಡಿದರೆ ಅಂಥ ವಾಹನಗಳನ್ನು ಸ್ಥಳದಲ್ಲಿಯೇ ಸೀಜ್ ಮಾಡಲು ಸನ್ನದ್ಧವಾಗಿದೆ. ಈ ಕುರಿತು ಮೌಖಿಕ ಸೂಚನೆ ನೀಡಲಾಗಿದೆ. ಅಂಥ ಯಾವ ಶಿಫಾರಸ್ಸಿಗೂ ಅವಕಾಶ ನೀಡದೇ ಮುಲಾಜಿಲ್ಲದೆ ಸೀಜ್ ಮಾಡಿ ಎನ್ನುವ ಸಂದೇಶ ಕಳುಹಿಸಲಾಗಿದೆ.
ಕಾಲ್ನಡಿಗೆಯೇ ದಾರಿ:
ಈಗ ಇರುವ ದಾರಿ ಎಂದರೆ ಕಾಲ್ನಡಿಗೆ ಮಾತ್ರ. ಅದರ ಹೊರತಾಗಿ ಯಾವ ವಾಹನಕ್ಕೂ ಅವಕಾಶ ಇಲ್ಲ. ಕಾಲ್ನಡಿಗೆಯಲ್ಲಿ ಅಕ್ಕಪಕ್ಕದಲ್ಲಿಯೇ ನೀವು ಏನಾದರೂ ಖರೀದಿ ಮಾಡಲು ಸುತ್ತಾಡಬಹುದು. ಆದರೆ, ಯಾವುದೇ ಕಾರಣಕ್ಕೂ ನಿಮ್ಮ ಬೈಕ್ ಸಹ ಏರವಂತೆ ಇಲ್ಲ ಎನ್ನುವ ಸೂಚನೆ ನೀಡಲಾಗಿದೆ.\
ಈ ಕುರಿತು ಭಾನುವಾರ ಮತ್ತಷ್ಟುಜಾಗೃತಿಯನ್ನು ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆ ಮೂಡಿಸಲು ನಿರ್ಧರಿಸಿದೆ. ಯಾವುದೇ ಕಾರಣಕ್ಕೂ ಮನೆಯಿಂದ ಆಚೆ ಬಂದು, ಸಮಸ್ಯೆ ಎದುರಿಸುವ ಬದಲು, ಸೆಮಿಲಾಕ್‌ಡೌನ್ ಬೆಂಬಲಿಸಿ ಮನೆಯಲ್ಲಿಯೇ ಇರುವುದು ಸೂಕ್ತ ಎನ್ನುವ ಮನವಿಯನ್ನು ಮಾಡಲಿದೆ.
168 ವಾಹನ ಸೀಜ್
ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ ಕರ್ಫ್ಯೂ ನಿಯಮ ಉಲ್ಲಂಘನೆ ಮಾಡಿದ 168 ವಾಹನಗಳನ್ನು ಸೀಜ್ ಮಾಡಲಾಗಿದೆ. ಅಲ್ಲದೆ 656 ಮಾಸ್ಕ್ ದಂಡ ಪ್ರಕರಣಗಳನ್ನು ದಾಖಲು ಮಾಡಿ, 65600 ರು. ದಂಡ ಹಾಕಲಾಗಿದೆ. ಕೋವಿಡ್ ನಿಯಮ ಉಲ್ಲಂಘನೆ ಮಾಡಿದ 1 ಪ್ರಕರಣ ದಾಖಲು ಮಾಡಲಾಗಿದೆ.
ಈಗಾಗಲೇ ಅನ್ಯ ಜಿಲ್ಲೆಯಿಂದ ನಮ್ಮ ಜಿಲ್ಲೆಗೆ ಪ್ರವೇಶ ಮಾಡಬಹುದಾದ 8 ಗಡಿಗಳನ್ನು ಗುರುತು ಮಾಡಲಾಗಿದೆ. ಇಲ್ಲಿಗೆ ಸೇರಿದಂತೆ ಜಿಲ್ಲಾದ್ಯಂತ ಎಲ್ಲ ಮಾರ್ಗಗಳ ಬಂದ್ ಮಾಡಲು 1093 ಸಿಬ್ಬಂದಿಯನ್ನು ಪಾಳೆ ಪ್ರಕಾರ ನಿಯೋಜನೆ ಮಾಡಿ, ಆದೇಶ ಮಾಡಲಾಗಿದೆ. ಒಂದೇ ಒಂದು ವಾಹನ ಸಂಚಾರಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಕೊಪ್ಪಳ ಎಸ್ಪಿ ಟಿ. ಶ್ರೀಧರ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona